ಮಂಡ್ಯ ಸಾಹಿತ್ಯ ಸಮ್ಮೇಳನ | ಸಿಎಂ ಬಿಡುಗಡೆ ಮಾಡಿದ ಆಹ್ವಾನ ಪತ್ರಿಕೆ ಬದಲು; ಸ್ಪೀಕರ್ ಖಾದರ್‌ಗೆ ಸಿಗದ ಮಾನ್ಯತೆ?
ವಿಧಾನಸಭಾ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಆಹ್ವಾನ ಪತ್ರಿಕೆ ನೀಡಿದ ನಾಲ್ಕೇ ದಿನಕ್ಕೆ ಆಹ್ವಾನ ಪತ್ರಿಕೆಯನ್ನು ಪರಿಷ್ಕರಿಸಿದರೂ ಸ್ಪೀಕರ್ ಅವರಿಗೆ ಪ್ರೋಟೋಕಾಲ್ ಪ್ರಕಾರ ನೀಡಬೇಕಾದ ಮಾನ್ಯತೆ ನೀಡದೇ ಇರುವ ಕನ್ನಡ ಸಾಹಿತ್ಯ ಪರಿಷತ್ ನಡೆ ಚರ್ಚೆಗೆ ಗ್ರಾಸವಾಗಿದೆ.
ಡಿ.20ರಿಂದಲೇ ಮಂಡ್ಯದಲ್ಲಿ ಆರಂಭವಾಗಲಿರುವ ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಮುಖ್ಯಮಂತ್ರಿಗಳಿಗೆ ಅಧಿಕೃತ ಆಹ್ವಾನ ನೀಡಿದ ಮೂರೇ ದಿನದಲ್ಲಿ ಬದಲಾಗಿದೆ! ಆದಾಗ್ಯೂ ಸಂವಿಧಾನಿಕ ಸ್ಥಾನದಲ್ಲಿರುವ ವಿಧಾನಸಭಾ ಸ್ಪೀಕರ್ ಅವರಿಗೆ ಪ್ರೋಟೊಕಾಲ್ ಪ್ರಕಾರ ನೀಡಬೇಕಾದ ಮಾನ್ಯತೆಯನ್ನು ನೀಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ನಿಯೋಗ ಕಳೆದ ಗುರುವಾರ ಆಹ್ವಾನಪತ್ರಿಕೆ ನೀಡಿ, ಕನ್ನಡ ಶಲ್ಯ ಹೊದೆಸಿ ಅಧಿಕೃತ ಆಹ್ವಾನ ನೀಡಿತ್ತು. ಆದರೆ, ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಿದ ಆಹ್ವಾನ ಪತ್ರಿಕೆ ವಾಸ್ತವವಾಗಿ ಅಂತಿಮ ಆಹ್ವಾನ ಪತ್ರಿಕೆಯೇ ಅಲ್ಲ ಎಂಬುದಕ್ಕೆ ಅವರಿಗೆ ಆಹ್ವಾನ ನೀಡಿದ ಮೂರೇ ದಿನದಲ್ದಿ ಆಹ್ವಾನ ಪತ್ರಿಕೆಯನ್ನು ಬದಲಾಯಿಸಿರುವುದೇ ಸಾಕ್ಷಿ!
ಮತ್ತೊಂದೆಡೆ ಮೂಲ ಆಹ್ವಾನ ಪತ್ರಿಕೆಯಲ್ಲಿ ವಿಧಾನಸಭಾ ಸ್ಪೀಕರ್ ಅವರಿಗೆ ಶಿಷ್ಟಾಚಾರದ ಪ್ರಕಾರ ಸಲ್ಲಬೇಕಾದ ಗೌರವ ಸಲ್ಲಿಸದೇ ಗೌರವ ಉಪಸ್ಥಿತರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕವೂ ಹೊಸ ಆಹ್ವಾನ ಪತ್ರಿಕೆಯಲ್ಲೂ ಅವರ ಹೆಸರನ್ನು ಶಿಷ್ಟಾಚಾರದ ಪ್ರಕಾರ ಮುದ್ರಿಸದೇ ಇರುವುದು ಕೂಡ ಕಂಡುಬಂದಿದೆ.
ಆ ಹಿನ್ನೆಲೆಯಲ್ಲಿ ಈಗಾಗಲೇ ಬಾಡೂಟದ ಬೇಡಿಕೆ, ಆಹ್ವಾನ ಪತ್ರಿಕೆಯ ಲೋಪಗಳ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದ್ದ ಸಮ್ಮೇಳನ ಇದೀಗ ಮತ್ತೊಮ್ಮೆ ಅಧಿಕೃತಗೊಂಡು ಮುಖ್ಯಮಂತ್ರಿಗೆ ಆಹ್ವಾನ ನೀಡಿದ ಬಳಿಕವೂ ಆಹ್ವಾನ ಪತ್ರಿಕೆಯನ್ನು ಬದಲಾಯಿಸುವ ಮೂಲಕ ವಿವಾದಕ್ಕೆ ಗ್ರಾಸವಾಗಿದೆ.
ಮುಖ್ಯಮಂತ್ರಿಗಳಿಗೆ ನೀಡಿದ ಆಹ್ವಾನ ಪತ್ರಿಕೆ ಮತ್ತು ಆ ಬಳಿಕ ಬದಲಾಯಿಸಿರುವ ಆಹ್ವಾನ ಪತ್ರಿಕೆಯಲ್ಲಿ ದೊಡ್ಡ ಬದಲಾವಣೆಯಾಗಲೀ, ತಿದ್ದುಪಡಿಗಳನ್ನಾಗಲೀ ಮಾಡಿಲ್ಲ. ಆದರೆ, ಪರಿಷ್ಕೃತ ಆಹ್ವಾನ ಪತ್ರಿಕೆ ಎಂದು ಹೊಸ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಬದಲಾವಣೆ ಮಾಡಲಾಗಿದೆ.
ಶಿಷ್ಟಾಚಾರ ಗಾಳಿಗೆ ತೂರಿ ಸ್ಪೀಕರ್ ಹೆಸರು ಮುದ್ರಣ!
ಶಿಷ್ಟಾಚಾರದ ಹಿನ್ನೆಲೆಯಲ್ಲಿ ಮೂಲ ಆಹ್ವಾನ ಪತ್ರಿಕೆ ಮತ್ತು ಪರಿಷ್ಕೃತ ಆಹ್ವಾನ ಪತ್ರಿಕೆಯಲ್ಲಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರ ಹೆಸರನ್ನು ಮುದ್ರಿಸಿದ ಸ್ಥಳ ಬದಲಾವಣೆಯಾಗಿದೆ.
ಹಿಂದಿನ ಆಹ್ವಾನ ಪತ್ರಿಕೆಯಲ್ಲಿ ರಾಜ್ಯದ ರಾಜ್ಯಪಾಲರ ಬಳಿಕ ಎರಡನೇ ಅತ್ಯುನ್ನತ ಸಂವಿಧಾನಿಕ ಸ್ಥಾನದಲ್ಲಿರುವ ಸ್ಪೀಕರ್ ಅವರ ಹೆಸರನ್ನು ಸಾನ್ನಿಧ್ಯ ವಹಿಸುವ ಸ್ವಾಮೀಜಿ, ಉದ್ಘಾಟಕರಾದ ಮುಖ್ಯಮಂತ್ರಿ, ಸಮ್ಮೇಳನಾಧ್ಯಕ್ಷರು, ಕೇಂದ್ರ ಸಚಿವರು, ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕೊನೆಗೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರ ಹೆಸರಿನ ಬಳಿಕ ಗೌರವ ಉಪಸ್ಥಿತ ಸಚಿವರ ಹೆಸರಿನೊಂದಿಗೆ ಮುದ್ರಿಸಲಾಗಿತ್ತು.
ಸ್ವಾಯತ್ತ ಸಂವಿಧಾನಿಕ ಸಂಸ್ಥೆಯ ಸ್ಥಾನಮಾನ ಹೊಂದಿರುವ ಸ್ಪೀಕರ್ ಅವರನ್ನು ಹೀಗೆ ಕನಿಷ್ಟ ಸರ್ಕಾರಿ ಶಿಷ್ಟಾಚಾರ ಪಾಲಿಸದೆ ಸಾಮಾನ್ಯ ಸಚಿವರ ಸಾಲಿನಲ್ಲಿ ಹೆಸರು ಮುದ್ರಿಸಿರುವುದು ಅಗೌರವ ತರುವ ಕೆಲಸ ಎಂಬ ಆಕ್ಷೇಪ ಮಂಡ್ಯದ ಸಾಹಿತ್ಯ ಮತ್ತು ರಾಜಕೀಯ ವಲಯದಿಂದ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಪರಿಷ್ಕೃತ ಆಹ್ವಾನ ಪತ್ರಿಕೆಯಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ, ಮತ್ತೆ ಸ್ಪೀಕರ್ ಅವರ ಹೆಸರನ್ನು ಮುಖ್ಯಮಂತ್ರಿ ಮತ್ತು ಸಮ್ಮೇಳನಾಧ್ಯಕ್ಷರ ಹೆಸರುಗಳ ಬಳಿಕ ಕೇಂದ್ರ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳ ಹೆಸರುಗಳ ನಂತರ ಮುದ್ರಿಸಲಾಗಿದೆ. ಶಿಷ್ಟಾಚಾರದ ಪ್ರಕಾರ ಇದೂ ಕೂಡ ಉಲ್ಲಂಘನೆಯೇ ಎಂಬ ಮಾತೂ ಕೇಳಿಬಂದಿದೆ.
ಈ ನಡುವೆ, ಸ್ವತಃ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ ಬಳಿಕ ಮತ್ತೆ ಆಹ್ವಾನ ಪತ್ರಿಕೆಯನ್ನು ಬದಲಾಯಿಸಿದ್ದು ಯಾಕೆ ಎಂಬ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಆಗಲೀ, ಸಮ್ಮೇಳನದ ಸ್ವಾಗತ ಸಮಿತಿಯಾಗಲೀ ಯಾವುದೇ ಹೇಳಿಕೆ ನೀಡಿಲ್ಲ.
ಆದರೆ, ಪರಿಷತ್‌ನ ಮೂಲಗಳ ಪ್ರಕಾರ, ಈ ಮೊದಲಿನ ಆಹ್ವಾನ ಪತ್ರಿಕೆಯಲ್ಲಿ ಕೆಲವು ಲೋಪಗಳು ಕಾಣಿಸಿಕೊಂಡಿದ್ದವು. ಜೊತೆಗೆ ಆಂಧ್ರಪ್ರದೇಶದ ರಾಜ್ಯಪಾಲರು ಸಮ್ಮೇಳನಕ್ಕೆ ಬರಲಾಗದು ಎಂದು ಕೊನೇ ಕ್ಷಣದಲ್ಲಿ ತಿಳಿಸಿದ್ದರಿಂದ ಮುದ್ರಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು ಟಿ ಖಾದರ್ ಸೇರಿದಂತೆ ಸಾವಿರಾರು ಪ್ರಮುಖರಿಗೆ, ಆಹ್ವಾನಿತರಿಗೆ ವಿತರಣೆಯೂ ಆಗಿದ್ದ ಆಹ್ವಾನ ಪತ್ರಿಕೆಯನ್ನು ಮತ್ತೆ ಮರು ಮುದ್ರಣ ಮಾಡಲಾಗಿದೆ. ಪರಿಷ್ಕೃತ ಆಹ್ವಾನ ಪತ್ರಿಕೆಯಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾದ ಅಬ್ದುಲ್ ನಜೀರ್ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಪರಿಷತ್ತಿನ ಮೂಲಗಳು ಹೇಳಿವೆ.
ಆದರೆ, ಈ ಹಿಂದಿನ ಆಹ್ವಾನಪತ್ರಿಕೆಯಲ್ಲಿ ಕೂಡ ಅಬ್ದುಲ್ ನಜೀರ್ ಅವರ ಹೆಸರು ಇರಲಿಲ್ಲ ಎಂಬುದು ಗಮನಾರ್ಹ. ಹಾಗಾಗಿ ಆಹ್ವಾನ ಪತ್ರಿಕೆ ಮರು ಪರಿಷ್ಕರಣೆ ಮತ್ತು ಮರು ಮುದ್ರಣದ ಅಸಲೀ ಕಾರಣ ಏನು ಎಂಬುದು ನಿಗೂಢವಾಗಿಯೇ ಉಳಿದಿದೆ.
ಈ ನಡುವೆ ಸಮ್ಮೇಳನದ ಉದ್ಘಾಟನಾ ಸಮಾರಂಭದ ವಿವರಗಳಲ್ಲಿ ಕೆಲವೊಂದು ಬದಲಾವಣೆಗಳಾಗಿದ್ದು, ಕಾರ್ಯಕ್ರಮ ನಿರೂಪಕಿಯೊಬ್ಬರ ಹೆಸರು ಹೊಸದಾಗಿ ಸೇರ್ಪಡೆಯಾಗಿದೆ. ಮಂಡ್ಯದ ಸಾಹಿತ್ಯ ವಲಯದ ಮೂಲಗಳ ಪ್ರಕಾರ ಆಹ್ವಾನ ಪತ್ರಿಕೆ ಮರು ಪರಿಷ್ಕರಣೆಗೆ ಆ ಹೊಸ ಹೆಸರು ಸೇರ್ಪಡೆಯ ಕಾರಣವೂ ಇದ್ದಿರಬಹುದು ಎನ್ನಲಾಗುತ್ತಿದೆ.
ಅಲ್ಲದೆ, ಮೈಸೂರು ರಾಜಮನೆತನದ ಪ್ರಮೋದಾ ದೇವಿ ಅವರನ್ನು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಉದ್ಘಾಟನೆಗೆ ಆಹ್ವಾನಿಸಿ, ಆಹ್ವಾನ ಪತ್ರಿಕೆಯಲ್ಲಿ ಅವರನ್ನು ʼಶ್ರೀಮನ್ಮಹಾರಾಣಿʼ ಎಂದು ಉಲ್ಲೇಖಿಸಿರುವ ಪರಿಷತ್ತಿನ ಕ್ರಮವನ್ನು ಪ್ರಶ್ನಿಸಿ ಮಂಡ್ಯದ ಸಾಹಿತ್ಯಾಸಕ್ತರು ಮತ್ತು ಸಾಮಾಜಿಕ ಹೋರಾಟಗಾರರು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಪತ್ರ ಬರೆದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಾರಾಣಿ, ಮಹಾರಾಜ ಎಂಬ ಪದ ಬಳಕೆ ಸಂವಿಧಾನ ವಿರೋಧಿಯಾಗಿದ್ದು ಆ ಬಗ್ಗೆ ನ್ಯಾಯಾಲಯ ಗಮನ ಹರಿಸಿ ಸು-ಮೊಟೊ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.
ಆದರೆ, ಮೂಲ ಮತ್ತು ಪರಿಷ್ಕೃತ ಆಹ್ವಾನ ಪತ್ರಿಕೆಗಳಲ್ಲಿ ಪ್ರಮೋದಾ ದೇವಿ ಅವರ ಹೆಸರಿನ ಹಿಂದೆ ಬಳಸಿರುವ ʼಶ್ರೀಮನ್ಮಹಾರಾಣಿʼ ಎಂಬ ಪದನಾಮವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಕುವೆಂಪು ಅವರ ಪ್ರಸ್ತಾಪವೇ ಇಲ್ಲ!
ಆಹ್ವಾನಪತ್ರಿಕೆಯಲ್ಲಿ ಕನ್ನಡ ಸಾಹಿತ್ಯ ಮಾತ್ರವಲ್ಲದೆ, ಕನ್ನಡ ನಾಡು-ನುಡಿಗೆ ಅಸ್ಮಿತೆಯನ್ನು ತಂದುಕೊಂಡ ರಾಷ್ಟ್ರಕವಿ ಕುವೆಂಪು ಅವರ ಅವರ ಹೆಸರಾಗಲೀ, ಚಿತ್ರವಾಗಲೀ ಇಲ್ಲ! ಈ ಬಗ್ಗೆ ಕೂಡ ಮಂಡ್ಯದ ಕನ್ನಡಪ್ರೇಮಿಗಳು ಸಾಹಿತ್ಯ ಪರಿಷತ್‌ಗೆ ಒತ್ತಾಯಿಸಿದ್ದರು. ಮಂಡ್ಯದ ನೆಲವೂ ಸೇರಿದಂತೆ ಇಡೀ ನಾಡಿನ ನಾಡು- ನುಡಿಯನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕುವೆಂಪು ಅವರನ್ನು ಸ್ಮರಿಸಿಕೊಳ್ಳದೆ ಸಾಹಿತ್ಯ ಸಮ್ಮೇಳನ ನಡೆಸುವುದು ಸರಿಯಲ್ಲ. ಆಹ್ವಾನ ಪತ್ರಿಕೆಯಲ್ಲಾಗಲೀ, ಸಮ್ಮೇಳನದ ವೇದಿಕೆಗಳಲ್ಲಾಗಲೀ ಕುವೆಂಪು ಹೆಸರು ನಾಪತ್ತೆಯಾಗಿದೆ. ಪರಿಷತ್ ಈ ಲೋಪವನ್ನು ಗಮನಿಸಿ ವೇದಿಕೆಗಳಿಗೆ ಕುವೆಂಪು ಹೆಸರಿಡಬೇಕು ಮತ್ತು ಆಹ್ವಾನಪತ್ರಿಕೆಯಲ್ಲಿ ಅವರ ಚಿತ್ರಸಹಿತ ಹೆಸರು ಉಲ್ಲೇಖಿಸಬೇಕು ಎಂದು ಒತ್ತಾಯಿಸಿದ್ದರು.
ಅಲ್ಲದೆ, ಸಮ್ಮೇಳನದ ಕುರಿತು ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಇತ್ತೀಚೆಗೆ ನಿಧನರಾದ ಮಂಡ್ಯದ ಮುತ್ಸದ್ಧಿ ನಾಯಕ ಎಸ್ ಎಂ ಕೃಷ್ಣ ಅವರು ಬರೆದ ಸಂದೇಶ ಪತ್ರದಲ್ಲಿ ಕೂಡ ಕುವೆಂಪು ಅವರ ಉಕ್ತಿಯನ್ನು ಉಲ್ಲೇಖಿಸುವ ಮೂಲಕ ಕುವೆಂಪು ಇಲ್ಲದೆ ಸಾಹಿತ್ಯ ಸಮ್ಮೇಳನ ಪರಿಪೂರ್ಣವೆನಿಸದು ಎಂಬುದನ್ನು ಸೂಚ್ಯವಾಗಿ ಹೇಳಿದ್ದರು.
ಅಷ್ಟಾಗಿಯೂ ಪರಿಷ್ಕೃತ ಆಹ್ವಾನ ಪತ್ರಿಕೆಯಲ್ಲಿ ಕೂಡ ಕುವೆಂಪು ಹೆಸರು ಮತ್ತು ಚಿತ್ರಗಳು ಮರೆಯಾಗಿವೆ.
ಒಟ್ಟಾರೆ, ವಿಧಾನಸಭಾ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಆಹ್ವಾನ ಪತ್ರಿಕೆ ನೀಡಿ ಸಮ್ಮೇಳನಕ್ಕೆ ಆಹ್ವಾನ ನೀಡಿದ ಬಳಿಕ ಮೂರೇ ದಿನಕ್ಕೇ ದಿಢೀರನೆ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪರಿಷ್ಕರಿಸಿದ ಕನ್ನಡ ಸಾಹಿತ್ಯ ಪರಿಷತ್ ನಡೆ ಚರ್ಚೆಗೆ ಗ್ರಾಸವಾಗಿದೆ.