
ಮದ್ದೂರು ಗಲಭೆ |ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ
ಪ್ರಕರಣದ ಕುರಿತು ಡಿಜಿಪಿ ಡಾ. ಎಂ. ಎ. ಸಲೀಂ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿರುವ ಸಿಎಂ, ತಪ್ಪಿತಸ್ಥರು ಯಾರೇ ಇರಲಿ ಕೂಡಲೇ ಬಂಧಿಸಿ, ಪರಿಸ್ಥಿತಿ ಬಿಗಡಾಯಿಸದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಮಹಾನಿರ್ದೇಶಕ ಡಾ.ಎಂ. ಎ.ಸಲೀಂ ಅವರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.
ಭಾನುವಾರ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟವಾಗಿದ್ದು, ಇದು ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಈ ಕುರಿತು ಡಿಜಿಪಿಗೆ ಕರೆ ಮಾಡಿ ಮಾಹಿತಿ ಪಡೆದಿರುವ ಸಿಎಂ, ತಪ್ಪಿತಸ್ಥರು ಯಾರೇ ಇರಲಿ ಕೂಡಲೇ ಬಂಧಿಸಿ, ಪರಿಸ್ಥಿತಿ ಬಿಗಡಾಯಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
ಬಿಜೆಪಿ-ಜೆಡಿಎಸ್‌ನಿಂದ ಪ್ರಚೋದನೆ
ಪ್ರಕರಣದ ಕುರಿತು ಸಿಎಂಗೆ ಮಾಹಿತಿ ನೀಡಿ ನಂತರ ಮಾತನಾಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಭಾನುವಾರ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಮಸೀದಿ ಕಡೆಯಿಂದ ಕಲ್ಲುಗಳು ಎಸೆದ ಬಗ್ಗೆ ಮಾಹಿತಿ ಇದೆ. ವಿಚಾರಣೆ ನಡೆಸಿ ನಂತರ ಇಪ್ಪತ್ತೊಂದು ಜನರನ್ನು ಬಂಧಿಸಲಾಗಿದೆ. ಹಿಂದೂಗಳ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ. ಪೊಲೀಸರು ಆದಷ್ಟು ಶೀಘ್ರವಾಗಿ ಕ್ರಮ ತೆಗೆದುಕೊಂಡಿದ್ದಾರೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಚೋದಿಸುತ್ತಿದ್ದಾರೆ. ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲು ಹೇಳಬಹುದಿತ್ತು. ಆದರೆ, ಕೋಮುಗಲಭೆಗೆ ಪ್ರಚೋದನೆ ಕೊಡುವುದು ಸರಿಯಲ್ಲ ಎಂದರು.
ಓಲೈಕೆ ರಾಜಕಾರಣ ಇಲ್ಲ
ಮದ್ದೂರಿನಲ್ಲಿ ಹಿಂದೆ ಎಂದೂ ಈ ರೀತಿ ನಡೆದಿರಲಿಲ್ಲ. ಹೊರಗಡೆಯಿಂದ ಬಂದು ಯಾರೋ ಗಲಭೆ ಮಾಡಿರಬಹುದು ಎಂಬುದನ್ನೂ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಯಾವುದೇ ಸಮುದಾಯದವರಾದರೂ ಅವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನಾವು ಯಾರನ್ನು ಓಲೈಕೆ ಮಾಡುತ್ತಿಲ್ಲ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು.