Bangalore Rain Damage| ಮುಂಗಾರು ಪೂರ್ವ ಮಳೆಯಿಂದ ಬೆಂಗಳೂರಿನಲ್ಲಿ 188 ಕೋಟಿ ರೂಪಾಯಿ ರಸ್ತೆಗೆ ಹಾನಿ!
x

ಬೆಂಗಳೂರು ಮಳೆ

Bangalore Rain Damage| ಮುಂಗಾರು ಪೂರ್ವ ಮಳೆಯಿಂದ ಬೆಂಗಳೂರಿನಲ್ಲಿ 188 ಕೋಟಿ ರೂಪಾಯಿ ರಸ್ತೆಗೆ ಹಾನಿ!

ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸುಮಾರು 188 ಕೋಟಿ ರೂ. ವೆಚ್ಚದ ರಸ್ತೆಗಳು ಹಾನಿಗೊಳಗಾಗಿವೆ.‌ ಸುಮಾರು 878 ರಸ್ತೆಗಳು ಮಳೆಗೆ ಹಾನಿಗೀಡಾಗಿವೆ ಎಂದು ಡಿಕೆ ಶಿವಕುಮಾರ್‌ ಅವರು ತಿಳಿಸಿದ್ದಾರೆ.


ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯು ವ್ಯಾಪಕ ಅವಾಂತರಗಳನ್ನು ಸೃಷ್ಟಿಸಿದ್ದು, ನಗರದಲ್ಲಿ ಸುಮಾರು 188 ಕೋಟಿ ರೂ. ಮೌಲ್ಯದ ರಸ್ತೆ ಹಾನಿ ಸಂಭವಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಳೆದ ಶನಿವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬಿಬಿಎಂಪಿ ನೀಡಿದ ಅಂಕಿಅಂಶಗಳ ಪ್ರಕಾರ, ಮಳೆಯ ಅಬ್ಬರಕ್ಕೆ ಬೆಂಗಳೂರಿನ ಒಟ್ಟು 343 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿವೆ. ಸುಮಾರು 878 ರಸ್ತೆಗಳಿಗೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಲಯವಾರು ರಸ್ತೆ ಹಾನಿಯ ವಿವರ

  • ಬೊಮ್ಮನಹಳ್ಳಿ ವಲಯ: 147 ಕಿ.ಮೀ. ವಾರ್ಡ್ ರಸ್ತೆ ಹಾನಿ, 71 ಕೋಟಿ ರೂ. ನಷ್ಟ
  • ಯಲಹಂಕ ವಲಯ: 37.80 ಕಿ.ಮೀ. ರಸ್ತೆ ಹಾನಿ, 15.81 ಕೋಟಿ ರೂ. ನಷ್ಟ
  • ಆರ್.ಆರ್.ನಗರ ವಲಯ: 30.24 ಕಿ.ಮೀ. ರಸ್ತೆ ಹಾನಿ, 49.71 ಕೋಟಿ ರೂ. ನಷ್ಟ
  • ದಾಸರಹಳ್ಳಿ ವಲಯ: 34.35 ಕಿ.ಮೀ. ರಸ್ತೆ ಹಾನಿ, 18 ಕೋಟಿ ರೂ. ನಷ್ಟ

ಪ್ರಾಣಹಾನಿ ಮತ್ತು ಮರಗಳ ಹಾನಿ

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಮಹಿಳೆ ಸೇರಿದಂತೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಬೊಮ್ಮನಹಳ್ಳಿ ವಲಯದಲ್ಲಿ ಇಬ್ಬರು, ಮಹದೇವಪುರ ಹಾಗೂ ದಕ್ಷಿಣ ವಲಯದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಜೊತೆಗೆ, ಇಬ್ಬರು ಮಳೆಯ ಅಬ್ಬರಕ್ಕೆ ಗಾಯಗೊಂಡಿದ್ದಾರೆ.

ಭಾರೀ ಗಾಳಿ ಮಳೆಯಿಂದಾಗಿ ನಗರದಲ್ಲಿ ಸುಮಾರು 149 ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ತಿಳಿಸಿದೆ. ಅಂದಾಜು 300 ಮರದ ಕೊಂಬೆಗಳು ಮುರಿದು ಬಿದ್ದಿವೆ. ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಅಂದರೆ 65 ಮರಗಳು ಧರೆಗುರುಳಿದರೆ, ಬೊಮ್ಮನಹಳ್ಳಿ ವಲಯದಲ್ಲಿ 22, ಪೂರ್ವ ವಲಯದಲ್ಲಿ 19, ಆರ್.ಆರ್.ನಗರದಲ್ಲಿ 13 ಹಾಗೂ ಯಲಹಂಕ ವಲಯದಲ್ಲಿ 12 ಮರಗಳು ಉರುಳಿವೆ.

ಕೊಂಬೆಗಳ ಹಾನಿ ವಿಷಯದಲ್ಲಿ, ದಕ್ಷಿಣ ವಲಯದಲ್ಲಿ 98 ಕೊಂಬೆಗಳು, ಪೂರ್ವ ವಲಯದಲ್ಲಿ 71 ಕೊಂಬೆಗಳು, ಬೊಮ್ಮನಹಳ್ಳಿ ವಲಯದಲ್ಲಿ 42 ಕೊಂಬೆಗಳು ಮುರಿದು ಬಿದ್ದಿವೆ. ಯಲಹಂಕ ವಲಯದಲ್ಲಿ 29, ಆರ್.ಆರ್.ನಗರ ವಲಯದಲ್ಲಿ 21, ಮಹದೇವಪುರ ವಲಯದಲ್ಲಿ 17, ಮತ್ತು ದಾಸರಹಳ್ಳಿ ವಲಯದಲ್ಲಿ 11 ಕೊಂಬೆಗಳು ಮುರಿದು ಬಿದ್ದಿವೆ.

ತೀವ್ರ ಹಾನಿಗೊಳಗಾದ ಪ್ರದೇಶಗಳು

ಕಳೆದ ವಾರ ಸುರಿದ ಮಳೆಗೆ ನಗರದ ಜನರು ತತ್ತರಿಸಿ ಹೋಗಿದ್ದು, ಬಹುತೇಕ ಸ್ಥಳಗಳು ಜಲಾವೃತಗೊಂಡಿದ್ದವು. ಮಹದೇವಪುರದ ಸಾಯಿ ಲೇಔಟ್, ಯಲಹಂಕದ ಕೆಂಪೇಗೌಡ ವಾರ್ಡ್, ಹೆಚ್.ಎಸ್.ಆರ್. ಲೇಔಟ್, ಆರ್.ಆರ್. ನಗರ ಲೇಔಟ್ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ತೀವ್ರ ಮಳೆ ಹಾನಿ ಸಂಭವಿಸಿತ್ತು.

ನಗರದಲ್ಲಿ ಮಳೆಯಿಂದ ಉಂಟಾದ ಹಾನಿ ಕುರಿತು ನಿಮ್ಮ ಅನಿಸಿಕೆಗಳೇನು? ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೀವು ಭಾವಿಸುತ್ತೀರಿ?

Read More
Next Story