
ಸಾಂದರ್ಭಿಕ ಚಿತ್ರ
ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆರೆಗೆ ಉರುಳಿದ ಲಾರಿ: ಚಾಲಕ ದುರ್ಮರಣ
ಬಿದರಗುಪ್ಪೆ ಬಳಿ ಕೆರೆ ಏರಿ ಮೇಲಿದ್ದ ಕಿರಿದಾದ ರಸ್ತೆಯಲ್ಲಿ ಚಾಲಕ ಮಹೇಶ್ ರಸ್ತೆಗುಂಡಿ ತಪ್ಪಿಸಲು ಹೋದಾಗ ಲಾರಿ ನಿಯಂತ್ರಣ ಕಳೆದುಕೊಂಡಿದೆ. ತಕ್ಷಣವೇ ಲಾರಿ ಚಾಲಕನ ಸಮೇತ ರಸ್ತೆ ಪಕ್ಕದ ಕೆರೆಗೆ ಉರುಳಿದೆ.
ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಕೆರೆಗೆ ಬಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ- ಸರ್ಜಾಪುರ ಮುಖ್ಯರಸ್ತೆಯ ಬಿದರಗುಪ್ಪೆ ಬಳಿ ಮಂಗಳವಾರ ಸಂಜೆ ನಡೆದಿದೆ. ಈ ದುರ್ಘಟನೆಯಲ್ಲಿ ಕಲಬುರಗಿ ಮೂಲದ ಲಾರಿ ಚಾಲಕ ಮಹೇಶ್ (37) ಸ್ಥಳದಲ್ಲೇ ಮೃತಪಟ್ಟವರು.
ಜಲ್ಲಿ ತುಂಬಿಕೊಂಡು ಅತ್ತಿಬೆಲೆಯಿಂದ ಸರ್ಜಾಪುರ ಮಾರ್ಗವಾಗಿ 12 ಚಕ್ರದ ಲಾರಿ ತೆರಳುತ್ತಿತ್ತು. ಬಿದರಗುಪ್ಪೆ ಬಳಿ ಕೆರೆ ಏರಿ ಮೇಲಿದ್ದ ಕಿರಿದಾದ ರಸ್ತೆಯಲ್ಲಿ ಚಾಲಕ ಮಹೇಶ್ ರಸ್ತೆಗುಂಡಿ ತಪ್ಪಿಸಲು ಹೋದಾಗ ಲಾರಿ ನಿಯಂತ್ರಣ ಕಳೆದುಕೊಂಡಿದೆ. ತಕ್ಷಣವೇ ಲಾರಿ ಚಾಲಕನ ಸಮೇತ ರಸ್ತೆ ಪಕ್ಕದ ಕೆರೆಗೆ ಉರುಳಿದೆ.
ಈ ಭೀಕರ ಅಪಘಾತಕ್ಕೆ ರಸ್ತೆ ಅವ್ಯವಸ್ಥೆಯೇ ಪ್ರಮುಖ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆರೆ ಏರಿ ಮೇಲಿರುವ ರಸ್ತೆ ಬಹಳ ಕಿರಿದಾಗಿರುವ ಜೊತೆಗೆ, ರಸ್ತೆಯ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ರಸ್ತೆ ಅಭಿವೃದ್ಧಿಯ ಟೆಂಡರ್ ಪಡೆದಿದ್ದ RNS ಕಂಪನಿ ಕೆರೆ ಏರಿ ಮೇಲಿನ ರಸ್ತೆಯನ್ನು ವಿಸ್ತರಣೆ ಮಾಡದೆ ಹಾಗೆಯೇ ಬಿಟ್ಟಿದೆ ಎಂದು ಸ್ಥಳೀಯರು ದೂರಿರುವರಲ್ಲದೇ, ಇರುವ ಕಿರಿದಾದ ರಸ್ತೆಯೂ ಹೊಂಡಗಳಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸರ ಸಹಯೋಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಎರಡು ಬೃಹತ್ ಕ್ರೇನ್‌ಗಳ ಸಹಾಯದಿಂದ ಕೆರೆಯಲ್ಲಿ ಮುಳುಗಿದ್ದ ಲಾರಿ ಮತ್ತು ಚಾಲಕ ಮಹೇಶ್ ಅವರ ಮೃತ ದೇಹವನ್ನು ಹೊರ ತೆಗೆಯಲಾಯಿತು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.

