
KPSC Scam | ಎಲ್ಲ ಹುದ್ದೆಗಳಿಗೆ ಒಂದೊಂದು ರೇಟ್ ನಿಗದಿ: ವಿಧಾನಸಭೆಯಲ್ಲಿ ಬಿಜೆಪಿ ಗಂಭೀರ ಆರೋಪ
ನಾಲಿಗೆ ಸೀಳಿದರೂ ಕನ್ನಡ ಪದ ಬಿಡಲ್ಲ ಎಂಬ ಮಹಾಕವಿ ರನ್ನನ ಪದವನ್ನು ಆರ್. ಅಶೋಕ್ ಉಲ್ಲೇಖಿಸಿ, ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ತಪ್ಪು ಮಾಡಿದ ಅಧಿಕಾರಿಯ ನಾಲಿಗೆಯನ್ನು ಸೀಳಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡಕ್ಕೆ ಚೂರಿ ಹಾಕಿದವನಿಗೆ ನಾಲಿಗೆ ಕತ್ತರಿಸುವ ರೀತಿ ಶಿಕ್ಷೆ ಆಗಬೇಕು ಎಂದು ವಿಪಕ್ಷ ನಾಯಕ ಆರ್. ಅಶೊಕ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಪರೀಕ್ಷಾ ಅಕ್ರಮ ಹಾಗೂ ಭ್ರಷ್ಟಾಚಾರದ ಕುರಿತು ಮಂಗಳವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದರು.
ನಾಲಿಗೆ ಸೀಳಿದರೂ ಕನ್ನಡ ಪದ ಬಿಡಲ್ಲ ಎಂಬ ಮಹಾಕವಿ ರನ್ನನ ಪದವನ್ನು ಆರ್. ಅಶೋಕ್ ಉಲ್ಲೇಖಿಸಿ, ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ತಪ್ಪು ಮಾಡಿದ ಅಧಿಕಾರಿಯ ನಾಲಿಗೆಯನ್ನು ಸೀಳಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿ ಶಾಸಕರಾದಾಗಲೇ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಈಗ ಕೆಪಿಎಸ್ಸಿಯಲ್ಲಿ ಹೋಗಿ ಕನ್ನಡದ ಕಾವಲು ಮಾಡಬೇಕಲ್ಲವಾ? ನಿಮಗೆ ಸಂಧಿ ಗೊತ್ತಾ ಎಂದು ಕಲಾಪದಲ್ಲಿ ಸಿದ್ದರಾಮಯ್ಯ ಕೇಳುತ್ತಾರೆ. ನಮಗೆ ಯಾವ ಸಂಧಿಯೂ ಗೊತ್ತಿಲ್ಲ. ಅವರಿಗೆ ಗೊತ್ತಿರುವ ಸಂಧಿ ನಮಗೆ ಗೊತ್ತಿಲ್ಲ. ಆದರೆ ಕನ್ನಡದ ರಕ್ಷಣೆ ಮಾಡಲಿ ಎಂದು ಆಗ್ರಹಿಸಿದರು.
ಕೆಪಿಎಸ್ಸಿಯಲ್ಲಿ ಪರೀಕ್ಷಾ ಅಕ್ರಮ ಹೇಗೆ ನಡೆಯುತ್ತದೆ?
ಇನ್ನು ಕೆಪಿಎಸ್ಸಿಯಲ್ಲಿ ಪರೀಕ್ಷಾ ಅಕ್ರಮ ಹೇಗೆ ನಡೆಯುತ್ತದೆ ಎಂಬುದನ್ನು ವಿಧಾನಸಬೆಯಲ್ಲಿ ಆರ್. ಅಶೋಕ್ ಎಳೆಎಳೆಯಾಗಿ ವಿವರಿಸಿದರು. ಪರೀಕ್ಷೆಗೆ ತಕ್ಕಂತೆ ಹಣವನ್ನು ಪಡೆದ ನಂತರ, ಓಎಂಆರ್ (ಆಪ್ಟಿಕಲ್ ಮಾರ್ಕ್ಸ್ ರಿಕಗ್ನಿಷನ್) ಶೀಟ್‌ನಲ್ಲಿ 16 ಅಥವಾ 10 ಪ್ರಶ್ನೆಗಳಿಗೆ ಮಾತ್ರ ಟಿಕ್ ಮಾಡು ಎಂದು ಮಧ್ಯವರ್ತಿ ಹೇಳುತ್ತಾನೆ. ಅದರಂತೆಯೇ ಅಭ್ಯರ್ಥಿ ಮಾಡುತ್ತಾನೆ. ಓಎಂಆರ್ ಶೀಟ್ ಹೋಗುವ ಎರಡು ಕೊಠಡಿಗಳಲ್ಲಿ ಸಿಸಿಟಿವಿ ಇರುವುದಿಲ್ಲ. ಅಲ್ಲಿಯೇ ಉಳಿದ ಪ್ರಶ್ನೆಗಳಿಗೆ ಉತ್ತರವನ್ನು ಟಿಕ್ ಮಾಡಲಾಗುತ್ತದೆ. ಇದರಲ್ಲಿ ಲೋಕಸೇವಾ ಆಯೋಗದ ಅಧಿಕಾರಿಗಳು ಕೂಡ ಶಾಮೀಲಾಗಿರುತ್ತಾರೆ ಎಂದು ಪರೀಕ್ಷಾ ಅಕ್ರಮದ ಬಗ್ಗೆ ವಿವರಿಸಿದರು.
ಅಕ್ರಮ ಗೊತ್ತಾದರೂ ಕೈಕಟ್ಟಿ ಕುಳಿತಿರುವ ಸರ್ಕಾರ
ಹೀಗೆ ಓಎಂಆರ್ ಸೀಟ್ನಲ್ಲಿನ ಅಕ್ರಮವನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಪತ್ತೆ ಹಚ್ಚಲಾಗಿದೆ. ಅಭ್ಯರ್ಥಿ ಮತ್ತು ಮಧ್ಯವರ್ತಿ ಬಳಸಿರುವ ಪೆನ್‌ಗಳಲ್ಲಿ ವ್ಯತ್ಯಾಸ ಇರುವುದರ ಬಗ್ಗೆ ಪತ್ತೆ ಮಾಡಲಾಗಿದೆ. ಲೋಕಸೇವಾ ಆಯೋಗದ ಅಧಿಕಾರಿ-ನೌಕರರ ಸಹಾಯವಿಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ವಿಧಿ ವಿಜ್ಞಾನ ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ ಈವರೆಗೆ ಕ್ರಮವಾಗಿಲ್ಲ ಎಂದು ಟೀಕಿಸಿದರು.
ಕನ್ನಡಕ್ಕೆ ಚೂರಿ ಹಾಕಿದವನ ನಾಲಿಗೆ ಸೀಳಿ
ಕೆಪಿಎಸ್ಸಿ ಪರೀಕ್ಷೆಯಲ್ಲಿ ತಪ್ಪೆಸಗಿರುವ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. 30 ಕೋಟಿ ರೂಪಾಯಿಗಳನ್ನು ನುಂಗಿ ನೀರು ಕುಡಿದಿದ್ದಾರೆ. ನಾವು ಇಲ್ಲಿ ಶಾಸಕರು ಅನುದಾನಕ್ಕಾಗಿ ಸರ್ಕಾರದಲ್ಲಿ ಭಿಕ್ಷೆ ಬೇಡುತ್ತಿದ್ದೇವೆ. ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯನ್ನು ರದ್ದು ಮಾಡಬೇಕು. ಹಳೆಯ ಅಧಿಸೂಚನೆ ಹಿಂದಕ್ಕೆ ಪಡೆದುಕೊಂಡು, ಹೊಸ ಅಧಿಸೂಚನೆ ಹೊರಡಿಸಬೇಕು. 2.30 ಲಕ್ಷ ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಬೇಕು. ಗೂಗಲ್ ಅನುವಾದ ಮಾಡಿದವರನ್ನು ತಕ್ಷಣ ಸಸ್ಪೆಂಡ್ ಮಾಡಿ. 30 ಕೋಟಿ ರೂಪಾಯಿಗಳನ್ನು ನುಂಗಿರುವ ಅಧಿಕಾರಿಯಿಂದಲೇ ಅದನ್ನು ವಸೂಲಿ ಮಾಡಿ. ಕನ್ನಡಕ್ಕೆ ಚೂರಿ ಹಾಕಿದವನಿಗೆ ನಾಲಿಗೆ ಕತ್ತರಿಸುವ ರೀತಿ ಶಿಕ್ಷೆ ಆಗಬೇಕು ಎಂದು ಸದನದಲ್ಲಿ ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದರು.
ಆಗ ಮಧ್ಯೆ ಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, 'ನಾಲಿಗೆ ಸೀಳಬೇಕು ಅಂತಾ ನೀವು ಹೇಳಿದ್ದೀರಿ, ಇದು ಹೇಗೆ ಆಗುತ್ತದೆ?' ಎಂದು ಪ್ರಶ್ನೆ ಮಾಡಿದರು. ಆಗ ನಾನು ರನ್ನನ ಪದ ಹೇಳಿದ್ದೇನೆ ಎಂದು ಅಶೋಕ್ ಸಮರ್ಥನೆ ಮಾಡಿಕೊಂಡು ಚರ್ಚೆ ಮುಂದುವರಿಸಿದರು.
ಲೋಪ ಸರಿಪಡಿಸದ ಸಿದ್ದರಾಮಯ್ಯ
ಕೆಪಿಎಸ್‌ಸಿ ಕಳ್ಳರು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಯನ್ನೇ ಮುದ್ರಿಸಿರಲಿಲ್ಲ. ಮೊದಲು ಇಂಗ್ಲೀಷ್ನಲ್ಲಿ ಮುದ್ರಿಸಿ ಅದನ್ನೇ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಇದರಲ್ಲಿ 59 ಪ್ರಶ್ನೆಗಳು ತಪ್ಪಿವೆ, ಅಭ್ಯರ್ಥಿಗಳು ಹೇಗೆ ಉತ್ತರ ಬರೆಯುತ್ತಾರೆ? ಬರಗೂರು ರಾಮಚಂದ್ರಪ್ಪ ಅವರೂ ಕೂಡ ಇದಕ್ಕೆ ಆಕ್ಷೇಪ ಮಾಡಿ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಪ ಸರಿಪಡಿಸುವುದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಲೋಪ ಸರಿಪಡಿಸಲಾಗಿದೆಯಾ? ಎಂದು ಅಶೋಕ್ ಪ್ರಶ್ನೆ ಮಾಡಿದರು.
ಕೆಪಿಎಸ್ಸಿ ರೇಟ್ ಕಾರ್ಡ್
ಕೆಪಿಎಸ್ಸಿಯಲ್ಲಿ ಹುದ್ದೆಗಳಿಗೆ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ. ಎಸಿ, ತಹಸೀಲ್ದಾರ್ ಹೀಗೆ ವಿವಿಧ ಹುದ್ದೆಗಳಿಗೆ ತಕ್ಕಂತೆ ರೇಟ್ ಫಿಕ್ಸ್ ಮಾಡಿದ್ದಾರೆ. ಪ್ರಿಲಿಮ್ಸ್ ಪರೀಕ್ಷೆಗೆ 1.5 ಕೋಟಿ ರೂ., ಮುಖ್ಯ ಪರೀಕ್ಷೆ (ಮೈನ್ಸ್ ಗೆ) 1 ಕೋಟಿ ರೂ., ಸಂದರ್ಶನದ ನಂತರ 40 ಲಕ್ಷ ರೂ. ನಂತೆ ರೇಟ್ ಫಿಕ್ಸ್ ಮಾಡಿದ್ದಾರೆ. ಜೊತೆಗೆ ಎಸಿ ಹುದ್ದೆಗೆ 2 ಕೋಟಿ ರೂ., ಡಿವೈಎಸ್ಪಿ ಹುದ್ದೆಗೆ 2 ಕೋಟಿ ರೂ., ತಹಸೀಲ್ದಾರ್ ಹುದ್ದೆಗೆ 1 ಕೋಟಿ ರೂ. ಹೀಗೆ ರೇಟ್ ಫಿಕ್ಸ್ ಆಗಿದೆ ಎಂಬ ಗಂಭೀರ ಆರೋಪವನ್ನು ಆರ್. ಆಶೋಕ್ ಮಾಡಿದರು.
ಕೆಪಿಎಸ್ಸಿ ಪರೀಕ್ಷಾ ಅಕ್ರಮಗಳ ಹಿನ್ನೆಲೆ
ಕೆಪಿಎಸ್ಸಿಯಲ್ಲಿ ಎಲ್ಲ ಹುದ್ದೆಗಳಿಗೆ ಒಂದೊಂದು ರೇಟ್ ನಿಗದಿ ಮಾಡಿ ಅಕ್ರಮ ಮಾಡಲಾಗುತ್ತದೆ ಎಂಬ ಆರೋಪವಿದೆ. ಕೆಪಿಎಸ್ಸಿ ಪರೀಕ್ಷೆ ನಡೆಸಿ ಹುದ್ದೆಗಳನ್ನು ಭರ್ತಿ ಮಾಡಿಕೊಂಡಾಗಲೆಲ್ಲ ಪರೀಕ್ಷಾ ಅಕ್ರಮಗಳು ನಡೆದು ತನಿಖೆ ಆಗಿವೆ. ಜೊತೆಗೆ ತಪ್ಪು ಮಾಡಿದವರನ್ನು ಹುದ್ದೆಗಳಿಂದ ಕೈಬಿಡಲಾಗಿತ್ತು.
ಜೊತೆಗೆ ಕಳೆದ 2023ರಲ್ಲಿ ನಡೆಸಿದ್ದ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) 24 ಹುದ್ದೆಗಳ ನೇಮಕಾತಿಯಲ್ಲಿ 10 ಅಭ್ಯರ್ಥಿಗಳು ಓಎಂಆರ್ ಶೀಟ್ ತಿದ್ದು ಪರೀಕ್ಷೆಯಲ್ಲಿ ಪಾಸ್ ಆಗಿ ಹುದ್ದೆ ಗಿಟ್ಟಿಸಿಕೊಂಡಿದ್ದ ಕುರಿತು ತನಿಖೆ ನಡೆದು, ತನಿಖೆಯಲ್ಲಿ ಆರೋಪ ಸಾಬೀತಾಗಿತ್ತು. ಕೆಪಿಎಸ್ಸಿ 2023ರ ಜುಲೈ 1 ಹಾಗೂ 2 ರಂದು ಪರೀಕ್ಷೆ ನಡೆಸಿ, ಅದೇ ವರ್ಷದ ಸೆ. 22 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಿತ್ತು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಸೂರು ಆಧರಿಸಿ ಕೆಪಿಎಸ್ಸಿ ಆಂತರಿಕ ತನಿಖೆ ನಡೆಸಿದಾಗ ಭ್ರಷ್ಟಾಚಾರ ಬಹಿರಂಗವಾಗಿತ್ತು. ಜೊತೆಗೆ 2023ರಲ್ಲಿ ನಡೆದಿದ್ದ ಪರೀಕ್ಷೆ ಮಾತ್ರವಲ್ಲ ಕೆಪಿಎಸ್ಸಿ ನಡೆಸುವ ಬಹುತೇಕ ಪರೀಕ್ಷೆ ಹಾಗೂ ನೇಮಕಾತಿಯಲ್ಲಿ ಭ್ರಷ್ಟಾಚಾರ ಕಂಡು ಬಂದಿದ್ದರಿಂದ ಇದೇ ವಿಚಾರವನ್ನು ವಿಪಕ್ಷ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೆಪಿಎಸ್ಸಿ ರದ್ದು ಮಾಡಿ ಎಂದ ಕಾಂಗ್ರೆಸ್ ಹಿರಿಯ ಸದಸ್ಯ
ಇದೇ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ಸದಸ್ಯ ಶಿವಲಿಂಗೇಗೌಡ, ಇಡೀ ಲೋಕಸೇವಾ ಆಯೋಗವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೆಪಿಎಸ್ಸಿ ಕುರಿತು ಜನರು ಪ್ರತಿದಿನ ಮಾತನಾಡಿಕೊಳ್ಳುತ್ತಿದ್ದಾರೆ. ಮಕ್ಕಳೂ ಕೂಡ ಮಾತನಾಡಿಕೊಳ್ಳುವಂತಾಗಿದೆ. ಹೀಗಾಗಿ ಕೆಪಿಎಸ್ಸಿಯನ್ನೇ ರದ್ದು ಮಾಡಬೇಕು ಎಂದು ಅವರು ತಮ್ಮ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೆಪಿಎಸ್ಸಿ ಮೇಲೆ ಬಂದಿರುವ ಆರೋಪಗಳಿಗೆ ರಾಜ್ಯ ಸರ್ಕಾರ ಯಾವ ರೀತಿ ಉತ್ತರ ಕೊಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.