Loksabha Election Results | ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ: ಮತ ಎಣಿಕೆಗೆ ಸಕಲ ಸಿದ್ಧತೆ
x

Loksabha Election Results | ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ: ಮತ ಎಣಿಕೆಗೆ ಸಕಲ ಸಿದ್ಧತೆ


ದೇಶದಾದ್ಯಂತ ಎರಡು ತಿಂಗಳ ಕಾಲ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಮಂಗಳವಾರ(ಜೂ.4) ಬೆಳಿಗ್ಗೆಯಿಂದಲೇ ಮತ ಎಣಿಕೆ ಆರಂಭವಾಗಲಿದೆ.

ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ತಯಾರಿ ಮಾಡಿಕೊಂಡಿದ್ದು, ಆಯಾ ಲೋಕಸಭಾ ಕ್ಷೇತ್ರಗಳ ಜಿಲ್ಲಾ ಕೇಂದ್ರಗಳಲ್ಲಿ ಮತಪೆಟ್ಟಿಗೆಗಳನ್ನು ಇಟ್ಟಿರುವ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದಲೇ ಮತ ಎಣಿಕೆ ಆರಂಭವಾಗಲಿದೆ. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠರ ನೇತೃತ್ವಮೊದಲ್ಲಿ ಮತ ಎಣಿಕೆ ಸುಸೂತ್ರವಾಗಿ ನಡೆಯಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವ್ಯಾಪಕ ಬಂದೋಬಸ್ತಿನ ಏರ್ಪಾಡು ಕೂಡ ಆಗಿದೆ.

ಮೊದಲು ಅಂಚೆ ಮತ ಎಣಿಕೆ

ಮತ ಎಣಿಕೆ ಸಿಬ್ಬಂದಿ ಬೆಳಿಗ್ಗೆ 6.30 ಕ್ಕೆ ಮುನ್ನವೇ ಮತ ಎಣಿಕೆ ಕೇಂದ್ರಗಳಿಗೆ ಹಾಜರಾಗಲಿದ್ದು, ಮೊದಲು ಅಂಚೆ ಮತಗಳನ್ನು ಎಣಿಸಿ ಬಳಿಕ ಮತಯಂತ್ರಗಳಲ್ಲಿರುವ ಮತ ಎಣಿಕೆ ಶುರುವಾಗುತ್ತದೆ. ಕಾಲಕಾಲಕ್ಕೆ ಫಲಿತಾಂಶ ಪ್ರಕಟಿಸಲು ಕೂಡ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಗಳ ಎಣಿಕೆಗೆ ಪ್ರತ್ಯೇಕ ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಅಂಚೆ ಮತ ಎಣಿಕೆಯ ವಿಷಯದಲ್ಲಿ ಇದ್ದ ಗೊಂದಲವನ್ನು ಚುನಾವಣಾ ಆಯೋಗ ಬಗೆಹರಿಸಿದ್ದು, ವಾಡಿಕೆಯಂತೆ ಅಂಚೆ ಮತಗಳನ್ನು ಮೊದಲ ಎಣಿಕೆ ಮಾಡಿದ ಬಳಿಕವೇ ಇವಿಎಂ ಮತಯಂತ್ರಗಳ ಮತಗಳನ್ನು ಎಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಈ ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶದ ಟ್ರೆಂಡ್ ಬೇಗನೇ ಗೊತ್ತಾದರೂ ಅಧಿಕೃತ ಫಲಿತಾಂಶ ತಡವಾಗಿ ಪ್ರಕಟವಾಗುವ ಸಾಧ್ಯತೆಯಿದೆ. ರಾಜ್ಯದ ಎಲ್ಲ 28 ಕ್ಷೇತ್ರಗಳ ಆರಂಭಿಕ ಟ್ರೆಂಡ್ ಮಧ್ಯಾಹ್ನ 12 ಗಂಟೆಯೊಳಗೆ ತಿಳಿಯಬಹುದು. ಅಧಿಕೃತ ಫಲಿತಾಂಶ ಮಧ್ಯಾಹ್ನದ ನಂತರ ಸ್ಪಷ್ಟವಾಗಬಹುದು.

ವಿವಿಪ್ಯಾಟ್‌ ಮತ ಎಣಿಕೆ ಕಡ್ಡಾಯ

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದ 5 ವಿವಿಪ್ಯಾಟ್‌ಗಳ ಮತ ಎಣಿಕೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಪೋಸ್ಟಲ್, ಇವಿಎಂ ಮತ ಎಣಿಕೆ ಮುಗಿದ ಬಳಿಕ ವಿವಿ ಪ್ಯಾಟ್ ಮತಗಳನ್ನು ತಾಳೆ ಹಾಕುತ್ತಾರೆ. ಹಾಗಾಗಿ ಅಧಿಕೃತ ಫಲಿತಾಂಶ ತಡವಾಗಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದು‌ ಮತಗಟ್ಟೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ವಿವಿಪ್ಯಾಟ್ ಎಣಿಕೆ ಮಾಡಲಾಗುವುದು.

ಲೋಕಸಭಾ ಕ್ಷೇತ್ರವಾರು ಮತದಾನದ ಶೇಕಡವಾರು ಅಂಕಿಅಂಶಗಳ ಆಧಾರದ ಮೇಲೆ ಮತಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಟೇಬಲ್‌, ಸಿಬ್ಬಂದಿ ಮತ್ತು ಸುತ್ತುಗಳನ್ನು ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ನಿರ್ಧರಿಸಿ ವ್ಯವಸ್ಥೆ ಮಾಡಿದ್ದಾರೆ.

ನಿಷೇಧಾಜ್ಞೆ ಜಾರಿ

ಮತ ಎಣಿಕೆ ಹಿನ್ನೆಲೆಯಲ್ಲಿ ಮತಗಟ್ಟೆಯ ಆಸುಪಾಸು ಮತ್ತು ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮವಾರ(ಜೂ.3) ರ ಸಂಜೆ ೫ ಗಂಟೆಯಿಂದ ಬುಧವಾರ(ಜೂ.5)ರ ಮಧ್ಯ ರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟವನ್ನು ಕೂಡ ಈ ಅವಧಿಯಲ್ಲಿ ನಿಷೇಧಿಸಲಾಗಿದೆ.

ಅಲ್ಲದೆ, ಅಭ್ಯರ್ಥಿಗಳ ಮೆರವಣಿಗೆ, ಪಟಾಕಿ ಸಿಡಿಸುವುದು, ಸಾರ್ವಜನಿಕ ಸಭೆ- ಸಮಾರಂಭ ನಡೆಸುವುದು, ಸಂಭ್ರಮಾಚರಣೆ ನಡೆಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ಘೋಷಣೆ ಹಾಕಬಾರದು, ಪ್ರದರ್ಶನ ಅಥವಾ ಪ್ರಸಾರ ಮಾಡಬಾರದು, ಭಿತ್ತಿ ಪತ್ರಗಳನ್ನು ಅಂಟಿಸಬಾರದು, ಜಾಹೀರಾತು ಪ್ರದರ್ಶನ ಮಾಡಬಾರದು ಎಂದು ನಿಷೇಧ ಹೇರಲಾಗಿದೆ.

Read More
Next Story