Lok Sabha Election 2024 | ರಾಜ್ಯದ 28 ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?
x

Lok Sabha Election 2024 | ರಾಜ್ಯದ 28 ಕ್ಷೇತ್ರಗಳಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?

ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 28 ಕ್ಷೇತ್ರಗಳ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಬ್ರೇಕ್‌ ಬಿದ್ದಂತಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಹಾಗೂ ಜೆಡಿಎಸ್‌ ನಿಂದ 19 ಅಭ್ಯರ್ಥಿಗಳು ವಿಜಯದ ಮಾಲೆ ಧರಿಸಿದ್ದಾರೆ.


ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 28 ಕ್ಷೇತ್ರಗಳ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಬ್ರೇಕ್‌ ಬಿದ್ದಂತಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಹಾಗೂ ಜೆಡಿಎಸ್‌ ನಿಂದ 19 ಅಭ್ಯರ್ಥಿಗಳು ವಿಜಯದ ಮಾಲೆ ಧರಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿರುವುದು ಗಮನಾರ್ಹ ಸಂಗತಿ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವಳಿ ಅಧಿಕವಾಗಿರುವ ಕಲ್ಯಾಣ ಕರ್ನಾಟಕದಲ್ಲಿನ ಈ ಗೆಲುವು ಅವರಿಗೆ ಬಲ ನೀಡಿದೆ. ಉತ್ತರ ಕರ್ನಾಟಕದಲ್ಲಿ ಬಳ್ಳಾರಿ, ಬೀದರ್, ಗುಲ್ಬರ್ಗಾ, ಕೊಪ್ಪಳ, ರಾಯಚೂರು ಮತ್ತು ಚಿಕ್ಕೋಡಿ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಇನ್ನು ದಕ್ಷಿಣ ಕರ್ನಾಟಕ ಭಾಗದಲ್ಲಿ ಚಾಮರಾಜನಗರ, ದಾವಣಗೆರೆ, ಹಾಸನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಕಂಡಿದೆ.

ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ಬೀಗಿದೆ. ಬಾಗಲಕೋಟೆ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಬೆಳಗಾವಿ, ಬಿಜಾಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡಗಳಲ್ಲಿ ಬಿಜೆಪಿ ಗೆದ್ದಿದೆ.

ಬಾಗಲಕೋಟೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತೆ ಪಿ.ಸಿ.ಗದ್ದಿಗೌಡರ ಕೇಸರಿ ಬಾವುಟ ಹಾರಿಸಿದ್ದಾರೆ. ಈ ಮೂಲಕ ಅವರು ಐದನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ.

ಮತ ಎಣಿಕೆಯ ಸಂದರ್ಭದಲ್ಲಿ ಮೊದಲೆರಡು ಸುತ್ತುಗಳಲ್ಲಿ ಮಾತ್ರ ಕಾಂಗ್ರೆಸ್ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿತ್ತು. ಇದನ್ನು ಬಿಟ್ಟರೆ, ಉಳಿದ 17 ಸುತ್ತುಗಳಲ್ಲಿ ಬಿಜೆಪಿ ಮತಗಳು ಏರಿಕೆಯಾಗಿ ಕೊನೆಗೆ 68,399 ಮತಗಳ ಅಂತರದಿಂದ ಪಿ.ಸಿ.ಗದ್ದಿಗೌಡರಿಗೆ ಗೆಲುವಾಯಿತು.

ಪಿ.ಸಿ.ಗದ್ದಿಗೌಡರು ಪಡೆದ ಒಟ್ಟು ಮತಗಳು 6,71,039, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪಡೆದ ಒಟ್ಟು ಮತಗಳು 6,02,640. ಬಿಜೆಪಿ ಪಡೆದ ಒಟ್ಟು ಲೀಡ್ 68,399 ಮತಗಳು.

ಬೆಂಗಳೂರು ಕೇಂದ್ರ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಪ್ರಯಾಸದ​ ಗೆಲುವು ಗಳಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಮನ್ಸೂರ್​ ಅಲಿ ಖಾನ್​ ಅವರಿಗೆ ಸೋಲಾಗಿದೆ. ಸತತ ಹಿನ್ನಡೆಯಲ್ಲಿದ್ದ ಪಿ.ಸಿ.ಮೋಹನ್​ ಕೊನೆಯ ಸುತ್ತುಗಳಲ್ಲಿ 32,707 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಿ.ಸಿ.ಮೋಹನ್​ ಅವರಿಗೆ ಕೊನೇ ಕ್ಷಣದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರ ಕೈಹಿಡಿಯಿತು. ಮಹದೇವಪುರ ಕ್ಷೇತ್ರದಲ್ಲಿ ಸುಮಾರು 1.12 ಲಕ್ಷ ಮತಗಳಿಂದ ಮುನ್ನಡೆ ಪಡೆದು, ಗೆಲುವು ಸಾಧಿಸಿದ್ದಾರೆ.

ಬೆಂಗಳೂರು ಉತ್ತರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿಜಯ ಮಾಲೆ ಧರಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಎಂ.ವಿ.ರಾಜೀವ್​ ಗೌಡ ಅವರ ವಿರುದ್ಧ ಶೋಭಾ 2,59,476 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಶೋಭಾ ಕರಂದ್ಲಾಜೆ 9,86,049 ಮತಗಳನ್ನು ಪಡೆದರೆ, ರಾಜೀವ್​ ಗೌಡ ಅವರಿಗೆ 7,26,573 ಮತಗಳು ದೊರೆತಿವೆ.

ಬೆಂಗಳೂರು ಗ್ರಾಮೀಣ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಫೈಟ್‌ ಏರ್ಪಟ್ಟಿತ್ತು. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾದ ಮಾಜಿ ಪ್ರಧಾನಿ ದೇವೇಗೌಡ ಅವರ ಅಳಿಯ ಡಾ.ಸಿ.ಎನ್. ಮಂಜುನಾಥ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಒಕ್ಕಲಿಗ ಸಮುದಾಯದ ದೇವೇಗೌಡ ಮತ್ತು ಡಿ.ಕೆ. ಶಿವಕುಮಾರ್ ಅವರ ಕುಟುಂಬಕ್ಕೂ ಈ ಚುನಾವಣೆ ಪ್ರತಿಷ್ಠೆಯಾಗಿತ್ತು. ಈ ಎರಡು ಕುಟುಂಬದ ಸದಸ್ಯರು ರಾಜಕೀಯ ಅಖಾಡದಲ್ಲಿ ಮತ್ತೆ ಎದುರಾಳಿಗಳಾಗಿದ್ದು, ಇದೀಗ ಮಂಜುನಾಥ್​ ಅವರು ಮೇಲುಗೈ ಸಾಧಿಸಿದ್ದಾರೆ.

ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಕಣಕ್ಕಿಳಿದಿರುವ ತೇಜಸ್ವಿ ಸೂರ್ಯ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯ ರೆಡ್ಡಿ ಹೀನಾಯ ಸೋಲು ಕಂಡಿದ್ದಾರೆ. ತೇಜಸ್ವಿ ಸೂರ್ಯ ಅವರು 7,27,537 ಮತಗಳು ಹಾಗೂ ಸೌಮ್ಯ ರೆಡ್ಡಿ 4,59,460 ಮತಗಳನ್ನು ಪಡೆದಿದ್ದಾರೆ. 2,68,077 ಮತಗಳ ಅಂತರದಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದೆ.

ಬೆಳಗಾವಿ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಗದೀಶ್ ಶೆಟ್ಟರ್ 1,75,574 ಮತಗಳ ಅಂತರದ ಗೆಲುವು ಕಂಡಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ‌ ಪುತ್ರ ಮೃಣಾಲ್ ಹೆಬ್ಬಾಳ‌ ಸೋಲು ಕಂಡಿದ್ದಾರೆ. ಜಗದೀಶ್ ಶೆಟ್ಟರ್ 7,56,471 ಮತಗಳನ್ನು ಪಡೆದರೆ, ಮೃಣಾಲ್ ಹೆಬ್ಬಾಳ‌ 5,80,897 ಮತ ಪಡೆದಿದ್ದಾರೆ.

ಬಳ್ಳಾರಿ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಬಿಜೆಪಿ ಅಭ್ಯರ್ಥಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಸೋತಿದ್ದಾರೆ. ತುಕಾರಾಂ 87,629 ಮತಗಳ ಅಂತರದಿಂದ ಶ್ರೀರಾಮುಲು ವಿರುದ್ಧ ಜಯಭೇರಿ ಬಾರಿಸಿದ್ದಾರೆ.

ಬೀದರ್

ಬೀದರ್ ಕ್ಷೇತ್ರದ ಜನರು ಅಚ್ಚರಿಯ ಫಲಿತಾಂಶವನ್ನು ನೀಡಿದ್ದಾರೆ. ಕಾಂಗ್ರೆಸ್​ ಪಕ್ಷದ ಕಿರಿಯ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಸಾಗರ್ ಈಶ್ವರ್ ಖಂಡ್ರೆ 6,48,132 ಮತಗಳನ್ನು ಪಡೆದು 1,26,308 ಮತಗಳ ಅಂತರದ ಜಯ ಪಡೆದಿದ್ದಾರೆ. ಬಿಜೆಪಿಯ ಭಗವಂತ ಖೂಬಾ 5,21,824 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ವಿಜಯಪುರ

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ ಜಿಗಜಿಣಗಿ ಅವರು ಗೆಲುವು ಸಾಧಿಸುವ ಮೂಲಕ 7ನೇ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ.‌ ರಮೇಶ ಜಿಗಜಿಣಗಿ- 77,229 ಮತಗಳ ಅಂತರದ ಗೆಲುವು ಕಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ರಾಜು ಆಲಗೂರ 5,95,552 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ರಮೇಶ ಜಿಗಜಿಣಗಿ ಅವರು ಒಟ್ಟು 6,72781 ಮತಗಳನ್ನು ಪಡೆದಿದ್ದಾರೆ.

ಚಾಮರಾಜನಗರ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್​ ಬಾಲರಾಜು ಸೋಲು ಕಂಡಿದ್ದಾರೆ. ಪ್ರತಿಸ್ಪರ್ಧಿ ಸುನೀಲ್ ಬೋಸ್​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್​ಗೆ 7,48,885 ಮತಗಳು ಲಭಿಸಿದ್ದು, ಬಿಜೆಪಿ ಅಭ್ಯರ್ಥಿ ಬಾಲರಾಜುಗೆ 5,59,942 ಮತ ಬಿದ್ದಿವೆ. ಗೆಲುವಿನ ಅಂತರ 1,88,943 ಮತಗಳು.

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಭರ್ಜರಿ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಸೋಲು ಕಂಡಿದ್ದಾರೆ. 1,63,460 ಮತಗಳ ಅಂತರದೊಂದಿಗೆ ಬಿಜೆಪಿಯ ಡಾ.ಕೆ.ಸುಧಾಕರ್ ಜಯ ಸಾಧಿಸಿದ್ದಾರೆ. ಡಾ.ಕೆ.ಸುಧಾಕರ್ 8,22,619 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್​ ಅಭ್ಯರ್ಥಿ ರಕ್ಷಾ ರಾಮಯ್ಯ 6,59,159 ಮತಗಳನ್ನು ಪಡೆದಿದ್ದಾರೆ.

ಚಿಕ್ಕೋಡಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಗೆಲುವು ಸಿಕ್ಕಿದೆ. ಈ ಮೂಲಕ ಕಳೆದ ಎರಡು ಬಾರಿ ಗೆದ್ದು ಬೀಗಿದ್ದ ಬಿಜೆಪಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಬಿಜೆಪಿಯ ಹಿರಿಯ ಹುರಿಯಾಳು ಅಣ್ಣಾಸಾಹೇಬ್‌ ಜೊಲ್ಲೆ ಅವರನ್ನು ಯುವನಾಯಕಿ ಪ್ರಿಯಾಂಕಾ ಸೋಲಿಸಿದ್ದಾರೆ.

ಚಿತ್ರದುರ್ಗ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ್​ ಕಾರಜೋಳ ಅವರು 6,84,890 ಮತ ಗಳಿಸಿ ಕಾಂಗ್ರೆಸ್ ಅಭ್ಯರ್ಥಿ ​ಬಿ.ಎನ್​. ಚಂದ್ರಪ್ಪ ಅವರನ್ನು 48,121 ಮತಗಳ ಅಂತರದಿಂದ ಸೋಲಿಸಿದ್ದಾರೆ.

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ 7 ಲಕ್ಷಕ್ಕೂ ಅಧಿಕ ಮತ ಪಡೆಯುವ ಮೂಲಕ ಅಮೋಘ ಗೆಲುವು ಸಾಧಿಸಿದ್ದಾರೆ. 1,49,208 ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆರ್ ಅವರಿಗೆ ಸೋಲುಣಿಸಿದ್ದಾರೆ.

ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸುವ ಮೂಲಕ ಕಾಂಗ್ರೆಸ್​ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್​ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ​ಪಕ್ಷೇತರ ಅಭ್ಯರ್ಥಿ ​ಜಿ.ಬಿ. ವಿನಯ್​ ಕುಮಾರ್​ ಸೋಲನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌​​ 6,33,059 ಮತ ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ 6,06,965 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್​​​ ಕುಮಾರ್​​ 42,907ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಧಾರವಾಡ

ಬಿಜೆಪಿಯ ಭದ್ರಕೋಟೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೈ - ಕಮಲ ಪಕ್ಷಗಳ ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಕಾಂಗ್ರೆಸ್‌ನ​ ಹೊಸ ಮುಖ ವಿನೋದ್ ಅಸೂಟಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಜೋಶಿ ಸತತ ಐದನೇ ಬಾರಿ ಗೆದ್ದು ಬೀಗಿದ್ದಾರೆ. ಪ್ರಲ್ಹಾದ್ ಜೋಶಿ 7,05830 ಮತಗಳನ್ನು ಪಡೆದಿದ್ದು, ವಿನೋದ್ ಅಸೂಟಿ 6,11008ಮತ ಪಡೆದಿದ್ದಾರೆ. ಪ್ರಲ್ಹಾದ್ ಜೋಶಿ 95,925 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ಕಲಬುರಗಿ

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ, ಕಾಂಗ್ರೆಸ್​ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ 652321 ಮತಗಳಿಂದ ಗೆಲವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ 625116 ಮತಗಳನ್ನು ಪಡೆದುಕೊಂಡಿದ್ದಾರೆ. ಜಾಧವ್‌ ಅವರನ್ನು ಸೋಲಿಸುವ ಮೂಲಕ ಮಾವನ ಸೋಲಿನ ಸೇಡನ್ನು ರಾಧಾಕೃಷ್ಣ ತೀರಿಸಿಕೊಂಡಿದ್ದಾರೆ.

ಹಾಸನ

ರಾಜ್ಯದ ಗಮನ ಸೆಳೆದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಸೋಲಿನ ರುಚಿ ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ 43,739 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ - 6,70,274 ಮತ ಪಡೆದಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಪ್ರಜ್ವಲ್‌ ರೇವಣ್ಣ 6,26,536 ಮತ ಪಡೆದಿದ್ದಾರೆ. ಗೆಲುವಿನ ಅಂತರ 43,739 ಮತಗಳು.

ಹಾವೇರಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ 43,513 ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ 6,62,025 ಮತಗಳನ್ನು ಪಡೆದರೆ ಬೊಮ್ಮಾಯಿ 7,05,538 ಮತಗಳನ್ನು ಪಡೆದು ಗೆದ್ದಿದ್ದಾರೆ.

ಕೋಲಾರ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ ಬಾಬು 71 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಮಲ್ಲೇಶ್‌ ಬಾಬು 6,91,481 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಕೆ.ವಿ ಗೌತಮ್​ ಸೋಲು ಕಂಡಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಲ್ಲೇಶ್‌ ಬಾಬು 6,91,481 ಮತ ಪಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ. ಗೌತಮ್‌ 6,20,093 ಮತ ಗಳಿಸಿದ್ದಾರೆ. ಮತಗಳ ಅಂತರ 71,388 ಮತಗಳು.

ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸೋಲು ಅನುಭವಿಸಿದ್ದ ಹಿಟ್ನಾಳ ಕುಟುಂಬ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಗೆಲುವಿನೊಂದಿಗೆ ನಾಲ್ಕನೇ ಪ್ರಯತ್ನದಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಕೆ.ಬಸವರಾಜ ಅವರನ್ನು 45 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮಂಡ್ಯ

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಅವರು 8,51,881 ಮತಗಳೊಂದಿಗೆ ಭರ್ಜರಿ ಗೆಲುವು ಕಂಡಿದ್ದಾರೆ. 5,67,261 ಮತ ಗಳಿಸಿದ ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್ ಚಂದ್ರು ಸೋಲಿನ ರುಚಿ ಕಂಡಿದ್ದಾರೆ. ಮಾಜಿ ಸಿಎಂ, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ 8,51,881 ಮತಗಳನ್ನು ಪಡೆದಿದ್ದು, ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್ ಚಂದ್ರು 5,67,261 ಮತ ಪಡೆದಿದ್ದಾರೆ. ಗೆಲುವಿನ ಅಂತರ 2,84,620 ಮತಗಳು.

ಮೈಸೂರು

ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಚುನಾವಣಾ ಕಣಕ್ಕಿಳಿದ ಯದುವೀರ್‌ ಒಡೆಯರ್​ ಭರ್ಜರಿ ಜಯ ಗಳಿಸಿದ್ದಾರೆ. ಎಣಿಕೆಯ ಯಾವ ಹಂತದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್‌ ಸ್ಪರ್ಧೆ ಕೊಡದೇ ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಯದುವೀರ್ 7,95,503 ಮತ ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ 6,56,241 ಮತ ಪಡೆದಿದ್ದಾರೆ. ಗೆಲುವಿನ ಅಂತರ 1,39,262 ಮತಗಳು.

ರಾಯಚೂರು

ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಿ. ಕುಮಾರ್‌ ನಾಯ್ಕ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯ್ಕ ಪರಾಭವಗೊಂಡಿದ್ದಾರೆ. ಕುಮಾರ್‌ ನಾಯ್ಕ ಅವರು ಅಮರೇಶ್ವರ ಅವರನ್ನು 79781 ಮತಗಳ ಅಂತರದಿಂದ ಸೋಲಿಸಿದ್ದಾರೆ. ರಾಜಾ ಅಮರೇಶ್ವರ ನಾಯ್ಕ ಪಡೆದಿರುವುದು 591185 ಮತಗಳು. ಜಿ ಕುಮಾರ್‌ ನಾಯಕ್‌ 670966 ಮತಗಳನ್ನು ಪಡೆದಿದ್ದಾರೆ.

ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 7 ಲಕ್ಷಕ್ಕೂ ಅಧಿಕ ಮತಗಳಿಸಿ ಕಾಂಗ್ರೆಸ್‌ ಪ್ರತಿಸ್ಪರ್ಧಿ ಗೀತಾ ಶಿವರಾಜ್ ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರನ್ನು ಸೋಲಿಸಿದ್ದಾರೆ. ಬಿ.ವೈ.ರಾಘವೇಂದ್ರ ಪಡೆದ ಮತಗಳು 7,78,೭೨೧. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್ 5,35,005 ಮತ ಪಡೆದಿದ್ದು, ಗೆಲುವಿನ ಅಂತರ 2,43,715.

ತುಮಕೂರು

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದು ಬೀಗಿದ್ದಾರೆ. 7,15,295 ಮತಗಳನ್ನು ಪಡೆದ ವಿ.ಸೋಮಣ್ಣ, 1,73,632 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಮುದ್ದಹನುಮೇಗೌಡ 5,42,263 ಮತಗಳನ್ನ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಉಡುಪಿ- ಚಿಕ್ಕಮಗಳೂರು

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ 7,32,234 ಲಕ್ಷ ಮತ ಪಡೆದು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದ್ದಾರೆ.

ಉತ್ತರ ಕನ್ನಡ

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ್ ಹೆಗಡೆ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 3,37,872 ಮತಗಳ ಅಂತರದ ಗೆಲುವು ಪಡೆದಿದ್ದು, ಕಾಂಗ್ರೆಸ್​ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಮಣಿಸಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಪಡೆದ ಮತಗಳು 7,80,464. ಡಾ.ಅಂಜಲಿ ನಿಂಬಾಳ್ಕರ್ ಪಡೆದ ಮತಗಳು 4,42,622

Read More
Next Story