Lok Sabha Election 2024 | ಚುನಾವಣಾ ಕಣದಲ್ಲಿ ಸ್ತ್ರೀಶಕ್ತಿ: ಸೋಲೆಷ್ಟು? ಗೆಲುವೆಷ್ಟು?
x

Lok Sabha Election 2024 | ಚುನಾವಣಾ ಕಣದಲ್ಲಿ ಸ್ತ್ರೀಶಕ್ತಿ: ಸೋಲೆಷ್ಟು? ಗೆಲುವೆಷ್ಟು?


ʻತೊಟ್ಟಿಲನ್ನು ತೂಗುವ ಕೈ ದೇಶವನ್ನು ಆಳಬಹುದುʼ ಎನ್ನುವ ಮಾತಿನಂತೆ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಂಬ ಮುಖ್ಯ ಆಗುತ್ತದೆ. ಆದರೆ ಸೀಟು ಹಂಚಿಕೆ ವಿಚಾರದಲ್ಲಿ ಪಕ್ಷಗಳು ಮಹಿಳೆಯರಿಗೆ ಅವಕಾಶ ನೀಡುವಲ್ಲಿ ಹಿಂದೆ ಬಿದ್ದಿವೆ. ಕರ್ನಾಟಕಕ್ಕೆ ಸಂಬಂಧಿಸಿ ನೋಡುವುದಾದರೆ, ಕಾಂಗ್ರೆಸ್ ಪಕ್ಷ 28 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರಿಗೆ ಟಿಕೆಟ್ ನೀಡಿದರೆ ಬಿಜೆಪಿ, ಜೆಡಿಎಸ್ ಮೈತ್ತಿಕೂಟದ ಎನ್‌ಡಿಎ ಕೇವಲ ಇಬ್ಬರಿಗೆ ಮಾತ್ರ ಟಿಕೆಟ್ ನೀಡಿದೆ.

ಕಾಂಗ್ರೆಸ್ ತನ್ನ ಗ್ಯಾರಂಟಿ ನಂಬಿಕೊಂಡು ಆರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿತ್ತು. ಅದು ಕೂಡ ಸಚಿವರ ಸಂಬಂಧಿಗಳಿಗೆ ಟಿಕೆಟ್ ನೀಡಿ, ಗೆಲ್ಲಿಸಿಕೊಂಡುಬರುವ ಟಾಸ್ಕ್ ನೀಡಲಾಗಿತ್ತು. ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ್, ಬೆಂಗಳೂರು ದಕ್ಷಿಣದಿಂದ ಸೌಮ್ಯ ರೆಡ್ಡಿ, ಶಿವಮೊಗ್ಗದಿಂದ ಗೀತಾ ಶಿವರಾಜ್ಕುಮಾರ್, ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್, ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್ ಹಾಗೂ ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಮಾಡಿದ್ದರು. ಆದರೆ ಅವರಲ್ಲಿ ಇಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ.

ಇನ್ನು ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ್ ಹಾಗೂ ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಟಿಕೆಟ್ ನೀಡಲಾಗಿತ್ತು. ಇವರಲ್ಲಿ ಒಬ್ಬರು ಮಾತ್ರ ಗೆಲುವು ಕಂಡಿದ್ದಾರೆ.

ಮಹಿಳಾ ಹಣಾಹಣಿಗೆ ಸಾಕ್ಷಿಯಾಗಿದ್ದ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ ಮತ್ತು ಕಾಂಗ್ರೆಸ್ಸಿನ ಡಾ ಪ್ರಭಾ ಮಲ್ಲಿಕಾರ್ಜುನ್ ಅವರು ಅಭ್ಯರ್ಥಿಗಳಾಗಿದ್ದರು. ಗಾಯತ್ರಿ ಅವರು ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಪತ್ನಿಯಾಗಿದ್ದು, ಮತ್ತೊಂದೆಡೆ, ಡಾ.ಪ್ರಭಾ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ತೋಟಗಾರಿಕಾ ಸಚಿವರಾಗಿರುವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಪತ್ನಿಯಾಗಿದ್ದಾರೆ.

ಪ್ರಭಾ ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಪ್ರಭಾ ಮಲ್ಲಿಕಾರ್ಜುನ್ 4,27,926 ಮತಗಳನ್ನು ಪಡೆದಿದ್ದರೆ, ಗಾಯತ್ರಿ ಸಿದ್ದೇಶ್ವರ 3,84,391 ಮತ ಪಡೆದಿದ್ದಾರೆ.

ಬೆಂಗಳೂರಿನಿಂದ ಮೊದಲ ಸಂಸದೆಯಾದ ಶೋಭಾ ಕರಂದ್ಲಾಜೆ

ಕಳೆದ 73 ವರ್ಷಗಳಲ್ಲಿ ಬೆಂಗಳೂರಿನಿಂದ ಒಬ್ಬರೇ ಒಬ್ಬರು ಮಹಿಳೆ ಲೋಕಸಭೆಗೆ ಆಯ್ಕೆಯಾಗಿರಲಿಲ್ಲ. ಈ ಬಾರಿ ಬೆಂಗಳೂರು ವ್ಯಾಪ್ತಿಯ ಎರಡು ಕ್ಷೇತ್ರದಲ್ಲಿ ಪ್ರಬಲ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಸಲಾಗಿತ್ತು. ಅದರಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಶೋಭಾ ಕರಂದ್ಲಾಜೆ ಅವರು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದರೂ ಅಲ್ಲಿ ಈ ಚುನಾವಣೆಯಲ್ಲಿ ಅವರ ವಿರುದ್ಧ ಗೋಬ್ಯಾಕ್ ಅಭಿಯಾನ ಶುರುವಾಗಿ ಬೆಂಗಳೂರು ಉತ್ತರಕ್ಕೆ ವಲಸೆ ಬಂದಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ವಿರುದ್ಧ ಶೋಭಾ ಕರಂದ್ಲಾಜೆಯವರು ಗೆಲುವು ಸಾಧಿಸುವ ಮೂಲಕ ಕಳೆದ 73 ವರ್ಷಗಳಲ್ಲಿ ಬೆಂಗಳೂರಿನಿಂದ ಆಯ್ಕೆಯಾದ ಮೊದಲ ಸಂಸದೆ ಎನ್ನುವ ಹಿರಿಮೆ ಗಳಿಸಿದ್ದಾರೆ.

ಚಿಕ್ಕೋಡಿಯಲ್ಲಿ ಯುವ ನಾಯಕಿಯ ಸಾಧನೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ, ಪ್ರಿಯಾಂಕಾ ಅವರು ಬಿಜೆಪಿಯ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ದೇಶದ ಕಿರಿಯ ಸಂಸದರಾಗಿ ಪ್ರಿಯಾಂಕಾ ಜಾರಕಿಹೊಳಿ ಆಯ್ಕೆಯಾಗಿದ್ದಾರೆ.

ಪ್ರಿಯಾಂಕಾ ಜಾರಕಿಹೊಳಿ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಭಾರೀ ಬೆಂಬಲ ಪಡೆದಿದ್ದಾರೆ. ಗಡಿ ಪ್ರದೇಶದ ಮರಾಠಿ ಜನರೊಂದಿಗೆ ಅವರ ತಂದೆ ಜಾರಕಿಹೊಳಿ ಅವರಿಗೆ ಉತ್ತಮ ಸಂಪರ್ಕವಿದೆ, ಇದು ಮಗಳಿಗೆ ಹೆಚ್ಚುವರಿ ಪ್ರಯೋಜನವಾಗಿದೆ. ಅವರ ಇಬ್ಬರು ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಹಾಲಿ ಶಾಸಕರಾಗಿರುವುದರಿಂದ ಅನೇಕ ಬಿಜೆಪಿ ಮತಗಳು ಕಾಂಗ್ರೆಸ್‌ನತ್ತ ವಾಲಿರುವ ಸಾಧ್ಯತೆ ಇದೆ.

ಬೆಂ. ದಕ್ಷಿಣದಲ್ಲಿ ಸೋಲು ಕಂಡ ಸೌಮ್ಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರದಿಂದ ಗೆಲುವು ಕಂಡಿದ್ದರು. ಆನಂತರ 2023ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಮತಗಳ ಅಂತರಿಂದ ಸೋಲು ಅನುಭವಿಸಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ತೇಜಸ್ವಿಸೂರ್ಯ ಎದುರು ಹೀನಾಯ ಸೋಲು ಕಂಡಿದ್ದಾರೆ.

ಶಿವಮೊಗ್ಗದಲ್ಲಿ ಮಾಜಿ ಸಿಎಂಗಳ ಮಕ್ಕಳ ಫೈಟ್

ಶಿವಮೊಗ್ಗ ಬಿಜೆಪಿಯ ಭದ್ರಕೋಟೆಯಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಅವರ ವಿರುದ್ಧ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಇಲ್ಲಿ ಗೀತಾ ಅವರ ಸಹೋದರ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿಯಾಗಿದ್ದಾರೆ, ಗೆಲ್ಲಿಸಿಕೊಂಡು ಬರಬಹುದು ಎನ್ನುವ ಭರವಸೆಯಲ್ಲಿ ಕಾಂಗ್ರೆಸ್ ಪಕ್ಷ ಇತ್ತು.

ಈ ಹಿಂದೆ ಜೆಡಿಎಸ್ ನಿಂದ ಸ್ಪರ್ಧಿಸಿ ಗಮನ ಸೆಳೆದಿದ್ದ ಗೀತಾ ಶಿವರಾಜ್ ಕುಮಾರ್ ಅವರು, ಜೆಡಿಎಸ್ ನ ಸೀಮಿತ ಕಾರ್ಯಕರ್ತರನ್ನೇ ಇಟ್ಟುಕೊಂಡು ಭರ್ಜರಿ ಫೈಟನ್ನೇ ಕೊಟ್ಟಿದ್ದರು. ಈ ಬಾರಿ ಗೀತಾ ಅವರು ಅತಿದೊಡ್ಡ ಪಕ್ಷ ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದರು. ಹಳೆಯ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದ್ದರು. ಆದರೆ ನಿನ್ನೆ ಹೊರಬಿದ್ದ ಫಲಿತಾಂಶದಲ್ಲಿ ಬಿಜೆಪಿ ಭದ್ರಕೋಟೆಯನ್ನು ಅಲುಗಾಡಿಸಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರಿಗೆ ಸಾಧ್ಯವಾಗದೇ ಸೋಲು ಒಪ್ಪಿಕೊಂಡಿದ್ದಾರೆ.

25 ವರ್ಷಗಳ ಬಳಿಕ ಉ.ಕ ದಲ್ಲಿ ಮಹಿಳಾ ಅಭ್ಯರ್ಥಿ

ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ 1999ರಲ್ಲಿ ಮಾರ್ಗರೇಟ್ ಆಳ್ವ ಅವರು ಕಾಂಗ್ರೆಸ್ ಪಕ್ಷದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ತದನಂತರ ಈ ಕ್ಷೇತ್ರದಲ್ಲಿ ಯಾವ ಪಕ್ಷವೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಈ ಬಾರಿ ಕಾಂಗ್ರೆಸ್ ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕಿಳಿಸಿತ್ತು.

ಅಂಜಲಿ ನಿಂಬಾಳ್ಕರ್‌ ಅವರು ಮರಾಠ ಸಮುದಾಯಕ್ಕೆ ಸೇರಿದವರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಖಾನಾಪುರ, ಕಿತ್ತೂರು, ಹಳಿಯಾಳ, ಕಾರವಾರ ಕ್ಷೇತ್ರದಲ್ಲಿ ಕ್ಷತ್ರಿಯ ಮರಾಠಾ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಮಹಿಳಾ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಕಾರಣ, ಗ್ಯಾರಂಟಿ ಯೋಜನೆಯಾದ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳ ಮೂಲಕ ಕಾಂಗ್ರೆಸ್‌ ಸರ್ಕಾರ ಮಹಿಳಾ ಸಬಲೀಕರಣದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಕಾರಣದಿಂದ ಮಹಿಳಾ ಮತದಾರರರು ಕೈ ಹಿಡಿಯುತ್ತಾರೆ ಎಂಬ ಲೆಕ್ಕಚಾರದಲ್ಲಿ ಕಾಂಗ್ರೆಸ್ ಇತ್ತು. ಆದರೆ ಬಿಜೆಪಿಯ ಹಿರಿಯ ರಾಜಕಾರಣಿ ವಿಶ್ವೇಶ್ವರ್ ಹೆಗಡೆ ಕಾಗೇರಿ ಎದುರು ಸೋಲು ಒಪ್ಪಬೇಕಾಯಿತು.

ಬಾಗಲಕೋಟೆಯಲ್ಲಿ ಯುವನಾಯಕಿಯ ಪ್ರಬಲ ಹೋರಾಟ

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ನಿಂದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿ ಶಿವಾನಂದ ಪಾಟೀಲ ಪ್ರಭಾವಿ ನಾಯಕರಾಗಿದ್ದಾರೆ. ಆದರೆ ಬಾಗಲಕೋಟೆಯಲ್ಲಿ ಅವರ ಪ್ರಭಾವ ಅಂದುಕೊಂಡ ಪ್ರಮಾಣದಲ್ಲಿ ಯಶಸ್ಸು ಕಾಣಲಿಲ್ಲ.

ಬಾಗಲಕೋಟೆಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದ್ದರಿಂದ ಅವರು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದರು. ಆರಂಭದಲ್ಲಿ ಬಹಿರಂಗವಾಗಿ ಬಂಡಾಯ ಸಾರುವ ಚಿತ್ರಣಗಳು ಕಂಡುಬಂದರೂ ಆನಂತರ ಅವರನ್ನು ಸಮಾಧಾನಪಡಿಸುವ ಕೆಲಸ ಪಕ್ಷದ ನಾಯಕರು ಮಾಡಿದರು. ಆದರೆ, ಜಿಲ್ಲೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ವೀಣಾ ಕಾಶಪ್ಪನವರ್ ಅವರು ಬಹಿರಂಗ ಸಭೆಗಳಲ್ಲಿ ಭಾಗವಹಿಸದೇ ತಟಸ್ಥರಾಗಿ ಉಳಿದರು. ಇದು ಕೂಡ ಸಂಯುಕ್ತಾ ಪಾಟೀಲರ ಸೋಲಿಗೆ ಕಾರಣವಾಯಿತು.

Read More
Next Story