
ಲೋಕಸಭಾ ಚುನಾವಣೆ | ಪಕ್ಷದ ಹಿನ್ನಡೆಗೆ ಯಾರೊ ಒಬ್ಬರನ್ನು ಹೊಣೆ ಮಾಡಲಾಗದು: ಡಾ ಎಂ ಬಿ ಪಾಟೀಲ್
ಲೋಸಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ಬರದೇ ಇರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆಂತರಿಕವಾಗಿ ಬಿರುಸಿನ ಚರ್ಚೆಗಳು ಆರಂಭವಾಗಿವೆ. ದಿನಕ್ಕೊಬ್ಬ ಮುಖಂಡರು ಚುನಾವಣಾ ಹಿನ್ನಡೆಯ ಕುರಿತು ಹೇಳಿಕೆ ನೀಡುತ್ತಿದ್ದಾರೆ.
ಇದೀಗ ಪಕ್ಷದ ಹಿರಿಯ ಮುಖಂಡರೂ ಆದ ಬೃಹತ್ ಕೈಗಾರಿಕಾ ಸಚಿವ ಡಾ ಎಂ ಬಿ ಪಾಟೀಲ್ ಅವರು ಚುನಾವಣಾ ಸೋಲಿಗೆ ಪಕ್ಷದ ಯಾರೋ ಒಬ್ಬರನ್ನು ಹೊಣೆ ಮಾಡುವುದು ಸರಿಯಲ್ಲ ಎನ್ನುವ ಮೂಲಕ ಪಕ್ಷದಲ್ಲಿ ಆಂತರಿಕವಾಗಿ ಚುನಾವಣಾ ವೈಫಲ್ಯವನ್ನು ಯಾರೋ ಒಬ್ಬರ ಹೆಗಲಿಗೆ ಹೊರಿಸುವ ಪ್ರಯತ್ನಗಳು ನಡೆಯುತ್ತಿರುವ ಸೂಚನೆ ನೀಡಿದ್ದಾರೆ.
ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 14 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಕೇವಲ 9 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಆ ಹಿನ್ನೆಲೆಯಲ್ಲಿ ಚುನಾವಣಾ ಹಿನ್ನಡೆಯ ಕುರಿತು ಪಕ್ಷ ಆಂತರಿಕ ಆತ್ಮಾವಲೋಕನ ಮಾಡಿಕೊಳ್ಳಲಿದೆ. ಜನಪರ ಯೋಜನೆಗಳು, ಜನಪ್ರಿಯ ಕಾರ್ಯಕ್ರಮಗಳ ಯಶಸ್ವಿ ಜಾರಿಯ ಬಳಿಕವೂ ನಾವು ಎಡವಿದ್ದೆಲ್ಲಿ? ಯಾಕೆ ಮತದಾರ ತಿರಸ್ಕರಿಸಿದ್ದಾರೆ. ಗೆಲ್ಲಬಹುದಾಗಿದ್ದ ಕೆಲವು ಕ್ಷೇತ್ರಗಳಲ್ಲೂ ಪಕ್ಷಕ್ಕೆ ಸೋಲಾಗಿದೆ. ಇದು ಯಾಕೆ ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಪಾಟೀಲ್ ಹೇಳಿದ್ದಾರೆ.
ಆದರೆ, ಈ ಹಿನ್ನಡೆಗೆ ಯಾವುದೇ ಒಬ್ಬರನ್ನು ಹೊಣೆ ಮಾಡುವುದು, ಯಾರೋ ಒಬ್ಬರತ್ತ ಬೊಟ್ಟು ಮಾಡುವುದು ಸರಿಯಲ್ಲ. ಯಾರನ್ನೇ ಜವಾಬ್ದಾರರನ್ನಾಗಿ ಮಾಡುವುದು ಕೂಡ ಸಲ್ಲದು. ಯಾವುದೇ ಸಚಿವರನ್ನಾಗಲೀ, ಶಾಸಕರನ್ನಾಗಲಿ ಈ ಸಂಬಂಧ ಮೌಲ್ಯಮಾಪನ ಮಾಡಲಾಗದು ಎಂದೂ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಉತ್ತರದಾಯಿತ್ವ ಬೇಕು ಎಂದ ಡಿಕೆ ಶಿವಕುಮಾರ್
ಆದರೆ, ಒಂದು ಕಡೆ ಪಾಟೀಲ್ ಅವರು ಪಕ್ಷದ ವೈಫಲ್ಯಕ್ಕೆ ಸಚಿವರನ್ನಾಗಲೀ, ಶಾಸಕರನ್ನಾಗಲೀ ಹೊಣೆ ಮಾಡಲಾಗದು ಎಂದು ಹೇಳಿರುವ ಬೆನ್ನಲ್ಲೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪಕ್ಷ ಸೋತಿರುವ ಕಡೆ ಸಚಿವರು ಹೊಣೆ ಹೊರಬೇಕು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸೂಚಿಸಿದ್ದಾರೆ. ಬೆಂಗಳೂರು ಭೇಟಿ ಸಭೆಯಲ್ಲೂ ಅವರು ಅದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ ಪಕ್ಷದ ಸೋಲಿಗೆ ಉತ್ತರದಾಯಿತ್ವ ನಿಗದಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ವಾರ ಪಕ್ಷ ಈ ಕುರಿತು ಆತ್ಮಾವಲೋಕನ ಸಭೆ ನಡೆಸಲಿದೆ. ಸಭೆಯಲ್ಲಿ ಎಲ್ಲವನ್ನೂ ಚರ್ಚಿಸಿ ಉತ್ತರದಾಯಿತ್ವ ಫಿಕ್ಸ್ ಮಾಡಲಾಗುವುದು. ಹೊಣೆಗಾರಿಕೆ ಹೊರಬೇಕಾಗುತ್ತದೆ ಎನ್ನುವ ಮೂಲಕ ಕಾಂಗ್ರೆಸ್ ಸೋಲು ಕಂಡಿರುವ ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಸಚಿವರು ಉತ್ತರದಾಯಿಗಳು ಎಂಬ ಸಂದೇಶ ನೀಡಿದ್ದಾರೆ.