Loksabha Election 2024 | ಯುವ ಮತದಾರರನ್ನು ಸೆಳೆಯಲು ʼಯೂತ್‌ ಬೂತ್‌ʼ
x
ಯುವ ಮತದಾರರನ್ನು ಸೆಳೆಯಲು ʼಯೂತ್‌ ಬೂತ್‌ʼ ಮತಗಟ್ಟೆಗಳನ್ನು ರಾಜ್ಯ ಚುನಾವಣಾ ಆಯೋಗ ನಿಯೋಜಿಸುತ್ತಿದೆ.

Loksabha Election 2024 | ಯುವ ಮತದಾರರನ್ನು ಸೆಳೆಯಲು ʼಯೂತ್‌ ಬೂತ್‌ʼ

ಯುವ ಮತದಾರರನ್ನು ಸೆಳೆಯಲು ʼಯೂತ್ ಬೂತ್ʼ ಅನ್ನು ರಾಜ್ಯ ಚುನಾವಣಾ ಆಯೋಗ ಪರಿಚಯಿಸುತ್ತಿದೆ.


Click the Play button to hear this message in audio format

ಇನ್ನೇನು ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲೆಡೆ ಅಬ್ಬರದ ಪ್ರಚಾರ ಗರಿಗೆದರಿದೆ. ಈ ನಡುವೆ ಯುವ ಮತದಾರರನ್ನು ಸೆಳೆಯಲು ರಾಜ್ಯ ಚುನಾವಣಾ ಆಯೋಗ ʼಯೂತ್ ಬೂತ್ʼ ಅನ್ನು ಪರಿಚಯಿಸುತ್ತಿದೆ.

ರಾಜ್ಯದಲ್ಲಿ ಈ ಬಾರಿ 12 ಲಕ್ಷಕ್ಕೂ ಹೆಚ್ಚು ಯುವಕ-ಯುವತಿಯರು ಮೊದಲ ಬಾರಿ ಮತ ಚಲಾಯಿಸಲಿದ್ದು, ಈ ಹೊಸ ತಲೆಮಾರಿನ ಮತದಾರರನ್ನು ಆಕರ್ಷಿಸುವ ಮೂಲಕ ಗರಿಷ್ಠ ಪ್ರಮಾಣದ ಮತದಾನ ನಡೆಯುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ. ಯುವಕ- ಯುವತಿಯರನ್ನು ಮತಗಟ್ಟೆಗೆ ಸೆಳೆಯಲು ಚುನಾವಣಾ ಆಯೋಗವು 'ಯೂತ್‌ ಬೂತ್‌' ತೆರೆಯಲು ಮುಂದಾಗಿದೆ. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಒಂದೊಂದರಂತೆ ಒಟ್ಟು 224 ʼಯೂತ್ ಬೂತ್ʼ ಗಳನ್ನು ರಚಿಸಲು ಚುನಾವಣಾ ಆಯೋಗ ಯೋಜನೆ ಹಾಕಿಕೊಂಡಿದೆ.

ಯುವ ಸಿಬ್ಬಂದಿಗಳ ನೇಮಕ

ʼಯೂತ್ ಬೂತ್ʼ ಮತಗಟ್ಟೆಗಳ ಬಗ್ಗೆ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ, ರಾಜ್ಯ ಚುನಾವಣಾ ಆಯೋಗ ನೋಡಲ್‌ ಅಧಿಕಾರಿ (ಸ್ವೀಪ್‌) ಪಿ.ಎಸ್‌.ವಸ್ತ್ರದ್‌, ʼಯೂತ್ ಬೂತ್ʼ ಮತಗಟ್ಟೆಗಳಿಗೆ ಹೊಸದಾಗಿ ಆಯ್ಕೆಗೊಂಡಿರುವ ಮತಗಟ್ಟೆ ಅಧಿಕಾರಿಯನ್ನು ನಿಯೋಜನೆ ಮಾಡಲಾಗುತ್ತದೆ. ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿವರೆಗೂ ಸಂಪೂರ್ಣವಾಗಿ ಯುವ ಸಿಬ್ಬಂದಿಯಿಂದಲೇ ನಿರ್ವಹಿಸುತ್ತಾರೆ. ಪ್ರತಿ ಮತಗಟ್ಟೆಗೆ ತಲಾ ಐದು ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಈ ಸಿಬ್ಬಂದಿಗೆ ಚುನಾವಣಾ ಕರ್ತವ್ಯ ನಿರ್ವಹಣೆ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.

ಸೆಲ್ಫಿ ಸ್ಟ್ಯಾಂಡ್‌ ವ್ಯವಸ್ಥೆ

ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಮತಗಟ್ಟೆಯ ಹೊರಗೆ ಸೆಲ್ಫಿ ಸ್ಟ್ಯಾಂಡ್‌ನ ವ್ಯವಸ್ಥೆ ಮಾಡಲಾಗುತ್ತದೆ. ಮತ ಚಲಾಯಿಸಿದ ನಂತರ ಈ ಸ್ಟ್ಯಾಂಡ್‌ನ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳಬಹುದು. ಈ ಮತಗಟ್ಟೆಗಳಲ್ಲಿ ಮತದಾರರಿಗೆ ವಿಶೇಷ ಆತಿಥ್ಯ ಸಿಗಲಿದೆ. ಮತಗಟ್ಟೆ ಪ್ರವೇಶಿಸುತ್ತಲೇ ಒಬ್ಬ ಅಧಿಕಾರಿ ಕೈ ಮುಗಿದು ಸ್ವಾಗತಿಸುತ್ತಾರೆ ಎಂದು ಪಿ.ಎಸ್‌.ವಸ್ತ್ರದ್‌ ತಿಳಿಸಿದ್ದಾರೆ.

ಸಖೀ ಬೂತ್‌

ಇನ್ನು ಮಹಿಳೆಯರಲ್ಲಿ ಮತದಾನ ಜಾಗೃತಿ ಮೂಡಿಸಲು ಕಳೆದ ವಿಧಾನಸಭಾ ಚುನಾವಣೆಯಿಂದಲೇ ಚುನಾವಣಾ ಆಯೋಗ ʼಸಖೀ ಬೂತ್‌ʼಗಳನ್ನು ಪರಿಚಯಿಸಿದೆ. ಈ ಬಾರಿಯೂ ಮಹಿಳೆಯರನ್ನು ಮತಗಟ್ಟೆಗೆ ಸೆಳೆಯಲು ಸಖೀ ಬೂತ್‌ಗಳನ್ನು ತೆರೆಯಲಾಗುತ್ತಿದ್ದು, ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ತಲಾ ಐದು ʼಸಖೀ ಮತಗಟ್ಟೆʼಯನ್ನು ತೆರೆಯಾಲಾಗುತ್ತದೆ. ರಾಜ್ಯದಲ್ಲಿ ಒಟ್ಟು 1120 ʼಸಖೀ ಮತಗಟ್ಟೆʼಯನ್ನು ಈ ಬಾರಿಯ ಲೋಕಸಭಾ ಚುನಾವಣೆಗೆ ಆಯೋಜನೆ ಮಾಡಲಾಗಿದೆ.

ಸಖೀ ಮತಗಟ್ಟೆಗಳೂ ಕೂಡ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿ ವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತವೆ.

ಸದ್ಯ ರಾಜ್ಯದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮತದಾನದ ಜಾಗೃತಿ ಮೂಡಿಸಲು ಮತ್ತು ಮತದಾನ ಪ್ರಮಾಣ ಹೆಚ್ಚಿಸಲು ರಾಜ್ಯ ಚುನಾವಣಾ ಆಯೋಗ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

Read More
Next Story