Loksabha Election 2024 | ದಾರಿ ಯಾವುದಯ್ಯ ಜಾತ್ಯತೀತ ಜನತಾ ದಳಕ್ಕೆ?
x

Loksabha Election 2024 | ದಾರಿ ಯಾವುದಯ್ಯ ಜಾತ್ಯತೀತ ಜನತಾ ದಳಕ್ಕೆ?

ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ನಿಶ್ಶೇಷ ಮಾಡುತ್ತಿರುವಾಗ, ಜಾತ್ಯತೀತ ಜನತಾ ದಳ ಮೈತ್ರಿಗೆ ಮುಂದಾಯಿತೇಕೆ? ಬಿಜೆಪಿ ಮೂಲಗಳ ಪ್ರಕಾರ, ಜೆಡಿಎಸ್‌ನಿಂದ ಶೇ.3 ರಷ್ಟು ಮತಗಳು ಬಿಜೆಪಿಗೆ ವರ್ಗಾವಣೆಯಾದರೆ, ಭಾರಿ ವ್ಯತ್ಯಾಸ ಆಗಲಿದೆ. ಬಿಜೆಪಿ ಮತಗಳಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ, ಮತ ವರ್ಗಾವಣೆ ಆಗುವುದೇ ಎಂಬುದು ಪ್ರಶ್ನೆ.


2024 ಜಾತ್ಯತೀತ ಜನತಾ ಪಕ್ಷದ 25ನೇ ಸಂಸ್ಥಾಪನೆ ವರ್ಷ. ಇದೇ ಪರ್ವ ಕಾಲದಲ್ಲಿ ಲೋಕಸಭೆ ಚುನಾವಣೆಯೂ ಬಂದಿದೆ. ಬಿಜೆಪಿ ಜೊತೆ ಕೂಡಾವಳಿ ಮಾಡಿಕೊಂಡಿರುವ ಜಾ.ದಳ, ಅತ್ತೂ ಕರೆದು ಮೂರು ಸ್ಥಾನ ಪಡೆದುಕೊಂಡಿದೆ. ತನ್ನ ಶಾಸಕರನ್ನು ಕಾಂಗ್ರೆಸ್‌ನಿಂದ ರಕ್ಷಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇನೆ ಎನ್ನುವ ದಳಕ್ಕೆ ಈ ಚುನಾವಣೆ ನಿರ್ಣಾಯಕವಾಗಲಿದೆ.

ʻಬಿಜೆಪಿ 272ಕ್ಕಿಂತ ಹೆಚ್ಚು ಸ್ಥಾನ ಗಳಿಸಿ ಮೋದಿ ಪ್ರಧಾನಿಯಾದರೆ ದೇಶವನ್ನೇ ತೊರೆಯುತ್ತೇನೆʼ ಎಂದು 10 ವರ್ಷಗಳ ಹಿಂದೆ ಹೇಳಿದ್ದ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಈಗ ʼಮೋದಿ ದೈವಾಂಶಸಂಭೂತರುʼ ಎಂದು ಹೊಗಳುತ್ತಿರುವುದು ಕಾಲದ ವ್ಯಂಗ್ಯವಲ್ಲದೆ ಇನ್ನೇನು? ಆದರೆ, ಬಿಜೆಪಿಯ ಇತಿಹಾಸವನ್ನು ನೋಡಿದರೆ ದಳ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಕರ.

ಸ್ವಲ್ಪ ಹಿಂದೆ ಹೋಗೋಣ; ಬಂಗಾರಪ್ಪ ಬಿಜೆಪಿ ಸೇರಿದ್ದು ರಾಜ್ಯ ರಾಜಕಾರಣದ ಪ್ರಮುಖ ತಿರುವು. 2004ರಲ್ಲಿ ಕಾಂಗ್ರೆಸ್-ದಳ ಮೈತ್ರಿ ಸರ್ಕಾರ 20 ತಿಂಗಳಲ್ಲೇ ಕುಸಿಯಿತು. ಆಗ ದಳದಲ್ಲಿದ್ದ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ. ಆ ನಂತರ ಕಾಂಗ್ರೆಸಿನ ಧರ್ಮಸಿಂಗ್‌ ಕೆಳಗಿಳಿದು, ಕುಮಾರಸ್ವಾಮಿ ನೇತೃತ್ವದ ದಳ-ಬಿಜೆಪಿ ಸರ್ಕಾರ ಗದ್ದುಗೆ ಹಿಡಿಯಿತು. ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡದೆ ಇದ್ದುದು, ʻವಿಶ್ವಾಸದ್ರೋಹʼವಾಗಿ ಬದಲಾಗಿ, ಬಿಜೆಪಿಗೆ ವರವಾಗಿ ಪರಿಣಮಿಸಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದರು.

2019ರಲ್ಲಿ ಕಾಂಗ್ರೆಸ್‌ ಜೊತೆ ಕೂಡಾವಳಿ ಮಾಡಿಕೊಂಡಿದ್ದಾಗ, ದಳಕ್ಕೆ 7 ಸ್ಥಾನ ಸಿಕ್ಕಿತ್ತು. ಆದರೆ, ಯಾವ ಕ್ಷೇತ್ರದಲ್ಲೂ ಗೆಲ್ಲಲಿಲ್ಲ. ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಮತ್ತು ದಳ ಎರಡೂ ಪಕ್ಷಗಳು ಕೊಚ್ಚಿಹೋದವು. ಆದರೆ, ಕಾಂಗ್ರೆಸ್ಸಿಗೆ ಶೇ.32.11, ಬಿಜೆಪಿಗೆ ಶೇ.51.75 ಮತ ಬಂತು. ಆ ನಂತರ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ.42.88 ಹಾಗೂ ಬಿಜೆಪಿ ಶೇ.36 ಮತ ಗಳಿಸಿದವು.

ದಳ ಕಾರ್ಯಕರ್ತರಿಗೆ ಕೇಸರಿ ಶಾಲು

ಬಿಜೆಪಿ ನೆಲೆಯೂರಿರುವ 25 ಕ್ಷೇತ್ರಗಳಲ್ಲಿ ಪಕ್ಷ ಯಾವುದೇ ಕೊಡುಕೊಳುಗೆ ಸಿದ್ಧವಿಲ್ಲ. ಈ ಮೊದಲು ಜೆಡಿಎಸ್‌ ಚಿನ್ಹೆಯಡಿ ಸ್ಪರ್ಧಿಸುತ್ತಾರೆ ಎನ್ನಲಾದ ಸೋಮಣ್ಣ(ತುಮಕೂರು) ಮತ್ತು ಡಾ.ಮಂಜುನಾಥ್(ಬೆಂಗಳೂರು ಗ್ರಾಮಾಂತರ) ಕಮಲದ ಚಿನ್ಹೆಯಲ್ಲೇ ಸ್ಪರ್ಧಿಸುತ್ತಿದ್ದಾರೆ. ದಳಕ್ಕೆ ಸಿಕ್ಕಿರುವುದು 3 ಕ್ಷೇತ್ರ. ಈ ಕ್ಷೇತ್ರಗಳನ್ನು ಹೊರತು ಪಡಿಸಿ, ಉಳಿದೆಡೆ ದಳದ ಕಾರ್ಯಕರ್ತರು ಹೆಗಲ ಮೇಲೆ ಕೇಸರಿ ಶಾಲು ಹಾಕಲೇಬೇಕಾಗುತ್ತದೆ. ಇವರಲ್ಲಿ ಕೆಲವರು ಮೈತ್ರಿಗೆ ಸಮ್ಮತಿಸದೆ ಇರಬಹುದು. ಉಳಿದವರು ಭವಿಷ್ಯದಲ್ಲಿ ಅನಿವಾರ್ಯವಾಗಿ ಬಿಜೆಪಿ ಜೊತೆ ಹೋಗುತ್ತಾರೆ. ಈಗ 24 ಕ್ಷೇತ್ರಗಳಲ್ಲಿ ನಡೆಯುವುದು ಕಾಂಗ್ರೆಸ್‌ ವರ್ಸಸ್ ಬಿಜೆಪಿ ಮತ್ತು 3 ಕ್ಷೇತ್ರದಲ್ಲಿ ಕಾಂಗ್ರೆಸ್‌ ವರ್ಸಸ್ ದಳ ಸ್ಪರ್ಧೆ ನಡೆಯಲಿದೆ. ಬಿಜೆಪಿಗೆ ಬೇಕಿರುವುದು ಇದೇ. ಮೊದಲು ಮೂರು ಪಕ್ಷ‌, ಕ್ರಮೇಣ ಎರಡೇ ಪಕ್ಷ- ಏಕ್‌ ಭಾರತ್‌, ಏಕ್‌ ಭಾಷಾ, ಏಕ್‌ ಧರ್ಮ್.‌

1999ರಲ್ಲಿ ಜಾ.ದಳ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಶೇ.10.9ರಷ್ಟು ಮತ ಗಳಿಸಿದರೂ, ಶೂನ್ಯ ಸಾಧನೆ ಮಾಡಿತ್ತು. 2009ರಲ್ಲಿ ಶೇ.13.06 ಮತ ಗಳಿಸಿ, 3 ಸ್ಥಾನ ಗೆದ್ದಿತ್ತು. 2019ರಲ್ಲಿ 7ರಲ್ಲಿ ಸ್ಪರ್ಧಿಸಿ, 1 ಸ್ಥಾನ ಗಳಿಸಿತ್ತು. ತುಮಕೂರಿನಲ್ಲಿ ಎಚ್‌.ಡಿ. ದೇವೇಗೌಡ ಮತ್ತು ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲುಂಡಿದ್ದರು. ಒಟ್ಟು ಮತ ಗಳಿಕೆ ಶೇ.9.7 ಇತ್ತು. ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ದಳ ನಡುವೆ ಆರು ತಿಂಗಳ ಹಿಂದೆಯೇ ಮೈತ್ರಿ ಆಗಿದ್ದರೂ, ಮೈತ್ರಿಯನ್ನು ಘೋಷಿಸುವ ಸಮಾವೇಶ ನಡೆದಿರುವುದು ಕೆಲವು ದಿನಗಳ ಹಿಂದೆ. ಚುನಾವಣೆ ಕಾರ್ಯತಂತ್ರ ಕುರಿತ ಜಂಟಿ ಸಭೆಗಳು ಈಗ ನಡೆಯುತ್ತಿವೆ. ಕೇಂದ್ರ ಗೃಹ ಸಚಿವ ಷಾ, ರೋಡ್‌ ಶೋ ಹಾಗೂ ಸಮನ್ವಯ ಸಭೆ ನಡೆಸಿ ಹೋಗಿದ್ದಾರೆ.

16 ಲೋಕಸಭೆ ಕ್ಷೇತ್ರಗಳಲ್ಲಿ ನಿಕಟ ಸ್ಪರ್ಧೆ ನಡೆದಲ್ಲಿ, ಬಿಜೆಪಿಯನ್ನು ದಡ ಮುಟ್ಟಿಸುವ ಸಾಮರ್ಥ್ಯ ದಳಕ್ಕೆ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಮಂಡ್ಯ ಮತ್ತು ಹಾಸನದಲ್ಲಿ ದಳ ಪ್ರಬಲವಾಗಿದೆ. ಮಂಡ್ಯದಲ್ಲಿ ಕಳೆದ ಬಾರಿ ಗೆಲುವು ಸಾಧಿಸಿದ್ದ ಸ್ವತಂತ್ರ ಅಭ್ಯರ್ಥಿ ಸುಮಲತಾ, ದಳಕ್ಕೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ದೃಷ್ಟಿಯಲ್ಲಿ ನೋಡಿದರೆ, ದಳ 16 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲದು. ದಳ ಕೋಲಾರ(ಕೋಲಾರ ಕೇಶವ ಅಭ್ಯರ್ಥಿ, 2014, 3,75,076 ಮತ) ಮತ್ತು ಚಿಕ್ಕಬಳ್ಳಾಪುರದಲ್ಲಿ 2014ರಲ್ಲಿ 3,46,339(ಎಚ್.ಡಿ. ಕುಮಾರಸ್ವಾಮಿ ಅಭ್ಯರ್ಥಿ) ಗಮನಾರ್ಹ ಮತ ಗಳಿಸಿದೆ; ಶಿವಮೊಗ್ಗದಲ್ಲಿ 2019ರಲ್ಲಿ (ಎಸ್.ಮಧು ಬಂಗಾರಪ್ಪ ಅಭ್ಯರ್ಥಿ) 5,06,512 ಮತ ಗಳಿಸಿತ್ತು. ಆದರೆ, ಹಳೆ ಮೈಸೂರು ಪ್ರಾಂತ್ಯದ 6 ಕ್ಷೇತ್ರ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಂಡೇ, ಮತಗಳನ್ನು ಬಿಜೆಪಿಗೆ ವರ್ಗಾಯಿಸಬೇಕಾದ ಸವಾಲನ್ನು ದಳ ಎದುರಿಸುತ್ತಿದೆ. ಕಲ್ಯಾಣ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ನಿಷ್ಠ ಮತದಾರರಿದ್ದಾರೆ. ಆದರೆ, ಅಲ್ಲಿ ಪಕ್ಷ ಸ್ಪರ್ಧಿಸುತ್ತಿಲ್ಲ. 10 ಕ್ಷೇತ್ರಗಳಲ್ಲಿ ದಳದಿಂದ ಬಿಜೆಪಿಗೆ ಹೆಚ್ಚು ಪ್ರಯೋಜನ ಆಗಲಾರದು. ಬೆಳಗಾಂ, ಬಾಗಲಕೋಟೆ, ಗುಲ್ಬರ್ಗ, ಹಾವೇರಿ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಬೆಂಗಳೂರು ದಕ್ಷಿಣದಲ್ಲಿ ದಳಕ್ಕೆ ಅಸ್ತಿತ್ವವಿಲ್ಲ.

ಮತಗಳು ವರ್ಗಾವಣೆ ಆಗುತ್ತವೆಯೇ?

ಬಿಜೆಪಿ ಮೂಲಗಳ ಪ್ರಕಾರ, ಜೆಡಿಎಸ್‌ನಿಂದ ಶೇ.3 ರಷ್ಟು ಮತಗಳು ಬಿಜೆಪಿಗೆ ವರ್ಗಾವಣೆಯಾದರೆ, ಭಾರಿ ವ್ಯತ್ಯಾಸ ಆಗಲಿದೆ. ಬಿಜೆಪಿ ಮತಗಳಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ, ಮತ ವರ್ಗಾವಣೆ ಆಗುವುದೇ ಎಂಬುದು ಪ್ರಶ್ನೆ.

ಎಸ್.ಟಿ.ಸೋಮಶೇಖರ್‌ ಅವರಂಥ ದಳ ಪ್ರತಿಸ್ಪರ್ಧಿಯಾಗಿರುವ ಶಾಸಕ(ಯಶವಂತಪುರ ಕ್ಷೇತ್ರ, ಜವರಾಯಿಗೌಡ) ಕತೆ ಏನು? ತ್ರಿಕೋನ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಏನಾಗಲಿದೆ? ದಳ-ಬಿಜೆಪಿ ಮೈತ್ರಿ ತಳಮಟ್ಟದಲ್ಲಿ ಫಲಿಸುತ್ತದೆ ಎಂಬುದಕ್ಕೆ ಖಾತ್ರಿ ಏನಿದೆ? ಒಡಿಷಾದಲ್ಲಿ ಬಿಜು ಜನತಾ ದಳ ಹೊರತುಪಡಿಸಿ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ಗತಿ ಕಾಣಿಸಿದೆ. ಪಕ್ಷದ ಪ್ರಮುಖ ನಾಯಕರನ್ನು ತೆಕ್ಕೆಗೆ ಹಾಕಿಕೊಂಡು, ಕ್ರಮೇಣ ಪಕ್ಷವನ್ನು ದುರ್ಬಲಗೊಳಿಸುತ್ತದೆ. ಕಾಲಕ್ರಮೇಣ ಎರಡು ಪಕ್ಷಗಳು ಮಾತ್ರ ಉಳಿದುಕೊಳ್ಳುತ್ತವೆ.

ಇದು ಎಚ್.ಡಿ, ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲವೇ? ಅಂಕಿಅಂಶಗಳನ್ನು ನೋಡಿದರೆ, ರಾಜ್ಯದಲ್ಲಿ ಚುನಾವಣೆಯಿಂದ ಚುನಾವಣೆಗೆ ಜಾ.ದಳ ಗಳಿಸುತ್ತಿರುವ ಮತಗಳ ಪ್ರಮಾಣ ಕಡಿಮೆಯಾಗುತ್ತಿದೆ. ಅದೇ ಹೊತ್ತಿನಲ್ಲಿ ಪಕ್ಷೇತರರು-ಇನ್ನಿತರರು ಗಳಿಸುತ್ತಿರುವ ಮತಗಳ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ. ಬಿಜೆಪಿಯ ಬಲ ವೃದ್ಧಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇಂಥ ಸನ್ನಿವೇಶದಲ್ಲಿ ದಳ ಮೈತ್ರಿಗೆ ಮುಂದಾಯಿತೇಕೆ? ಕಾಂಗ್ರೆಸ್ ಬೆಂಬಲದಿಂದಲೇ ರಾಜ್ಯಸಭೆಗೆ ಹೋಗಿರುವ ದೇವೇಗೌಡರು ಬಿಜೆಪಿ ಜೊತೆಗೆ ಕೈ ಜೋಡಿಸಿದ್ದಾದರೂ ಏಕೆ? ಇದು ದೃತರಾಷ್ಟ್ರನ ಅಪ್ಪುಗೆ ಎನ್ನುವುದು ರಾಜಕೀಯವನ್ನೇ ಉಸಿರಾಡುವ ದೇವೇಗೌಡರಿಗೆ ಗೊತ್ತಿಲ್ಲ ಎನ್ನುವುದು ಮೂರ್ಖತನ ಆಗುತ್ತದೆ.


ಬಿಜೆಪಿ

ಕಾಂಗ್ರೆಸ್

ಜೆಡಿಎಸ್

ಇತರೆ

1998

7(ಶೇ.27.19)

18(ಶೇ.45.41)

3(ಶೇ.10.85)

ಶೇ.13

2004

18(ಶೇ.34.77)

8(ಶೇ.36.82)

2(ಶೇ.20.45)

ಶೇ.7.96

2009

19(ಶೇ.41.63)

6(ಶೇ.37.65)

3(ಶೇ.13.57)

ಶೇ.7.17

2014.

17(ಶೇ.43.37)

9(ಶೇ.41.15)

2(ಶೇ.11.07)

ಶೇ.4.41

2019

25(ಶೇ.51.38)

1(ಶೇ.31.88)

1(ಶೇ.9.67)

1(ಶೇ.7.07)

ಮೈತ್ರಿ ಅನಿವಾರ್ಯವಾಗಿತ್ತು

ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಗೆ ಪತ್ರಕರ್ತ, ಮದ್ದೂರು ನಿವಾಸಿ ಕೆ.ಎನ್.ಪುಟ್ಟಲಿಂಗಯ್ಯ, ʻಹೌದು. ದೇವೇಗೌಡರ ಗುರಿ- ಮುಖ್ಯಮಂತ್ರಿ ಸಿದ್ದರಾಮಯ್ಯ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ ಬಳಿಕ‌ ಸಿದ್ದರಾಮಯ್ಯ ವರ್ತನೆ ಬದಲಾಯಿತು. ಇಂಡಿಯಾ ಒಕ್ಕೂಟಕ್ಕೆ ದಳ ಸೇರ್ಪಡೆಗೆ ಸಿದ್ದರಾಮಯ್ಯ ಅಡ್ಡಿಯಾದರು. ಜೊತೆಗೆ, ಕಳೆದ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರನ್ನು ಎತ್ತಿ ಕಟ್ಟಿದವರು ಸಿದ್ದರಾಮಯ್ಯ ಎನ್ನುವುದು ದೇವೇಗೌಡರ ಅನಿಸಿಕೆ. ಈ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಕುಟುಂಬದ ಅಸ್ತಿತ್ವಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯ ಎದುರಾಯಿತುʼ ಎನ್ನುತ್ತಾರೆ ಅವರು.

ಮುಂದುವರಿದು, ʼರಾಜ್ಯ ರೈತ ಸಂಘದ ಮುಖಂಡರಾದ ಬಾಬಾಗೌಡ ಪಾಟೀಲ್‌, ಬಿಜೆಪಿಗೆ ಸೇರ್ಪಡೆಗೊಂಡು ಕೇಂದ್ರದಲ್ಲಿ ಸಚಿವರಾದರು. ಬಳಿಕ ಅವರು ವಾಪಸಾದರೂ, ಅವರೊಟ್ಟಿಗೆ ಹೋದ ಕಾರ್ಯಕರ್ತರಿಂದ ಬಿಜೆಪಿ ಉತ್ತರ ಕರ್ನಾಟಕದಲ್ಲಿ ಬೆಳೆಯಿತು. ಈ ಚುನಾವಣೆ ಬಳಿಕ ದಳಕ್ಕೆ ಡಾ. ಸಿ.ಎನ್‌.ಮಂಜುನಾಥ್‌ ಮೂಲಕ ಹೊಸ ದಳಪತಿ ಸಿಗುತ್ತಾರೆ. ದೇವೇಗೌಡರ ರಾಜಕೀಯ ಇನ್ನೂ ಮುಗಿದಿಲ್ಲ. ಸಿದ್ದರಾಮಯ್ಯ ಅವರು ಮೈಸೂರು ಹಾಗೂ ಚಾಮರಾಜನಗರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಕಷ್ಟು ಬೆವರು ಸುರಿಸಬೇಕಾಗುತ್ತದೆʼ ಎಂದು ಹೇಳುತ್ತಾರೆ. ʻರಾಜಕೀಯ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಕೊನೆಗೆ ಮುಖ್ಯವಾಗುವುದು ಕುಟುಂಬದ ಅಸ್ತಿತ್ವʼ ಎನ್ನುತ್ತಾರೆ.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಮುಜಾಫ್ಫರ್‌ ಅಸ್ಸಾದಿ ಅವರು ʻದಳದ ಸಾಮಾಜಿಕ ನೆಲೆ ಕ್ರಮೇಣ ಕರಗುತ್ತದೆʼ ಎನ್ನುತ್ತಾರೆ. ʻಭಿನ್ನಮತವನ್ನು ನೀವೇ ಬಗೆಹರಿಸಬೇಕು ಎಂದು ಕೇಂದ್ರ ಗೃಹ ಸಚಿವರಿಗೆ ಎಚ್.ಡಿ. ಕುಮಾರಸ್ವಾಮಿ ಕೇಳಿದ್ದು ನೋಡಿದರೆ ಇದು ಅಸಮಾನರ ನಡುವಿನ ಮೈತ್ರಿ ಎನ್ನುವುದು ಸ್ಪಷ್ಟ. ದೇಶದಲ್ಲಿ ಎರಡೇ ಪಕ್ಷ ಇರಬೇಕು ಎನ್ನುವುದು ಬಿಜೆಪಿಯ ಉದ್ದೇಶ. ಅದಕ್ಕೆ ರಾಷ್ಟ್ರೀಯ ಹಂತದಲ್ಲಿ ಕಾಂಗ್ರೆಸ್‌ ಇರಬಾರದು. ಹೀಗಾಗಿ ಅದು ಕಾಂಗ್ರೆಸ್‌ ಮುಕ್ತ ಭಾರತದ ಬಗ್ಗೆ ಮಾತಾಡುತ್ತದೆʼ ಎನ್ನುತ್ತಾರೆ. ಭವಿಷ್ಯದಲ್ಲಿ ಏನಾಗಬಹುದು ಎಂಬ ಪ್ರಶ್ನೆಗೆ, ʻಕ್ರಮೇಣ ದಳದ ಕಾರ್ಯಕತರು ಕಾಂಗ್ರೆಸ್‌ ಸೇರುತ್ತಾರೆ. ಇದು ಈಗಾಗಲೇ ನಡೆಯುತ್ತಿದೆ. ಇನ್ನುಳಿದವರು ಬಿಜೆಪಿಯೊಳಗೆ ಸೇರಿಹೋಗುತ್ತಾರೆ. ಈ ಮೈತ್ರಿಯ ಪರಿಣಾಮ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಫಲಿಸುತ್ತದೆ. ದೇಶದೆಲ್ಲೆಡೆ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ನುಂಗಿಹಾಕಿರುವುದನ್ನು ನೋಡಬಹುದು. ರಾಜ್ಯದಲ್ಲಿ ಇದು ಮರುಕಳಿಸುತ್ತದೆʼ ಎನ್ನುತ್ತಾರೆ.

2023ರ ವಿಧಾನಸಭೆ ಅಂಕಿಅಂಶ ನೋಡಿದರೆ, ಕಾಂಗ್ರೆಸ್‌ಗೆ ಭರವಸೆಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ 1.59 ಕೋಟಿ ಮತ ಗಳಿಸಿದೆ. ಈ ಸಂಖ್ಯೆಯನ್ನು ಲೋಕಸಭೆ ಸ್ಥಾನಗಳಿಗೆ ತಳುಕು ಹಾಕಿದರೆ, 18 ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಇದೆ. 2023ರ ಅಂಕಿಅಂಶ ಗಣಿಸಿದರೆ, ಕಾಂಗ್ರೆಸ್‌ ಬಿಜೆಪಿಗಿಂತ ಬಹಳ ಮುಂದೆ ಇದೆ. ಆದರೆ, ಗಮನಿಸಲೇಬೇಕಾದ ಮುಖ್ಯ ಅಂಶವೆಂದರೆ, ಕರ್ನಾಟಕವು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬೇರೆಯದೇ ರೀತಿ ಮತ ಚಲಾಯಿಸಿದ ದೀರ್ಘ ಇತಿಹಾಸವಿದೆ.

ಇಡಿ-ಸಿಬಿಐ-ಐಟಿ ಇತ್ಯಾದಿ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಹಣಿಯುವ ಕಲೆಯಲ್ಲಿ ಬಿಜೆಪಿ ಪರಿಣತಿ ಸಾಧಿಸಿದೆ. ಬೆದರಿಕೆಗೆ ಮಣಿಯದಿದ್ದರೆ, ಪಕ್ಷವನ್ನೇ ಎರಡಾಗಿ ಸೀಳಿಬಿಡುತ್ತದೆ. ಬಿಜೆಪಿ ದೇಶದಾದ್ಯಂತ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುತ್ತ ಅಸ್ಮಿತೆಯನ್ನು ನಾಶಪಡಿಸುತ್ತ ʻಏಕೈಕʼದ ಪರಿಕಲ್ಪನೆಯನ್ನು ಮುಂದೊತ್ತುತ್ತಿದೆ. ಒಕ್ಕೂಟ ಮತ್ತು ಸಂವಿಧಾನದ ಪರಿಕಲ್ಪನೆ ಅದಕ್ಕೆ ಅಪಥ್ಯವಾಗಿದೆ. ಇಂಥ ಸನ್ನಿವೇಶದಲ್ಲಿ ಜಾ.ದಳವು ಬಿಜೆಪಿಯ ಮೈತ್ರಿ ಮಾಡಿಕೊಂಡಿದೆ.

Read More
Next Story