ಆರ್​ಟಿಒ ಕಚೇರಿಗಳಲ್ಲಿ ಲೋಕಾಯುಕ್ತರ ಮಿಂಚಿನ ದಾಳಿ: ಬಯಲಾಯ್ತು ಭ್ರಷ್ಟಾಚಾರ, ಏಜೆಂಟರ ಹಾವಳಿ!
x

ಆರ್​ಟಿಒ ಕಚೇರಿಗಳಲ್ಲಿ ಲೋಕಾಯುಕ್ತರ ಮಿಂಚಿನ ದಾಳಿ: ಬಯಲಾಯ್ತು ಭ್ರಷ್ಟಾಚಾರ, ಏಜೆಂಟರ ಹಾವಳಿ!

ಆರ್‌ಟಿಒ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದ್ದು, ಏಜೆಂಟರ ಹಾವಳಿ, ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಸಾರ್ವಜನಿಕರ ಶೋಷಣೆಯ ಸತ್ಯಗಳು ಬಯಲಿಗೆ ಬಂದಿವೆ.


ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್‌ಟಿಒ) ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಟ್ಟಿವೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದ ಆರು ತಂಡಗಳು ಶುಕ್ರವಾರ ರಾಜಧಾನಿಯ ಆರು ಪ್ರಮುಖ ಆರ್‌ಟಿಒ ಕಚೇರಿಗಳ ಮೇಲೆ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿವೆ. ಯಶವಂತಪುರ, ರಾಜಾಜಿನಗರ, ಜಯನಗರ, ಯಲಹಂಕ, ಕಸ್ತೂರಿನಗರ ಮತ್ತು ಕೆ.ಆರ್. ಪುರಂ ಕಚೇರಿಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಏಜೆಂಟರ ಅಟ್ಟಹಾಸ, ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಸಾರ್ವಜನಿಕರ ಶೋಷಣೆಯ ಬೆಚ್ಚಿಬೀಳಿಸುವ ಸತ್ಯಗಳು ಬಯಲಾಗಿವೆ.

ಏಜೆಂಟರ ಬಳಿ ಸರ್ಕಾರಿ ದಾಖಲೆಗಳ ರಾಶಿ

ದಾಳಿಯ ವೇಳೆ ಏಜೆಂಟರ ಹಾವಳಿ ಎಷ್ಟರಮಟ್ಟಿಗೆ ಬೇರೂರಿದೆ ಎಂಬುದು ಸ್ಪಷ್ಟವಾಗಿದೆ. ಕಸ್ತೂರಿನಗರ ಕಚೇರಿಯ ಹೊರಗಿದ್ದ ಖಾಸಗಿ ಅಂಗಡಿಯೊಂದರಲ್ಲಿ ಲೋಕಾಯುಕ್ತರು ಬರೋಬ್ಬರಿ 49 ನೋಂದಣಿ ಪ್ರಮಾಣಪತ್ರ (RC) ಮತ್ತು 83 ಚಾಲನಾ ಪರವಾನಗಿಗಳನ್ನು (DL) ವಶಪಡಿಸಿಕೊಂಡಿದ್ದಾರೆ. ಯಶವಂತಪುರದಲ್ಲಿ ಅಧಿಕಾರಿಗಳನ್ನು ಕಂಡು ಓಡಿಹೋಗುತ್ತಿದ್ದ ಏಜೆಂಟ್‌ರೊಬ್ಬನನ್ನು ಹಿಡಿದಾಗ ಆತನ ಬಳಿ 14,000 ರೂಪಾಯಿ ನಗದು ಪತ್ತೆಯಾಗಿದೆ. ಇದು ಆರ್‌ಟಿಒ ಕಚೇರಿಗಳು ಸಂಪೂರ್ಣವಾಗಿ ಏಜೆಂಟರ ನಿಯಂತ್ರಣದಲ್ಲಿವೆ ಎಂಬುದನ್ನು ಸಾಬೀತುಪಡಿಸಿದೆ.

ಅಧಿಕಾರಿಗಳ ನಿರ್ಲಕ್ಷ್ಯದ ಪರಾಕಾಷ್ಠೆ

ರಾಜಾಜಿನಗರ ಕಚೇರಿಯಲ್ಲಿ 3,800 ಚಾಲನಾ ಪರವಾನಗಿಗಳು ಮತ್ತು 6,300 ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳು ಮುದ್ರಣವಾಗದೆ ಬಾಕಿ ಉಳಿದಿದ್ದವು. ಇದಕ್ಕೆ ಹೊರಗುತ್ತಿಗೆ ಕಂಪನಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳಿದ್ದಾರೆ. ಯಲಹಂಕ ಕಚೇರಿಯಲ್ಲಿ, ವಿಳಾಸದಾರರಿಗೆ ತಲುಪದೆ ವಾಪಸ್ ಬಂದಿದ್ದ 1,300 ಆರ್‌ಸಿ ಕಾರ್ಡ್‌ಗಳು ಧೂಳು ಹಿಡಿದು ಬಿದ್ದಿದ್ದರೂ, ಅವುಗಳನ್ನು ತಲುಪಿಸುವ ಯಾವುದೇ ಪ್ರಯತ್ನ ನಡೆದಿರಲಿಲ್ಲ.

ಸಾರ್ವಜನಿಕರ ಅಳಲು, ಡ್ರೆಸ್ ಕೋಡ್‌ಗೂ ಡೋಂಟ್ ಕೇರ್

ಕೆ.ಆರ್. ಪುರಂ ಕಚೇರಿಯಲ್ಲಿ, ಸರ್ಕಾರಿ ಶುಲ್ಕದಲ್ಲಿ ಉಳಿದ 120 ರೂಪಾಯಿಗಳನ್ನು ಅಧಿಕಾರಿಗಳು ಹಿಂದಿರುಗಿಸಿಲ್ಲ ಎಂದು ದೂರುದಾರರೊಬ್ಬರು ಲೋಕಾಯುಕ್ತರ ಮುಂದೆಯೇ ಕಣ್ಣೀರು ಹಾಕಿದರು. ಇನ್ನು, ಹಲವು ಕಚೇರಿಗಳಲ್ಲಿ ಸಿಬ್ಬಂದಿ ಸರ್ಕಾರದ ಡ್ರೆಸ್ ಕೋಡ್ ಪಾಲಿಸದೆ, ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು.

ಸಮಗ್ರ ತನಿಖೆಗೆ ಲೋಕಾಯುಕ್ತರ ಆದೇಶ

ಯಶವಂತಪುರ ಮತ್ತು ರಾಜಾಜಿನಗರ ಕಚೇರಿಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್, ಕಂಡುಬಂದ ಲೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್‌ಟಿಒಗಳಲ್ಲಿನ ಭ್ರಷ್ಟಾಚಾರ ಮತ್ತು ಏಜೆಂಟರ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಸಮಗ್ರ ವರದಿ ಸಲ್ಲಿಸುವಂತೆ ತಮ್ಮ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವರದಿ ಸಲ್ಲಿಕೆಯಾದ ಬಳಿಕ ಮತ್ತಷ್ಟು ಅಕ್ರಮಗಳು ಬಯಲಾಗುವ ಸಾಧ್ಯತೆ ಇದೆ.

Read More
Next Story