
ಎಚ್‌ಡಿಕೆ ಪ್ರಕರಣ | ಮಾಹಿತಿ ಸೋರಿಕೆ: ತನಿಖೆಗೆ ಅನುಮತಿ ಕೋರಿದ ಲೋಕಾಯುಕ್ತ ಎಸ್ಐಟಿ
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡವು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ 2023 ಸೆ. 24ರಂದು ಮುಚ್ಚಿದ ಲಕೋಟೆಯಲ್ಲಿ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿತ್ತು
ಗಣಿ ಗುತ್ತಿಗೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರ ಅನುಮತಿ ಕೋರಿದ್ದ ಕಡತದ ಮಾಹಿತಿ ಸೋರಿಕೆಗೆ ಸಂಬಂಧಿಸಿ ರಾಜಭವನ ಸಚಿವಾಲಯದ ಪಾತ್ರದ ಕುರಿತು ತನಿಖೆ ನಡೆಸಲು ಲೋಕಾಯುಕ್ತ ವಿಶೇಷ ತನಿಖಾ ಸಿದ್ಧತೆ ನಡೆಸುತ್ತಿದೆ.
ಈ ಸಂಬಂಧ ಲೋಕಾಯುಕ್ತ ವಿಶೇಷ ತನಿಖಾ ತಂಡದ ಐಜಿಪಿ ಎಂ.ಚಂದ್ರಶೇಖರ್ ಅವರು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು, ತನಿಖೆಗೆ ಅನುಮತಿ ಕೋರಿದ್ದಾರೆ.
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ತನಿಖಾ ತಂಡವು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ 2023 ಸೆ. 24ರಂದು ಮುಚ್ಚಿದ ಲಕೋಟೆಯಲ್ಲಿ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿತ್ತು.
ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿದ್ದ ಕಡತ ಎಂಟು ತಿಂಗಳಿಂದ ರಾಜಭವನದ ಸಚಿವಾಲಯದಲ್ಲೇ ಇದೆ ಎಂಬ ವಿಚಾರ ಆ.7 ರಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಗೌಪ್ಯ ಮಾಹಿತಿ ಸೋರಿಕೆಯಾದ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲರು ಆ.20 ರಂದು ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆದಿದ್ದರು. ಈ ಕುರಿತು ಆಂತರಿಕ ತನಿಖೆ ನಡೆಸಿದ ಬಳಿಕ ಸೆ.4ರಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಲೋಕಾಯುಕ್ತ ವಿಶೇಷ ತನಿಖಾ ತಂಡದ ಐಜಿಪಿ ಎಂ. ಚಂದ್ರಶೇಖರ್ ಅವರು ಪತ್ರ ಬರೆದು, ರಾಜಭವನ ಸಚಿವಾಲಯದ ಪಾತ್ರದ ಕುರಿತು ತನಿಖೆಗೆ ಅನುಮತಿ ಕೋರಿದ್ದರು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 19ರ ಪ್ರಕಾರ ಆರೋಪ ಪಟ್ಟಿ ಸಲ್ಲಿಸಲು ಕೋರಿದ್ದ ಪ್ರಸ್ತಾವಗಳನ್ನು ನಾಲ್ಕು ತಿಂಗಳಲ್ಲಿ ವಿಲೇವಾರಿ ಮಾಡಬೇಕಾಗಿರುತ್ತದೆ. ಆದರೆ, ಎಂಟು ತಿಂಗಳಿಂದ ಕಡತ ರಾಜಭವನದ ಸಚಿವಾಲಯದಲ್ಲೇ ಇರಿಸಿಕೊಂಡಿರುವುದು ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಜೊತೆಗೆ ಕಡತದ ಮಾಹಿತಿ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದರ ಜೊತೆಗೆ ರಾಜಭವನದಿಂದ ಜುಲೈ 29 ರಂದು ಬರೆದ ಪತ್ರವು ಬೆಂಗಳೂರಿನಲ್ಲೇ ಇರುವ ಲೋಕಾಯುಕ್ತ ಎಸ್ ಐಟಿ ಕಚೇರಿಗೆ ತಲುಪಲು ಆಗಸ್ಟ್ 8 ರವರೆಗೆ ಸಮಯ ತೆಗೆದುಕೊಂಡಿದೆ. ಈ ಕುರಿತಾಗಿಯೂ ತನಿಖೆ ಅಗತ್ಯವಿದೆ ಎಂದು ಐಜಿಪಿ ಚಂದ್ರಶೇಖರ್ ಅವರು ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.
2007 ರಲ್ಲಿ ಸಂಡೂರಿನ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪೆನಿಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ನಿಯಮ ಉಲ್ಲಂಘಿಸಿ 550 ಗಣಿ ಗುತ್ತಿಗೆ ನೀಡಿದ್ದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು 2011 ರಲ್ಲಿ ತಮ್ಮ ಗಣಿಗಾರಿಕೆ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು.