ಲೋಕಾಯುಕ್ತ ದಾಳಿ: ಕಂತೆ ಕಂತೆ ನೋಟು ಟಾಯ್ಲೆಟ್‌ಗೆ ಸುರಿದ ಅಧಿಕಾರಿ!
x

ಅಕ್ರಮ ಆಸ್ತಿ ಗಳಿಕೆ: ರಾಜ್ಯದ 4 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 

ಲೋಕಾಯುಕ್ತ ದಾಳಿ: ಕಂತೆ ಕಂತೆ ನೋಟು ಟಾಯ್ಲೆಟ್‌ಗೆ ಸುರಿದ ಅಧಿಕಾರಿ!

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ, ಧಾರವಾಡ, ವಿಜಯನಗರ, ಬಳ್ಳಾರಿ, ಬೆಂಗಳೂರು ಮತ್ತು ಶಿವಮೊಗ್ಗ ಸೇರಿ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಭ್ರಷ್ಟರ ನಿದ್ದೆಗೆಡಿಸಲಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಕೊಪ್ಪಳ, ಧಾರವಾಡ, ವಿಜಯನಗರ, ಬಳ್ಳಾರಿ, ಬೆಂಗಳೂರು ಮತ್ತು ಶಿವಮೊಗ್ಗ ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಭ್ರಷ್ಟರ ನಿದ್ದೆಗೆಡಿಸಲಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ್ ಅವರಿಗೆ ದೊಡ್ಡ ಆಘಾತ ನೀಡಿದ್ದಾರೆ. ಹೊಸಪೇಟೆ ನಗರದಲ್ಲಿರುವ ಅವರ ನಿವಾಸ ಹಾಗೂ ಡಿಹೆಚ್‌ಒ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಜಂಬುನಾಥ ರಸ್ತೆಯಲ್ಲಿರುವ ಅವರಿಗೆ ಸೇರಿದ ಖಾಸಗಿ ಆಸ್ಪತ್ರೆ ಮತ್ತು ಕಚೇರಿಯ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಸಚಿನ್ ನೇತೃತ್ವದಲ್ಲಿ, ಪಿಐ ಅಮರೇಶ್ ಮತ್ತು ರಾಜೇಶ್ ಲಮಾಣಿ ಅವರ ತಂಡವು ಬೆಳಿಗ್ಗೆಯಿಂದಲೇ ಮಹತ್ವದ ದಾಖಲೆಗಳನ್ನು ಜಾಲಾಡುತ್ತಿದ್ದು, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕುತ್ತಿದೆ.

ಶಿವಮೊಗ್ಗ ಮತ್ತು ಕೊಪ್ಪಳದಲ್ಲೂ ಅಧಿಕಾರಿಗಳ ನಿವಾಸಗಳ ಮೇಲೆ ಕಣ್ಣಿಡಲಾಗಿದೆ.ದಾಳಿಗೊಳಗಾದ ಅಧಿಕಾರಿಗಳ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳು, ಸ್ಥಿರಾಸ್ತಿ ಪತ್ರಗಳು ಮತ್ತು ಬೇನಾಮಿ ಆಸ್ತಿಗಳ ಬಗ್ಗೆ ಲೋಕಾಯುಕ್ತ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಿನ ಜಾವವೇ ನಡೆದ ಈ ಕಾರ್ಯಾಚರಣೆಯಿಂದ ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ನಡುಕ ಹುಟ್ಟಿದ್ದು, ತನಿಖೆ ಮುಂದುವರಿದಿದೆ.

ಅರ್ಧಗಂಟೆ ಬಳಿಕ ಮನೆ ಬಾಗಿಲು ತೆಗೆದ ಅಧಿಕಾರಿ

ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್​ ಅವರ ಧಾರವಾಡದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ರಾಜಶೇಖರ್​​ಗೆ ಸೇರಿದ ಒಟ್ಟು ಮೂರು ಕಡೆ ರೇಡ್​​ ನಡೆದಿದೆ. ರಾಣಿ ಚೆನ್ನಮ್ಮ ನಗರದಲ್ಲಿರುವ ರಾಜಶೇಖರ್​ಗೆ ಸೇರಿದ ಖಾಸಗಿ ಕಚೇರಿ, ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೂ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಸಿಬ್ಬಂದಿ ಕಂಡು ಬೆದರಿದ ರಾಜಶೇಖರ್​​ ಸುಮಾರು 50 ಸಾವಿರ ರೂ. ಅನ್ನು ಕಮೋಡ್‌ಗೆ ಸುರಿದು ಫ್ಲಶ್​​ ಮಾಡಿದ್ದಾರೆ. ಸುಮಾರು ಅರ್ಧಗಂಟೆ ಕಾಲ ಲೊಕಾಯುಕ್ತ ಪೊಲೀಸರನ್ನು ಮನೆ ಹೊರಗೆ ಕಾಯಿಸಿ ಬಳಿಕ ಬಾಗಿಲು ತೆಗೆದಿದ್ದಾರೆ ಎನ್ನಲಾಗಿದೆ.

ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ದಾಖಲೆ ಪತ್ತೆ

ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಗಳಿಕೆ ಆರೋಪ ಹಿನ್ನೆಲೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರೂಪ್ಲಾ ನಾಯ್ಕ ಅವರ ಮನೆ, ಕಚೇರಿ ಸೇರಿ ವಿವಿಧೆಡೆ ಲೋಕಾಯುಕ್ತ ರೇಡ್​​ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಏಕ ಕಾಲಕ್ಕೆ ದಾಳಿ ನಡೆಸಲಾಗಿದ್ದು ಬಸವನಗುಡಿ ಮತ್ತು ಕೆಂಗೇರಿಯ ಮನೆ, ಶಿವಮೊಗ್ಗದ ಕಚೇರಿ, ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ನಿವಾಸದಲ್ಲೂ ಪರಿಶೀಲನೆ ನಡೆದಿದೆ. ದಾಳಿಯ ವೇಳೆ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಮಂಡ್ಯ ಪಿಆರ್​ಇಡಿ ಸೂಪರಿಟೆಂಡೆಂಟ್‌ ಬೈರೇಶ್​​ಗೂ ಲೋಕಾಯುಕ್ತ ಶಾಕ್​​ ಕೊಟ್ಟಿದ್ದು, ಏಕಕಾಲದಲ್ಲಿ ಮಂಡ್ಯದ ನಿವಾಸ, ಮದ್ದೂರಿನ ಅತ್ತೆ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬೈರೇಶ್ ಮೇಲೆ ಸಾರ್ವಜನಿಕರಿಂದ ಹಲವು ದೂರು‌ಗಳು ಬಂದಿದ್ದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

Read More
Next Story