ರಾಜ್ಯದಲ್ಲಿ ಮತ್ತೆ ಲೋಕಾಯುಕ್ತ ಘರ್ಜನೆ: ಮೈಸೂರು, ಕೊಪ್ಪಳದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ
x

ಕರ್ನಾಟಕ ಲೋಕಾಯುಕ್ತ

ರಾಜ್ಯದಲ್ಲಿ ಮತ್ತೆ ಲೋಕಾಯುಕ್ತ ಘರ್ಜನೆ: ಮೈಸೂರು, ಕೊಪ್ಪಳದಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ

ಲೋಕಾಯುಕ್ತ ಅಧಿಕಾರಿಗಳ ಹಲವು ತಂಡಗಳು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿವೆ.


ರಾಜ್ಯದ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆಯು ಬುಧವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಕೊಪ್ಪಳ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳ ಹಲವು ತಂಡಗಳು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿವೆ.

ಮೈಸೂರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಉಪ ವಿಭಾಗಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವೆಂಕಟರಾಮ್ ಅವರ ಸಿದ್ಧಾರ್ಥ ಬಡಾವಣೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಜಾನೆಯೇ ಮನೆಗೆ ಆಗಮಿಸಿದ ಅಧಿಕಾರಿಗಳ ತಂಡ, ಅವರ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಪ್ರತಿಯೊಂದು ದಾಖಲೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ.

ಮೈಸೂರಿನಲ್ಲೇ ನಡೆದ ಮತ್ತೊಂದು ದಾಳಿಯಲ್ಲಿ, ಕೌಶಲ್ಯಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ್ ಸ್ವಾಮಿ ಅವರ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಸಾತಗಳ್ಳಿಯ ಜೆಪಿ ನಗರದಲ್ಲಿರುವ ಅವರ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡವು ಶೋಧ ಕಾರ್ಯ ನಡೆಸುತ್ತಿದ್ದು, ಆದಾಯದ ಮೂಲ ಮತ್ತು ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಕಡತಗಳನ್ನು ಪರಿಶೀಲಿಸುತ್ತಿದೆ.

ಇದೇ ಸಮಯದಲ್ಲಿ, ಕೊಪ್ಪಳ ನಗರದಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅಲ್ಲಿನ ಅಧಿಕಾರಿಯೊಬ್ಬರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಸಿರುವ ಸರ್ಕಾರಿ ನೌಕರರ ವಿರುದ್ಧ ರಾಜ್ಯವ್ಯಾಪಿ ಕಾರ್ಯಾಚರಣೆಯನ್ನು ಲೋಕಾಯುಕ್ತ ಸಂಸ್ಥೆ ಚುರುಕುಗೊಳಿಸಿದ್ದು, ಈ ದಾಳಿಗಳು ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಸಿವೆ.

Read More
Next Story