
ರಾಜ್ಯದ ಹಲವೆಡೆ ಭ್ರಷ್ಟರ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; ಮುಂದುವರಿದ ಪರಿಶೀಲನೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ರಾಯಚೂರು, ಗದಗ, ಕೊಪ್ಪಳ, ಚಿತ್ರದುರ್ಗದಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ.
ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಮಂಗಳವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಬೆಸ್ಕಾಂ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ರಾಯಚೂರು, ಗದಗ, ಕೊಪ್ಪಳ, ಚಿತ್ರದುರ್ಗದಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆದಿದೆ.
ಬೆಂಗಳೂರಿನಲ್ಲಿ ಎಚ್ಬಿರ್ ಲೇಔಟ್ನಲ್ಲಿರುವ ಪೂರ್ವ ವಲಯದ ಬೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ (ಎಲೆಕ್ನಿಕಲ್) ಲೋಕೇಶ್ ಬಾಬು, ಬಿಬಿಎಂಪಿ ಉತ್ತರಹಳ್ಳಿ ಉಪವಿಭಾಗದ ಕಂದಾಯ ನಿರೀಕ್ಷಕ ಸುರೇಶ್ ಬಾಬು, ಬಿಬಿಎಂಪಿ ಯಲಹಂಕ ವಲಯದ ತೆರಿಗೆ ನಿರೀಕ್ಷಕ ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಎಂ.ಸಿ. ಸುನೀಲ್ ಕುಮಾರ್, ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯ ಡಿಎಸ್ಪಿ ನಂಜುಂಡಯ್ಯ, ಗದಗಿನ ಎಸ್‌ಡಿಎ ಲಕ್ಷ್ಮಣ್, ಕಲಬುರಗಿ ಮಹಾನಗರ ಪಾಲಿಕೆಗೆ ಸೂಪರಿಂಟೆಂಡೆಂಟ್ ಎಂಜಿನಿಯರ್ (ಅಭಿವೃದ್ಧಿ) ರಾಮಪ್ಪ, ಕೊಪ್ಪಳದ ಅಬಕಾರಿ ಇಲಾಖೆ ಅಬಕಾರಿ ನಿರೀಕ್ಷಕ ರಮೇಶ್, ಚಿತ್ರದುರ್ಗದ ಹಿರಿಯೂರು ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಈ ಅಧಿಕಾರಿಗಳ ವಿರುದ್ಧ ಅಕ್ರಮ ಆದಾಯ ಗಳಿಸಿದ ಬಗ್ಗೆ ಲೋಕಾಯುಕ್ತಕ್ಕೆ ಬಂದಿದ್ದ ದೂರುಗಳನ್ನು ಆಧರಿಸಿ ದಾಳಿ ನಡೆಸಲಾಗಿದೆ. ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ನ. 21 ರಂದು ರಾಜ್ಯದ 25 ಕಡೆಗಳಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳಿಂದ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು. ಆಗಲೂ ಬೆಂಗಳೂರು ನಗರ, ಮಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು. ನ.13 ರಂದು ರಾಜ್ಯದ ಎಂಟು ಅಧಿಕಾರಿಗಳಿಗೆ ಸೇರಿದ 37 ಕಡೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾಗ ಕೆ.ಜಿಗಟ್ಟಲೇ ಚಿನ್ನಾಭರಣ, ನಗದು, ಕೋಟ್ಯಂತರ ರೂ.ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು.