ಅಕ್ರಮ ಆರೋಪ | 18 ಗ್ರಾಮ ಪಂಚಾಯ್ತಿಗಳ ಮೇಲೆ ಲೋಕಾಯುಕ್ತ ದಾಳಿ
12 ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಭೇಟಿ ನೀಡಿ, ಶೋಧಕಾರ್ಯ ಪರಿಶೀಲಿಸಿದ್ದಾರೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 18 ಗ್ರಾಮ ಪಂಚಾಯತಿಗಳ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆದಿದೆ.
18 ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಭೇಟಿ ನೀಡಿ, ಶೋಧಕಾರ್ಯ ಪರಿಶೀಲಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಕಸಘಟ್ಟಪುರ, ರಾಜಾನುಕುಂಟೆ, ಬನ್ನೇರುಘಟ್ಟ, ಕಲ್ಲುಬಾಳು, ಕಣ್ಣೂರು, ಮಂಡೂರು, ಕುಂಬಳಗೋಡು, ಆಗರ, ದಾಸನಪುರ, ಅಡಕಮಾರನಹಳ್ಳಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಣೇಶ್ವರ, ಜಾಲಿಗೆ, ದೊಡ್ಡತುಮಕೂರು, ಮಜಿರೆ ಹೊಸಹಳ್ಳಿ, ಬೂದಿಹಾಳ್, ಸೋಂಪುರ, ನಂದಗುಡಿ, ಸೂಲಿಬೆಲೆ ಗ್ರಾಮ ಪಂಚಾಯತಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಕಚೇರಿ ಮಾಹಿತಿ ನೀಡಿದೆ.
ಈ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಅನಗತ್ಯ ವಿಳಂಬ, ಅನರ್ಹ ಫಲಾನುಭವಿಗಳಿಗೆ ಮನೆ- ಶೌಚಾಲಯ ಅನುದಾನ ಮಂಜೂರಿಗೆ ಶಿಫಾರಸು, ಸಾರ್ವಜನಿಕರ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ನರೇಗಾ ಕೂಲಿ ಹಣ ದುರುಪಯೋಗ, ತೆರಿಗೆ ಸಂಗ್ರಹದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸಂಬಂಧ ಹಲವು ದೂರುಗಳು ಬಂದಿದ್ದವು. ಕರ್ತವ್ಯ ಲೋಪ ಮತ್ತು ಅಕ್ರಮ ಪರಿಶೀಲನೆಗೆ ಪೊಲೀಸರ ಮತ್ತು ನ್ಯಾಯಾಂಗ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಇದ್ದ ತಂಡವು ಗುರುವಾರ ಮಧ್ಯಾಹ್ನ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಗ್ರಾಮ ಪಂಚಾಯತಿಗಳ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಜತೆಗೆ ಎಲ್ಲ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶೋಧಕಾರ್ಯ ಮುಂದುವರಿದಿದೆ ಎಂದು ಪ್ರಕಟಣೆ ಹೇಳಿದೆ.
ಈ ಶೋಧ ಕಾರ್ಯ ನಡೆಯುತ್ತಿರುವ ವೇಳೆಯಲ್ಲೇ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ದಾಸನಪುರ ಮತ್ತು ಅಡಕಮಾರನಹಳ್ಳಿ ಗ್ರಾಮ ಪಂಚಾಯತಿಗಳಿಗೆ ದಿಢೀರ್ ಭೇಟಿ ನೀಡಿ, ಶೋಧ ಕಾರ್ಯವನ್ನು ಪರಿಶೀಲಿಸಿದರು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಮಂಡೂರು, ಕಣ್ಣೂರು, ರಾಜಾನುಕುಂಟೆ ಮತ್ತು ಕಸಘಟ್ಟಪುರ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅಣೇಶ್ವರ, ಜಾಲಿಗೆ, ದೊಡ್ಡತುಮಕೂರು, ಮಜಿರೆ ಹೊಸಹಳ್ಳಿ, ಬೂದಿಹಾಳ್ ಮತ್ತು ಸೋಂಪುರ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದರು.