Lokayukta raid | Officials search four places including Sringeri MLA Rajegowdas house
x

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮನೆ ಸೇರಿ ನಾಲ್ಕು ಕಡೆ ಲೋಕಾಯುಕ್ತ ಅಧಿಕಾರಿಗಳಿಂದ ಶೋಧ

ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶ ನೀಡಿತ್ತು. ಶಾಸಕ ರಾಜೇಗೌಡ, ಪತ್ನಿ ಡಿ.ಕೆ. ಪುಷ್ಪ , ಪತ್ರ ರಾಜ್‌ದೇವ್‌ ಟಿ.ಆರ್‌. ವಿರುದ್ಧ ಸೆ.23 ರಂದು ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿದ್ದರು.


Click the Play button to hear this message in audio format

ಶೃಂಗೇರಿ ಕಾಂಗ್ರೆಸ್‌ ಶಾಸಕ ಟಿ. ಡಿ.ರಾಜೇಗೌಡ ಅವರಿಗೆ ಸೇರಿದ ಫಾರಂ ಹೌಸ್‌, ಸಂಬಂಧಿಕರ ಮನೆ ಸೇರಿದಂತೆ ನಾಲ್ಕು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಆಸ್ತಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಮಂಗಳವಾರ(ಸೆ.30) ಬೆಳಿಗ್ಗೆ ಅಧಿಕಾರಿಗಳ ತಂಡವು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಬಸಾಪುರ ಗ್ರಾಮದಲ್ಲಿರುವ ಶಾಸಕರ ಮನೆಗೆ ತೆರಳಿ ಶೋಧ ಕಾರ್ಯ ಆರಂಭಿಸಿದ್ದಾರೆ. ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರಾಜೇಗೌಡ ವಿರುದ್ಧ ತನಿಖೆಗೆ ಆದೇಶ ನೀಡಿತ್ತು. ಶಾಸಕ ರಾಜೇಗೌಡ, ಪತ್ನಿ ಡಿ.ಕೆ. ಪುಷ್ಪ , ಪತ್ರ ರಾಜ್‌ದೇವ್‌ ಟಿ.ಆರ್‌. ವಿರುದ್ಧ ಸೆ.23 ರಂದು ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿದ್ದರು.

ದೂರಿನಲ್ಲೇನಿದೆ ?

ಕೊಪ್ಪ ನಿವಾಸಿ ದಿನೇಶ್ ಎಚ್.ಕೆ. ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದ ಮೇಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೆ.16ರಂದು ಶಾಸಕರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು. ಶಾಸಕ ಟಿ.ಡಿ. ರಾಜೇಗೌಡ ಅವರು ಅಧಿಕಾರ ದುರುಪಯೋಗ ಮಾಡಿ ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆಗೆ ಕೋಟ್ಯಂತರ ವಂಚನೆ ಮಾಡಿದ್ದಾರೆ. ಶಾಸಕರ ಕುಟುಂಬದವರು ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ್ದಾರೆಂದು ದಿನೇಶ್‌ ದೂರಿನಲ್ಲಿ ಆರೋಪಿಸಿದ್ದರು.

ಮೆ. ಶಬಾನಾ ರಂಜಾನ್ ಸಂಸ್ಥೆಯ ವ್ಯವಹಾರಗಳಲ್ಲಿ ಶಾಸಕ ಟಿ.ಡಿ. ರಾಜೇಗೌಡ ಕುಟುಂಬದ ಸದಸ್ಯರಾದ ಪತ್ನಿ ಡಿ.ಕೆ. ಪುಷ್ಪಾ ಹಾಗೂ ಪುತ್ರ ರಾಜದೇವ್ ಟಿ.ಆರ್. ಅವರು ಆದಾಯಕ್ಕೆ ತಾಳೆಯಾಗದಷ್ಟು ಆಸ್ತಿ ಸಂಪಾದಿಸಿರುವ ಬಗ್ಗೆ ದಾಖಲೆಗಳಿವೆ. ಆರಂಭದಲ್ಲಿ ಈ ಸಂಸ್ಥೆಗೆ ಹಾಜಿ ಔರಂಗಜೇಬ್ ಹಾಗೂ ಇತರರು ಪಾಲುದಾರರಾಗಿದ್ದರು. ನಂತರ 1992ರಲ್ಲಿ ವಿ.ಜಿ. ಸಿದ್ದಾರ್ಥ, ಮಾಳವಿಕಾ ಹೆಗ್ಡೆ ಮತ್ತು ಎಸ್.ವಿ. ಗಂಗಯ್ಯ ಹೆಗ್ಡೆ ಪಾಲುದಾರರಾಗಿದ್ದರು. ಈ ಸಂಸ್ಥೆಯ ಮೂಲಕ 266 ಎಕರೆ ಕಾಫಿ ತೋಟ ಖರೀದಿಸಲಾಗಿತ್ತು.

2019ರಲ್ಲಿ ಸಿದ್ದಾರ್ಥ ಮತ್ತು ಗಂಗಯ್ಯ ಹೆಗ್ಡೆ ನಿಧನವಾದ ನಂತರ ಸಂಸ್ಥೆಯಲ್ಲಿ ರಾಜೇಗೌಡರ ಕುಟುಂಬ ಪಾಲುದಾರರಾಗಿದ್ದರು. ಬ್ಯಾಂಕ್‌ಗಳಿಂದ ಪಡೆದ ಸಾಲ ಪಾವತಿ ದಾಖಲೆಗಳಲ್ಲಿ ಮೊತ್ತ ಹಾಗೂ ಶಾಸಕರ ಅಫಿಡವಿಟ್‌ನಲ್ಲಿ ಘೋಷಿಸಿದ ವಾರ್ಷಿಕ ಆದಾಯದ (40 ಲಕ್ಷ ರೂ.) ಮಧ್ಯೆ ವ್ಯತ್ಯಾಸಗಳಿದ್ದವು ಎಂದು ಹೇಳಲಾಗಿದೆ.

ಕ್ಲೀನ್‌ ಚೀಟ್‌ ನೀಡಿದ್ದ ಲೋಕಾಯುಕ್ತ ಎಸ್‌ಪಿ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಈ ಹಿಂದೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸಿ 2023ರಲ್ಲಿ ಆರೋಪ ನಿರಾಧಾರವೆಂದು ವರದಿ ನೀಡಿದ್ದರು. ಆಗ ದೂರುದಾರರು ವರದಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ನ್ಯಾಯಾಲಯವು ಎಫ್ಐಆರ್ ದಾಖಲಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಮತ್ತೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದರು.

ಕೋಟ್ಯಂತರ ರೂ. ಬ್ಯಾಂಕ್‌ಗೆ ಪಾವತಿ

ಸ್ಟ್ಯಾಂಡರ್ಡ್ ಚಾರ್ಟರ್ಡ್‌ ಬ್ಯಾಂಕ್‌ಗೆ 55.75 ಕೋಟಿ ರೂ, ಬ್ಯಾಂಕ್ ಆಫ್ ಬರೋಡಾಗೆ 66 ಕೋಟಿ ರೂ. ಕರ್ನಾಟಕ ಬ್ಯಾಂಕ್‌ಗೆ 81.95 ಲಕ್ಷ ರೂ. ಮರು ಪಾವತಿ ಮಾಡಲಾಗಿದೆ. ಆದರೆ, ಲೋಕಾಯುಕ್ತಕ್ಕೆ ರಾಜೇಗೌಡರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಾರ್ಷಿಕ ಆದಾಯ ಕೇವಲ 40 ಲಕ್ಷ ರೂ. ಎಂದು ಘೋಷಿಸಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ.

Read More
Next Story