Lokayuktha Raid | ಅಕ್ರಮ ಆಸ್ತಿ ಗಳಿಕೆ: ರಾಜ್ಯದ ಹಲವಡೆ ಲೋಕಾಯುಕ್ತ ದಾಳಿ
x
ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ.

Lokayuktha Raid | ಅಕ್ರಮ ಆಸ್ತಿ ಗಳಿಕೆ: ರಾಜ್ಯದ ಹಲವಡೆ ಲೋಕಾಯುಕ್ತ ದಾಳಿ


Click the Play button to hear this message in audio format

ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಧಾರವಾಡದ ಮೂರು ಕಡೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎರಡು, ಗದಗ ಜಿಲ್ಲೆ ನರಗುಂದದಲ್ಲಿ ಒಂದು, ಬೀದರ್​, ದಾವಣಗೆರೆ ಮತ್ತು ಮೈಸೂರಿನ ಒಂದು ಕಡೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ನಿಯೋಜನೆಗೊಂಡಿರುವ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ವೆಂಕಟೇಶ್ ಮಜುಂದಾರ್ ಅವರ ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಠಲ್ ಶಿವಪ್ಪ ಢವಳೇಶ್ವರ ಎಂಬುವವರ ರಾಮದುರ್ಗ ತಾಲೂಕಿನ ಕಾಮನಕೊಪ್ಪ ಗ್ರಾಮದ ನಿವಾಸದ ಮೇಲೆ ದಾಳಿ ನಡೆದಿದೆ. ಈ ಹಿಂದೆ ರಾಮದುರ್ಗದ ಚೆಕ್‌ಪೋಸ್ಟ್‌ನಲ್ಲಿ 1.10 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದಾಗ ವಿಠಲ್ ಶಿವಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಇದರ ಮುಂದುವರಿದ ಭಾಗವಾಗಿ ‌ದಾಳಿ ನಡೆದಿದೆ ಎನ್ನಲಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಧಾರವಾಡದ ಸಹಾಯಕ ಕಾರ್ಯಪಾಲಕ ಅಭಿಯಂತರ ಗೋವಿಂದಪ್ಪ ಹನುಮಂತಪ್ಪ ಭಜಂತ್ರಿ ಅವರ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ನಿವಾಸದ ಮೇಲೂ ದಾಳಿ ನಡೆದಿದೆ. ದಾಖಲೆಗಳು, ಆಸ್ತಿಗಳು, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲಿಸುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ದಾಳಿ ನಡೆದಿದೆ. ರವೀಂದ್ರ ರೊಟ್ಟೆ ಈ ಹಿಂದೆ ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರೆಸ್ತಾದಾರ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆಯ ವಲಯ ಆಯುಕ್ತ ನಾಗೇಶ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು, ಶ್ರೀರಂಗಪಟ್ಟಣದಲ್ಲಿರುವ ನಾಗೇಶ್ ಮತ್ತೊಂದು ಮನೆ ಮೇಲೂ ಲೋಕಾಯುಕ್ತ ರೇಡ್ ಮಾಡಿದೆ. ನಾಗೇಶ್ ಹಿಂದೆ ಶ್ರೀರಂಗಪಟ್ಟಣ ತಹಶೀಲ್ದಾರ್ ಆಗಿದ್ದರು.

ಧಾರವಾಡದ ಗಾಂಧಿನಗರ ಬಡಾವಣೆಯಲ್ಲಿರುವ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಗೋವಿಂದಪ್ಪ ಜಂತ್ರಿಗೆ ಸೇರಿದ ಸವದತ್ತಿ ತಾಲೂಕಿನ ಹೂಲಿ, ಉಗರಗೋಳ ಫಾರ್ಮ್​ಹೌಸ್, ಧಾರವಾಡದ ತೇಜಸ್ವಿನಗರ ಬಡಾವಣೆಯ ಅಳಿಯನ ಮನೆ, ಲಕ್ಕಮನಹಳ್ಳಿ ಬಡಾವಣೆ ಕೆಐಎಡಿಬಿ ಕಚೇರಿ ಮೇಲೂ ದಾಳಿ ಮಾಡಿದ್ದಾರೆ. ಹಾಗೇ ನರಗುಂದದಲ್ಲಿರುವ ಸಹೋದರನ ಮನೆ ಮೇಲೂ ಡಿವೈಎಸ್​ಪಿ ವೆಂಕನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾವಣಗೆರೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕ ಕಮಲ್ ರಾಜ್ ಮನೆಯ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ ಇನ್ಸ್ ಪೆಕ್ಟರ್​ಗಳಾದ ಮಧುಸೂದನ್ ಹಾಗೂ ಪ್ರಭು ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳಿಂದ ದಾಳಿ ನಡೆದಿದೆ.

Read More
Next Story