
Local Body Elections | ಜಿಪಂ, ತಾಪಂ ಚುನಾವಣೆ: ರಾಜ್ಯಾಂಗದ ಆಶಯ ಗಾಳಿಗೆ ತೂರಿದ ರಾಜಕೀಯ ಪಕ್ಷಗಳು !
ಜಿಲ್ಲಾ ಪಂಚಾಯಿತಿಗಳ 1,101 ಸದಸ್ಯರ ಹಾಗೂ ತಾಲೂಕು ಪಂಚಾಯಿತಿಗಳ 3,621ಸದಸ್ಯರ ಅವಧಿ ಕಳೆದ 2021ರ ಏಪ್ರಿಲ್ 21 ರಂದೇ ಮುಗಿದಿದೆ. ಹಾಗೇ ಬಿಬಿಎಂಪಿಯ 225 ವಾರ್ಡುಗಳ ಸದಸ್ಯರ ಅವಧಿ 2020 ರ ಸೆಪ್ಟೆಂಬರಿಗೇ ಮುಗಿದಿದ್ದು, ಈವರೆಗೂ ಆ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ; ಹೊಸ ಸದಸ್ಯರ ನೇಮಕವಾಗಿಲ್ಲ.
ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ನಡೆಯದೆ ಬರೋಬ್ಬರಿ ನಾಲ್ಕು ವರ್ಷಗಳು ಗತಿಸಿವೆ. ಅಂದರೆ, ಸಕಾಲದಲ್ಲಿ ಈ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ರಾಜ್ಯ ಆಡಳಿತ ವ್ಯವಸ್ಥೆಗೆ ಚುನಾವಣೆ ನಡೆದು, ಜನಪ್ರತಿನಿಧಿಗಳ ಆಯ್ಕೆಯಾಗಿದ್ದರೆ, ಅವರ ಆಡಳಿತಾವಧಿಯ ಕೊನೆಯ ವರ್ಷದಲ್ಲಿ ಈಗ ಇರುತ್ತಿದ್ದರು. ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ಆಡಳಿತದ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡುವಂತೆ ಒಂದಿಡೀ ಅಧಿಕಾರವಧಿ(ಐದು ವರ್ಷ)ಯನ್ನೇ ಸರ್ಕಾರದ ಉದ್ದೇಶಿತ ವಿಳಂಬ ಧೋರಣೆ ಬಲಿ ತೆಗೆದುಕೊಂಡಿದೆ.
ರಾಜ್ಯದಲ್ಲಿ 31 ಜಿಲ್ಲಾ ಪಂಚಾಯಿತಿಗಳು ಹಾಗೂ 234 ತಾಲೂಕು ಪಂಚಾಯಿತಿಗಳಿವೆ. ಆದರೆ ಜಿಲ್ಲಾ ಪಂಚಾಯಿತಿಗಳ 1,101 ಸದಸ್ಯರ ಹಾಗೂ ತಾಲೂಕು ಪಂಚಾಯಿತಿಗಳ 3,621ಸದಸ್ಯರ ಅವಧಿ ಕಳೆದ 2021ರ ಏಪ್ರಿಲ್ 21 ರಂದೇ ಮುಗಿದಿದೆ. ಹಾಗೇ ಬಿಬಿಎಂಪಿಯ 225 ವಾರ್ಡುಗಳ ಸದಸ್ಯರ ಅವಧಿ 2020 ರ ಸೆಪ್ಟೆಂಬರಿಗೇ ಮುಗಿದಿದ್ದು, ಈವರೆಗೂ ಆ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ; ಹೊಸ ಸದಸ್ಯರ ನೇಮಕವಾಗಿಲ್ಲ.
ಸಂವಿಧಾನದ 243 'ಇ' ಹಾಗು 243 'ಯು' ವಿಧಿ ಪ್ರಕಾರ ನಿಗದಿತ ಅವಧಿಯೊಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕು. ಆದರೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಸೇರಿದಂತೆ ರಾಜ್ಯದ ಶೇ.71 ರಷ್ಟು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ; ಆಡಳಿತ ಮಂಡಳಿಗಳ ಆಯ್ಕೆಯಾಗಿಲ್ಲ.
ಮೀಸಲಾತಿ ನೆಪ, ಅಧಿಕಾರ ಹೈಜಾಕ್
ಬದಲಾದ ಜನಸಂಖ್ಯೆಗೆ ಅನುಗುಣವಾಗಿ ನಿಗದಿಯಂತೆ ನಡೆಯಬೇಕಾದ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಪುನರ್ ವಿಂಗಡಣೆಯಾದ ಕ್ಷೇತ್ರಗಳ ಜಾತಿವಾರು ಮಾಹಿತಿ ಆಧಾರದ ಮೇಲೆ ನಿಗದಿಯಾಗಬೇಕಾದ ಮೀಸಲಾತಿಯ ವಿಷಯದಲ್ಲಿ ಕಳೆದ ಐದು ವರ್ಷಗಳಿಂದ ಸರ್ಕಾರಗಳು ತೋರುತ್ತಿರುವ ಉದ್ದೇಶಪೂರ್ವಕ ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯವೇ ಸ್ಥಳೀಯ ಮಟ್ಟದಲ್ಲಿ ಜನರ ಬೇಡಿಕೆ ಮತ್ತು ನಿರೀಕ್ಷೆಗಳನ್ನು ಈಡೇರಿಸಬೇಕಾದ ಸ್ಥಳೀಯ ಸಂಸ್ಥೆಗಳು ಅಧಿಕೃತ ಆಡಳಿತ ಮಂಡಳಿಯೇ ಇಲ್ಲದೆ ಬಿಕೋ ಎನ್ನಲು ಕಾರಣ.
ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಿಗೆ ಎರಡು ವರ್ಷದ ಹಿಂದೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದ್ದ ಸರ್ಕಾರದ ಕ್ರಮ ರಾಜ್ಯಾದ್ಯಂತ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಹಲವರು ಕ್ಷೇತ್ರ ವಿಂಗಡಣೆಯಲ್ಲಿ ಆಗಿರುವ ಯಡವಟ್ಟುಗಳನ್ನು ಮುಂದಿಟ್ಟು ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಕೋರ್ಟ್ ಸೂಚನೆಯಂತೆ ಕಳೆದ ವರ್ಷ ಸರ್ಕಾರ ಪುನರ್ ಕ್ಷೇತ್ರ ವಿಂಗಡಣೆ ಮಾಡಿ ಆದೇಶ ಹೊರಡಿಸಿತ್ತು. ಸುಮಾರು ಮೂರು ವರ್ಷ ಕಾಲ ಕ್ಷೇತ್ರ ವಿಂಗಡಣೆಯ ನೆಪದಲ್ಲೇ ಕಾಲಾಹರಣ ಮಾಡಿದ ಸರ್ಕಾರ, ಇದೀಗ ರಾಜಕೀಯ ಮೀಸಲಾತಿ ನಿಗದಿ ಮಾಡುವ ವಿಷಯದಲ್ಲಿ ಸಮಯ ತಳ್ಳುವ ಜಾಡಿಗೆ ಬಿದ್ದಿದೆ.
ಹಾಗಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರವಾರು ಮೀಸಲಾತಿ ನಿಗದಿಯ ವಿಷಯ ಕೂಡ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯ ಚುನಾವಣಾ ಆಯೋಗ ಕೂಡ ಸರ್ಕಾರದ ವಿಳಂಬ ಧೋರಣೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದೆ. ಆಯೋಗ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ವಿಚಾರಣೆ ಸಂದರ್ಭದಲ್ಲಿ ಮೇ ತಿಂಗಳ ಬಳಿಕ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆ ನಡೆಸುವುದಾಗಿ ಹೈಕೋರ್ಟ್ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ತಿಳಿಸಿದ್ದರು. ಫೆ. 17ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಸರ್ಕಾರದ ಹೇಳಿಕೆ ದಾಖಲಿಸಿಕೊಂಡು ಅರ್ಜಿ ಇತ್ಯರ್ಥಪಡಿದೆ.
ಮೀಸಲಾತಿ ನಿಗದಿ ಮಾಡಿ, ಪಟ್ಟಿ ಸಲ್ಲಿಸಿದಲ್ಲಿ ಜಿಪಂ ಹಾಗೂ ತಾಪಂ ಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ಗೆ ತಿಳಿಸಿತ್ತು. ಆದರೆ ಈವರೆಗೂ ರಾಜ್ಯ ಸರ್ಕಾರ ಆಯೋಗಕ್ಕೆ ಮೀಸಲಾತಿ ಪಟ್ಟಿಯನ್ನು ಕೊಟ್ಟಿಲ್ಲ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಲು ನ್ಯಾ. ಕೆ. ಭಕ್ತವತ್ಸಲ ಸಮಿತಿಯು ಶಿಫಾರಸುಗಳಿಗೆ ಸಂಪುಟ ಒಪ್ಪಿಗೆ ಕೊಟ್ಟಿದೆ. ಹೀಗಾಗಿ ಮೇ ನಂತರ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಆದರೆ, ಸರ್ಕಾರದ ಮಟ್ಟದಲ್ಲಿ ಜಿಪಂ ಮತ್ತು ತಾಪಂ ಮೀಸಲಾತಿ ನಿಗದಿಯ ಪ್ರಯತ್ನಗಳೇ ಆರಂಭವಾಗಿಲ್ಲ. ಹಾಗಾಗಿ ಕೋರ್ಟಿನಲ್ಲಿ ಮಾತುಕೊಟ್ಟಂತೆ ಸರ್ಕಾರ ನಡೆದುಕೊಳ್ಳಲಿದೆ ಎಂಬ ಬಗ್ಗೆ ಯಾವುದೇ ಖಾತರಿ ಇಲ್ಲ.
ಶೇ.33 ಮೀಸಲಾತಿಗೆ ಹಿಂದುಳಿದ ವರ್ಗ ಪಟ್ಟು
ಈ ನಡುವೆ ಸರ್ಕಾರ ಮೀಸಲಾತಿ ನಿಗದಿಯ ವಿಷಯದಲ್ಲಿ ರಂಗೋಲಿ ಕೆಳಗೆ ನುಸುಳುವ ಯತ್ನಗಳನ್ನು ನಡೆಸಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.33 ಮೀಸಲಾತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಸರ್ಕಾರ ಆ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಹೇಳಿದೆ.
'ದ ಫೆಡರಲ್ ಕರ್ನಾಟಕ'ದ ಜೊತೆಗೆ ಮಾತನಾಡಿದ ಹಿಂದುಳಿದ ವರ್ಗಗಳ ವೇದಿಕೆ ರಾಜ್ಯ ಅಧ್ಯಕ್ಷ ಶಿವರಾಮ್, 'ಈವರೆಗೂ ಕೂಡ ಸರ್ಕಾರ ನಿಖರವಾಗಿ ಮೀಸಲಾತಿ ನಿಗದಿ ಮಾಡಿಲ್ಲ. ಸರ್ಕಾರ ಸಲ್ಲಿಸಿದ್ದ ಮೀಸಲಾತಿ ನಿಗದಿ ಪ್ರಸ್ತಾವನೆಯನ್ನು ಈ ಮೊದಲು ಸುಪ್ರೀಂಕೋರ್ಟ್, ಸರಿಯಾದ ಅಂಕಿ-ಅಂಶಗಳಿಲ್ಲ ಎಂದು ತಿರಸ್ಕರಿಸಿತ್ತು. ಹಿಂದುಳಿದ ವರ್ಗಗಳ ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸಿ ಆ ವರದಿಯ ಆಧಾರದ ಮೇಲೆ ಮೀಸಲಾತಿ ಮರುನಿಗದಿ ಮಾಡುವಂತೆ ಕೋರ್ಟ್ ತಾಕೀತು ಮಾಡಿತ್ತು. ಹಾಗಾಗಿ ನಾವು ಜಾತಿ ಜನಗಣಿತಿಗೆ ಆಗ್ರಹ ಮಾಡಿದ್ದೆವು. ಅದರಿಂದ ಜಾತಿವಾರು ಅಂಕಿ-ಅಂಶಗಳು ಸಿಗುತ್ತವೆ. ಆ ಮಾಹಿತಿಯನ್ನಿಟ್ಟುಕೊಂಡು ರಾಜಕೀಯ ಮೀಸಲಾತಿ, ಸರ್ಕಾರದ ಸೌಲತ್ತುಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದ್ದೆವು. ಈಗ 2011ರ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಲು ಹೊರಟಿದೆ. ಸರ್ಕಾರ ಮೀಸಲಾತಿಯನ್ನು ನಿಗದಿ ಮಾಡಿ ಅದನ್ನು ಪ್ರಕಟಿಸಿದ ಬಳಿಕ ಎಷ್ಟು ಮೀಸಲಾತಿ ಸಿಗುತ್ತದೆ ಎಂಬುದು ತಿಳಿಯುತ್ತದೆ. ನಾವು ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ' ಎಂದಿದ್ದಾರೆ.
ಜೊತೆಗೆ, 'ಸರ್ಕಾರ ಮೀಸಲಾತಿಯನ್ನು ನಿಗದಿ ಮಾಡಿ ಕೋರ್ಟ್ಗೆ ವರದಿ ಸಲ್ಲಿಸಿದ ಬಳಿಕವಷ್ಟೇ ನಮಗೆ ಮೀಸಲಾತಿ ನಿಗದಿ ಕುರಿತ ಸರಿಯಾದ ಮಾಹಿತಿ ಸಿಗಲಿದೆ. ಅದರಲ್ಲಿ ನಮ್ಮ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕರೆ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಮೀಸಲಾತಿ ನಿಗದಿಯಲ್ಲಿ ಏನಾದರೂ ವ್ಯತ್ಯಾಸ ಆಗಿ ಅನ್ಯಾಯ ಆದರೆ ನಾವು ಮತ್ತೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.33 ರಾಜಕೀಯ ಮೀಸಲಾತಿಯನ್ನು ನಮಗೆ ಕೊಡಲೇಬೇಕು. ಇಲ್ಲದಿದ್ದರೆ ನಾವು ಕೋರ್ಟ್ ಮೆಟ್ಟಿಲು ಹತ್ತುತ್ತೇವೆ' ಎಂದೂ ಅವರು ಎಚ್ಚರಿಸಿದ್ದಾರೆ.
ಬಿಬಿಎಂಪಿ ಚುನಾವಣೆಯಲ್ಲೂ ಅದೇ ಹಾಡು
ಜೊತೆಗೆ ರಾಜ್ಯದಲ್ಲಿ ಬಿಬಿಎಂಪಿ ಚುನಾವಣೆ ನಡೆಯದಿರುವುದಕ್ಕೂ ಕೂಡ ವಾರ್ಡ್ಗಳ ಪುನರ್ವಿಂಗಡನೆ, ಮೀಸಲಾತಿ ನಿಗದಿ ಕಾರಣವಾಗಿತ್ತು. ಈಗ ಹೊಸ ನಡೆಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದ್ದು, ಗ್ರೇಟರ್ ಬೆಂಗಳೂರು ಮಾಡಲು ಬಿಬಿಎಂಪಿಯನ್ನು 5 ರಿಂದ 7 ಮಹಾನಗರ ಪಾಲಿಕೆಗಳಾಗಿ ವಿಭಜಿಸಲು ಮುಂದಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ಮಾಜಿ ಕಾರ್ಪೊರೇಟರ್ಗಳು ಸುಪ್ರೀಂಕೋರ್ಟ್ ಕದ ತಟ್ಟಿದ್ದು ಆ ವಿಚಾರಣೆ ಮುಗಿದು, ಯಾವಾಗ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂಬ ಸ್ಪಷ್ಟತೆ ಯಾರಿಗೂ ಇಲ್ಲ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ 'ದ ಫೆಡರಲ್ ಕರ್ನಾಟಕ' ವಿಶೇಷ ಸಂವಾದ ಮಾಡಿದೆ. ಸಂವಾದದಲ್ಲಿ ಭಾಗವಹಿಸಿದ್ದ ರಾಜಕೀಯ ವಿಶ್ಲೇಷಕ ಹಾಗೂ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿ ಸಂಕೇತ್ ಏಣಗಿ, 'ಈಗಾಗಲೇ ಚುನಾವಣೆ ನಡೆಸಲು ಕೋರ್ಟ್ಗಳು ಕೂಡ ಆಗಾಗ ಆದೇಶಗಳನ್ನು ಕೊಡುತ್ತಲೇ ಬಂದಿದೆ. ಆದರೂ ಕೂಡ ಆಯಾ ಸರ್ಕಾರಗಳು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತಿಲ್ಲ' ಎಂದು ತಮ್ಮ ಅಭಿಪ್ರಾಯ ವ್ಯಕ್ತಡಿಸಿದ್ದಾರೆ. ಹಾಗೆ ರಾಜಕೀಯ ಕಾರಣಕ್ಕಾಗಿ ಯಾವುದೇ ಪಕ್ಷದ ಆಡಳಿತವಿದ್ದರೂ ಕೂಡ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಶಂಕರ್ ಪಾಗೋಜಿ ಅಭಿಪ್ರಾಯ ಪಟ್ಟರು.
ಸರ್ಕಾರಕ್ಕೆ ಕೋರ್ಟ್ ದಂಡವನ್ನೂ ವಿಧಿಸಿ ಶಿಕ್ಷೆ ಕೊಟ್ಟಿದೆ. ಆದರೂ ಸರ್ಕಾರಗಳು ತಿದ್ದಿಕೊಳ್ಳುತ್ತಿಲ್ಲ. ನಿಗದಿತ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವಂತೆ ಮಾಡಲು ಕಾನೂನು ತರಬೇಕಿದೆ. ಇಲ್ಲದಿದ್ದರೆ ಸಾಮೋಪಾಯದ ಬಳಿಕ ದಂಡೋಪಾಯದಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗಿದೆ. ಅಂದರೆ ಕೋರ್ಟ್ ಆದೇಶವನ್ನೂ ಸರ್ಕಾರಗಳು ಪಾಲಿಸದಿದ್ದರೆ ಜನರು ಜನಾಂದೋಲನದ ಮೂಲಕ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಜನಾಂದೋಲನದ ಅಗತ್ಯವಿದೆ ಎಂದು ಸಂಕೇತ್ ಏಣಗಿ ಅಭಿಪ್ರಾಯಪಟ್ಟಿದ್ದಾರೆ.
ಚರ್ಚೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಅತಿಥಿ ಶಂಕರ್ ಪಾಗೋಜಿ, 'ರಾಜಕೀಯ ಪಕ್ಷಗಳ ಒಳಒಪ್ಪಂದದಿಂದ ಹೀಗಾಗುತ್ತಿದೆ. ಚುನಾವಣೆ ನಡೆಯುವುದು ಶಾಸಕರಿಗೆ ಬೇಕಾಗಿಲ್ಲ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಸ್ಥಳೀಯ ಸಂಸ್ಥೆಗಳನ್ನು ರಾಜ್ಯ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿ ತಂದಿತ್ತು. ಆದರೆ ಈಗ ನಮ್ಮ ರಾಜ್ಯದಲ್ಲಿಯೇ ಹೀಗಾಗುತ್ತಿದೆ' ಎಂದು ಅಭಿಪ್ರಾಯ ಪಟ್ಟರು.
'ದ ಫೆಡರಲ್ ಕರ್ನಾಟಕ' ನಡೆಸಿದ ಚರ್ಚೆಯ ಪೂರ್ಣ ವಿಡಿಯೋ ಇಲ್ಲಿದೆ...