
ಸ್ಥಳೀಯ ಸಂಸ್ಥೆಗಳ ಚುನಾವಣಾ ಕದನ: ತೆರೆಮರೆಗೆ ಸರಿದ ಗ್ರಹಣ, ಪಕ್ಷಗಳಲ್ಲಿ ಪೈಪೋಟಿ ಆರಂಭ
ಮೂರು ಪಕ್ಷದಲ್ಲಿಯೂ ಚುನಾವಣಾ ಆಕಾಂಕ್ಷಿಗಳಲ್ಲಿ ಪೈಪೋಟಿ ಆರಂಭಗೊಂಡಿದೆ. ತಮ್ಮದೇ ಹಾದಿಯಲ್ಲಿ ಪಕ್ಷದ ಹಿರಿಯ ಮುಖಂಡರ ಮೇಲೆ ಲಾಬಿ ನಡೆಸುವ ಕಸರತ್ತು ತೆರೆಮರೆಯಲ್ಲಿ ನಡೆಯುತ್ತಿದೆ.
ಕಳೆದ ಕೆಲ ವರ್ಷಗಳಿಂದ ಜಿಲ್ಲಾ, ತಾಲೂಕು ಪಂಚಾಯಿತಿ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹಿಡಿದಿದ್ದ ಚುನಾವಣಾ ಗ್ರಹಣ ತೆರೆಮರೆಗೆ ಸರಿಯುವ ಮುನ್ಸೂಚನೆ ಕಂಡು ಬರುತ್ತಿದ್ದು, ರಾಜ್ಯ ಸರ್ಕಾರ ಚುನಾವಣೆ ನಡೆಸುವ ಸಿದ್ಧತೆಯನ್ನು ಕೈಗೊಂಡಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಪೈಪೋಟಿಯ ಜತೆಗೆ ತೀವ್ರ ಲಾಬಿ ಪ್ರಾರಂಭಗೊಂಡಿದೆ.
ಕರ್ನಾಟಕದಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿ ನಡೆದು ನಾಲ್ಕು ವರ್ಷಗಳೇ ಕಳೆದಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆದು ಐದು ವರ್ಷಗಳೇ ಕಳೆದಿವೆ. ಬಿಬಿಎಂಪಿ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಲಾಗಿದೆ. ಜಿಲ್ಲಾ, ತಾಲೂಕು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಅಗತ್ಯ ಸಿದ್ಧತಾ ಕಾರ್ಯಗಳನ್ನು ಆರಂಭಿಸಿದೆ ಎಂದು ಮೂಲಗಳು ಹೇಳಿವೆ.
ಒಂದೆಡೆ ಚುನಾವಣಾ ಪ್ರಕ್ರಿಯೆ ನಡೆಸುವ ಕಾರ್ಯಕ್ಕೆ ತಯಾರಿ ನಡೆದರೆ, ಮತ್ತೊಂದೆಡೆ ರಾಜಕೀಯ ಪಕ್ಷದೊಳಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಪೈಪೋಟಿ ಆರಂಭಗೊಂಡಿದೆ. ಅಲ್ಲದೇ, ಆಕಾಂಕ್ಷಿಗಳು ತಮ್ಮದೇ ಹಾದಿಯಲ್ಲಿ ಪಕ್ಷದ ಹಿರಿಯ ಮುಖಂಡರ ಮೇಲೆ ಲಾಬಿ ನಡೆಸುವ ಕಸರತ್ತು ತೆರೆಮರೆಯಲ್ಲಿ ನಡೆಯುತ್ತಿದೆ. ಕಳೆದ ಕೆಲ ವರ್ಷಗಳಿಂದ ಚುನಾವಣೆಯೇ ಇಲ್ಲದಿದ್ದ ಕಾರಣ ಯಾವುದೇ ಅಧಿಕಾರ ಇಲ್ಲದೆ ಕುಳಿತಿದ್ದ ನಾಯಕರು ಇದೀಗ ಅಧಿಕಾರ ಪಡೆದುಕೊಳ್ಳಲು ಹಾತೊರೆಯುತ್ತಿದ್ದಾರೆ. ಇದರ ಜತೆಗೆ ಹೊಸ ನಾಯಕರು ಸಹ ಉತ್ಸಾಹದೊಂದಿಗೆ ಚುನಾವಣಾ ಕಣಕ್ಕಿಳಿಯಲು ಪ್ರಯತ್ನ ನಡೆಸುತ್ತಿದ್ದಾರೆ.
ಮೀಸಲಾತಿ ನಿಗದಿಗಾಗಿಯೂ ನಡೆಯುತ್ತಿದೆ ಲಾಬಿ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸರ್ಕಾರ ಮೀಸಲಾತಿ ಪ್ರಕಟಿಸಬೇಕಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮೀಸಲಾತಿ ನಿಗದಿ ಕುರಿತು ಚರ್ಚೆಗಳು ನಡೆಯುತ್ತಿವೆ. ಪ್ರತಿ ಕ್ಷೇತ್ರದಲ್ಲಿಯೂ ಬಲಾಢ್ಯ ನಾಯಕರು ತಮಗೆ ಬೇಕಾದ ಸಮುದಾಯಕ್ಕೆ ಮೀಸಲಾತಿ ನಿಗದಿ ಮಾಡಿಸಿಕೊಳ್ಳುವ ಕಸರತ್ತು ಆರಂಭಗೊಂಡಿದೆ. ಆಯಾ ಕ್ಷೇತ್ರದಲ್ಲಿ ನೆಲೆಸಿರುವ ಸಮುದಾಯದ ಆಧಾರದ ಮೇಲೆ ಸಾಮಾನ್ಯವಾಗಿ ಮೀಸಲಾತಿಯನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ, ಸ್ಥಳೀಯ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಮೀಸಲಾತಿ ನಿಗದಿಯ ಲಾಬಿ ನಡೆಸಲಾಗುತ್ತಿದೆ. ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಾರ್ಡ್‌ಗಳ ವಿಂಗಡನೆ ಬಳಿಕ ಮೀಸಲಾತಿ ನಿಗದಿ ಮಾಡಲಾಗುತ್ತದೆ. ಈ ವೇಳೆ ತಮಗೆ ಬೇಕಾದ ರೀತಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ರಾಜ್ಯ ನಾಯಕರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಶಾಸಕರೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಭಿನ್ನಮತ ತಲೆದೋರುವ ಆತಂಕ
ಜಿಲ್ಲಾ, ತಾಲೂಕು ಮತ್ತು ಜಿಬಿಎ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಾರಿಗೆ ಟಿಕೆಟ್ ನೀಡಬೇಕು ಎಂಬ ತಲೆಬಿಸಿ ಮೂರು ಪಕ್ಷಗಳ ನಾಯಕರಿಗೆ ಶುರುವಾಗಿದೆ. ಕೆಲ ವರ್ಷಗಳಿಂದ ಚುನಾವಣೆ ನಡೆಯದ ಕಾರಣ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಮೂಡಿದೆ. ಒಬ್ಬ ಆಕಾಂಕ್ಷಿಗೆ ಟಿಕೆಟ್ ನೀಡಿದರೆ ಮತ್ತೊಬ್ಬ ಆಕಾಂಕ್ಷಿಗೆ ಬೇಸರವಾಗಲಿದೆ. ಇದು ಪಕ್ಷದಲ್ಲಿ ಭಿನ್ನಮತ ಮೂಡುವ ಸಾಧ್ಯತೆ ಹೆಚ್ಚಿದೆ. ಹಲವು ವರ್ಷಗಳಿಂದ ಚುನಾವಣಾ ಕಣಕ್ಕಿಳಿಯಲು ಕಾಯುತ್ತಿರುವವರಿಗೆ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಸಾಧ್ಯತೆ ಇರುತ್ತದೆ. ಇದು ಪಕ್ಷದ ಅಭ್ಯರ್ಥಿಗಳ ಗೆಲುವಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಭಿನ್ನಮತವನ್ನು ತಡೆಯುವುದು ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೂರು ಪಕ್ಷದ ರಾಜ್ಯ ಮುಖಂಡರಿಗೆ ಅವರವರ ಪಕ್ಷದಲ್ಲಿ ಭಿನ್ನಮತ ಪ್ರಾರಂಭವಾಗುವ ಆತಂಕವೂ ಇದೆ. ಭಿನ್ನಮತ ಮೂಡದಂತೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಮುಖಂಡರಿಗೆ ದೊಡ್ಡ ಸವಾಲಾಗಿದೆ.
ಜಿಬಿಎನಲ್ಲಿ 50:50 ಅನುಪಾತ ಜಾರಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಪಥ್ಯಕ್ಕೆ ಸರಿದು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜನ್ಮ ತಳೆದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆಯಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬೆಂಗಳೂರಿನಲ್ಲಿ ಸುಮಾರು 500 ಹೊಸ ನಾಯಕರುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರು 50:50 ಇರಲಿದ್ದಾರೆ. ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡುತ್ತಿರುವುದರಿಂದ ಮಹಿಳೆಯರಲ್ಲೂ ಪೈಪೋಟಿ ನಡೆಯಲಿದೆ. ಮಹಿಳಾ ಆಕಾಂಕ್ಷಿಗಳ ಪತಿಯರು ಪರದೆಯ ಹಿಂದೆ ಕೆಲಸ ಮಾಡಿ ತಮ್ಮ ಮಡದಿಯರಿಗೆ ಟಿಕೆಟ್ ಲಭಿಸುವಂತೆ ಲಾಬಿ ನಡೆಸುವ ಸಾಧ್ಯತೆ ಇದೆ.
ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಇದ್ದ ಮಹಿಳಾ ಮೀಸಲಾತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತವಧಿಯಲ್ಲಿ ಶೇ.50ಕ್ಕೆ ಹೆಚ್ಚಿಸಲಾಗಿದೆ. 2015ರಲ್ಲಿ ಮಹಿಳಾ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಳ ಮಾಡಲಾಯಿತು. ಹೀಗಾಗಿ ಒಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಶೇ.50ರಷ್ಟು ಮಹಿಳಾ ಮೀಸಲಾತಿಯಲ್ಲಿ ಚುನಾವಣೆ ನಡೆಸಲಾಯಿತು. ನಂತರದಲ್ಲಿ ಚುನಾವಣೆ ನಡೆಯದ ಕಾರಣ ಹಾಗೆಯೇ ಉಳಿದುಕೊಂಡಿದೆ. ಬಿಬಿಎಂಪಿಯಲ್ಲಿ ಶೇ.50ರಷ್ಟು ಮಹಿಳಾ ಮೀಸಲಾತಿಯೊಂದಿಗೆ ಚುನಾವಣೆ ನಡೆಸಬೇಕಾಗಿತ್ತು. ಆದರೆ, ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ತಡವಾಗಿ ತಲುಪಿದ್ದರಿಂದ ಶೇ.33ರಷ್ಟು ಮಹಿಳಾ ಮೀಸಲಾತಿಯೊಂದಿಗೆ ಚುನಾವಣೆ ನಡೆಸಲಾಯಿತು. ಈಗ ಜಿಬಿಎ ಚುನಾವಣೆಯು ಶೇ.50ರಷ್ಟು ಮಹಿಳಾ ಮೀಸಲಾತಿಯಲ್ಲಿ ಚುನಾವಣೆ ನಡೆಯಲಿದೆ. ಶೇ.33 ರಷ್ಟು ಮೀಸಲಾತಿ ಇದ್ದಾಗಲೇ ಪತಿಯರ ದರ್ಬಾರ್ ಇತ್ತು. ಈಗ ಜಿಬಿಎಗೆ ಶೇ.50ರಷ್ಟು ಮೀಸಲಾತಿಯಲ್ಲಿ ಚುನಾವಣೆ ನಡೆಯುವುದರಿಂದ ಶೇ.50ರಷ್ಟು ಮಹಿಳೆಯರ ಪತಿಯಂದಿರು ದರ್ಬಾರ್ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಆಯೋಗಕ್ಕೆ ಮೀಸಲಾತಿ ಸಲ್ಲಿಕೆ ಬಳಿಕ ಪ್ರಕ್ರಿಯೆ ಆರಂಭ
ರಾಜ್ಯದ 31 ಜಿಲ್ಲೆಗಳ 1,130 ಜಿಲ್ಲಾಪಂಚಾಯತ್ ಕ್ಷೇತ್ರಗಳು ಹಾಗೂ 239 ತಾಲೂಕುಗಳ 3,671 ತಾಲೂಕು ಪಂಚಾಯತ್ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ಸರ್ಕಾರವು ಚುನಾವಣ ಆಯೋಗಕ್ಕೆ ಸಲ್ಲಿಸಬೇಕಿದೆ. ಮೀಸಲಾತಿ ನಿಗದಿಯಾದ ಬಳಿಕ ಸರ್ಕಾರವು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಿದೆ. ರಾಜ್ಯದಲ್ಲಿ 2021ರ ಮೇಯಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನನೆಗುದಿಗೆ ಬಿದ್ದಿತು. ಈ ವಿಚಾರವಾಗಿ 2021ರ ನವೆಂಬರ್ ತಿಂಗಳಲ್ಲಿ ರಾಜ್ಯ ಚುನಾವಣ ಆಯೋಗ ಹೈಕೋರ್ಟ್ ಮೆಟ್ಟಿಲೇರಿತ್ತು. ಕೋವಿಡ್, ಕ್ಷೇತ್ರ ಪುನರ್‌ವಿಂಗಡಣೆ, ಮೀಸಲಾತಿ ಗೊಂದಲ, ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ರಾಜ್ಯ ಚುನಾವಣ ಆಯೋಗದಿಂದ ವಾಪಸ್ ಪಡೆದಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ನ್ಯಾ. ಭಕ್ತವತ್ಸಲ ಸಮಿತಿ ರಚನೆ, ವಿಧಾನಸಭೆ ಚುನಾವಣೆ ಇತ್ಯಾದಿ ಕಾರಣಗಳಿಂದ 4 ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಇದೀಗ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ.
400 ವಾರ್ಡ್‌ಗಳ ರಚನೆ ಸಾಧ್ಯತೆ?
6 ವರ್ಷಗಳಿಂದ ಮುಂದೂಡಲ್ಪಟ್ಟಿರುವ ಬಿಬಿಎಂಪಿ ಚುನಾವಣೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ನಡೆಯಲಿದೆ. 5 ಪಾಲಿಕೆಗಳಾಗಿ ವಿಭಜಿಸುವ ಕುರಿತ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಜನರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ವಾರ್ಡ್‌ಗಳ ವಿಂಗಡಣೆ ಮತ್ತು ಮೀಸಲಾತಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ. ಸುಮಾರು 400 ವಾರ್ಡ್‌ಗಳನ್ನು ರಚನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಮಂಗಳವಾರ ವಾರ್ಡ್ ಪುನರ್ ವಿಂಗಡಣೆ ಆಯೋಗದಿಂದ ಸರ್ಕಾರಕ್ಕೆ ವಾರ್ಡ್‌ಗಳ ರಚನಾ ವರದಿ ಸಲ್ಲಿಕೆಯಾಗಲಿದೆ. ಸೆ.26ರಂದು ಸರ್ಕಾರದಿಂದ ಕರಡು ಅಧಿಸೂಚನೆ ಪ್ರಕಟವಾಗಲಿದ್ದು, ಅ.10 ರಂದು ಕರಡಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಇರಲಿದೆ. ಅ.17 ಕ್ಕೆ ಆಕ್ಷೇಪಣೆ ಪರಿಗಣಿಸಿ ಆಯೋಗದಿಂದ ಅಂತಿಮ ಶಿಫಾರಸು ಸಲ್ಲಿಕೆ ಮಾಡಲಾಗುತ್ತದೆ. ನ.1ರಂದು ಐದೂ ನಗರ ಪಾಲಿಕೆಗಳ ವಾರ್ಡ್‌ಗಳ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಎನ್ನಲಾಗಿದೆ.