Loan Recovery | ಬ್ಯಾಂಕುಗಳ ವಿರುದ್ಧ ಹೈಕೋರ್ಟ್‌ ಮೊರೆ ಹೋದ ವಿಜಯ್ ಮಲ್ಯ
x
vijay malya

Loan Recovery | ಬ್ಯಾಂಕುಗಳ ವಿರುದ್ಧ ಹೈಕೋರ್ಟ್‌ ಮೊರೆ ಹೋದ ವಿಜಯ್ ಮಲ್ಯ


ತಾನು ಪಾವತಿಸಬೇಕಿದ್ದ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ವಸೂಲಿ ಮಾಡಲಾಗಿದೆ ಎಂದು ಬ್ಯಾಂಕುಗಳ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಬಹುಕೋಟಿ ಸಾಲ ತೀರಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಬ್ಯಾಂಕುಗಳು ಮತ್ತು ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿದೆ.

ತಮ್ಮ ಸಾಲದ ಮೊತ್ತ ಹಾಗೂ ಬ್ಯಾಂಕುಗಳು ಈವರೆಗೆ ತಮ್ಮಿಂದ ವಸೂಲಿ ಮಾಡಿರುವ ಒಟ್ಟು ಮೊತ್ತದ ವಿವರ ನೀಡುವಂತೆ ಬ್ಯಾಂಕ್ಗಳಿಗೆ ನಿರ್ದೇಶಿಸಬೇಕೆಂದು ಮಲ್ಯ, ಕೋರ್ಟ್ಗೆ ಮನವಿ ಮಾಡಿದ್ದು, ಆ ಅರ್ಜಿಯ ಸಂಬಂಧ ಬುಧವಾರ ಹೈಕೋರ್ಟ್ ನ್ಯಾಯಮೂರ್ತಿ ಆರ್ ದೇವದಾಸ್ ಅವರ ಪೀಠ ವಿಚಾರಣೆ ನಡೆಯಿತು.

ಉದ್ಯಮಿ ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿದ್ದು, ವಿವಿಧ ಬ್ಯಾಂಕುಗಳಿಗೆ ತಮ್ಮ ಕಕ್ಷಿದಾರರು 6200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು. ಆದರೆ, ಬ್ಯಾಂಕುಗಳೂ ಈಗಾಗಲೇ 14,000 ಕೋಟಿ ರೂ. ವಸೂಲಿ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವರೇ ಲೋಕಸಭೆಗೆ ತಿಳಿಸಿದ್ದಾರೆ. ಆದರೆ, ಸಾಲ ವಸೂಲಾತಿ ಪ್ರಾಧಿಕಾರ 10,200 ಕೋಟಿ ರೂಪಾಯಿ ವಸೂಲಾಗಿದೆ ಎಂದು ಹೇಳಿದೆ. ಈ ನಡುವೆ, ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಸಾಲ ವಸೂಲಾತಿ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿ ವಿವರಗಳ ಲೆಕ್ಕಪತ್ರ ನೀಡುವಂತೆ ಬ್ಯಾಂಕ್ಗಳಿಗೆ ನಿರ್ದೇಶಿಸಬೇಕೆಂದು ಮನವಿ ಮಾಡಿದರು.

ಅಲ್ಲದೇ ಹಣ ವಸೂಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಪ್ರಾಥಮಿಕ ಸಾಲವನ್ನು ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಯಾವುದೇ ಆದೇಶ ಮಾಡಲಾಗಿಲ್ಲ. ಹಾಗಾಗಿ ಸಾಲ ವಸೂಲಿ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ವಕೀಲರು ಮನವಿ ಮಾಡಿದರು.

ಸಜನ್ ಪೂವಯ್ಯ ಅವರ ವಾದ ಆಲಿಸಿದ ನ್ಯಾ. ಆರ್. ದೇವದಾಸ್ ಅವರು ಬ್ಯಾಂಕ್ಗಳು ಹಾಗೂ ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಲಾಗಿದೆ.

ಚೆನ್ನೈನ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಾತಿ ಅಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಕೊ ಬ್ಯಾಂಕ್, ಜೆ ಎಂ ಫೈನಾನ್ಶಿಯಲ್ ಅಸೆಟ್ ರಿಕನಸ್ಟ್ರಕ್ಷನ್ ಕಂಪನಿ ಪ್ರೈ.ಲಿ., ಯುಬಿಎಚ್ಎಲ್ನ ಅಧಿಕೃತ ಲಿಕ್ವಿಡೇಟರ್ಗೆ ನ್ಯಾಯಾಲಯ ತುರ್ತು ನೋಟಿಸ್ ಜಾರಿ ಮಾಡಿದೆ.

Read More
Next Story