
Lake Encroachment: Part 1 | ನಗರೀಕರಣಕ್ಕೆ ಜೀವತೆತ್ತ ಕೆರೆಗಳು; ಕಾಗದದಲ್ಲಷ್ಟೇ ಸಂರಕ್ಷಣೆ ಕಾಳಜಿ
ರಾಜ್ಯದಲ್ಲಿ 41,875 ಕೆರೆಗಳಲ್ಲಿ 31,033 ಕೆರೆಗಳನ್ನು ಮಾತ್ರ ಅಳತೆ ಮಾಡಿದ್ದು, ಇವುಗಳಲ್ಲಿ 11,212 ಕೆರೆಗಳು ಒತ್ತುವರಿಯಾಗಿವೆ. 5,967 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. 10,710 ಕೆರೆಗಳನ್ನು ಅಳತೆಯೇ ಮಾಡಿಲ್ಲ ಎಂಬುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಕೈಗಾರೀಕರಣ, ನಗರೀಕರಣದ ದಟ್ಟ ಛಾಯೆಯಲ್ಲಿ ಜೀವನಾಡಿ ಕೆರೆಗಳು ಮಾಯವಾಗುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ಜಲಮೂಲಗಳ ಒತ್ತುವರಿಯಿಂದ ರಾಜ್ಯದ ಬಹುತೇಕ ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ.
ಕೆರೆ ಸಂರಕ್ಷಣೆಗೆ ದಿಟ್ಟ ಕ್ರಮ ಪ್ರಕಟಿಸುವ ಸರ್ಕಾರ, ಒತ್ತುವರಿ ತೆರವಿಗೆ ನ್ಯಾಯಾಲಯಗಳು ಹೊರಡಿಸಿರುವ ಬಹುತೇಕ ಆದೇಶಗಳು ಕಡತಗಳಿಗಷ್ಟೇ ಸೀಮಿತಗೊಂಡಿವೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಣ್ಣ, ಮಧ್ಯಮ ಗಾತ್ರದ ಕೆರೆಗಳು ಪ್ರಭಾವಿಗಳ ಒತ್ತುವರಿಗೆ ಸಿಲುಕಿ ನಲುಗಿ ಹೋಗಿವೆ.
ರಾಜ್ಯದಲ್ಲಿ 41,875 ಕೆರೆಗಳಿವೆ. ಇವುಗಳಲ್ಲಿ 31,033 ಕೆರೆಗಳನ್ನು ಅಳತೆ ಮಾಡಿದ್ದು, ಈ ಪೈಕಿ 11,212 ಕೆರೆಗಳು ಒತ್ತುವರಿಯಾಗಿವೆ. 5,967 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಇನ್ನು 10,710 ಕೆರೆಗಳನ್ನು ಅಳತೆ ಮಾಡಿಲ್ಲ ಎಂಬುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಗ್ರಾಮೀಣ ಭಾಗದಲ್ಲಿ ಬೆರಳೆಣಿಕೆಯ ಕೆರೆಗಳು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದವು ಜಾಲಿ ಮರ, ಒತ್ತುವರಿಯಿಂದಾಗಿ ಸ್ವರೂಪವನ್ನೇ ಕಳೆದುಕೊಂಡಿವೆ. ನಗರ ಪ್ರದೇಶದ ಕೆರೆಗಳು ತ್ಯಾಜ್ಯ ನೀರಿನಿಂದ ಕಲುಷಿತಗೊಂಡು ನಿಷ್ಕ್ರಯೋಜಕ ಸ್ಥಿತಿಗೆ ತಲುಪಿವೆ.
ಕೆರೆಗಳ ನಗರವಾಗಿದ್ದ ಬೆಂಗಳೂರು
ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಕೆಂಪೇಗೌಡರು ಕೆರೆ ಕಟ್ಟೆಗಳನ್ನು ಕಟ್ಟಿ ಸಂರಕ್ಷಿಸಿದ್ದರು. ಅವರ ಆಳ್ವಿಕೆ ಅವಧಿಯಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್ ಗಾತ್ರದ ಸುಮಾರು 1 ಸಾವಿರಕ್ಕೂ ಹೆಚ್ಚು ಕೆರೆಗಳು ಬೆಂಗಳೂರಿನಲ್ಲಿ ಇದ್ದವು ಎಂಬುದು ಇತಿಹಾಸದಿಂದ ತಿಳಿಯಲಿದೆ. ಆದರೆ, 1960 ರ ಹೊತ್ತಿಗೆ ಬೆಂಗಳೂರಿನ ಸುತ್ತಮುತ್ತ ಕೆರೆಗಳ ಸಂಖ್ಯೆ 280 ಕ್ಕೆ ಕುಸಿದಿತ್ತು. ಪ್ರಸ್ತುತ, ಬಿಬಿಎಂಪಿ, ಬಿಡಿಎ ವ್ಯಾಪ್ತಿಯಲ್ಲಿ 206 ಕೆರೆಗಳು ಮಾತ್ರ ಇವೆ. ಇವುಗಳಲ್ಲಿ 156 ಕ್ಕೂ ಹೆಚ್ಚು ಕೆರೆಗಳು ಒತ್ತುವರಿಯಾಗಿವೆ.
20 ನೇ ಶತಮಾನದ ಆರಂಭದಿಂದಲೂ ಬೆಂಗಳೂರಿಗೆ ನೀರು ಪೂರೈಸುತ್ತಿದ್ದ ಕೆರೆಗಳ ಜಾಗದಲ್ಲಿ ಮಹಲುಗಳು ತಲೆ ಎತ್ತಿವೆ.
ಮಾಯವಾದ ಕೆರೆಗಳು
ಬೆಂಗಳೂರಿನ ಹಲವು ಕೆರೆಗಳು ನಾಮಾವಶೇಷವಾಗಿವೆ. ಧರ್ಮಾಂಬುಧಿ ಕೆರೆಯ ಜಾಗದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ತಲೆ ಎತ್ತಿದೆ. ಸಂಪಂಗಿ ಕೆರೆಯ ಜಾಗ ಕಂಠೀರವ ಸ್ಟೇಡಿಯಂ ಆಗಿದೆ.
ಬೆಂಗಳೂರಿನ ಸೂಳೆ ಕೆರೆ ಫುಟ್‌ಬಾಲ್ ಕ್ರೀಡಾಂಗಣವಾದರೆ, ಅಕ್ಕಿ ತಿಮ್ಮನಹಳ್ಳಿ ಕೆರೆಯು ಹಾಕಿ ಸ್ಟೇಡಿಯಂ ಆಗಿದೆ. ಚೆಲ್ಲಘಟ್ಟ ಕೆರೆ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸ್ವಾಧೀನದಲ್ಲಿದೆ. ಕೋರಮಂಗಲ ಕೆರೆಯ ಜಾಗದಲ್ಲಿ ರಾಷ್ಟ್ರೀಯ ಕ್ರೀಡಾ ಸಂಕೀರ್ಣ ನಿರ್ಮಾಣವಾಗಿದೆ. ಸಿದ್ಧಿಯಕಟ್ಟೆ ಕೆರೆ ಕೆ.ಆರ್. ಮಾರುಕಟ್ಟೆಯಾಗಿ ಬದಲಾಗಿದೆ. ಕಾರಂಜಿ ಕೆರೆಯು ಗಾಂಧಿ ಬಜಾರ್ ಪ್ರದೇಶವಾದರೆ, ನಾಗಶೆಟ್ಟಿಹಳ್ಳಿ ಕೆರೆಯ ಜಾಗ ಬಾಹ್ಯಾಕಾಶ ಇಲಾಖೆಯ ಅಧೀನದಲ್ಲಿದೆ. ಕಾಡುಗೊಂಡನಹಳ್ಳಿ ಕೆರೆಯಲ್ಲಿ ಅಂಬೇಡ್ಕರ್ ವೈದ್ಯಕೀಯ ಕಾಲೇಜಾಗಿ ನಿರ್ಮಾಣವಾಗಿದೆ. ದೊಮ್ಮಲೂರು ಕೆರೆಯು ಬಿಡಿಎ ಬಡಾವಣೆಯಾಗಿದೆ. ಮಿಲ್ಲರ್ಸ್ ಕೆರೆ ಜಾಗದಲ್ಲಿ ಗುರುನಾನಕ್ ಭವನ, ಬ್ಯಾಡ್ಮಿಂಟನ್ ಕ್ರೀಡಾಂಗಣವಿದೆ. ಸುಭಾಷ್ ನಗರ ಕೆರೆ, ಕುರುಬರ ಹಳ್ಳಿ ಕೆರೆ, ಕೋಡಿಹಳ್ಳಿ ಕೆರೆ, ಸಿನಿವೈಗಲು ಕೆರೆ, ಮಾರೇನಹಳ್ಳಿ ಕೆರೆಯು ಜನ ವಸತಿ ಪ್ರದೇಶವಾಗಿದೆ. ಶಿವನಹಳ್ಳಿ ಕೆರೆಯು ಆಟದ ಮೈದಾನ ಹಾಗೂ ಬಸ್ ನಿಲ್ದಾಣವಾಗಿ ಮಾರ್ಪಟ್ಟಿದೆ. ಚೆನ್ನಮ್ಮನ ಕೆರೆ ಬನಶಂಕರಿ ಎರಡನೇ ಹಂತವಾಗಿದೆ. ಪುಟ್ಟೇನಹಳ್ಳಿ ಕೆರೆ ಜೆ.ಪಿ. ನಗರ ಆರನೇ ಹಂತವಾಗಿ ಬದಲಾಗಿದೆ. ಜಕ್ಕರಾಯನ ಕೆರೆ ಕ್ರೀಡಾ ಮೈದಾನವಾಗಿದೆ.
ತ್ಯಾಜ್ಯದಿಂದ ಕೆರೆಗಳಿಗೆ ಆಪತ್ತು
ಭೀಕರ ಬರಗಾಲದ ಕಾರಣ ಕೆರೆಗಳು ಬತ್ತಿದವು. ಬತ್ತಿಹೋದ ಕೆರೆಗಳಲ್ಲಿ ಜಾಲಿ ಮರ, ಇತರೆ ಗಿಡಗಳನ್ನು ಬೆಳಸಿದ ಕಾರಣ ಸ್ವರೂಪವೇ ಬದಲಾಗಿದೆ. ಒತ್ತುವರಿ, ಹೂಳಿನ ಅಪಾಯ ಸಹ ಎದುರಿಸಿದ್ದವು. ಆದರೆ, ಕೆರೆಗಳಿಗೆ ಘನತ್ಯಾಜ್ಯ ಹಾಗೂ ಕಲುಷಿತ ನೀರು ಬಿಡುತ್ತಿರುವುದು ದೊಡ್ಡ ಅಪಾಯ ತಂದೊಡ್ಡುತ್ತಿದೆ.
ಕೆರೆಗಳಿಗೆ ಬಿಡುತ್ತಿರುವ ತ್ಯಾಜ್ಯ ನೀರಿನಿಂದ ಅಂತರ್ಜಲ ಸಂಪೂರ್ಣ ಕಲುಷಿತವಾಗುತ್ತಿದೆ. ಕೆರೆಗಳ ಉಳಿವಿಗಾಗಿ ಸರ್ಕಾರ ಕೆರೆ ಸಂರಕ್ಷಣಾ ಪ್ರಾಧಿಕಾರ ರಚಿಸಿದರೂ ಅದಕ್ಕೆ ಯಾವುದೇ ಅಧಿಕಾರ ನೀಡದ ಕಾರಣ ಹಲ್ಲು ಕಿತ್ತ ಹಾವಿನಂತಿದೆ ಎಂಬುದು ಹೋರಾಟಗಾರರ ಆರೋಪ.
ಪರಿಸರ ಸಂರಕ್ಷಣೆ, ಜೀವವೈವಿದ್ಯದಲ್ಲಿ ಕೆರೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ ಇಂತಹ ಮಹತ್ವದ ವಿಚಾರದ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳಲ್ಲಿ ಆಸಕ್ತಿ ಇಲ್ಲದಿರುವುದು ದುರದೃಷ್ಟಕರ. ಕೆರೆಗಳ ಸಂರಕ್ಷಣೆಗೆ ಸರ್ಕಾರದ ಬಳಿ ನೀಲನಕ್ಷೆ ಇಲ್ಲದಿರುವುದೂ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಅಂತರ್ಜಲ ಮರುಪೂರಣಕ್ಕಾಗಿ ಕೆರೆಗಳ ಉಳಿವು ಅಗತ್ಯ. ಹೊಸ ಕೆರೆಗಳ ನಿರ್ಮಾಣವಂತು ಕನಸಿನ ಮಾತು. ಇರುವ ಕೆರೆಗಳನ್ನೇ ಸಂರಕ್ಷಣೆ ಮಾಡಿದರೆ ಜಲಮೂಲಗಳು ಉಳಿಯಲಿವೆ. ಕೆರೆಗಳಿಗೆ ಸಂಪರ್ಕ ಹೊಂದಿರುವ ರಾಜಕಾಲುವೆ, ಮಳೆ ಕಾಲುವೆಗಳ ಪುನರುಜ್ಜೀವನ ತುರ್ತಾಗಿ ಆಗಬೇಕಾಗಿದೆ. ಕೆರೆಗಳ ಸಂರಕ್ಷಣೆಗೆ ಹೈಕೋರ್ಟ್ ಸಾಕಷ್ಟು ಬಾರಿ ಆದೇಶ, ನಿರ್ದೇಶನ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ
ಬೆಂಗಳೂರು ಕಾಂಕ್ರಿಟ್ ಕಾಡಾಗಿ ಬದಲಾಗಿದೆ. ಸಣ್ಣ ಮಳೆ ಬಂದರೂ ತಡೆದುಕೊಳ್ಳುವ ಸಾಮರ್ಥ್ಯ ಇಲ್ಲ. ಮಳೆ ನೀರು ಕಾಲುವೆ, ರಾಜಕಾಲುವೆ ನಿರ್ವಹಣೆ ಮಾಡದೇ ಸಾಕಷ್ಟು ಅನಾಹುತವನ್ನು ಕಂಡಿದ್ದೇವೆ. ಹಾಗಾಗಿ ಇರುವ ಕೆರೆಗಳನ್ನೇ ಸಂರಕ್ಷಣೆ ಮಾಡುವುದು ಒಳಿತು. ಈ ಹಿಂದೆ ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರ ಸೇರಿದಂತೆ ಹಲವು ಕಡೆ ಕೆರೆಗಳಿದ್ದವು. ಆದರೆ, ಈಗ ಆ ಪ್ರದೇಶಗಳು ಅಭಿವೃದ್ಧಿಗೆ ಮೈಯೊಡ್ಡಿವೆ. ಹೀಗಿರುವಾಗ ಅವುಗಳನ್ನು ಮೊದಲಿನ ಸ್ಥಿತಿಗೆ ತರಲು ಆಗುವುದಿಲ್ಲ. ಆದರೆ, ಈಗಿರುವ ಕಾಲುವೆ, ಕೆರೆಗಳನ್ನೇ ಸರಿಯಾದ ರೀತಿಯಲ್ಲಿ ಸಂರಕ್ಷಣೆ ಮಾಡಬೇಕಾಗಿರುವುದು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೆಲಸ. ಮಾಲಿನ್ಯ ನಿಯಂತ್ರಣ ಮಂಡಳಿ ಮಳೆ ನೀರು ಕಾಲುವೆಗಳಿಗೆ ತ್ಯಾಜ್ಯ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಆಂಜನೇಯ ರೆಡ್ಡಿ ಆಗ್ರಹಿಸಿದರು.