ಹೈಕಮಾಂಡ್‌ ಅನುಮತಿ ಪಡೆದು ಯತ್ನಾಳ್‌, ಜಾರಕಿಹೊಳಿ ಪಾದಯಾತ್ರೆ ಮಾಡಲಿ: ಬಿ.ವೈ. ವಿಜಯೇಂದ್ರ
x

ಹೈಕಮಾಂಡ್‌ ಅನುಮತಿ ಪಡೆದು ಯತ್ನಾಳ್‌, ಜಾರಕಿಹೊಳಿ ಪಾದಯಾತ್ರೆ ಮಾಡಲಿ: ಬಿ.ವೈ. ವಿಜಯೇಂದ್ರ


ʻʻಶಾಸಕ ಯತ್ನಾಳ್, ರಮೇಶ್‌ ಜಾರಕಿಹೊಳಿ ಅವರು ಪಾದಯಾತ್ರೆ ನಡೆಸುವ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ಅವರು ವರಿಷ್ಠರ ಅನುಮತಿ ಪಡೆದುಕೊಂಡು ಮಾಡಲಿʼʼ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬಿಜೆಪಿಯ ಹನ್ನೆರಡು ನಾಯಕರು ಬೆಳಗಾವಿ ಹೊರವಲಯದ ರೆಸಾರ್ಟ್‌ನಲ್ಲಿ ಸಭೆ ನಡೆಸಿ ವಾಲ್ಮೀಕಿ ಹಗರಣ ವಿಚಾರವಾಗಿ ಬಳ್ಳಾರಿ ಪಾದಯಾತ್ರೆ ನಡೆಸುವ ಬಗ್ಗೆ ತೀರ್ಮಾನಿಸಿದ್ದಾರೆ. ಇದು ಕರ್ನಾಟಕ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಸಂತನಗರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ʻʻಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ಉತ್ತರಕರ್ನಾಟಕದಲ್ಲಿ ಪಾದಯಾತ್ರೆ ಮಾಡುವುದಕ್ಕೆ ಕೆಲವು ಶಾಸಕರು ನಿರ್ಧಾರ ಮಾಡಿಕೊಂಡಿದ್ದಾರೆ. ಇದಕ್ಕೆ ನನ್ನ ಅಭ್ಯಂತರವಿಲ್ಲ. ಅವರ ಪಾದಯಾತ್ರೆಯಿಂದ ಪಕ್ಷದ ಸಂಘಟನೆ ಪೂರಕವಾಗಿರಬೇಕು. ಅದಕ್ಕಿಂತ ಮುಖ್ಯವಾಗಿ ವರಿಷ್ಠರ ಅನುಮತಿ ಪಡೆದುಕೊಳ್ಳಬೇಕುʼʼ ಎಂದಿದ್ದಾರೆ.

ವಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದೇನು?

"ಬಳ್ಳಾರಿ ಪಾದಯಾತ್ರೆಯ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಆ ರೀತಿ ಏನಾದರೂ ಬೆಳವಣಿಗೆ ಇದ್ದಿದ್ದೇ ಆದಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ನಿರ್ಧರಿಸುತ್ತಾರೆ " ಎಂದು ಅಶೋಕ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಬಿಜೆಪಿಯ ಒಂದು ಬಣ ಸಭೆ ನಡೆಸಿರುವುದು ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆಯೇ ಹೊರತು, ಪಕ್ಷದ ಹೈಕಮಾಂಡಿಗೆ ಈ ಬಗ್ಗೆ ಮಾಹಿತಿಯಿಲ್ಲ. ಒಂದು ವೇಳೆ, ಇನ್ನೊಂದು ಪಾದಯಾತ್ರೆ ನಡೆಸಬೇಕೆಂದು ಸೂಚಿಸಿದರೆ ನಾವು ಬಳ್ಳಾರಿ ಪಾದಯಾತ್ರೆ ನಡೆಸುತ್ತೇವೆ ಎಂದು ಅಶೋಕ್ ಹೇಳಿದ್ದಾರೆ.

ಮೈಸೂರು ಚಲೋ ಪಾದಯಾತ್ರೆ ವಿರೋಧಿಸಿದ್ದ ಯತ್ನಾಳ್

ಮಳೆಗಾಲದ ವಿಧಾನಸಭಾ ಅಧಿವೇಶನದ ವೇಳೆಯೇ, ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೈಸೂರು ಚಲೋ ಪಾದಯಾತ್ರೆಯ ಬಗ್ಗೆ ಅಪಸ್ವರವನ್ನು ಎತ್ತಿದ್ದರು. ಇದು ಬರೀ ನಾಟಕ, ಯಾವ ಸದುದ್ದೇಶವನ್ನು ಹೊಂದಿಲ್ಲ ಎಂದು ಯತ್ನಾಳ್ ಟೀಕಿಸಿದ್ದರು. ಆದರೆ, ನಿಗದಿಯಾದಂತೆ ಪಾದಯಾತ್ರೆ ಸಂಪೂರ್ಣಗೊಂಡಿದೆ. ಈಗ, ವಾಲ್ಮೀಕಿ ಹಗರಣ ಮತ್ತು ಪರಿಶಿಷ್ಟರಿಗೆ ಮೀಸಲಾಗಿದ್ದ ಹಣ ದುರ್ಬಳಕೆಯನ್ನು ಮುಂದಿಟ್ಟುಕೊಂಡು, ಬಿಜೆಪಿಯ ಇನ್ನೊಂದು ಬಣ ಪಾದಯಾತ್ರೆ ನಡೆಸಲು ಮುಂದಾಗಿದೆ.

ಬಳ್ಳಾರಿಯಿಂದ ಕೂಡಲ ಸಂಗಮದ ವರೆಗೆ ಬರುವ ಸೆಪ್ಟಂಬರ್ 17ರಿಂದ ಪಾದಯಾತ್ರೆ ನಡೆಸಲು ಯತ್ನಾಳ್ ಹಾಗೂ ಅವರ ತಂಡ ಮುಂದಾಗಿದೆ. ಇದಕ್ಕೆ, ಹೈಕಮಾಂಡ್ ಅನುಮತಿ ಪಡೆಯಲು ತೀರ್ಮಾನಿಸಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ, ಹಾಲೀ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ಪ್ರತಾಪ್ ಸಿಂಹ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

Read More
Next Story