ತೀರ್ಪಿಗೆ ಮುಂಚೆ ರಾಜೀನಾಮೆ ಕೊಟ್ಟು ನಿರ್ಗಮಿಸಲಿ: ಸಿಎಂಗೆ ಸಿದ್ದರಾಮಯ್ಯ ವಿರುದ್ಧ ಬಿಎಸ್‌ವೈ ವಾಗ್ದಾಳಿ
ನ್ಯಾಯಾಲಯದ ತೀರ್ಪು ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರಲಿದೆ. ಅದಕ್ಕೂ ಮುನ್ನ ರಾಜೀನಾಮೆ ಕೊಟ್ಟು ಗೌರವಯುತವಾಗಿ ನಿರ್ಗಮಿಸಲಿ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ
'ನ್ಯಾಯಾಲಯದ ತೀರ್ಪು ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರಲಿದೆ. ಅದಕ್ಕೂ ಮುನ್ನ ರಾಜೀನಾಮೆ ಕೊಟ್ಟು ಗೌರವಯುತವಾಗಿ ನಿರ್ಗಮಿಸಲಿ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಾಡಿರುವ ಎಲ್ಲಾ ಹಗರಣಗಳು ಸಾಬೀತಾಗಿರುವುದರಿಂದ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತೀರ್ಪಿಗಿಂತ ಮುಂಚೆಯೇ ಗೌರವಯುತವಾಗಿ ರಾಜೀನಾಮೆ ಕೊಡುವುದು ಒಳ್ಳೆಯದು ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಹಗರಣಗಳು ಹೆಚ್ಚಾಗಿ ನಡೆಯುತ್ತಿದೆ. ಮುಡಾ ಹಗರಣದಲ್ಲಿ ಸೇರಿದಂತೆ ಹಲವು ಹಗರಣಗಳಲ್ಲಿ ಕಾಂಗ್ರೆಸ್ ತನ್ನ ಸಾಧನೆ ತೋರಿಸಿದೆ. ಮುಡಾ ಹಗರಣದಲ್ಲಿ ವೈಟ್‌ನರ್ ಹಾಕಿದ್ದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಸಿಎಂ ವಿರುದ್ಧ ನಾವು ಯಾವುದೇ ಹೋರಾಟ ಮಾಡುವುದಿಲ್ಲ. ನ್ಯಾಯಾಲಯದಲ್ಲಿನ ತೀರ್ಪು ಅಂತಿಮ ಹಂತಕ್ಕೆ ಬಂದಿರುವುದರಿಂದ ಸಹಜವಾಗಿ ಸಿಎಂ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ ಎಂದು ಅವರು ಹೇಳಿದ್ದಾರೆ.
'ಕೋವಿಡ್ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ಸ್ವತಂತ್ರವಾಗಿದೆ. ರಾಜ್ಯಪಾಲರು ಇನ್ನೂ ನಾಲ್ವರು ಸಚಿವರಿಗೆ ನೋಟಿಸ್ ಕೊಟ್ಟಿದ್ದಾರೆ. ಆ ವಿಚಾರದಲ್ಲೂ ಅವರು ಸರ್ವ ಸ್ವತಂತ್ರರು' ಎಂದರು.