ಕುಮಾರಸ್ವಾಮಿ ರಾಜಕೀಯ ಬಿಟ್ಟು ಉದ್ಯೋಗ ಸೃಷ್ಟಿಸಲಿ; ಡಿಕೆಶಿ ಕಿವಿಮಾತು
ಕುಮಾರಸ್ವಾಮಿಗೆ ಮೋದಿ ಅವರು ಉಕ್ಕು, ಕೈಗಾರಿಕೆ ಎನ್ನುವ ದೊಡ್ಡ ಹಾಗೂ ಉತ್ತಮ ಖಾತೆ ಕೊಟ್ಟಿದ್ದಾರೆ. ರಾಜಕೀಯ ಮಾಡುವುದನ್ನು ಬಿಟ್ಟು, ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಮುಂದಾಗಬೇಕು. ಆ ಮೂಲಕ ಸಿಕ್ಕಿರುವ ಒಳ್ಳೆಯ ಅವಕಾಶವನ್ನು ಬಳಸಿಕೊಳ್ಳಲಿ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕಾರಣ, ಬೇರೆ ಮಾತು ಬಿಟ್ಟು ರಾಜ್ಯದಲ್ಲಿ 50 ಸಾವಿರದಿಂದ 1 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಿ. ಕಾಂಗ್ರೆಸ್ ಸರ್ಕಾರ ಅವರಿಗೆ ಅಗತ್ಯವಾದ ಸಹಕಾರ ನೀಡಲಿದೆ.
ಹೀಗೆಂದವರು ಉಪ ಮುಖ್ಯಮಂತ್ರಿ ಡಿ,ಕೆ.ಶಿವಕುಮಾರ್ ಅವರು. ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಂದ ಮಾಹಿತಿ ಸೋರಿಕೆಯಾಗುತ್ತಿದೆ. ನನಗೆ ಉತ್ತಮವಾಗಿ ಗುಪ್ತಚರ ಮಾಹಿತಿ ಸಿಗುತ್ತದೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಡಿಸಿಎಂ ಹೀಗೆ ಪ್ರತಿಕ್ರಿಯಿಸಿದರು.
ಎತ್ತಿನಹೊಳೆ ಯೋಜನೆ ವಿಚಾರವಾಗಿ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ ಅವರೊಂದಿಗೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
“ಕುಮಾರಸ್ವಾಮಿಗೆ ಮೋದಿ ಅವರು ಉಕ್ಕು, ಕೈಗಾರಿಕೆ ಎನ್ನುವ ದೊಡ್ಡ ಹಾಗೂ ಉತ್ತಮ ಖಾತೆ ಕೊಟ್ಟಿದ್ದಾರೆ. ರಾಜಕೀಯ ಮಾಡುವುದನ್ನು ಬಿಟ್ಟು, ಸಿಕ್ಕಿರುವ ಒಳ್ಳೆಯ ಅವಕಾಶವನ್ನು ಬಳಸಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಹಾಸನ, ಬೆಂಗಳೂರು, ಮಂಡ್ಯ, ಬೀದರ್, ಕಲಬುರ್ಗಿ ಸೇರಿದಂತೆ ಇತರೇ ಭಾಗಗಳಿಗೆ ಉತ್ತಮ ಕೆಲಸ ಮಾಡಿ, ಏನಾದರೂ ಸಾಕ್ಷಿ ಬಿಟ್ಟು ಹೋಗಲಿ. ರಾಜಕೀಯ ಇದ್ದಿದ್ದೇ... ಇಂತಹ ಅವಕಾಶವನ್ನು ಏಕೆ ಕಳೆದುಕೊಳ್ಳುತ್ತಾ ಇದ್ದಾರೆ ಎಂಬುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ನಾವೆಲ್ಲಾ ಪ್ರತಿದಿನ ರಾಜಕೀಯ ಮಾಡುತ್ತಲೇ ಇರುತ್ತೇವೆ. ಅಭಿವೃದ್ದಿಯಿದ್ದರೆ ತಾನೇ ರಾಜಕೀಯ. ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಎತ್ತಿನಹೊಳೆ ಕೆಲಸ ಮುಗಿಸಬೇಕು, ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಪ್ರತಿದಿನ ಸಮಯ ಓಡುತ್ತಿರುತ್ತದೆ ಎಂದರು.
ಅಧಿಕಾರಿಗಳು ಇಲ್ಲದೇ ಪರಮೇಶ್ವರ ಹಾಗೂ ನೀವು ಮಾತ್ರ ಒಟ್ಟಿಗೆ ಸೇರಿದ್ದೀರಿ ಎಂದು ಕೇಳಿದಾಗ, ನಾವು 136 ಕಾಂಗ್ರೆಸ್ ಶಾಸಕರು ಒಟ್ಟಿಗೆ ಇದ್ದೇವೆ. ಇಲ್ಲಿ ಚರ್ಚೆ ಮಾಡುವಾಗ ಅಧಿಕಾರಿಗಳು ಬೇಕಾಗಿಲ್ಲ. ನಾಯಕರ ಹಿಂದೆ ಅಧಿಕಾರಿಗಳು ಬೇಕಾಗಿಲ್ಲ. ನಾವು, ಚರ್ಚೆ ಮಾಡುತ್ತೇವೆ, ಅಭಿಪ್ರಾಯ ಕೇಳುತ್ತೇವೆ ಎಂದು ಹೇಳಿದರು.
ನನಗೂ ಅದಕ್ಕೂ ಸಂಬಂಧವಿಲ್ಲ
ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ದ ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, “ತನಿಖೆ ಮಾಡುವವರು ಅವರು, ತನಿಖೆಗೆ ಒಳಗಾಗುವವರು ಅವರು. ಅದಕ್ಕೂ ನನಗೂ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಬೀಳಿಸಲು 1 ಸಾವಿರ ಕೋಟಿ ಮೀಸಲಿಡಲಾಗಿದೆ ಎನ್ನುವ ಯತ್ನಾಳ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಇದರ ಬಗ್ಗೆ ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷ ಹಾಗೂ ಸರ್ಕಾರ ಉರುಳಿಸಲು ಈ ಕೆಲಸ ಮಾಡಲಾಗುತ್ತಿದೆ. ನಮ್ಮ ಕಾನೂನು ಸಲಹೆಗಾರರ ಬಳಿ ಚರ್ಚೆ ನಡೆಸಲಾಗುವುದು. ಈ ಕೃತ್ಯ ಐಟಿಯವರಿಂದ ತನಿಖೆಗೆ ಒಳಗಾಗಬೇಕಿದೆ ಎಂದರು.
2025 ಕ್ಕೆ ತುಮಕೂರಿಗೆ ಎತ್ತಿನಹೊಳೆ ನೀರು
“ಮುಂದಿನ 2025 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರನ್ನು ಹರಿಸಲು ಪ್ರಯತ್ನ ಮಾಡಲಾಗುವುದು. ಈಗಾಗಲೇ ಎತ್ತಿನಹೊಳೆ ನೀರನ್ನು ಮೇಲಕ್ಕೆ ಎತ್ತಿ ಸಂಗ್ರಹ ಮಾಡಲಾಗಿದೆ. ತುಮಕೂರು ಹಾಗೂ ಹಾಸನ ಜಿಲ್ಲೆಯಲ್ಲಿ ಅರಣ್ಯ ಭೂಮಿಯನ್ನು ಗುರುತಿಸಲಾಗಿದೆ. ಇದನ್ನು ನೀರಾವರಿ ಇಲಾಖೆಗೆ ವರ್ಗಾವಣೆ ಮಾಡಬೇಕು. ಈ ವಿಚಾರವಾಗಿ ಪ್ರತ್ಯೇಕ ಸಭೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅರಣ್ಯ ಸಚಿವರ ಬಳಿಯೂ ಮಾತನಾಡಲಾಗುವುದು”ಎಂದರು.
ದಸರಾ ಬಳಿಕ ಸ್ಥಳ ವೀಕ್ಷಣೆ
“ಮಳೆ ಕಡಿಮೆಯಾಗುತ್ತಿದೆ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಬಿಜೆಪಿ ಅವಧಿಯಲ್ಲಿ ಕೊರಟಗೆರೆ ಬಳಿಯ ಬೈರಗೊಂಡ್ಲು ಜಲಾಶಯದ ನಿರ್ಮಾಣ ಯೋಜನೆಯನ್ನು ಬದಲಾವಣೆ ಮಾಡಿದ್ದರು. ಈ ಕಾರಣಕ್ಕೆ ಸ್ಥಳ ವೀಕ್ಷಣೆ ಮಾಡಬೇಕು. ಇಲ್ಲಿ ದೊಡ್ಡಬಳ್ಳಾಪುರದ ಒಂದಷ್ಟು ಭಾಗವೂ ಸೇರಿಕೊಂಡಿದೆ. ಪರಿಹಾರ ವಿಚಾರದಲ್ಲಿ ವ್ಯಾಜ್ಯಗಳಿವೆ. ಈ ಭಾಗದ ರೈತರು ಒಂದೇ ರೀತಿಯ ಪರಿಹಾರ ನೀಡಿ ಎಂದು ಹೇಳುತ್ತಿದ್ದಾರೆ. ದಸರಾ ನಂತರ ಎತ್ತಿನಹೊಳೆಯಿಂದ ಬೈರಗೊಂಡ್ಲುವರೆಗೂ ಸ್ಥಳ ವೀಕ್ಷಣೆ ನಡೆಸಿ ತೊಂದರೆ ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.