ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ: ಈಶ್ವರ ಖಂಡ್ರೆ
x
ಈಶ್ವರ್‌ ಖಂಡ್ರೆ

ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ ಸೆರೆ: ಈಶ್ವರ ಖಂಡ್ರೆ

ಸಿಸಿ ಟಿವಿಯಲ್ಲಿ ಚಿರತೆ ಸಂಚಾರದ ದೃಶ್ಯಗಳು ಸೆರೆಯಾಗಿದ್ದು, ಮಂಗಳವಾರ ಮಧ್ಯಾಹ್ನ 12ರ ಸುಮಾರಿನಲ್ಲಿ ಚಿರತೆ ಇರುವಿಕೆ ಖಚಿತವಾದ ಹಿನ್ನೆಲೆಯಲ್ಲಿ ತುರ್ತು ಕಾರ್ಯಾಚರಣೆಗೆ ಸೂಚನೆ ನೀಡಲಾಗಿದೆ.


Click the Play button to hear this message in audio format

ಮೈಸೂರು ನಗರದ ಇನ್ಫೋಸಿಸ್ ಆವರಣದಲ್ಲಿ ಮಂಗಳವಾರ ನಸುಕಿನ ಜಾವ 4.30ರ ಸುಮಾರಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಇದರ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಈ ಬಗ್ಗೆ ಬೀದರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಷಯ ತಿಳಿದ ಕೂಡಲೇ ಚಿರತೆ ಸೆರೆ ಹಿಡಿಯಲು ಚಿರತೆ ಕಾರ್ಯಪಡೆ ತಂಡವನ್ನು ಕಳುಹಿಸಲಾಗಿದೆ. ತಂಡದಲ್ಲಿ ಪಶುವೈದ್ಯರು, ಚಿರತೆ ಸೆರೆ ತರಬೇತಿ ಪಡೆದ 40 ಸಿಬ್ಬಂದಿ ಇದ್ದಾರೆ. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳೂ ಸ್ಥಳದಲ್ಲಿದ್ದು, ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಿಸಿ ಟಿವಿಯಲ್ಲಿ ಚಿರತೆ ಸಂಚಾರದ ದೃಶ್ಯಗಳು ಸೆರೆಯಾಗಿದ್ದು, ಮಂಗಳವಾರ ಮಧ್ಯಾಹ್ನ 12ರ ಸುಮಾರಿನಲ್ಲಿ ಚಿರತೆ ಇರುವಿಕೆ ಖಚಿತವಾದ ಹಿನ್ನೆಲೆಯಲ್ಲಿ ತುರ್ತು ಕಾರ್ಯಾಚರಣೆಗೆ ಸೂಚನೆ ನೀಡಲಾಗಿದೆ. ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು ಆತಂಕ ಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬಲೆ, ಅರವಳಿಕೆ ಔಷಧದೊಂದಿಗೆ ಸಜ್ಜಾಗಿದ್ದಾರೆ ಎಂದು ಅವರು ತಿಳಿಸಿದರು.

ಇನ್ಫೋಸಿಸ್ ಆವರಣ ಸುಮಾರು 350 ಎಕರೆಯಷ್ಟಿದ್ದು, ಕೆಲವು ಭಾಗ ಕಾಡಿನಂತೆಯೇ ಇದೆ. ಇಲ್ಲಿ ಕಾರ್ಯಾಚರಣೆ ಸಾಹಸವೇ ಸರಿ. ಆದರೂ ಕಾರ್ಯಾಚರಣೆ ನಡೆಯುತ್ತಿದೆ. ಚಿರತೆ ಸಮೀಪದ ವಸತಿ ಪ್ರದೇಶಗಳಿಗೆ ನುಗ್ಗದಂತೆ ಸಹ ಕ್ರಮ ವಹಿಸಲಾಗಿದೆ. ಚಿರತೆ ಪತ್ತೆಗೆ ಥರ್ಮಲ್ ಕ್ಯಾಮರಾ ಅಳವಡಿಸಿದ ಡ್ರೋನ್ ಸಹ ಬಳಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶೀಘ್ರವೇ ಚಿರತೆ ಸೆರೆ ಹಿಡಿದು ಜನರ ಆತಂಕ ದೂರ ಮಾಡುತ್ತಾರೆ ಎಂಬ ವಿಶ್ವಾಸವನ್ನು ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.

ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್

ಚಿರತೆ ಕಾಣಿಸಿಕೊಂಡಿರುವುದರಿಂದ ಕ್ಯಾಂಪಸ್ ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಇನ್ಫೋಸಿಸ್, ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದು, ಚಿರತೆ ಸೆರೆಗೆ ಯೋಜನೆ ರೂಪಿಸಿದ್ದಾರೆ.

ಮಂಗಳವಾರ ಬೆಳಗ್ಗಿನ ಜಾವ ಇನ್ಫೋಸಿಸ್ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಡುತ್ತಿರುವುದು ಸೆರೆಯಾಗಿತ್ತು. ಮೈಸೂರಿನ ಇನ್ಫೋಸಿಸ್ ಗ್ಲೋಬಲ್ ಎಜುಕೇಶನ್ ಸೆಂಟರ್‌ನಲ್ಲಿ ಉದ್ಯೋಗಿಗಳಲ್ಲದೆ, ಸುಮಾರು 4,000 ಪ್ರಶಿಕ್ಷಣಾರ್ಥಿಗಳು ಕೂಡ ಚಿರತೆ ಕಾಣಿಸಿಕೊಂಡಿದ್ದರಿಂದ ತೊಂದರೆಗೀಡಾಗಿದ್ದಾರೆ. ಎಲ್ಲ ತರಬೇತಿ ಕಾರ್ಯಕ್ರಮಗಳು, ಮೌಲ್ಯಮಾಪನಗಳು ಮತ್ತು ಇಂಡಕ್ಷನ್‌ಗಳನ್ನು ಒಂದು ದಿನಕ್ಕೆ ಮುಂದೂಡುವುದರೊಂದಿಗೆ, ಪ್ರಶಿಕ್ಷಣಾರ್ಥಿಗಳಿಗೆ ಹಾಸ್ಟೆಲ್ ಕೊಠಡಿಗಳಲ್ಲಿಯೇ ಇರಲು ಸಲಹೆ ನೀಡಲಾಗಿದೆ.

Read More
Next Story