
ಕಡೂರು: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರು
ಕಡೂರು ತಾಲೂಕಿನ ಎಮ್ಮೆದೊಡ್ಡಿ, ರಂಗೇನಹಳ್ಳಿ, ಶ್ರೀರಾಂಪುರ, ಗೊಲ್ಲರಹಟ್ಟಿ, ಶಿವಪುರ, ಲಕ್ಕೇನಹಳ್ಳಿ ಮತ್ತು ಮುಸ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಚಿರತೆ ನಿರಂತರವಾಗಿ ಸಂಚಾರ ಮಾಡುತ್ತಿತ್ತು.
ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿರುವ ಘಟನೆ ಕಡೂರು ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿರತೆಯ ಸೆರೆಯಿಂದಾಗಿ ಈ ಭಾಗದ ಹತ್ತಾರು ಹಳ್ಳಿಗಳ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿ, ರಂಗೇನಹಳ್ಳಿ, ಶ್ರೀರಾಂಪುರ, ಗೊಲ್ಲರಹಟ್ಟಿ, ಶಿವಪುರ, ಲಕ್ಕೇನಹಳ್ಳಿ ಮತ್ತು ಮುಸ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಚಿರತೆ ನಿರಂತರವಾಗಿ ಸಂಚಾರ ಮಾಡುತ್ತಿತ್ತು. ಕಾಡುಪ್ರಾಣಿಯ ಕಾಟದಿಂದಾಗಿ ಜಾನುವಾರುಗಳು ಮತ್ತು ಸಾಕು ನಾಯಿಗಳು ಬಲಿಯಾಗುತ್ತಿದ್ದವು, ಇದು ಸ್ಥಳೀಯ ರೈತರು ಮತ್ತು ನಿವಾಸಿಗಳಲ್ಲಿ ಭೀತಿ ಮೂಡಿಸಿತ್ತು.
ನಿರಂತರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ
ಚಿರತೆಯ ದಾಳಿಯಿಂದ ಕಂಗೆಟ್ಟಿದ್ದ ಗ್ರಾಮಸ್ಥರು, ಅರಣ್ಯ ಇಲಾಖೆಗೆ ತಕ್ಷಣವೇ ಬೋನು ಇರಿಸಿ ಚಿರತೆಯನ್ನು ಸೆರೆಹಿಡಿಯುವಂತೆ ಹಲವು ಬಾರಿ ಒತ್ತಾಯಿಸಿದ್ದರು. ಜನರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ರಂಗೇನಹಳ್ಳಿ ವ್ಯಾಪ್ತಿಯಲ್ಲಿ ಬೋನು ಅಳವಡಿಸಿದ್ದರು. ಭಾನುವಾರ (ಡಿ. 28) ಮುಂಜಾನೆ ಚಿರತೆ ಬೋನಿಗೆ ಬಿದ್ದಿದ್ದು, ಸೆರೆಯಾದ ಚಿರತೆಯನ್ನು ಅರಣ್ಯ ಇಲಾಖೆಯು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದೆ.

