ವಿಧಾನಮಂಡಲ ಅಧಿವೇಶನ | ಸಿಎಂ ಹಾಜರಿಗೆ ಪ್ರತಿಪಕ್ಷಗಳ ಪಟ್ಟು; ಗದ್ದಲ, ವಾಗ್ವಾದಲ್ಲೇ ಕಲಾಪ ಆರಂಭ
x

ವಿಧಾನಮಂಡಲ ಅಧಿವೇಶನ | ಸಿಎಂ ಹಾಜರಿಗೆ ಪ್ರತಿಪಕ್ಷಗಳ ಪಟ್ಟು; ಗದ್ದಲ, ವಾಗ್ವಾದಲ್ಲೇ ಕಲಾಪ ಆರಂಭ


ವಿಧಾನ ಮಂಡಲ ಅಧಿವೇಶನ ಕಲಾಪ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಕಲಾಪಕ್ಕೆ ಗೈರಾಗಿದ್ದರು. ಆ ಹಿನ್ನೆಲೆಯಲ್ಲಿ ಪ್ರಮುಖ ವಿಷಯಗಳ ಚರ್ಚೆಯ ವೇಳೆ ಸಭಾ ನಾಯಕರು ಕಲಾಪಕ್ಕೆ ಗೈರಾಗಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ಕೂಡಲೇ ಸದನಕ್ಕೆ ಬರಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ಒಕ್ಕೊರಲಿನ ಕೂಗು ಮೊಳಗಿಸಿದರು. ಈ ವೇಳೆ ಆಡಳಿತ ಪಕ್ಷ-ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದದಲ್ಲಿ ಕಲಾಪ ಗೊಂದಲದ ಗೂಡಾಯಿತು.

ಅಧಿವೇಶನ ಆರಂಭವಾಗುತ್ತಲೇ ಆರ್‌ ಅಶೋಕ್‌ ಅವರು, ನಾವು ಆರ್ಥಿಕ ಇಲಾಖೆಯಲ್ಲಿ ನಡೆದಿರುವ ಹಗರಣದ ಬಗ್ಗೆ ಮಾತನಾಡಬೇಕು. ಆದರೆ, ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಇಲ್ಲ. ನಾವು ಹೇಗೆ ಮಾತನಾಡುವುದು? ಯಾರನ್ನು ಕೇಳುವುದು? ಎಂದು ಸಭಾಧ್ಯಕ್ಷರಲ್ಲಿ ಕೇಳಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹಾಗೂ ಗೃಹ ಸಚಿವ ಜಿ ಪರಮೇಶ್ವರ್‌ ಅವರು, ಸರ್ಕಾರದ ಪರವಾಗಿ ನಾವು ಇದ್ದೇವೆ ಮಾತನಾಡಿ ಎಂದು ಹೇಳಿದರು. ಆಗ ಆರ್‌ ಅಶೋಕ್‌ ಅವರು, ಸಿಎಂ ಬರುವವರೆಗೂ ನೀವು ಅವರ ಆಸನದಲ್ಲಿ ಕೂತುಕೊಳ್ಳಿ ಎಂದು ನಗೆಚಟಾಕಿ ಹಾರಿಸಿದರು.

ಮಾಜಿ ಸಚಿವ ಡಾ ಸಿ ಎನ್‌ ಅಶ್ವತ್‌ ನಾರಾಯಣ ಮಾತನಾಡಿ, ಮುಖ್ಯಮಂತ್ರಿಗಳ ಮೇಲೆಯೇ ನೇರ ಆರೋಪ ಇದೆ. ಹಾಗಾಗಿ ಅವರು ಸದನದಲ್ಲಿ ಇರಬೇಕು. ಆಗ ಮಾತ್ರ ನಾವು ಮಾತನಾಡುತ್ತೇವೆ. ಸಿದ್ದರಾಮಯ್ಯ ಅವರು ಬರುವವರೆಗೂ ನಾವು ಮಾತನಾಡುವುದಿಲ್ಲ, ಸದನಕ್ಕೆ ಮರ್ಯಾದೆ ಇಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಇನ್ನೇನು ಬರುತ್ತಾರೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ನೀವು ಭಾಷಣ ಆರಂಭಿಸಿ ಎಂದು ಡಿಕೆ ಶಿವಕುಮಾರ್‌ ಮನವಿ ಮಾಡಿದ ಬಳಿಕವೂ ಬಿಜೆಪಿ ನಾಯಕರು ಸಿಎಂ ಆಗಮನಕ್ಕೆ ಆಗ್ರಹಿಸಿ ತಮ್ಮ ಪಟ್ಟು ಸಡಿಲಿಸದೆ ಪ್ರತಿಭಟನೆ ಮುಂದುವರಿಸಿದರು. ಹಾಗಾಗಿ ಬೆಳಿಗ್ಗೆಯೇ ಪರಸ್ಪರ ವಾಗ್ವಾದ, ಗಲಾಟೆಯಲ್ಲೇ ಮಂಗಳವಾರದ ಕಲಾಪ ಆರಂಭವಾಯಿತು.

Read More
Next Story