ಕನ್ನಡ ಸಾಹಿತ್ಯ ಸಮ್ಮೇಳನ | ವಿಧಾನಮಂಡಲ ಅಧಿವೇಶನ ಒಂದು ದಿನ ಮೊಟಕು
x

ಕನ್ನಡ ಸಾಹಿತ್ಯ ಸಮ್ಮೇಳನ | ವಿಧಾನಮಂಡಲ ಅಧಿವೇಶನ ಒಂದು ದಿನ ಮೊಟಕು

ಡಿ.20 ರಿಂದ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗುವ ಹಿನ್ನೆಲೆಯಲ್ಲಿ ಡಿ.19ಕ್ಕೆ ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದ್ದಾರೆ.


ಡಿ.9 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನವನ್ನು ಅವಧಿಗೂ ಮುನ್ನವೇ ಒಂದು ದಿನ ಮೊಟಕುಗೊಳಿಸಲಾಗಿದೆ.

ಡಿ.9ರಿಂದ 20ರ ವರೆಗೆ ವಿಧಾನಮಂಡಲ ಅಧಿವೇಶನ ನಿಗದಿಯಾಗಿತ್ತು. ಆದರೆ, ಡಿ.20 ರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗುವ ಹಿನ್ನೆಲೆಯಲ್ಲಿ ಡಿ.19ಕ್ಕೆ ಅಧಿವೇಶನ ಮೊಟಕುಗೊಳಿಸಲಾಗುತ್ತಿದೆ.

ಡಿ. 20ರಿಂದ 22ರವರೆಗೆ ಮಂಡ್ಯದಲ್ಲಿ ಸಾಹಿತಿ ಗೋ.ರು.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಸಚಿವರು ಭಾಗವಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ಪ್ರಮುಖವಾಗಿ ಚರ್ಚೆಯಾಗಬೇಕಿದೆ. ಉತ್ತರ ಕರ್ನಾಟಕ ಜಿಲ್ಲೆಗಳ ಸಮಸ್ಯೆಗಳು ಬಗೆಹರಿದರೆ ಬೆಳಗಾವಿಯ ಅಧಿವೇಶನಕ್ಕೂ ಅರ್ಥ ಬರಲಿದೆ. ಹಾಗಾಗಿ ರಾಜಕೀಯ ತಿಕ್ಕಾಟಕ್ಕೆ ಅವಕಾಶ ನೀಡದೇ ರಚನಾತ್ಮಕ ಚರ್ಚೆ ನಡೆಸಬೇಕು ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ.

ರಾಜಕೀಯ ಜಿದ್ದಾಜಿದ್ದಿ, ಆರೋಪ-ಪ್ರತ್ಯಾರೋಪಗಳೇನೇ ಇದ್ದರೂ ಡಿ.9ರ ಒಳಗೆ ಮಾಡಿಕೊಳ್ಳಿ. ಅಧಿವೇಶನ ಸಮಯದಲ್ಲಿ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡಿ. ಕಲಾಪಗಳು ಸುಮಗವಾಗಿ ನಡೆಯಲು ಸಹಕಾರ ನೀಡಬೇಕು. ಅಧಿವೇಶನ ಮುಗಿದ ಬಳಿಕ ರಾಜಕೀಯ ತಿಕ್ಕಾಟಕ್ಕೆ ಅವಕಾಶವಿರಲಿದೆ ಎಂದು ಹೇಳಿದ್ದಾರೆ.

ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರಿಗೆ ಅಧಿವೇಶನದಲ್ಲಿಯೇ ಪ್ರಮಾಣವಚನ ಬೋಧಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ. ಮುಡಾ ಸೇರಿದಂತೆ ವಿವಿಧ ಹಗರಣಗಳ ಕುರಿತು ಚರ್ಚೆಗೆ ಅವಕಾಶ ನೀಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಯಮಾವಳಿಯಂತೆ ಸದನ ನಡೆಸಲಾಗುವುದು. ಯಾವ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಬೇಕೆಂಬುದನ್ನು ಸದನ ಸಲಹಾ ಸಮಿತಿಯಲ್ಲಿ ನಿರ್ಧಾರಲಾಗುತ್ತದೆ ಎಂದು ತಿಳಿಸಿದ್ದಾರೆ.

Read More
Next Story