ವಿಧಾನ ಪರಿಷತ್‌ ಚುನಾವಣೆ| ʻಈಗ ಕಾಲ ಮೀರಿ ಹೋಗಿದೆʼ; ಸಿಎಂ, ಡಿಸಿಎಂ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ ಪರಮೇಶ್ವರ್‌
x
ಡಾ.ಜಿ ಪರಮೇಶ್ವರ್‌

ವಿಧಾನ ಪರಿಷತ್‌ ಚುನಾವಣೆ| ʻಈಗ ಕಾಲ ಮೀರಿ ಹೋಗಿದೆʼ; ಸಿಎಂ, ಡಿಸಿಎಂ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ ಪರಮೇಶ್ವರ್‌

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಪರಮೇಶ್ವರ್‌ ಅವರು ಈಗ ಕಾಲ ಮಿಂಚಿದೆ ಎಂದಿದ್ದಾರೆ...


ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು, ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹಾಗೂ ಅಸಮಾಧಾನ ಎರಡೂ ಸಹ ಏಕಕಾಲಕ್ಕೆ ಹೆಚ್ಚಾಗುತ್ತಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಈಗಾಗಲೇ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೊದಲು ಹಿರಿಯ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಚರ್ಚಿಸಬೇಕಿತ್ತು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಂಗಳವಾರ ಮಾತನಾಡಿದ್ದ ಪರಮೇಶ್ವರ್ ಅವರು, ಕಾಂಗ್ರೆಸ್‌ಗಾಗಿ ದುಡಿದವರಿಗೆ ಹಾಗೂ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಸಮುದಾಯದವರಿಗೆ ವಿಧಾನಪರಿಷತ್ ಟಿಕೆಟ್ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ನಮ್ಮಂತಹ ಪಕ್ಷದ ಹಿರಿಯರ ಸಲಹೆಗಳನ್ನು ಪಡೆದುಕೊಳ್ಳಬೇಕು. ಅದು ಸರಿಯಾದ ಕ್ರಮ ಎಂದು ನೇರವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು.

ಬುಧವಾರ ಮತ್ತೆ ಈ ಸಂಬಂಧ ಮಾತನಾಡಿರುವ ಪರಮೇಶ್ವರ್ ಅವರು, ವಿಧಾನ ಪರಿಷತ್ ಚುನಾವಣೆಗೆ ಪಕ್ಷದಿಂದ ಟಿಕೆಟ್ ನೀಡುವ ಮೊದಲು ಪಕ್ಷದ ಹಿರಿಯರೊಂದಿಗೆ ಮಾತನಾಡಬೇಕು, ಚರ್ಚೆ ನಡೆಸಬೇಕು ಆಗ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದ್ದೆ. ಅದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು.

ನೀವು ಯಾರ ಹೆಸರನ್ನಾದರೂ ಸೂಚಿಸಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿಪ್ರಾಯವನ್ನೇ ಕೇಳಿಲ್ಲ, ಇನ್ನು ಹೆಸರನ್ನು ಸೂಚಿಸುವುದು ಹೇಗೆ ಎಂದು ಪ್ರಶ್ನಿಸಿದರು. ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಇರುವ 7 ಸ್ಥಾನಗಳಿಗೆ 300 ಅರ್ಜಿಗಳು ಬಂದಿವೆ ಎಂದು ನಮ್ಮ ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಇಂತಹ ಪರಿಸ್ಥಿತಿ ಎದುರಾದಾಗ ಅವರಿಗೂ ಗೊಂದಲ ಸೃಷ್ಟಿಯಾಗುತ್ತದೆ. ಆದರೆ, ಪಕ್ಷದ ಹಿರಿಯ ನಾಯಕರು ಸಭೆ ಕರೆದು ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರಬೇಕು ಎಂದು ಹೇಳಿದರು.

ಈಗ ಕಾಲ ಮೀರಿ ಹೋಗಿದೆ…

ಈಗ ಕಾಲ ಮೀರಿ ಹೋಗಿದೆ ಒಮ್ಮೆ ದೆಹಲಿಗೆ ವಿಮಾನ ಹತ್ತಿದ ಮೇಲೆ (ವಿಧಾನ ಪರಿಷತ್ ಚುನಾವಣೆಯ ಆಕಾಂಕ್ಷಿಗಳ ಪಟ್ಟಿ) ಚರ್ಚೆ ಮಾಡಲು ಬರುವುದಿಲ್ಲ ಎಂದು ಡಾ.ಜಿ ಪರಮೇಶ್ವರ್ ಹೇಳಿದರು.

ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್‌ಗೆ ತಲುಪುವ ಹಂತಕ್ಕೆ ಹೋಗಿದೆ. ಹೀಗಾಗಿ, ಈಗ ಕಾಲ ಮೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ಸಮಿತಿ ರಚನೆ ಮಾಡಿದರೆ, ಕಾಂಗ್ರೆಸ್‌ನ ಹಿರಿಯ ನಾಯಕರು ಒಂದೊಂದು ಸಲಹೆ ನೀಡುತ್ತಾರೆ. ಆಗ ಒಂದು ತೀರ್ಮಾನಕ್ಕೆ ಬರಬಹುದು ಎಂದು ಹೇಳಿದ್ದೇನೆ. ಇದನ್ನು ಯಾರೂ ಸಹ ತಪ್ಪಾಗಿ ಗ್ರಹಿಸುವ ಅವಶ್ಯಕತೆ ಇಲ್ಲ ಎಂದೂ ಸಹ ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆ

ಕರ್ನಾಟಕದ ವಿಧಾನಸಭೆಯ ಸದಸ್ಯರಿಂದ (ಮೇಲ್ಮನೆಗೆ) ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಸದಸ್ಯರ ಚುನಾವಣೆ ಜೂನ್ 13ರಂದು ನಡೆಯಲಿದೆ. ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 135 ಶಾಸಕರನ್ನು ಸಂಖ್ಯಾ ಬಲವನ್ನು ಹೊಂದಿರುವ ಕಾಂಗ್ರೆಸ್ ಕನಿಷ್ಠ 7 ವಿಧಾನ ಪರಿಷತ್ ಸ್ಥಾನಗಳನ್ನು ಗೆಲ್ಲುವ ಅವಕಾಶ ಹೊಂದಿದೆ.

Read More
Next Story