ಪರಿಷತ್ ಚುನಾವಣೆ | ನೈರುತ್ಯದಲ್ಲಿ ಬಂಡಾಯ, ಆರು ಕ್ಷೇತ್ರದಿಂದ 78 ಮಂದಿ ಕಣದಲ್ಲಿ
x

ವಿಧಾನ ಸೌಧ 

ಪರಿಷತ್ ಚುನಾವಣೆ | ನೈರುತ್ಯದಲ್ಲಿ ಬಂಡಾಯ, ಆರು ಕ್ಷೇತ್ರದಿಂದ 78 ಮಂದಿ ಕಣದಲ್ಲಿ

ಪದವೀಧರರು ಮತ್ತು ಶಿಕ್ಷಕರ ಮತಕ್ಷೇತ್ರಗಳ ಆರು ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ನಾಮಪತ್ರ ಹಿಂಪಡೆಯಲು ಅಂತಿಮ ಗಡುವು ಸೋಮವಾರ ಮುಕ್ತಾಯವಾಗಿದ್ದು, 12 ಮಂದಿ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಅಂತಿಮವಾಗಿ 78 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.


ಪದವೀಧರರು ಮತ್ತು ಶಿಕ್ಷಕರ ಮತಕ್ಷೇತ್ರಗಳ ಆರು ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ ನಾಮಪತ್ರ ಹಿಂಪಡೆಯಲು ಅಂತಿಮ ಗಡುವು ಸೋಮವಾರ ಮುಕ್ತಾಯವಾಗಿದ್ದು, 12 ಮಂದಿ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಅಂತಿಮವಾಗಿ 78 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.

ಚುನಾವಣೆ ನಡೆಯುತ್ತಿರುವ ಮೂರು ಶಿಕ್ಷಕರ ಕ್ಷೇತ್ರ ಮತ್ತು ಮೂರು ಪದವೀಧರರ ಕ್ಷೇತ್ರಗಳ ಪೈಕಿ ನೈರುತ್ಯ ಪದವೀಧರರ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಹಾಗಾಗಿ ಸದ್ಯ ನೈರುತ್ಯ ಪದವೀಧರ ಕ್ಷೇತ್ರವೊಂದರಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಪ್ರಬಲ ಬಂಡಾಯವನ್ನು ಎದುರಿಸುತ್ತಿವೆ.

ಚುನಾವಣಾ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಅರಂಭವಾದಾಗ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಬಂಡಾಯದ ಬಿಸಿ ತಲೆನೋವಾಗಿತ್ತು. ಚುನಾವಣೆ ಎದುರಿಸುತ್ತಿರುವ ಆರು ಕ್ಷೇತ್ರಗಳ ಪೈಕಿ, ಮೂರು ಪದವೀಧರರ ಕ್ಷೇತ್ರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಲ್ಲಿ ಪಕ್ಷಗಳಿಗೆ ಬಂಡಾಯ ಎದುರಾಗಿತ್ತು.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ

ಆದರೆ, ಇದೀಗ ನಾಮಪತ್ರ ವಾಪಸ್ ಪಡೆಯುವ ಗಡುವಿನ ಒಳಗೇ ಬಹುತೇಕ ಎಲ್ಲಾ ಕ್ಷೇತ್ರಗಳ ಬಂಡಾಯ ಶಮನ ಮಾಡುವಲ್ಲಿ ಉಭಯ ಬಣಗಳೂ ಯಶಸ್ವಿಯಾಗಿವೆ. ಆದರೆ, ನೈರುತ್ಯ ಪದವೀಧರ ಕ್ಷೇತ್ರ ಬಂಡಾಯ ಶಮನ ಯತ್ನಗಳು ಕೂಡ ಫಲ ಕೊಟ್ಟಿಲ್ಲ. ಹಾಗಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ಬಂಡಾಯ ಅಭ್ಯರ್ಥಿ ಎಸ್ ಪಿ ದಿನೇಶ್ ಅವರ ಪೈಪೋಟಿ ಇದ್ದರೆ, ಬಿಜೆಪಿಯ ಅಧಿಕೃತ ಅಭ್ಯರ್ಥಿ ಡಾ ಧನಂಜಯ ಸರ್ಜಿ ಅವರಿಗೆ ಬಂಡಾಯ ಅಭ್ಯರ್ಥಿ ಕೆ ರಘುಪತಿ ಭಟ್ ಅವರು ಪೈಪೋಟಿ ನೀಡುತ್ತಿದ್ದಾರೆ.

ಉಳಿದಂತೆ ದಕ್ಷಿಣ ಶಿಕ್ಷಕರ ಕ್ಚೇತ್ರದಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾಗಿ ಕೆ ವಿವೇಕಾನಂದ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮೊದಲು ನಾಮಪತ್ರ ಸಲ್ಲಿಸಿದ್ದ ಇ ಸಿ ನಿಂಗರಾಜ ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾಗಿ ಎಸ್ ಎಲ್ ಭೋಜೇಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ ಕೆ ಮಂಜುನಾಥ್ ಕಣದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಮೇಶ್ ಶೆಟ್ಟಿ ಶಂಕರಘಟ್ಟ ನಾಮಪತ್ರ ವಾಪಸ್ ಪಡೆದಿದ್ದಾರೆ.

ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮೋಜಿ ಗೌಡ ಮತ್ತು ಬಿಜೆಪಿಯಿಂದ ಎ ದೇವೇಗೌಡ ಕಣದಲ್ಲಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದಿಂದ ಅಮರನಾಥ್ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ಮತ್ತು ಡಾ ಚಂದ್ರಶೇಖರ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎದುರಾಳಿಗಳಾಗಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ವೈ ಎ ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ನ ಕೆ ಬಿ ಶ್ರೀನಿವಾಸ್ ಕಣದಲ್ಲಿದ್ದಾರೆ.

ಜೂನ್ 6ರಂದು ಮತ ಎಣಿಕೆ

ಈಶಾನ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

Read More
Next Story