ಕಾಲೇಜಿನಲ್ಲೇ ಹೊಡೆದಾಡಿಕೊಂಡಿದ್ದ ಕೋಲಾರದ ಉಪನ್ಯಾಸಕರು ಅಮಾನತು
ಕಳೆದ ವಾರ ಕೋಲಾರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯೇ ಹೊಡೆದಾಡಿಕೊಂಡಿದ್ದ ಉಪನ್ಯಾಸಕರಾದ ನಾಗಾನಂದ ಕೆಂಪರಾಜು ಮತ್ತು ಜೆ ಜೆ ನಾಗರಾಜ್ ಅವರನ್ನು ಶಾಲಾ ಶಿಕ್ಷಣ ಇಲಾಖೆಯ(ಪದವಿ ಪೂರ್ವ) ನಿರ್ದೇಶಕಿ ಸಿಂಧು ಬಿ ರೂಪೇಶ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಆದೇಶ ಪತ್ರದಲ್ಲಿ ಏನಿದೆ?
ದಿನಾಂಕ 23-07-2024 ರಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಲಾರ ಈ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತಿಹಾಸ ಉಪನ್ಯಾಸಕ ನಾಗಾನಂದ ಕೆಂಪರಾಜ್, ಹಾಗೂ ಕನ್ನಡ ಉಪನ್ಯಾಸಕ ಜೆ.ಜಿ.ನಾಗರಾಜ್ ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಚಾರ್ಯರು ಜಿಲ್ಲಾ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ.
ಈ ಹಿಂದೆ 2021 ರಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ವೇಳೆ ಈ ಇಬ್ಬರು ಉಪನ್ಯಾಸಕರ ನಡುವೆ ಉಂಟಾದ ಮನಸ್ತಾಪದಿಂದ ಒಬ್ಬರ ವಿರುದ್ಧ ಮತ್ತೊಬ್ಬರು ಹಿಂದೆ ಹಲವು ಬಾರಿ ಕಚೇರಿಗೆ ದೂರನ್ನು ಸಲ್ಲಿಸಿದ್ದು ಈ ಇಬ್ಬರು ಉಪನ್ಯಾಸಕರಿಗೂ ನೋಟಿಸ್ ಜಾರಿ ಮಾಡಿ ಇನ್ನು ಮುಂದೆ ಈ ರೀತಿಯ ಯಾವುದೇ ದೂರುಗಳು ಬಂದಲ್ಲಿ ನಿಮ್ಮ ವಿರುದ್ಧ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದೆಂದು ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಆದರೂ ಸಹ ಈ ಇಬ್ಬರು ಉಪನ್ಯಾಸಕರ ವೈಯಕ್ತಿಕ ದ್ವೇಷದಿಂದಾಗಿ ಕಾಲೇಜಿನ ಶೈಕ್ಷಣಿಕ ಬೆಳವಣಿಗೆಗೆ ಧಕ್ಕೆಯನ್ನುಂಟು ಮಾಡುತ್ತಾ ಬಂದಿದ್ದಾರೆ. ಸುಮಾರು ಒಂದು ಸಾವಿರ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿನಲ್ಲಿ ಈ ಇಬ್ಬರು ಉಪನ್ಯಾಸಕರ ಕಿತ್ತಾಟದಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಕಾಲೇಜಿನ ಶೈಕ್ಷಣಿಕ ವಾತಾವರಣ ಹಾಳಾಗುತ್ತಿರುವುದರಿಂದ ಈ ಇಬ್ಬರು ಉಪನ್ಯಾಸಕರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿದಲ್ಲಿ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಉಪ ನಿರ್ದೇಶಕರು ವರದಿ ನೀಡಿದ್ದಾರೆ.
ಜಿಲ್ಲಾ ಉಪ ನಿರ್ದೇಶಕರ ವರದಿಯನ್ನು ಪರಿಶೀಲಿಸಿ, ಈ ಕಾಲೇಜಿನಲ್ಲಿ ಸುಮಾರು ಒಂದು ಸಾವಿರ ಹೆಣ್ಣುಮಕ್ಕಳು ವಿದ್ಯಾಭ್ಯಾಸ ವ್ಯಾಸಂಗ ಮಾಡುತ್ತಿದ್ದು, ಇಬ್ಬರು ಉಪನ್ಯಾಸಕರ ವರ್ತನೆಯಿಂದ ಕಾಲೇಜಿನ ಶೈಕ್ಷಣಿಕ ಚಟುವಟಿಕೆ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಕುಂಠಿತವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಇಬ್ಬರೂ ಉಪನ್ಯಾಸಕರನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಿ ಆದೇಶಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರು ವರ್ಗಾವಣೆ ಹೊಂದಿದ ಕಾಲೇಜಿನ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿ ಕರ್ತವ್ಯದಿಂದ ಬಿಡುಗಡೆ ಮಾಡಿರುತ್ತಾರೆ. ಆದರೆ ಉಪನ್ಯಾಸಕರು ಕಾಲೇಜಿನ ಕರ್ತವ್ಯಕ್ಕೆ ಹಾಜರಾಗದೇ ಬೇರೆ ಮೂಲಗಳಿಂದ ರಜೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇಬ್ಬರೂ ಉಪನ್ಯಾಸಕರು ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವ ಹಿನ್ನೆಲೆಯಲ್ಲಿ ಇವರುಗಳ ಮೇಲೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10 (1) (ಎ) ಗಳನ್ವಯ ಸೇವೆಯಿಂದ ಅಮಾನತುಗೊಳಿಸಲು ಇಲಾಖೆ ನಿರ್ಣಯಿಸಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನಿರ್ದೇಶಕಿ ಸಿಂಧು ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.
ಏನಿದು ಗಲಾಟೆ?
ಕೋಲಾರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜು.23ರಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಹಾಲಿ ರಾಜ್ಯಶಾಸ್ತ್ರ ಉಪನ್ಯಾಸಕ ನಾಗಾನಂದ ಕೆಂಪರಾಜು ಮತ್ತು ಕನ್ನಡ ಉನ್ಯಾಸಕ ಜೆ.ಜಿ ನಾಗರಾಜ್ ನಡುವೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆಯಲ್ಲಿ ನಾಗರಾಜ್ ಅವರ ಮುಖಕ್ಕೆ ಪೆಟ್ಟುಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.
“ತಮ್ಮ ಮೇಲೆ ಉಪನ್ಯಾಸಕ ನಾಗಾನಂದ ಕೆಂಪರಾಜು ಹಲ್ಲೆ ನಡೆಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೋತಿರುವ ನಾಗಾನಂದ, ದಿನನಿತ್ಯ ನನಗೆ ಹಿಂಸೆ ಕೊಡುತ್ತಿದ್ದರು. ಅವಹೇಳನಾಕಾರಿಯಾಗಿ ನಿಂದಿಸುತ್ತಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ, ಹಲ್ಲೆ ನಡೆಸಿದ್ದಾರೆ” ಎಂದು ನಾಗರಾಜ್ ಆರೋಪಿಸಿದ್ದರು.
ಮತ್ತೊಂದೆಡೆ ಉಪನ್ಯಾಸಕ ನಾಗಾನಂದ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು, ತನ್ನ ಮೇಲೆ ಮೊದಲು ನಾಗರಾಜ್ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದರು. ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.