ಮಸೀದಿ, ಮಂದಿರ ಬಿಟ್ಟು ಹೊರ ಬನ್ನಿ; ಸಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ- ಸಿಎಂ
x

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಮಸೀದಿ, ಮಂದಿರ ಬಿಟ್ಟು ಹೊರ ಬನ್ನಿ; ಸಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ- ಸಿಎಂ

ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲಾ ಹಾಗೂ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಕಡ್ಡಾಯವಾಗಿ ಓದುವಂತೆ ತಿಳಿಸಲಾಗಿದೆ. ಹಕ್ಕುಗಳ ಜೊತೆಗೆ ಜವಾಬ್ದಾರಿ ಕೂಡ ಹೆಚ್ಚಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


Click the Play button to hear this message in audio format

ನಾವು ಮನುಷ್ಯತ್ವ ಒಪ್ಪಿಕೊಳ್ಳುವುದಾದರೆ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅವರು ನಾಡ ಹಬ್ಬದ ಉದ್ಘಾಟನೆಯನ್ನು ಸ್ವಾಗತ ಮಾಡಬೇಕು. ಈ ನಾಡಿನ ಬಹುಸಂಖ್ಯಾತರು, ಮೈಸೂರಿನ ಅರಸರು ಈ ಹಬ್ಬವನ್ನು ಒಟ್ಟಾಗಿ ಆಚರಿಸಿಕೊಂಡು ಬಂದಿದ್ದಾರೆ. ಅದರ ಇತಿಹಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ತಿಳಿಸಿದಂತೆ ಯಾರಿಗೆ ಇತಿಹಾಸ ಗೊತ್ತಿರುವುದಿಲ್ಲವೋ ಅವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದರು.

ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲಾ ಹಾಗೂ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಕಡ್ಡಾಯವಾಗಿ ಓದುವಂತೆ ತಿಳಿಸಲಾಗಿದೆ. ಹಕ್ಕುಗಳ ಜೊತೆಗೆ ಜವಾಬ್ದಾರಿ ಕೂಡ ಹೆಚ್ಚಬೇಕು. ಮುಂದಿನ ಪೀಳಿಗೆಯನ್ನು ದಾರಿ ತಪ್ಪಿಸದೆ ಅವರಿಗೆ ಸಮಾಜವನ್ನು ಅರ್ಥಮಾಡಿಸಬೇಕು. ಇತಿಹಾಸವನ್ನು ಸ್ವಾರ್ಥಕ್ಕಾಗಿ ಅಥವಾ ರಾಜಕೀಯಕ್ಕಾಗಿ ಬಳಸಿಕೊಂಡರೆ ಅಕ್ಷಮ್ಯ ಅಪರಾಧ. ರಾಜಕೀಯವನ್ನು ಚುನಾವಣೆಯಲ್ಲಿ ಮಾಡೋಣ, ಯಾವುದೋ ದ್ವೇಷಕ್ಕೋಸ್ಕರ, ಓಲೈಕೆಗಾಗಿ ರಾಜಕೀಯ ಮಾಡಬಾರದು. ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ತಿಳಿಸಿದರು.

ಉದ್ಘಾಟನೆ ವಿರೋಧಿಸಿದವರಿಗೆ ಸುಪ್ರೀಂ ಪಾಠ

ದಸರಾ ಉದ್ಘಾಟನೆ ಕುರಿತು ಅರ್ಜಿ ಸಲ್ಲಿಸಿದವರಿಗೆ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ಸಂವಿಧಾನ ಪೀಠಿಕೆ ಓದಿ ಎಂದು ಸರಿಯಾದ ಪಾಠ ಹೇಳಿವೆ. ನಮ್ಮ ಸಂವಿಧಾನ ಜಾತ್ಯಾತೀತ, ಧರ್ಮಾತೀತವಾಗಿದೆ. ನಮ್ಮಲ್ಲಿ ಅನೇಕ ಜಾತಿ, ಧರ್ಮಗಳಿವೆ. ವೈವಿಧ್ಯತೆಯಲ್ಲಿ ಏಕತೆ ಸಾರಬೇಕು. ಯಾವುದೇ ಧರ್ಮಕ್ಕೇ ಸೇರಿದ್ದರೂ ನಾವೆಲ್ಲರೂ ಭಾರತೀಯರು ಎಂದು ತಿಳಿಯಬೇಕು. ಸಂವಿಧಾನಕ್ಕೆ ವಿರುದ್ದವಾಗಿರುವವರು ಮಾತ್ರ ಅದನ್ನು ತಿರುಚಿ ಹೇಳುತ್ತಾರೆ. ಇದು ಸಂವಿಧಾನ, ನಾಡು, ದೇಶಕ್ಕೆ ಮಾಡುವ ಅಪಚಾರ ಎಂದು ಹೇಳಿದರು.

ಸಹಿಷ್ಣುತೆ, ಸಹಭಾಳ್ವೆ ಇರಲಿ

ನಮ್ಮಲ್ಲಿ ಸಹಿಷ್ಣುತೆ, ಸಹಭಾಳ್ವೆ ಇರಬೇಕು. ಯಾವುದೇ ಧರ್ಮ , ಜಾತಿಗೆ ಇಲ್ಲಿ ಅಗ್ರಸ್ಥಾನವಿಲ್ಲ. ಎಲ್ಲರಿಗೂ ಸಮಾನ ಅವಕಾಶ ಎಂದು ಸಂವಿಧಾನ ಹೇಳುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೇ ಹೋದರೆ ಅದು ದೇಶಕ್ಕೆ ಮಾಡುವ ಅಪಚಾರ. ಆದ್ದರಿಂದ ಬಾನು ಮುಷ್ತಾಕ್‌ ಅವರು ಬೂಕರ್‌ ಪಡೆದು ನಾಡಿಗೆ ಗೌರವ ತಂದಿದ್ದಾರೆ. ಅವರು ದಸರಾ ಉದ್ಘಾಟನೆ ಮಾಡಿರುವುದು ಸರಿಯಾಗಿದೆ. ಅವರಿಗೆ ಸರ್ಕಾರದ ವತಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಮ್ಮ ಆಯ್ಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಮುಸ್ಲಿಂ ಲೇಖಕಿಯಾಗಿ ನಾಡಿಗೆ ಗೌರವ

ಬಾನು ಮುಷ್ತಾಕ್‌ ಈ ಸಂದರ್ಭಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಅವರ ಮಾತುಗಳು ಅವರನ್ನು ವಿರೋಧಿಸುವವರಿಗೆ ಕಣ್ಣುತೆರೆಸುವಂತಿವೆ. ದಲಿತ, ರೈತ ಸಂಘಟನೆ, ಸಾಹಿತ್ಯವಲಯದಲ್ಲಿ ಗುರುತಿಸಿಕೊಂಡಿರುವ ಅವರು, ಜನಪ್ರಿಯ ಹೋರಾಟಗಾರ್ತಿ ಹಾಗೂ ಮುಖ್ಯವಾಗಿ ಕನ್ನಡದ ಸಾಹಿತಿಯಾಗಿದ್ದಾರೆ. ಒಬ್ಬ ಮುಸ್ಲಿಂ ಮಹಿಳೆಯಾಗಿ, ಲೇಖಕಿಯಾಗಿ ನಾಡಿಗೆ ಗೌರವ ತಂದಿದ್ದಾರೆ. ಅವರ ಪುಸ್ತಕವನ್ನು ಭಾಷಾಂತರ ಮಾಡಿದ ದೀಪಾ ಬಾಸ್ತಿಯವರಿಗೂ ಸರ್ಕಾರದಿಂದ ಗೌರವಿಸಲಾಗಿದೆ ಎಂದರು.

ತಾರತಮ್ಯ ತೊಲಗಿಸಲು ಪಂಚಗ್ಯಾರಂಟಿ

ಈ ಬಾರಿ 11 ದಿನಗಳ ಕಾಲ ದಸರಾ ಮಹೋತ್ಸವ ನಡೆಯಲಿದ್ದು, ಅ. 2ರಂದು ಜಂಬೂ ಸವಾರಿ ನಡೆಯಲಿದೆ. ವಿಶೇಷವೆಂದರೆ ಮಹಾತ್ಮ ಗಾಂಧೀಜಿಯವರು ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ಮಾಡಿ 100 ವರ್ಷ ಪೂರೈಸಿದ್ದಕ್ಕಾಗಿ ಮೆರಗು ಹೆಚ್ಚಾಗಿದೆ. ನಾವು ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಸಮಾಜದಲ್ಲಿ ಇನ್ನು ಅಸಮಾನತೆ, ತಾರತಮ್ಯ ಇದೆ, ಅದನ್ನು ತೊಗಿಸಲು ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಬಿಜೆಪಿ, ಜೆಡಿಎಸ್‌ ಜನರೂ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಬಡವರಿಗೆ ಸಾಮಾಜಿಕವಾಗಿ ಶಕ್ತಿ ತುಂಬಲು ಈ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತೋದೆಯೋ ಅಲ್ಲಿವರೆಗೂ ಸಮಾಜದಲ್ಲಿ ದೌರ್ಜನ್ಯ ಇರುತ್ತದೆ. ಜಾತಿವ್ಯವಸ್ಥೆ ಹೋದಾಗ ಮಾತ್ರ ಸಮಾನತೆ ಬರುತ್ತದೆ ಎಂದು ತಿಳಿಸಿದರು.

ಕುವೆಂಪು ಕನಸು ಸಾಕಾರಗೊಳಿಸೋಣ

ರಾಷ್ಟ್ರಕವಿ ಕುವೆಂಪು ಅವರು ಸಮಾಜದಲ್ಲಿ ಅಂತ್ಯೋದಯದ ಕನಸು ಕಂಡಿದ್ದರು. ಎಲ್ಲಿಯವರೆಗೂ ಜಾತಿ ಹೋಗುವುದಿಲ್ಲವೋ ಅಲ್ಲಿವರೆಗೂ ಸಮನಸಮಾಜ ನಿರ್ಮಾಣವಾಗುವುದಿಲ್ಲ. ಎಲ್ಲರೂ ಮಸೀದಿ, ದೇವಲಾಯ , ಚರ್ಚ್‌ಗಳನ್ನು ಬಿಟು ಬನ್ನಿ. ಇದರಿಂದ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣವಾಗಲಿದೆ ಎಂದರು.

ಧರ್ಮ, ಜಾತಿ ಆಧಾರದಲ್ಲಿ ಯಾರೂ ಸಮಾಜ ಒಡೆಯಬಾರದು. ಸಮಸಮಾಜ ನಿರ್ಮಾಣವಾಗಬೇಕಾದರೆ ಬ್ರಾತೃತ್ವ ಭಾವನೆ ಬೆಳಸಿಕೊಳ್ಳಬೇಕು ಎಂದು ಸಂವಿಧಾನ ತಿಳಿಸಿದ್ದು, ಇದೇ ದಸರಾ ಸಂದೇಶವೂ ಆಗಿದೆ. ಆದ್ದರಿಂದಲೇ ಇದನ್ನು ಜನರ, ನಾಡಿನ, ಎಲ್ಲಾ ಧರ್ಮಗಳ ಹಬ್ಬ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ನಿಲ್ಲಲ್ಲ

ಗ್ಯಾರಂಟಿ ಯೋಜನೆ ಬಗ್ಗೆ ಕೆಲವರು ಕೊಂಕು ಮಾತುಗಳನ್ನು ಆಡಿದ್ದರು. ಇದಕ್ಕಾಗಿ ಸರ್ಕಾರ ಇಲ್ಲಿಯವರೆಗೂ ಸುಮಾರು 1 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಆದರೂ ರಾಜ್ಯ ದಿವಾಳಿ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ದುರ್ಬಲ, ದೀನ, ದಲಿತರ ಮನೆಗೆ ಪ್ರತಿ ತಿಂಗಳು ಸುಮಾರು 4-5 ಸಾವಿರ ರೂ. ನೀಡಲಾಗುತ್ತಿದೆ. ಇದರಿಂದ ಅವರ ಕೊಳ್ಳುವ ಶಕ್ತಿ ಹೆಚ್ಚಾಗಲಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, 500 ಕೋಟಿ ಗೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ. ಯೋಜನೆಗಳನ್ನು ವಿರೋಧಿಸುತ್ತಿದ್ದವರೇ ಇದೀಗ ಬೇರೆಡೆ ನಕಲು ಮಾಡುತ್ತಿದ್ದಾರೆ ಎಂದರು.

ತಲಾದಾಯದಲ್ಲಿ ನಾವೇ ಪ್ರಥಮ

ಗ್ಯಾರಂಟಿ ಯೋಜನೆಯಿಯಿಂದ ರಾಜ್ಯದ ತಲಾದಾಯ ಹೆಚ್ಚಳವಾಗಿದೆ. 2013-14 ರಲ್ಲಿ 1.1 ಲಕ್ಷ ರೂ. ತಲಾದಾಯ ಇದಿದ್ದು, 2024-25 ರಲ್ಲಿ 2.4 ಲಕ್ಷ ರೂ. ಗೆ ಹೆಚ್ಚಳವಾಗಿದೆ. ದೇಶದಲ್ಲೇ ರಾಜ್ಯ ತಲಾದಾಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರಿನ ಮಹಿಳೆಯರಲ್ಲಿ ಉದ್ಯೋಗ ಮಾಡುವವರ ಪ್ರಮಾಣ ಶೇ.23 ಬೆಳವಣಿಗೆಯಾಗಿದೆ. ಸರ್ಕಾರ ಜಾತ್ಯಾತೀತ ತತ್ವದಲ್ಲಿ, ಅಭ್ಯದಯದಲ್ಲಿ ನಂಬಿಕೆ ಇಟ್ಟಿದೆ. ದಸರಾ ಉದ್ಘಾಟನೆ ವಿರೋಧಿಸಿದವರೂ ಇದೀಗ ಮನಸ್ಸಿನಲ್ಲಿ ಖುಷಿಪಟ್ಟಿದ್ದಾರೆ ಎಂದು ತಿಳಿಸಿದರು.

Read More
Next Story