Manmohan Singh Passed Away : ಆರ್ಥಿಕ ಕ್ರಾಂತಿಯ ಹರಿಕಾರ ಮನ ಮೋಹನಸಿಂಗ್ ನಿಧನಕ್ಕೆ ರಾಜ್ಯದ ಗಣ್ಯರಿಂದ ಕಂಬನಿ
Manmohan Singh Passed Away ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ವಿವಿಧ ಪಕ್ಷಗಳ ನಾಯಕರು, ಮನಮೋಹನಸಿಂಗ್ ಅವರೊಂದಿಗೆ ಒಡನಾಟ ಹೊಂದಿದ್ದ ನಾಯಕರು ಸಂತಾಪ ಸೂಚಿಸಿದ್ದಾರೆ.
ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಅತೀವ ದುಃಖವಾಗಿದೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲ ಸ್ಮರಿಸಲೇಬೇಕು. ಯುಪಿಎ ಸರ್ಕಾರದ ಆಹಾರ ಹಕ್ಕು ಕಾಯ್ದೆಯು ನಮ್ಮ ನಾಡಿನ ಪ್ರಗತಿಯ ಹಾದಿಗೆ ಹೊಸ ಆಯಾಮ ಕಲ್ಪಿಸಿಕೊಟ್ಟಿದೆ. ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಒಬ್ಬ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ದೇಶ ದೊಡ್ಡ ಅರ್ಥಶಾಸ್ತ್ರಜ್ಞರನ್ನು ಕಳೆದುಕೊಂಡಿದೆ. ಮನಮೋಹನಸಿಂಗ್ ಅವರು ತಮ್ಮ ಪ್ರಾಮಾಣಿಕ ಆಡಳಿತದಿಂದಾಗಿ ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಸಾಧ್ಯವಾಯಿತು.
ಬಡವರಿಗಾಗಿ ನರೇಗಾ, ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು ಶ್ರಮಿಸಿದ್ದರು. ಎಲ್ಲ ವರ್ಗದ ಜನರ ಸುಧಾರಣೆಗಾಗಿ ಶ್ರಮಿಸಿದ್ದರು ಎಂದು ಶಿವಕುಮಾರ್ ಅಭಿಪ್ರಾಯಟ್ಟಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ ಮೇಲ್ಸೇತುವೆ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ರಸ್ತೆಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸಾಕಷ್ಟು ಅನುದಾನ ನೀಡಿದ್ದರು. ಕರ್ನಾಟಕ ಅಭಿವೃದ್ಧಿ ಬಗ್ಗೆ ವಿಶೇಷ ಕಳಕಳಿ ಹೊಂದಿದ್ದರು ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಮನಮೋಹನಸಿಂಗ್ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಆಹಾರ ಸಚಿವ ಕೆ. ಎಚ್.ಮುನಿಯಪ್ಪ ಕೂಡ ಸಂತಾ ಸೂಚಿಸಿದ್ದಾರೆ.
ಮನಮೋಹನಸಿಂಗ್ ಸಿಂಗ್ ಅವರು ಅತ್ಯಂತ ಮೇಧಾವಿಯಾಗಿದ್ದರು. ಕ್ರಾಂತಿಕಾರಕ ಆರ್ಥಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದರು. ನಾನು ೨೦೦೪ ರಿಂದ ೨೦೧೪ ರವೆರೆಗೆ ಅವರ ಸಂಪುಟದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಈ ದೇಶದ ಕಷ್ಟ ಕಾಲದಲ್ಲಿದ್ದ ಸಂದರ್ಭದಲ್ಲಿ ಅರ್ಥ ಸಚಿವರಾಗಿ, ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಕಾರಣಭೂತರಾದರು.
ಸರಳ ಸ್ವಭಾವದ ಅವರೊಂದಿಗೆ ಕೆಲಸ ಮಾಡಿದ್ದೆ ನನ್ನ ಪುಣ್ಯ. ನಾವು ಗಾಂಧೀಜಿ ಅವರನ್ನು ನೋಡಿರಲಿಲ್ಲ. ಆದರೆ, ಗಾಂಧೀಜಿ ವ್ಯಕ್ತಿತ್ವವನ್ನು ಮನಮೋಹನಸಿಂಗ್ ಅವರಲ್ಲಿ ಕಂಡಿದ್ದೇವೆ. ಅವರ ಸರಳ ಸಜ್ಜನಿಕೆ, ಪ್ರೀತಿ ವಾತ್ಸಲ್ಯ ಅಸಾಧಾರಣವಾದದು. ಸಹದ್ಯೋಗಿ ಸಚಿವವರಿಗೆ ಎಂದು ಆದೇಶ ಮಾಡುತ್ತಿರಲಿಲ್ಲ. ಸೌಮ್ಯದಿಂದ ಎಲ್ಲರ ಸಲಹೆ ಕೇಳುತ್ತಿದ್ದರು. ಮಂತ್ರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದರು. ಈಗ ಒಬ್ಬ ಅತ್ಯುತ್ತಮ ಅರ್ಥಶಾಸ್ತ್ರಜ್ಞರನ್ನು ದೇಶ ಕಳೆದುಕೊಂಡಿದೆ ಎಂದು ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ವಿತ್ತತಜ್ಞರು, ಆರ್ಥಿಕ ಸುಧಾರಣೆಗಳ ಹರಿಕಾರರೂ ಆಗಿದ್ದ ಡಾ.ಮನಮೋಹನ್ ಸಿಂಗ್ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು.
ದೂರದೃಷ್ಟಿ, ಸಂಯಮ ಮತ್ತು ತಮ್ಮ ಆರ್ಥಿಕ ಮೇದಸ್ಸಿನಿಂದ ರಾಷ್ಟ್ರವನ್ನು ದುರಿತ ಕಾಲದಲ್ಲಿ ಸಶಕ್ತವಾಗಿ ಮುನ್ನಡೆಸಿದ್ದ ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಆರ್ಥಿಕ ಸುಧಾರಣೆಗಳ ಮೂಲಕ ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟವರು ಅವರು. ಅವರ ಕೊಡುಗೆಗಳು ಚಿರಸ್ಮರಣೀಯ ಎಂದು ಬಣ್ಣಿಸಿದ್ದಾರೆ.
ಸಂಸದ ಬಸವರಾಜ ಬೊಮ್ಮಾಯಿ ಅವರು ಕೂಡ ಮಾಜಿ ಪ್ರಧಾನಿ ಮನಮೋಹನಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಭಾರತ ಆರ್ಥಿಕವಾಗಿ ಬೆಳೆಯಲು ಮನಮೋಹನ್ ಸಿಂಗ್ ಅವರು ಭದ್ರ ಬುನಾದಿ ಹಾಕಿದ್ದರು. ಆರ್ಥಿಕ ತಜ್ಞರಾಗಿ, ಪ್ರಧಾನಮಂತ್ರಿಯಾಗಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ದೇಶದ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ ತಂದಿದ್ದರು ಎಂದು ಸ್ಮರಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ವಿಶ್ವ ಸಂಸ್ಥೆ, ಐಎಂಎಫ್ ನಲ್ಲಿ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರಿಂದ ಈ ದೇಶವನ್ನು ಉಳಿಸಲು ಸಾಧ್ಯವಾಯಿತು. ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಕೆಲಸ ಮಾಡಿದ್ದು, ಈ ದೇಶದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಕಾರಣರಾಗಿದ್ದರು. ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ಈಗ ದೇಶ ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.