
ಸಾಂದರ್ಭಿಕ ಚಿತ್ರ
ದೇವದಾಸಿ ಮಕ್ಕಳಿಗೂ ಪಿತೃತ್ವ ಹಕ್ಕು: ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಜೈವಿಕ ತಂದೆಗೆ ತಪ್ಪದು ಡಿಎನ್ಎ ಅಗ್ನಿ ಪರೀಕ್ಷೆ
ಶೋಷಣೆಗೊಳಗಾದ ದೇವದಾಸಿ ಮಹಿಳೆಯರನ್ನು ಶೋಷಣೆಯಿಂದ ವಿಮೋಚನೆಗೊಳಿಸುವುದು, ಅವರ ಮಕ್ಕಳನ್ನು ಸಬಲೀಕರಣದ ಮೂಲಕ ಸಾಮಾಜಿಕ ನಿಷೇಧಗಳಿಂದ ಮುಕ್ತಗೊಳಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ.
ದೇವದಾಸಿ ಮಕ್ಕಳ ಹುಟ್ಟಿಗೆ ಕಾರಣವಾಗಿ ತಪ್ಪಿಸಿಕೊಳ್ಳುವವರಿಗೆ ಡಿಎನ್ಎ ಪರೀಕ್ಷೆ ಪ್ರಬಲ ಅಸ್ತ್ರವಾಗಿ ಕಾಡಲಿದೆ.
ದೇವದಾಸಿ ಮಕ್ಕಳ ಜೈವಿಕ ತಂದೆ ಗುರುತಿಸುವ ಪರಿಣಾಮಕಾರಿ ಮಸೂದೆ ರಾಜ್ಯದಲ್ಲಿ ಅಂಗೀಕಾರವಾಗಿದೆ. ಆ ಮೂಲಕ ದೇವದಾಸಿ ಮಹಿಳೆಯರು ಹಾಗೂ ಅವರ ಮಕ್ಕಳನ್ನು ಎಲ್ಲಾ ರೀತಿಯ ಶೋಷಣೆಯಿಂದ ಮುಕ್ತಗೊಳಿಸುವ, ಅವರನ್ನು ಸಬಲೀಕರಣದತ್ತ ಕೊಂಡೊಯ್ಯುವ, ಸಾಮಾಜಿಕ ನಿಷೇಧಗಳಿಂದ ಮುಕ್ತಗೊಳಿಸುವ ಉದ್ದೇಶವನ್ನು ಮಸೂದೆ ಒಳಗೊಂಡಿದೆ.
ದೇವದಾಸಿಗೆ ಜನಿಸಿದ ಮಗು ತನ್ನ ತಂದೆಯನ್ನು ಗುರುತಿಸುವ (ಪಿತೃತ್ವ) ಹಕ್ಕು ನೀಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದಕ್ಕಾಗಿ 'ಕರ್ನಾಟಕ -ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ- 2025' ಅಂಗೀಕರಿಸಿದೆ.
ಮಸೂದೆಯ ಅನುಕೂಲ ಏನು?
ಶೋಷಣೆಗೆ ಒಳಗಾದ ದೇವದಾಸಿ ಮಹಿಳೆಯರನ್ನು ಎಲ್ಲಾ ರೀತಿಯ ಶೋಷಣೆಯಿಂದ ವಿಮೋಚನೆ ಒದಗಿಸಲಿದೆ.
ದೇವದಾಸಿಯರ ಮಕ್ಕಳ ದಾಖಲೆ, ಅರ್ಜಿ ನಮೂನೆಗಳಲ್ಲಿ ತಂದೆಯ ಹೆಸರಿನ ಅಗತ್ಯವನ್ನು ತೆಗೆದುಹಾಕಲಿದೆ. ದೇವದಾಸಿಯ ಮಕ್ಕಳಿಗೆ ಅಗತ್ಯವಿದ್ದರೆ, ಅವರ ತಂದೆಯ ಹೆಸರಿನ ಬದಲು ತಾಯಿಯ ಹೆಸರನ್ನು ಬರೆಸಲು ಅವಕಾಶ ನೀಡಲಾಗಿದೆ.
ಇನ್ನು ಮಸೂದೆಯಲ್ಲಿ ತರುವ ವಿಶೇಷ ಕಾನೂನಿನಡಿ ದೇವದಾಸಿ ಮಕ್ಕಳ ಜೈವಿಕ ತಂದೆಯನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಪಿತೃತ್ವದ ನಿರ್ಣಾಯಕ ಪುರಾವೆಗಳನ್ನು ಒದಗಿಸುತ್ತದೆ. ಸಂತ್ರಸ್ಥರಿಗೆ ಪರಿಣಾಮಕಾರಿ ಮತ್ತು ಸಮಗ್ರ ಪುನರ್ವಸತಿಗೆ ಅನುಕೂಲ ಕಲ್ಪಿಸಲಿದೆ. ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಕ್ರಮಗಳನ್ನು ಉತ್ತೇಜಿಸಲಿದೆ.
ಪಿತೃತ್ವ ಹಕ್ಕು ಸಾಬೀತು ಹೇಗೆ?
ದೇವದಾಸಿಗೆ ಜನಿಸಿದ ಯಾವುದೇ ಮಗುವು ತಂದೆಯ ಗುರುತು ಖಚಿತಪಡಿಸಿಕೊಳ್ಳುವ ಹಕ್ಕನ್ನು ವಿಧೇಯಕ ಕಲ್ಪಿಸಿದೆ. ದೇವದಾಸಿ ಮಕ್ಕಳ ತಂದೆಯ ಬಂಧದ ಮಾನ್ಯತೆಗಾಗಿ ತಾಲ್ಲೂಕು ಸಮಿತಿಗೆ ಅರ್ಜಿ ಸಲ್ಲಿಸಬಹುದು. ಜೈವಿಕ ತಂದೆ ಒಪ್ಪಿಕೊಂಡರೆ ಆ ಬಗ್ಗೆ ಲಿಖಿತವಾಗಿ ಜಿಲ್ಲಾ ಸಮಿತಿಯ ಮುಂದೆ ಅರ್ಜಿ ಸಲ್ಲಿಸಬಹುದು. ಅಲ್ಲಿ ತಂದೆ ಮತ್ತೊಮ್ಮೆ ಬಹಿರಂಗವಾಗಿ ಮತ್ತು ಲಿಖಿತವಾಗಿ ಅಂತಹ ಸಂಬಂಧ ಒಪ್ಪಿಕೊಳ್ಳಬೇಕು. ತಂದೆಯು ಒಪ್ಪಿಕೊಳ್ಳಲು ನಿರಾಕರಿಸಿದರೆ ಮಕ್ಕಳು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮಗುವು ತನ್ನ ಜೈವಿಕ ತಂದೆ ಎಂದು ಭಾವಿಸುವ ವ್ಯಕ್ತಿಯ ಪಿತೃತ್ವ ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಡಿಎನ್ಎ ಪರೀಕ್ಷೆಗೆ ಆದೇಶಿಸಲಿದೆ. ಮಗುವಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಚಿತ ಕಾನೂನು ನೆರವು ಒದಗಿಸಬೇಕು.
ದೇವದಾಸಿಯ ಮಗು ಕಾನೂನಿನ ಅಡಿಯಲ್ಲಿ ಜೀವನಾಂಶ ಪಡೆಯಲು ಹಕ್ಕು ಹೊಂದಿರುತ್ತದೆ. ಅಂತಹ ಅರ್ಜಿಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸುವ ಸಾಕ್ಷ್ಯಗಳು ಮತ್ತು ಸಂದರ್ಭಗಳ ಆಧಾರದಲ್ಲಿ ಪರಿಗಣಿಸಲಾಗುತ್ತದೆ. ಗಂಡು ಹಾಗೂ ಹೆಣ್ಣು ಮಗುವು ಪ್ರೌಢಾವಸ್ಥೆವರೆಗೆ ಅಥವಾ ವಿವಾಹವಾಗುವವರೆಗೆ ಜೀವನಾಂಶದ ಹಕ್ಕು ಪಡೆಯಬಹುದು. ಪುನರ್ವಸತಿ ಪ್ರಕ್ರಿಯೆಯಡಿ ದೇವದಾಸಿ ಕುಟುಂಬಕ್ಕೆ ಎಲ್ಲ ಅಗತ್ಯ ಮೂಲಸೌಲಭ್ಯಗಳಿರುವ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಯಾವ ಜಿಲ್ಲೆಯಲ್ಲಿ ದೇವದಾಸಿಯರು ಇದ್ದಾರೆ?
ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚು ದೇವದಾಸಿಯರು ದ್ದಾರೆ.
ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರವು ಈ ಮಸೂದೆಯನ್ನು ಸಿದ್ದಪಡಿಸಿದೆ. 20 ಇಲಾಖೆಗಳ ಜತೆಗೆ ಸಮಾಲೋಚನೆ ನಡೆಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಸೂದೆಗೆ ಅಂತಿಮ ರೂಪ ನೀಡಿದೆ.
ಮಸೂದೆಯಲ್ಲಿ ಶಿಕ್ಷೆ ಮತ್ತು ದಂಡ
ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ಬಳಿಕ ದೇವದಾಸಿಯಾಗಿ ಮಹಿಳೆಯನ್ನು ಅರ್ಪಿಸುವ ಯಾವುದೇ ಸಮಾರಂಭ ಅಥವಾ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಒಂದು ವೇಳೆ ದೇವದಾಸಿಯಾಗಿ ಮಹಿಳೆಯನ್ನು ಅರ್ಪಿಸುವ ಕಾರ್ಯಕ್ರಮ ನಿರ್ವಹಿಸಲು, ಅನುಮತಿಸಲು, ಭಾಗವಹಿಸಲು ಅಥವಾ ಪ್ರಚೋದಿಸಲು ಯಾರು ಅನುಮತಿ ನೀಡುತ್ತಾರೊ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸಮಾರಂಭ ಅಥವಾ ಕೃತ್ಯವನ್ನು ಎಸಗುತ್ತಾರೊ ಅದನ್ನು ಅಪರಾಧವೆಂದು ಪರಿಗಣಿಸಿ ಎರಡು ವರ್ಷದಿಂದ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ಗಿಂತ ಕಡಿಮೆ ಇಲ್ಲದಂತೆ ದಂಡ ವಿಧಿಸಲು ಅವಕಾಶ ಆಗಲಿದೆ.
ದೇವದಾಸಿ ಪದ್ಧತಿಯನ್ನು ಉತ್ತೇಜಿಸಿದರೆ ಅಥವಾ ಪ್ರಚಾರ ಮಾಡಿದರೆ ಒಂದು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50 ಸಾವಿರ ರೂ.ಗಿಂತ ಕಡಿಮೆ ಇಲ್ಲದಂತೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು.
ಒಮ್ಮೆ ಶಿಕ್ಷೆಗೆ ಒಳಗಾಗಿರುವವರು ಅಪರಾಧ ಪುನರಾವರ್ತಿಸಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ವಿವರಿಸಲಾಗಿದೆ.
ತಾಲೂಕು ಜಾಗೃತಿ ಮತ್ತು ಅನುಷ್ಠಾನ ಸಮಿತಿ
ರಾಜ್ಯದ ಪ್ರತಿ ತಾಲೂಕಿನಲ್ಲಿ ತಾಲೂಕು ಜಾಗೃತಿ ಮತ್ತು ಅನುಷ್ಠಾನ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿಯ ಸದಸ್ಯರ ನೇಮಕಾತಿಯು ಮೂರು ವರ್ಷಗಳ ಅವಧಿಯಲ್ಲಿರುತ್ತದೆ. ತಹಶೀಲ್ದಾರ್ ಸಮಿತಿ ಅಧ್ಯಕ್ಷರಾಗಿರುತ್ತಾರೆ. ದೇವದಾಸಿ ಸಮುದಾಯಕ್ಕೆ ಸೇರಿದ ನಾಲ್ವರು ವ್ಯಕ್ತಿಗಳು ಇರಬೇಕು. ಇದರಲ್ಲಿ ದೇವದಾಸಿಯ ಇಬ್ಬರು ಮಕ್ಕಳು ಇರಲಿದ್ದು, ಒಬ್ಬರು ಗಂಡು, ಮತ್ತೊಬ್ಬರು ಮಹಿಳೆ ಇರಬೇಕು ಎಂದು ತಿಳಿಸಲಾಗಿದೆ. ತಾಲೂಕು ಮಟ್ಟದಲ್ಲಿನ ಅತ್ಯಂತ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ನೋಡಲ್ ಅಧಿಕಾರಿ, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಸಮಿತಿಯ ಸದಸ್ಯರಾಗಿರುತ್ತಾರೆ.
ಜಿಲ್ಲಾ ಜಾಗೃತಿ ಮತ್ತು ಅನುಷ್ಠಾನ ಸಮಿತಿ
ಜಿಲ್ಲಾಮಟ್ಟದಲ್ಲಿ ಜಿಲ್ಲಾ ಜಾಗೃತಿ ಮತ್ತು ಅನುಷ್ಠಾನ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯ ಸದಸ್ಯರ ಅವಧಿಯು ಮೂರು ವರ್ಷಗಳಾಗಿರುತ್ತದೆ. ಜಿಲ್ಲಾಧಿಕಾರಿ ಸಮಿತಿಯ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮಿತಿಯ ಉಪಾಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರಾಭಿವೃದ್ಧಿ ಇಲಾಖೆ , ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಇಲಾಖೆ, ಆರೋಗ್ಯ ಇಲಾಖೆ ಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸದಸ್ಯರಾಗಿರುತ್ತಾರೆ. ಈ ಸಮಿತಿಯಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲಿದೆ.
ರಾಜ್ಯ ಜಾಗೃತಿ ಮತ್ತು ಅನುಷ್ಠಾನ ಸಮಿತಿ
ರಾಜ್ಯ ಮಟ್ಟದಲ್ಲಿ ರಾಜ್ಯ ಜಾಗೃತಿ ಮತ್ತು ಅನುಷ್ಠಾನ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಸಮಿತಿಯ ಸದಸ್ಯರು ಮೂರು ವರ್ಷಗಳ ಅವಧಿವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಉಪಾಧ್ಯಕ್ಷರಾಗಿರುತ್ತಾರೆ. ವಿವಿಧ ಇಲಾಖೆಯ ಪ್ರತಿನಿಧಿಗಳು, ಪೊಲೀಸ್ ಮಹಾ ನಿರ್ದೇಶಕರು, ದೇವದಾಸಿ ಹೆಣ್ಣು ಮಕ್ಕಳು ಸದಸ್ಯರಾಗಿರುತ್ತಾರೆ. ರಾಜ್ಯ ಸಮಿತಿಯು ಎರಡು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ.