Law and Order Collapse | ಕುಸಿದುಬಿದ್ದ ಕಾನೂನು-ಸುವ್ಯವಸ್ಥೆ: ಏನಾಗುತ್ತಿದೆ ರಾಜ್ಯದಲ್ಲಿ?
x
ಒಂದೇ ವಾರದಲ್ಲಿ ಸರಣಿ ದರೋಡೆ, ಅತ್ಯಾಚಾರ, ಹಲ್ಲೆ ಪ್ರಕರಣಗಳು ಜನರನ್ನು ಕಂಗೆಡಿಸಿವೆ

Law and Order Collapse | ಕುಸಿದುಬಿದ್ದ ಕಾನೂನು-ಸುವ್ಯವಸ್ಥೆ: ಏನಾಗುತ್ತಿದೆ ರಾಜ್ಯದಲ್ಲಿ?

ಒಂದು ಕಡೆ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ʼಗಾಂಧಿ ಭಾರತʼ ಆಂದೋಲನದ ಅಂಗವಾಗಿ ʼಜೈ ಬಾಪು, ಜೈ ಭೀಮ್‌, ಜೈ ಸಂವಿಧಾನʼ ಎಂಬ ಘೋಷಣೆಯಡಿ ಕಾರ್ಯಕ್ರಮದಲ್ಲಿ ಮುಳುಗಿರುವಾಗಲೇ ಇತ್ತ ರಾಜ್ಯದ ಮೂಲೆಮೂಲೆಯಲ್ಲಿ ದರೋಡೆ, ಅತ್ಯಾಚಾರ, ಅಮಾನುಷ ಹಲ್ಲೆ ಮುಂತಾದ ಭೀಕರ ಅಪರಾಧ ಪ್ರಕರಣಗಳು ಸದ್ದು ಮಾಡುತ್ತಿವೆ.


ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಸರಣಿ ದರೋಡೆ, ಸಾಮೂಹಿಕ ಅತ್ಯಾಚಾರ, ಹಲ್ಲೆ ಘಟನೆಗಳು ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿವೆ. ಬ್ಯಾಂಕ್‌ ದರೋಡೆ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಐದಾರು ವರ್ಷದ ಮಕ್ಕಳ ಮೇಲೆ ಅತ್ಯಾಚಾರ, ಕೂಲಿ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆ, ಹೀಗೆ ರಾಜ್ಯದಲ್ಲಿ ಕೇವಲ ಒಂದೇ ವಾರದಲ್ಲಿ ನಡೆದಿರುವ ಹೇಯ ಅಪರಾಧ ಪ್ರಕರಣಗಳು ರಾಜ್ಯದ ಪೊಲೀಸ್‌ ವ್ಯವಸ್ಥೆಯ ಮೇಲೆಯೇ ಅಪನಂಬಿಕೆ ಹುಟ್ಟಿಸಿವೆ.

ಮಂಗಳೂರು, ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಬ್ಯಾಂಕ್‌ ದರೋಡೆ, ರಸ್ತೆ ಡಕಾಯಿತಿ ಪ್ರಕರಣಗಳು ಕೇವಲ ಒಂದೆರಡು ದಿನಗಳ ಅಂತರದಲ್ಲೇ ನಡೆದು ಜನರನ್ನು ಬೆಚ್ಚಿಬೀಳಿಸಿದ್ದರೆ, ಸಿಲಿಕಾನ್‌ ಸಿಟಿಯಲ್ಲೇ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ವರದಿಯಾಗಿದೆ. ಈ ನಡುವೆ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಪೈಶಾಚಿಕ ಅತ್ಯಾಚಾರ ನಡೆದಿರುವ ಪ್ರಕರಣಗಳು, ಮತ್ತು ದಲಿತ ಸಮುದಾಯದ ಬಡ ಕೂಲಿಕಾರ್ಮಿಕರ ಕಣ್ಣಿಗೆ ಕಾರದಪುಡಿ ಎರಚಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಗಳೂ ಒಂದರ ಹಿಂದೆ ಒಂದರಂತೆ ಜನರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆಯೇ? ಎಂಬ ಆತಂಕ ಹುಟ್ಟಿಸಿವೆ.

ಒಂದು ಕಡೆ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ʼಗಾಂಧಿ ಭಾರತʼ ಆಂದೋಲನದ ಅಂಗವಾಗಿ ʼಜೈ ಬಾಪು, ಜೈ ಭೀಮ್‌, ಜೈ ಸಂವಿಧಾನʼ ಎಂಬ ಘೋಷಣೆಯಡಿ ಕಾರ್ಯಕ್ರಮದಲ್ಲಿ ಮುಳುಗಿರುವಾಗಲೇ ಇತ್ತ ರಾಜ್ಯದ ಮೂಲೆಮೂಲೆಯಲ್ಲಿ ದರೋಡೆ, ಅತ್ಯಾಚಾರ, ಅಮಾನುಷ ಹಲ್ಲೆ ಮುಂತಾದ ಭೀಕರ ಅಪರಾಧ ಪ್ರಕರಣಗಳು ಸದ್ದು ಮಾಡುತ್ತಿವೆ.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂಬ ಪ್ರತಿಪಕ್ಷಗಳ ವ್ಯಾಪಕ ಟೀಕೆಗೆ ಕಾರಣವಾಗಿರುವ ಕಳೆದ ವಾರ ಒಂದರಲ್ಲೇ ರಾಜ್ಯದಲ್ಲಿ ವರದಿಯಾಗಿರುವ ಸರಣಿ ಹೇಯ ಅಪರಾಧ ಪ್ರಕರಣಗಳು ಪಟ್ಟಿ ಇಲ್ಲಿದೆ...

ಬೀದರ್‌ ದರೋಡೆ ಪ್ರಕರಣ

ಜನವರಿ 16: ಬೀದರ್‌ನಲ್ಲಿ ಕಳೆದ ವಾರ ನಡುಹಗಲಲ್ಲೇ ನಡೆದ ಭೀಕರ ದರೋಡೆ ಪ್ರಕರಣ ಇದು. ದರೋಡೆಕೋರರು ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು ಒಂದು ಕೋಟಿ ರೂ. ನಗದು ದರೋಡೆ ಮಾಡಿದ್ದಾರೆ.

ಜ.16ರಂದು ಬೀದರ್ ಶಿವಾಜಿ ಚೌಕದಲ್ಲಿ ಬೈಕಿನಲ್ಲಿ ಬಂದ ದರೋಡೆಕೋರರು ಎಟಿಎಂಗೆ ಹಣ ತುಂಬಿಸುವ ವಾಹನದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಸಿಬ್ಬಂದಿಗಳಾದ ಚಿದ್ರಿ ಗ್ರಾಮದ ನಿವಾಸಿ ಗಿರೀಶ್ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ದರೋಡೆಕೋರರು 93 ಲಕ್ಷ ರೂಪಾಯಿ ಹಣ ಇದ್ದ ನಗದು ಬಾಕ್ಸ್‌ಗಳೊಂದಿಗೆ ಪರಾರಿಯಾಗಿದ್ದಾರೆ. ಬಿಹಾರ ಮೂಲದ ಅಮಿತ್ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಬಿಹಾರದ ಮನೀಶ್ ಶೂಟ್ ಮಾಡಿ ದರೋಡೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಮಿತ್ ಗ್ಯಾಂಗ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈವರೆಗೆ ದರೋಡೆಕೋರರನ್ನು ಪತ್ತೆ ಮಾಡುವುದು ಸಾಧ್ಯವಾಗಿಲ್ಲ.

ಬೀದರ್‌ನಲ್ಲಿ ಹಾಡುಹಗಲೇ ದರೋಡೆ

ಬೀದರ್‌ನಲ್ಲಿ ಹಾಡುಹಗಲೇ ದರೋಡೆ

ಮಂಗಳೂರಿನ ಬ್ಯಾಂಕ್‌ ದರೋಡೆ

ಜನವರಿ 17: ಬೀದರ್‌ ಘಟನೆ ನಡೆದ ಮರುದಿನವೇ ಮಂಗಳೂರಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ನಿಯಮಿತದ ಬ್ಯಾಂಕಿಗೆ ನುಗ್ಗಿದ ದುಷ್ಕರ್ಮಿಗಳು ಬಂದೂಕು ತೋರಿಸಿ ನಗದು, ಚಿನ್ನ ದರೋಡೆ ಮಾಡಿದ ಘಟನೆ ನಡೆದಿದೆ.

ಶಸ್ತ್ರಸಜ್ಜಿತ ಐದು ಮಂದಿ ಆಗಂತುಕರು ಫಿಯೆಟ್ ಕಾರಿನಲ್ಲಿ ಬಂದು 12 ಕೋಟಿ ರೂ. ಮೌಲ್ಯದ ನಗದು, ಚಿನ್ನ ದರೋಡೆ ಮಾಡಿದ್ದಾರೆ. ಉಳ್ಳಾಲ ತಾಲೂಕಿನ ಕೆ.ಸಿ.ರೋಡ್ ಶಾಖೆಯ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರ ಹಾಗೂ ಬಂದೂಕು ತೋರಿಸಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ತಿರುನಲ್ವೇಲಿ ಬಳಿ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ. ಆದರೆ, ಬ್ಯಾಂಕಿನ ಸ್ಟ್ರಾಂಗ್‌ ರೂಂ ತೆರೆಯುವ ಸಮಯದಲ್ಲೇ ಯಾಕೆ ಬ್ಯಾಂಕಿನ ಮುಖ್ಯದ್ವಾರವನ್ನು ತೆರೆದಿಡಲಾಗಿತ್ತು? ಅದೇ ಹೊತ್ತಿಗೆ ಯಾಕೆ ಸಿಸಿಟಿವಿ ದುರಸ್ತಿಗೆ ಬಂದಿತ್ತು? ಸಿಎಂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸರು ಬ್ಯುಸಿಯಾಗಿರುವ ದಿನವೇ ಈ ಕೃತ್ಯ ನಡೆಸಲು ಹೊಂಚಿದ ಹಿಂದಿನ ಶಕ್ತಿಗಳು ಯಾವುವು? ಎಂಬ ಮಾಹಿತಿಗಳು ತನಿಖೆಯಿಂದ ಹೊರಬರಬೇಕಿದೆ.

ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು

ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು

ಮೈಸೂರಿನಲ್ಲಿ ರಸ್ತೆ ದರೋಡೆ

ಜನವರಿ 20: ಬೀದರ್‌ ಮತ್ತು ಮಂಗಳೂರಿನ ಆತಂಕಕಾರಿ ಸರಣಿ ದರೋಡೆಗಳ ಬೆನ್ನಲ್ಲೇ ಮೈಸೂರಿನಲ್ಲಿ ಹಾಡಹಗಲೇ ರಸ್ತೆ ದರೋಡೆ ಕೂಡ ನಡೆದಿದೆ.

ಮೈಸೂರಿನ ಎಚ್.ಡಿ.ಕೋಟೆ ರಸ್ತೆಯ ಹಾರೋಹಳ್ಳಿ ಬಳಿ ಸೋಮವಾರ(ಜ.20) ಬೆಳಿಗ್ಗೆ ಕೇರಳ ಮೂಲದ ಉದ್ಯಮಿ ಅಶ್ರಫ್ ಅಹಮ್ಮದ್ ಹಾಗೂ ಅವರ ಕಾರು ಚಾಲಕ ಸೂಫಿ ಎಂಬುವವರು ಚಲಿಸುತ್ತಿದ್ದ ಕಾರನ್ನು, ಎರಡು ಕಾರುಗಳಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿ ಕಾರಿನಿಂದ ಅವರನ್ನು ಕೆಳಗಿಳಿಸಿ, ಹಲ್ಲೆ ಮಾಡಿ ಹಣದ ಸಮೇತ ಕಾರನ್ನೂ ಅಪಹರಿಸಿದ್ದಾರೆ. ಬಳಿಕ ಸುಮಾರು 12 ಕಿ.ಮೀ. ದೂರದಲ್ಲಿ ಉದ್ಯಮಿಯ ಕಾರನ್ನು ಬಿಟ್ಟು, ಅದರಲ್ಲಿದ್ದ 1.5 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ದರೋಡೆ ಪ್ರಕರಣ ಸಂಬಂಧ ಮೈಸೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಮೂರು ತಂಡ ರಚಿಸಿ ತನಿಖೆ ಆರಂಭಿಸಿದ್ದು, ಉದ್ಯಮಿ ಹಾಗೂ ದರೋಡೆಕಾರರ ಕಾರುಗಳು ಪತ್ತೆಯಾಗಿದ್ದು, ದರೋಡೆಕಾರರು ಇನ್ನೂ ಪತ್ತೆಯಾಗಬೇಕಿದೆ.

ಹಾಡುಹಗಲೇ ಉದ್ಯಮಿಯ ಕಾರು ಅಡ್ಡಗಟ್ಟಿ ಹಣ ಲೂಟಿ ಮಾಡಿದ್ದಾರೆ.

ಹಾಡುಹಗಲೇ ಉದ್ಯಮಿಯ ಕಾರು ಅಡ್ಡಗಟ್ಟಿ ಹಣ ಲೂಟಿ ಮಾಡಿದ್ದಾರೆ.

ಎಟಿಎಂ​ಗೆ ಹಣ ತುಂಬದೆ ವಂಚನೆ

ಜನವರಿ 17: ಸರಣಿ ಬ್ಯಾಂಕ್‌ ದರೋಡೆ ಘಟನೆಗಳ ನಡುವೆ ಮೈಸೂರಿನಲ್ಲಿ ಎಟಿಎಂಗೆ ಹಣ ತುಂಬುವ ಕೆಲಸ ಮಾಡುತ್ತಿದ್ದವನೇ ಲಕ್ಷಾಂತರ ರೂ. ಹಣವನ್ನು ದೋಚಿದ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ತುರಗನೂರು ಗ್ರಾಮದ ಅಕ್ಷಯ್ ಎಂಬ ಯುವಕ ಕಳೆದ‌ ಮೂರು ತಿಂಗಳಿನಿಂದ ಟಿಎಲ್​​ಎಂಟರ್ ಪ್ರೈಸಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಬ್ಯಾಂಕ್ ನ ಎಟಿಎಂ ಗಳಿಗೆ ಹಣ ತುಂಬುವುದು ಅಕ್ಷಯ್​​ನ ಕೆಲಸವಾಗಿತ್ತು. ಸಂಸ್ಥೆ ಆಡಿಟ್ ಮಾಡಿಸಿದಾಗ ಅಕ್ಷಯ್ ಸುಮಾರು 5 ಲಕ್ಷಕ್ಕೂ ಹೆಚ್ಚು ಹಣವನ್ನು ಎಟಿಎಂಗಳಿಗೆ ತುಂಬಿಸದೇ ಲಪಟಾಯಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಗದ್ದಿಗೆ ಗ್ರಾಮದ ಬಳಿಯ ಎಟಿಎಂಗೆ ಹಣ ಹಾಕದೆ 5.80 ಲಕ್ಷ ರೂ ಹಣವನ್ನು ಅಕ್ಷಯ್ ತೆಗೆದುಕೊಂಡು ಹೋಗಿದ್ದು ಗೊತ್ತಾಗಿದೆ. ಆತ ಹಣ ತೆಗೆದುಕೊಂಡು ಹೋದ ವಿಡಿಯೋ ಎಟಿಎಂ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.‌ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಬ್ಯಾಂಕ್‌ ದರೋಡೆಗೆ ಯತ್ನ

ಜನವರಿ 19 : ಮಂಗಳೂರು ಮತ್ತು ಬೀದರ್‌ ಬ್ಯಾಂಕ್‌ ದರೋಡೆ ಪ್ರಕರಣಗಳ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿಯೂ ಬ್ಯಾಂಕ್‌ ಗೇಟ್‌ ಮುರಿದು ಲೂಟಿ ಮಾಡುವ ಯತ್ನ ನಡೆದಿದೆ.

ಹುಬ್ಬಳ್ಳಿ ಎಪಿಎಂಸಿಯಲ್ಲಿರುವ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ. ಬ್ಯಾಂಕಿನ ಮುಖ್ಯದ್ವಾರದ ಬಾಗಿಲು ಮುರಿದು, ಬೀಗ ಕಟ್‌ ಮಾಡಿರುವ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದಾರೆ. ಭಾನುವಾರ(ಜ.19) ರಾತ್ರಿ ಕೆನರಾ‌ ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾರೆ. ಬ್ಯಾಂಕ್​ನ ಶೆಲ್ಟರ್ ಬೀಗ ಮುರಿದು ಕನ್ನ ಹಾಕಲು ಯತ್ನಿಸಿದ್ದು, ಆದರೆ, ದುಷ್ಕರ್ಮಿಗಳ ಯತ್ನ ಫಲ ಕೊಟ್ಟಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ಬ್ಯಾಂಕಿನ ಮುಖ್ಯದ್ವಾರದ ಬಾಗಿಲು ಮುರಿದು, ಬೀಗ ಕಟ್‌ ಮಾಡಿರುವ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದಾರೆ.

ಬ್ಯಾಂಕಿನ ಮುಖ್ಯದ್ವಾರದ ಬಾಗಿಲು ಮುರಿದು, ಬೀಗ ಕಟ್‌ ಮಾಡಿರುವ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದಾರೆ.

ಕೂಲಿ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆ

ಜನವರಿ 16: ರಜೆ ತೆಗೆದುಕೊಂಡು ಹೋದವರು ತಡವಾಗಿ ವಾಪಸ್‌ ಬಂದರು ಎಂಬ ಕಾರಣಕ್ಕೆ ಇಟ್ಟಿಗೆ ಭಟ್ಟಿ ಮಾಲೀಕನೊಬ್ಬ ಮೂವರು ದಲಿತ ಕೂಲಿ ಕಾರ್ಮಿಕರ ಮೇಲೆ ಪೈಶಾಚಿಕ ಹಲ್ಲೆ ನಡೆಸಿದ ಭೀಕರ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಮಖಂಡಿ ತಾಲೂಕಿನ ಮೂವರು ಕಾರ್ಮಿಕರಾದ ಉಮೇಶ ಮಾದರ, ಸದಾಶಿವ ಮಾದರ, ಸದಾಶಿವ ಬಬಲಾದಿ ಎಂಬುವರು ಜನವರಿ ಮೊದಲ ವಾರ ಸಂಕ್ರಾಂತಿ ಜಾತ್ರೆಗೆಂದು ಊರಿಗೆ ಹೋಗಿದ್ದರು. ಆದರೆ, ಅವರು ವಾಪಸ್ ಜ.16ರಂದು ಬಂದಾಗ ಇಷ್ಟೊಂದು ದಿನ ಯಾಕೆ ಊರಿಗೆ ಹೋಗಿದ್ದೀರಿ ಎಂದು ಕುಪಿತಗೊಂಡ ಮಾಲೀಕ ಖೇಮು ರಾಠೋಡ ಎಂಬಾತ ರೋಹನ್ ಖೇಮು ರಾಠೋಡ ಮತ್ತು ಕನಕಮೂರ್ತಿ ಗೋಂಧಳಿ, ಸಚಿನ ಮಾನವರ, ವಿಶಾಲ ಜುಮನಾಳ ಎಂಬವರೊಂದಿಗೆ ಸೇರಿ, ಬಡ ಕೂಲಿಗಳ ಕಣ್ಣಿಗೆ ಕಾರದ ಪುಡಿ ಎರಚಿ, ಕಾಲುಗಳನ್ನು ಕಟ್ಟಿ, ಅಂಗಾಲಿಗೆ ಕಬ್ಬಿಣದ ಪೈಪು, ರಾಡುಗಳಿಂದ ಅಮಾನುಷವಾಗಿ ಥಳಿಸಿದ್ದಾನೆ. ಈ ಘಟನೆಯ ವಿಡಿಯೋ ಮಾಡಿದ್ದ ಇತರೆ ಕೂಲಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆ ಮೂಲಕ ಘಟನೆ ಬೆಳಕಿಗೆ ಬಂದಿದೆ.

ಕಾರ್ಮಿಕರಿಗೆ ಮನಸೋಇಚ್ಛೆ ಥಳಿಸುತ್ತಿರುವ ಮಾಲೀಕ

ಕಾರ್ಮಿಕರಿಗೆ ಮನಸೋಇಚ್ಛೆ ಥಳಿಸುತ್ತಿರುವ ಮಾಲೀಕ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಜನವರಿ 19: ಸರಣಿ ದರೋಡೆ ಪ್ರಕರಣಗಳಿಂದಾಗಿ ರಾಜ್ಯದಲ್ಲಿ ಏನಾಗುತ್ತಿದೆ? ಎಂದು ಜನಸಾಮಾನ್ಯರು ಕಂಗೆಟ್ಟಿರುವ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ಆಘಾತಕಾರಿ ಘಟನೆ ವರದಿಯಾಗಿದೆ.

ಇಬ್ಬರು ದುಷ್ಕರ್ಮಿಗಳು ಸೇರಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಬಳಿಕ ಮಹಿಳೆಯ ಮೊಬೈಲ್, ಹಣ, ತಾಳಿ, ಚಿನ್ನದ ಸರ ದರೋಡೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಬಳಿ ಭಾನುವಾರ (ಜ.19) ರಾತ್ರಿ ನಡೆದಿದೆ. ಈ ಬಗ್ಗೆ ಯುವತಿ ಎಸ್. ಜಿ. ಪಾರ್ಕ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ

ಜನವರಿ 13: ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಹೇಯ ಘಟನೆ ಕಳೆದ ಸೋಮವಾರ(ಜ.13) ನಡೆದಿತ್ತು.

ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಪುಸುಲಾಯಿಸಿ ಕರೆದೊಯ್ದ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿದ್ದು. ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೋರಣಗಲ್ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಮಂಜುನಾಥ ಎಂಬ ಯುವಕನನ್ನು ಬಂಧಿಸಿದ್ದರು. ಆರೋಪಿಯ ಬಂಧನದ ಬಳಿಕ ಸ್ಥಳ ಪರಿಶೀಲನೆಗೆಂದು ಪೊಲೀಸರು ಆರೋಪಿಯನ್ನು ಕರೆದೊಯ್ಯವಾಗ ಆರೋಪಿ ಮಂಜುನಾಥ, ಹೆಡ್ ಕಾನ್ಸ್ಟೇಬಲ್ ರಘುಪತಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತಕ್ಷಣ ತೋರಣಗಲ್ ಪಿಎಸ್ಐ ಡಾಕೇಶ್ ಆತನ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದರು.

ರಾಮಮೂರ್ತಿನಗರ ಬಾಲಕಿ ಅತ್ಯಾಚಾರ, ಕೊಲೆ

ಜನವರಿ 14: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಆರು ವರ್ಷದ ಬಾಲಕಿ ಮೇಲೆ ಬಿಹಾರ ಮೂಲದ ಕಟ್ಟಡ ಕೂಲಿ ಕಾರ್ಮಿಕನೊಬ್ಬ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿದ್ದ ಪ್ರಕರಣ ನಡೆದಿತ್ತು.

ಬಾಲಕಿ ಮೇಲೆ ಅತ್ಯಾಚಾರವೆಸಗಿದ ಬಿಹಾರ ಮೂಲದ ಆರೋಪಿ ಅಭಿಷೇಕ್ ಕುಮಾರನನ್ನು (25) ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಪೋಷಕರು ಗಾರೆ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದಳು. ಇದನ್ನು ಗಮನಿಸಿದ ಆರೋಪಿ ಅಭಿಷೇಕ್, ಆಕೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ಆ ದಾಳಿಯಿಂದಾಗಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಳು. ರಾಮಮೂರ್ತಿ ನಗರದಲ್ಲಿ ಬಾಲಕಿಯ ಕುಟುಂಬ ಕಟ್ಟಡ ಕೂಲಿ ಕೆಲಸ ಮಾಡಿಕೊಂಡು ನೆಲೆಸಿತ್ತು. ಇದೇ ಜಾಗದಲ್ಲಿ ಬಿಹಾರ ಮೂಲದ ಆರೋಪಿ ಅಭಿಷೇಕ್ ಕೂಡ ಆರು ತಿಂಗಳಿಂದ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.

Read More
Next Story