ಮತ್ತೆ ಭೂ ಕುಸಿತ | ಬೆಂಗಳೂರು- ಮಂಗಳೂರು ರೈಲು ಬಂದ್, ಪ್ರಯಾಣಿಕರ ಪರದಾಟ
ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಇದರಿಂದ ಹಾಸನ-ಮಂಗಳೂರು ನಡುವಿನ ಕಿ.ಮೀ ಸಂಖ್ಯೆ 42/43 ರ ಮಧ್ಯೆ ಭೂ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ರೈಲುಗಳ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರು ಅಹೋರಾತ್ರಿ ರೈಲಿನಲ್ಲಿಯೇ ಕಾಲ ಕಳೆಯುವಂತಾಯಿತು.
ಹಾಸನ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಇದರಿಂದ ಹಾಸನ-ಮಂಗಳೂರು ನಡುವಿನ ಕಿ.ಮೀ ಸಂಖ್ಯೆ 42/43 ರ ಮಧ್ಯೆ ಭೂ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ರೈಲುಗಳ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರು ಅಹೋರಾತ್ರಿ ರೈಲಿನಲ್ಲಿಯೇ ಕಾಲ ಕಳೆಯುವಂತಾಯಿತು. ರೈಲ್ವೆ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದಾರೆ.
ಹಾಸನ - ಮಂಗಳೂರು ಮಾರ್ಗದಲ್ಲಿನ ಆಲೂರು ಮತ್ತು ಸಕಲೇಶಪುರ ನಡುವಿನ ಬಾಳ್ಳುಪೇಟೆ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತವಾಗಿದೆ. ಮರಗಳ ಸಮೇತವಾಗಿ ಹಳಿಯ ಮೇಲೆ ಮಣ್ಣು ಕುಸಿದು ಬಿದ್ದಿದೆ. ಘಟನೆಯಿಂದ ಬೆಂಗಳೂರು - ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮತ್ತು ಹಾಸನ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವನ್ನೂ ಬಂದ್ ಮಾಡಲಾಗಿದೆ. ಆಲೂರು- ಹಾಸನ ಮಾರ್ಗದ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಸಕಲೇಶಪುರ, ಎಡಕುಮರಿ, ಶಿರವಾಗಿಲು, ಆಲೂರು ಸೇರಿ 6 ಕಡೆ ರೈಲುಗಳನ್ನು ನಿಲ್ಲಿಸಲಾಗಿದೆ. ರೈಲುಗಳು ದಿಢೀರ್ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಇಡೀ ರಾತ್ರಿ ಪರದಾಡುವಂತಾಗಿದೆ. ರಾತ್ರಿ ವೇಳೆ ಸಂಚಾರ ನಡೆಸುವ ರೈಲುಗಳನ್ನು ಸಕಲೇಶಪುರ, ಎಡಕುಮರಿ, ಶಿರವಾಗಲು, ಆಲೂರು ಸೇರಿ 6 ರೈಲ್ವೆ ನಿಲ್ದಾಣಗಳಲ್ಲಿಯೇ ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.
ಪ್ರಯಾಣಿಕರು ರೈಲಿನಿಂದ ಇಳಿದು, ಬಸ್ ನಿಲ್ದಾಣಕ್ಕೆ ತೆರಳಿ ತಾವು ತಲುಪಬೇಕಾದ ಸ್ಥಳಕ್ಕೆ ಹೋಗಿದ್ದಾರೆ. ರೈಲ್ವೆಯಿಂದ ಪ್ರಯಾಣಿಕರಿಗಾಗಿ ಪರ್ಯಾಯ ವಾಹನ ವ್ಯವಸ್ಥೆ ಮಾಡಲಾಗಿತ್ತು. ಭೂ ಕುಸಿತ ಸ್ಥಳದಲ್ಲಿ ರೈಲ್ವೆ ಇಲಾಖೆಯಿಂದ ಹಿಟಾಚಿ ಬಳಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಸಕಲೇಶಪುರ ಸಮೀಪ ಭೂಕುಸಿತದಿಂದ ರೈಲು ಮಾರ್ಗ ಹಾನಿಗೊಳಗಾಗಿದ್ದರಿಂದ ಸಂಚಾರ ಬಂದ್ ಆಗಿತ್ತು. ರೈಲ್ವೆ ಮಾರ್ಗ ದುರಸ್ತಿ ಬಳಿಕ ಮಂಗಳೂರು-ಬೆಂಗಳೂರು ರೈಲು ಸಂಚಾರ ಆ. 8 ರಿಂದ ಪುನರಾರಂಭಗೊಂಡಿತ್ತು. ಜುಲೈ 26ರ ಸಂಜೆ ಧಾರಾಕಾರ ಮಳೆಯಿಂದಾಗಿ ಸೇತುವೆಯೊಂದರ ಬಳಿ ಭೂ ಕುಸಿತವಾಗಿತ್ತು. ನೈರುತ್ಯ ಮೈಸೂರು ವಿಭಾಗದ ಸಿಬ್ಬಂದಿ ಬೆಂಗಳೂರು - ಮಂಗಳೂರು ಸೆಕ್ಟರ್‌ನಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ನಡೆಸಿದ್ದರು. 10 ದಿನಗಳ ಕಾಲ ರೈಲ್ವೆ ಇಲಾಖೆಯು ಈ ದುರಸ್ತಿ ಕಾರ್ಯ ಕೈಗೊಂಡಿತ್ತು. ಇದೀಗ ಮತ್ತೊಂದೆಡೆ ಭೂ ಕುಸಿತಗೊಂಡಿದೆ.