ಉತ್ತರಹಳ್ಳಿ ಮಹಿಳೆಯ ಕೊಲೆ: ಬಾಡಿಗೆಗಿದ್ದ ದಂಪತಿಯಿಂದಲೇ ಮಾಲೀಕರ ಹತ್ಯೆ
x

ಚಿನ್ನದಾಸೆಗೆ ವೃದ್ಧೆ ಶ್ರೀಲಕ್ಷ್ಮಿ ಕೊಲೆ ಮಾಡಿದ ಆರೋಪಿಗಳು 

ಉತ್ತರಹಳ್ಳಿ ಮಹಿಳೆಯ ಕೊಲೆ: ಬಾಡಿಗೆಗಿದ್ದ ದಂಪತಿಯಿಂದಲೇ ಮಾಲೀಕರ ಹತ್ಯೆ

ಮಂಗಳವಾರ ಉತ್ತರಹಳ್ಳಿಯ ನ್ಯೂ ಮಿಲೇನಿಯಂ ಶಾಲಾ ರಸ್ತೆಯಲ್ಲಿರುವ ಅವರ ಮನೆಯೊಳಗೆ ಸಂತ್ರಸ್ತೆ ಶ್ರೀಲಕ್ಷ್ಮಿ ಶವವಾಗಿ ಪತ್ತೆಯಾಗಿದ್ದರು.


Click the Play button to hear this message in audio format

ರಾಜಧಾನಿಯ ಉತ್ತರಹಳ್ಳಿಯಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಮತ್ತು ದರೋಡೆ ಪ್ರಕರಣವನ್ನು ಸುಬ್ರಮಣ್ಯಪುರ ಪೊಲೀಸರು ಕೆಲವೇ ಗಂಟೆಗಳಲ್ಲಿ ಭೇದಿಸಿದ್ದು, ಚಿನ್ನದ ಮಂಗಳಸೂತ್ರಕ್ಕಾಗಿ ಮನೆ ಮಾಲೀಕಳನ್ನು ಹತ್ಯೆ ಮಾಡಿದ್ದ ಬಾಡಿಗೆದಾರ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಉತ್ತರಹಳ್ಳಿಯ ನ್ಯೂ ಮಿಲೇನಿಯಂ ಶಾಲಾ ರಸ್ತೆಯ ನಿವಾಸಿ ಶ್ರೀಲಕ್ಷ್ಮಿ (65) ಅವರು ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು. ಕಾಟನ್‌ಪೇಟೆಯ ಅಗರಬತ್ತಿ ಅಂಗಡಿಯಲ್ಲಿ ಕೆಲಸ ಮಾಡುವ ಅವರ ಪತಿ ಅಶ್ವತ್ಥ್ ನಾರಾಯಣ್ ಅವರು ಸಂಜೆ ಮನೆಗೆ ಬಂದಾಗ, ಪತ್ನಿ ಹಾಲ್‌ನಲ್ಲಿ ಶವವಾಗಿ ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು. ಶ್ರೀಲಕ್ಷ್ಮಿ ಅವರ ಕುತ್ತಿಗೆ, ತುಟಿ ಮತ್ತು ಮುಖದ ಮೇಲೆ ಗಾಯಗಳಾಗಿದ್ದು, ಅವರ ಮೈಮೇಲಿದ್ದ ಚಿನ್ನದ ಮಂಗಳಸೂತ್ರ ಕಾಣೆಯಾಗಿತ್ತು.

ಕೃತ್ಯ ನಡೆಸಿದ್ದು ಹೇಗೆ?

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸುಬ್ರಮಣ್ಯಪುರ ಪೊಲೀಸರಿಗೆ, ಶ್ರೀಲಕ್ಷ್ಮಿ ಅವರ ಮನೆಯಲ್ಲೇ ಬಾಡಿಗೆಗಿದ್ದ ದಂಪತಿಯ ಮೇಲೆ ಅನುಮಾನ ಬಂದಿದೆ. ಮಹಾರಾಷ್ಟ್ರದ ಸೋಲಾಪುರ ಮೂಲದ ಪ್ರಸಾದ್ ಶ್ರೀಶೈಲ್ ಮಕೈ ಮತ್ತು ಆತನ ಪತ್ನಿ ಸಾಕ್ಷಿ ಹನುಮಂತ್ ಹೊದ್ದೂರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯ ಬಯಲಾಗಿದೆ. ಸಾಲ ತೀರಿಸಲು ಹಣದ ಅವಶ್ಯಕತೆಯಿದ್ದ ಕಾರಣ, ಟಿವಿ ನೋಡುವ ನೆಪದಲ್ಲಿ ಮನೆಗೆ ನುಗ್ಗಿ, ಶ್ರೀಲಕ್ಷ್ಮಿ ಅವರನ್ನು ಉಸಿರುಗಟ್ಟಿಸಿ ಕೊಂದು, ಅವರ ಮೈಮೇಲಿದ್ದ ಚಿನ್ನದ ಸರವನ್ನು ದೋಚಿರುವುದಾಗಿ ದಂಪತಿ ತಪ್ಪೊಪ್ಪಿಕೊಂಡಿದ್ದಾರೆ.

ಕೊಲೆಗೆ ರೂಪಿಸಿದ್ದ ಸಂಚು

ಶ್ರೀಲಕ್ಷ್ಮಿ ಅವರ ಪತಿ ಬೆಳಿಗ್ಗೆ ಕೆಲಸಕ್ಕೆ ಹೋದ ನಂತರ, ಅವರು ಮನೆಯಲ್ಲಿ ಒಬ್ಬರೇ ಇರುವುದನ್ನು ಅರಿತಿದ್ದ ಆರೋಪಿ ದಂಪತಿ, ಈ ಸಮಯವನ್ನು ಬಳಸಿಕೊಂಡು ತಮ್ಮ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಮಂಗಳವಾರ ಮಧ್ಯಾಹ್ನ ಶ್ರೀಲಕ್ಷ್ಮಿ ಅವರ ಮನೆಗೆ ಹೋದ ದಂಪತಿ, "ಹೊಸ ಟಿವಿ ಖರೀದಿಸಬೇಕು, ನಿಮ್ಮ ಟಿವಿ ನೋಡುತ್ತೇವೆ" ಎಂದು ಹೇಳಿ ಮನೆಯೊಳಗೆ ಪ್ರವೇಶಿಸಿ, ಬಳಿಕ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಸದ್ಯ ಆರೋಪಿ ದಂಪತಿಯನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ

Read More
Next Story