HDK Landgrab Case | ಕುಮಾರಸ್ವಾಮಿ ಭೂ ಕಬಳಿಕೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ
ರಾಮನಗರದ ಬಿಡದಿಯ ಕೇತಗಾನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 8, 9, 10, 16 ಮತ್ತು 79 ರಲ್ಲಿ 14.04 ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿರುವ ಆರೋಪ ಕುಮಾರಸ್ವಾಮಿ ಮೇಲಿದೆ.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ಭೂಕಬಳಿಕೆ ಆರೋಪಗಳ ತನಿಖೆಗಾಗಿ ರಾಜ್ಯ ಸರ್ಕಾರ ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಐದು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ–1964 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ–2011ರ ಅಡಿಯಲ್ಲಿ ಈ ವಿಶೇಷ ತನಿಖಾ ತಂಡ ರಚಿಸಿ ಕಂದಾಯ ಇಲಾಖೆಯು ಜನವರಿ 28ರಂದು ಆದೇಶ ಹೊರಡಿಸಿದೆ. ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ನಿಸಾರ್ ಅಹಮ್ಮದ್, ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಗದ್ಯಾಳ, ಕಂದಾಯ ಆಯುಕ್ತಾಲಯದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರನ್ನು ಎಸ್‌ಐಟಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯ ಗ್ರೇಡ್–2 ತಹಶೀಲ್ದಾರ್ ಶೀತಲ್ ಅವರನ್ನು ಎಸ್‌ಐಟಿಯ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ರಾಮನಗರದ ಬಿಡದಿಯ ಕೇತಗಾನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 8, 9, 10, 16 ಮತ್ತು 79 ರಲ್ಲಿ 14.04 ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿರುವ ಆರೋಪ ಕುಮಾರಸ್ವಾಮಿ ಮೇಲಿದೆ. ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನುಗಳನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಬೆನ್ನಲ್ಲೇ ಎಸ್‌ಐಟಿ ರಚಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಭೂಕಬಳಿಕೆಗೆ ಸಂಬಂಧಿಸಿದಂತೆ 2024ರ ನವೆಂಬರ್‌ನಲ್ಲಿ ತನಿಖೆ ಮಾಡಲು ಎಸ್‌ಐಟಿ ರಚಿಸಲಾಗುವುದು ಎಂದು ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಅಫಿಡವಿಟ್‌ನಲ್ಲಿ ತಿಳಿಸಿತ್ತು. ಈ ಬಗ್ಗೆ ಹೈಕೋರ್ಟ್ ಸರ್ಕಾರಕ್ಕೆ ಕಠಿಣ ನಿರ್ದೇಶನ ನೀಡಿದೆ. ಅದರಂತೆ ನಾವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದೇವೆ ಎಂದು ಅವರು ಹೇಳಿದರು.
"ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದರೂ, ಸರ್ಕಾರ ತನ್ನ ವರದಿಯನ್ನು ಬೇಗ ಹೈಕೋರ್ಟ್‌ಗೆ ಸಲ್ಲಿಸಲು ಪ್ರಯತ್ನಿಸುತ್ತದೆ. ನಾವು ಮೂರು ತಿಂಗಳ ಕಾಲಾವಕಾಶ ಕೋರಿದ್ದೆವು. ಆದರೆ ಹೈಕೋರ್ಟ್ ಅದಕ್ಕೆ ಒಪ್ಪಲಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ, ಫೆಬ್ರವರಿ 21 ರ ಮೊದಲು ತನಿಖೆಯನ್ನು ಮುಗಿಸಿ ವರದಿಯನ್ನು ಸಲ್ಲಿಸಲು ನಾವು ಬಯಸುತ್ತೇವೆ" ಎಂದು ಕಂದಾಯ ಸಚಿವರು ಹೇಳಿದರು.
ಕೇತಗಾನಹಳ್ಳಿಯ ಸರ್ವೆ ಸಂಖ್ಯೆ 8, 9, 10, 16 ಮತ್ತು 79 ರ ದಾಖಲೆಗಳ ನೈಜತೆಯನ್ನು ಪರಿಶೀಲಿಸಲು ಸರ್ಕಾರ ಎಸ್‌ಐಟಿಯನ್ನು ಕೇಳಿದೆ. ಎಸ್‌ಐಟಿ ಅಗತ್ಯವಿದ್ದರೆ, ದಾಖಲೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬಹುದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಯಾವುದೇ ಭೂ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಲಾಗಿದೆಯೇ ಎಂದು ತನಿಖೆ ನಡೆಸಲು ಎಸ್‌ಐಟಿಯನ್ನು ಕೇಳಲಾಗಿದೆ. ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಆಕ್ರಮಿಸಿಕೊಂಡಿರುವುದು ಕಂಡುಬಂದರೆ, ಅತಿಕ್ರಮಣ ತೆರವುಗೊಳಿಸಲು ಎಸ್‌ಐಟಿ ಕ್ರಮಗಳನ್ನು ತೆಗೆದುಕೊಳ್ಳಬೇಕು.