ಭೂ ಕಬಳಿಕೆ ಆರೋಪ: ರೋಹಿಣಿ ಸಿಂಧೂರಿ ವಿರುದ್ಧ ಖ್ಯಾತ ಗಾಯಕ ಲಕ್ಕಿ ಅಲಿ ಲೋಕಾಯುಕ್ತಕ್ಕೆ ದೂರು
x

ಭೂ ಕಬಳಿಕೆ ಆರೋಪ: ರೋಹಿಣಿ ಸಿಂಧೂರಿ ವಿರುದ್ಧ ಖ್ಯಾತ ಗಾಯಕ ಲಕ್ಕಿ ಅಲಿ ಲೋಕಾಯುಕ್ತಕ್ಕೆ ದೂರು


ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ಜಮೀನು ಕಬಳಿಕೆ ಆರೋಪದಡಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ ಮತ್ತು ಸೋದರ ಮಾವ ಮಧುಸೂದನ್ ರೆಡ್ಡಿ ವಿರುದ್ಧ ಖ್ಯಾತ ಲಕ್ಕಿ ಅಲಿ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಮೂಲಕ ಐಎಎಸ್‌ ಅಧಿಕಾರಿ ರೋಹಿಣಿ ಸಂಧೂರಿ ಅವರು ವಿವಾದದ ಸುಳಿಗೆ ಮತ್ತೊಮ್ಮೆ ಸಿಲುಕಿಕೊಂಡಿದ್ದಾರೆ.

ಐಎಎಸ್ ಅಧಿಕಾರಿ ಸಿಂಧೂರಿ ರಾಜ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಗಾಯಕ ಲಕ್ಕಿ ಅಲಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಮಕ್ಸೂದ್ ಮಹಮೂದ್ ಅಲಿ ಅವರು ಲಕ್ಕಿ ಅಲಿ ಎಂದು ಪ್ರಸಿದ್ಧರಾಗಿದ್ದು, ಅವರು ಬೆಂಗಳೂರಿನಲ್ಲಿ ಅನೇಕ ವರ್ಷಗಳಿಂದ ನೆಲೆಸಿದ್ದು,, ಭಾರತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಹಿಂದಿ ಸಿನಿಮಾ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. ಸಿನಿಮಾಕ್ಕಿಂತ ಹೆಚ್ಚಾಗಿ ಅವರು ತಮ್ಮದೇ ಸಂಗೀತ ಸಂಯೋಜನೆಯ ಪ್ರೈವೇಟ್ ಆಲ್ಬಂಗಳಿಂದ ಹೆಚ್ಚು ಜನಪ್ರಿಯರಾದವರು.

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವ ಲಕ್ಕಿ ಅಲಿ ಅವರು ದೂರಿನ ಪ್ರತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 2022ರಲ್ಲಿಯೂ ಗಾಯಕ ಲಕ್ಕಿ ಅಲಿ ದೂರು ಸಲ್ಲಿಸಿದ್ದರು.

ಈ ಹಗರಣದಲ್ಲಿ ಯಲಹಂಕ ನ್ಯೂ ಟೌನ್ ಠಾಣೆಯ ಎಸಿಪಿ ಮಂಜುನಾಥ್, ತಾಲೂಕು ಸರ್ವೇ ಅಧಿಕಾರಿ ಮನೋಹನ್ ಶಾಮೀಲಾಗಿದ್ದಾರೆ ಎಂದು ಲಕ್ಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವಿಷಯದ ಬಗ್ಗೆ ಮಧ್ಯಪ್ರವೇಶಿಸುವಂತೆ ಉನ್ನತ ಅಧಿಕಾರಿಗಳನ್ನು ವಿನಂತಿಸಿದ್ದರು. ಭೂಮಿಯನ್ನು ಅಕ್ರಮವಾಗಿ ಕಸಿದುಕೊಳ್ಳಲು ಪಿತೂರಿ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಗಾಯಕ ಮತ್ತು ಹಿರಿಯ ಐಎಎಸ್ ಅಧಿಕಾರಿಯ ನಡುವೆ ಟ್ರಸ್ಟ್ ಒಡೆತನದ ಭೂಮಿಯ ವಿಷಯವು ದೀರ್ಘಕಾಲದಿಂದ ಇದೆ. ಕೆಲವು ವರ್ಷಗಳ ಹಿಂದೆ, ಲಕ್ಕಿ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಸ್ಥಳೀಯ ಪೊಲೀಸರು ಐಎಎಸ್ ಅಧಿಕಾರಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಿಷಯದ ಬಗ್ಗೆ ಮಧ್ಯಪ್ರವೇಶಿಸುವಂತೆ ಉನ್ನತ ಅಧಿಕಾರಿಗಳನ್ನು ವಿನಂತಿಸಿದ್ದರು. ‘ಭೂ ಮಾಫಿಯಾ’ ಭೂಮಿಯನ್ನು ಅಕ್ರಮವಾಗಿ ಕಸಿದುಕೊಳ್ಳಲು ಪಿತೂರಿ ನಡೆಸಿದೆ ಎಂದು ಅವರು ಹೇಳಿದ್ದಾರೆ. ಈ ಆಸ್ತಿ ಯಲಹಂಕದ ಕಂಚೇನಹಳ್ಳಿ ಪ್ರದೇಶದಲ್ಲಿದೆ ಎಂದು ವರದಿಯಾಗಿದೆ.

2022ರಲ್ಲಿ ದೂರು ನೀಡಿದ್ದ ಅಲಿ: 2022ರಲ್ಲಿ ಅಂದಿನ ಡಿಜಿಪಿ ಆಗಿದ್ದ ಪ್ರವೀಣ್ ಸೂದ್ ಅವರಿಗೆ ಸರಣಿ ಟ್ವೀಟ್‌ ಮಾಡಿ, ಯಲಹಂಕ ಬಳಿಯ ಕೆಂಚೇನಹಳ್ಳಿ ಬಳಿ ಇರುವ ತನ್ನ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಎಸಿಪಿಯವರಿಗೆ ದೂರು ನೀಡಿದ್ರೂ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ. ಸ್ಥಳೀಯ ಪೊಲೀಸರಿಂದ ನನಗೆ ಯಾವುದೇ ಸಹಾಯ ಸಿಗುತ್ತಿಲ್ಲ. ರೋಹಿಣಿ ಸಿಂಧೂರಿ ಕುಟುಂಬದ ಕಡೆಯೇ ನಿಂತಿದ್ದಾರೆ. ನಾವು ಕಳೆದ 50 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದೇವೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದರು. 2012ರಿಂದಲೂ ಈ ಜಾಗದ ವಿಚಾರಕ್ಕೆ ಎರಡು ತಂಡಗಳ ನಡುವೆ ವ್ಯಾಜ್ಯ ನಡೆಯುತ್ತಿದೆ.

ಏನಿದು ಭೂ ವಿವಾದ?

ಇದು ಸಮಾರು 33 ವರ್ಷಗಳ ಹಿಂದಿನ ಭೂ ವಿವಾದ. ಗಾಯಕ ಲಕ್ಕಿ ಅಲಿ ಅವರ ತಂದೆ ಮಹಮ್ಮದ್ ಅಲಿ ಅವರು 1969 ರಲ್ಲಿ 400 ಎಕರೆ ಭೂಮಿಯನ್ನ ಖರೀದಿ ಮಾಡಿದ್ದರು. ಆ 400 ಎಕರೆಯಲ್ಲಿ 220 ಎಕರೆ ಜಮೀನು ಭೂಮಿಯ ಮೇಲೆ ವಿವಿಧ ತೊಡಕುಗಳಿವೆ. 220 ಎಕರೆ ಮೇಲೆ ಹಲವು ವರ್ಷಗಳಿಂದ ವಿವಿಧ ಕೇಸ್​ ನಡೆಯುತ್ತಿವೆ. 160 ಎಕರೆ ಜಮೀನನ್ನ ಮೊಹಮ್ಮದ್‌ ಅಲಿ 6 ಮಕ್ಕಳಿಗೆ ವರ್ಗಾಯಿಸಿ ಟ್ರಸ್ಟ್ ರಚನೆ ಮಾಡಿದ್ದರು. 1991ರಲ್ಲಿ ಮೊಹಮ್ಮದ್‌ ಅಲಿ ಒಡೆತನದ ಭೂಮಿ ಮಾರಾಟ ಮಾಡಿದ್ದು, ಸದ್ಯ ಇದೇ ವಿಚಾರವಾಗಿ ಕೋರ್ಟ್‌ನಲ್ಲಿ ತಗಾದೆ ನಡೆಯುತ್ತಿದೆ ಅಂತಾ ಹೇಳಲಾಗ್ತಿದೆ. ಈ ಮಧ್ಯೆ ಭೂಮಿಯನ್ನ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಅಲಿ ಆರೋಪ ಮಾಡ್ತಿದ್ದಾರೆ. ಇನ್ನೊಂದೆಡೆ, ಇದೇ ಲಕ್ಕಿ ಅಲಿ 2022, ಡಿಸೆಂಬರ್‌ 4ರಂದು ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅಂದು ಕರ್ನಾಟಕ ಡಿಜಿಪಿ ಅವರಿಗೆ ಒಂದು ದೂರು ಸಲ್ಲಿಸಿದ್ದರು.

ನಾನು ಮಸೂದ್‌ ಮಹಮ್ಮದ್‌ ಅಲಿ. ಆ್ಯಕ್ಟರ್‌, ಕಮಿಡಿಯನ್‌ ಮಹಮದ್‌ ಅಲಿ ಅವರ ಪುತ್ರ. ಕೆಂಚೇನಹಳ್ಳಿ ಯಲಹಂಕದ ಸಮೀಪವಿರೋ, ನಮ್ಮ ಟ್ರಸ್ಟ್‌ಗೆ ಸೇರಿದ ಫಾರ್ಮ್‌ಹೌಸ್‌ನ ಒತ್ತುವರಿ ಮಾಡಲಾಗಿದೆ. ಬೆಂಗಳೂರು ಮಾಫಿಯಾ ಮೂಲಕ ಸುಧೀರ್‌ ರೆಡ್ಡಿ ಮತ್ತು ಮಧು ರೆಡ್ಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರ್ತಾರೆ. ಇವರಿಬ್ಬರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬೆಂಬಲದಿಂದ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗೇ, ಅಗತ್ಯ ದಾಖಲೆಯನ್ನ ತೋರಿಸಲು ನಿರಾಕರಿಸುತ್ತಿದ್ದಾರೆ. ಸ್ಥಳೀಯ ಪೊಲೀಸರು ನಮಗೆ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ. ಬದಲಿಗೆ ಒತ್ತುವರಿದಾರರಿಗೆ ಅವರು ಬೆಂಬಲ ನೀಡುತ್ತಿದ್ದಾರೆ ಮತ್ತು ಸದ್ಯದ ಕಾನೂನು ವಸ್ತುಸ್ಥಿತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಲಕ್ಕಿ ಅಲಿ ಪೋಸ್ಟ್​ ಹಾಕಿದ್ದರು.

ವಿವಾದಗಳಿಂದಲೇ ಸದ್ದು ಮಾಡಿದ್ದ ರೋಹಿಣಿ ಸಿಂಧೂರಿ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕಾರ್ಯದಕ್ಷತೆ ಕಾರ್ಯವೈಖರಿಯಿಂದ ಎಷ್ಟು ಖ್ಯಾತಿ ಪಡೆದಿದ್ದರೋ, ಅದೇ ಮಟ್ಟಿಗೆ ಅವರು ಸಿಲುಕಿದ್ದ ವಿವಾದಗಳು ಕೂಡ ಸುದ್ದಿಯಾಗಿದ್ದವು. ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರು ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕ ಸಾರಾ ಮಹೇಶ್ ದೂರಿದ್ದರು.


ಸ್ವಿಮ್ಮಿಂಗ್​ ಪೂಲ್​ ನಿರ್ಮಾಣ ಸಂಬಂಧ ಪ್ರಾದೇಶಿಕ ಆಯುಕ್ತರು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದರು. ತನಿಖಾ ವರದಿಯಲ್ಲಿ ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯಲ್ಲಿ ಈಜುಕೊಳ ನಿರ್ಮಾಣ ಮಾಡಲು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯನ್ನೇ ಪಡೆದಿಲ್ಲ ಎಂಬುದು ತಿಳಿದುಬಂದಿತು. ಈಜುಕೊಳ ನಿರ್ಮಾಣಕ್ಕೆ 32 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಕ್ಕೆ ತಾಂತ್ರಿಕ ವರ್ಗದಿಂದ ,ಲೋಕೋಪಯೋಗಿ ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಆಡಳಿತಾತ್ಮಕ ಮಂಜೂರಾತಿಯನ್ನು ಪಡೆದಿಲ್ಲ ಎಂದು ವರದಿ ನೀಡಿರುವುದು ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆಯಾಯಿತು.

ಮನೆಯಲ್ಲಿ ಈಜುಕೊಳ ನಿರ್ಮಿಸಿಕೊಂಡಿರುವುದರಿಂದ ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿರುವುದಿಲ್ಲ. ಈಜುಕೊಳ ನಿರ್ಮಾಣ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದಿಲ್ಲ. ಹೀಗಾಗಿ ಈಜುಕೊಳ ನಿರ್ಮಾಣವೇ ಅಕ್ರಮ, ಕಾನೂನಿಗೆ ವಿರುದ್ದವಾಗಿ ನಿರ್ಮಿಸಲಾಗಿದೆ. ರೋಹಿಣಿ ಸಿಂಧೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿರ್ಮಿಸಿರುವುದಾಗಿ ಪ್ರಾದೇಶಿಕ ಆಯುಕ್ತರು ವರದಿ ನೀಡಿದ್ದರು.

ಅಷ್ಟೇ ಅಲ್ಲದೇ ರೋಹಿಣಿ ಸಿಂಧೂರಿ ಅವರು ಪರಿಸರ ಸ್ನೇಹಿ ಬ್ಯಾಗ್ ಗಳಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಸಾರಾ ಆರೋಪಿಸಿ ದೂರು ದಾಖಲಿಸಿದ್ದರು. ಪರಿಸರ ಸ್ನೇಹಿ ಬ್ಯಾಗ್ ಹಾಗೂ ಅವ್ಯವಹಾರದ ದಾಖಲೆ ಸಮೇತ ದೂರು ಕೊಟ್ಟರು.

ರೋಹಿಣಿ ಸಿಂಧೂರಿ ಅವರು ಮೈಸೂರಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅವರಿಗೂ ಹಾಗೂ ಸಾರಾ ಮಹೇಶ್‌ ಅವರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇದ್ದವು. ಮತ್ತೊಂದೆಡೆ ಐಪಿಎಸ್‌ಅಧಿಕಾರಿ ರೂಪಾ ಅವರು ರೋಹಿಣಿ ಸಿಂಧೂರಿ ಅವರ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ.

ಐಶಾರಾಮಿ ಬದುಕು ಸೇರಿದಂತೆ ಕೆಲವು ಆರೋಪಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಅವರು, ತಮ್ಮ ಸಾಮಾಜಿಕ ಜಾಲತಾಣಗಳ ಪೋಸ್ಟ್‌ನಲ್ಲಿ ʻʻಒಬ್ಬ ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರು ಪುರುಷ ಹಿರಿಯ ಅಧಿಕಾರಿಗಳಿಗೆ ಆಗಾಗ ತಮ್ಮ ಖಾಸಗಿ ಪೋಟೊಗಳನ್ನು ಕಳುಹಿಸುತ್ತಾರೆ. ಒಟ್ಟು ಮೂರು ಪುರುಷ ಅಧಿಕಾರಿಗಳಿಗೆ ಒನ್‌ ಟು ಒನ್ ಈ ರೀತಿಯ ಫೋಟೋ ಕಳುಹಿಸಿದರೆ ಏನರ್ಥ?. ಇದು ಅವರ ವೈಯಕ್ತಿಕ ಮ್ಯಾಟರ್‌ ಆಗುವುದಿಲ್ಲ. ಐಎಎಸ್‌ ಸರ್ವೀಸ್ ಕಂಡಕ್ಟ್ ರೂಲ್ಸ ಪ್ರಕಾರ, ಅಪರಾಧವಾಗುತ್ತದೆ. ಯಾವುದೇ ತನಿಖೆ ಸಂಸ್ಥೆ ತನಿಖೆ ಮಾಡಬಹುದುʼʼ ಎಂದು ಬರೆದು ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಹಂಚಿಕೊಂಡಿದ್ದರು.


ಆಗ ರೋಹಿಣಿ ಹಾಗೂ ರೂಪ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಜಟಾಪಟಿ ನಡೆಯಿತು. ಕೆಲವು ದಿನಗಳ ನಂತರ ಈ ಇಬ್ಬರೂ ಅಧಿಕಾರಿಗಳಿಗೆ ಯಾವುದೇ ಜವಾಬ್ದಾರಿಯನ್ನೂ ನೀಡದಿರಲು ಸರ್ಕಾರ ನಿರ್ಧರಿಸಿತು. ಹೀಗೇ ವಿವಾದಗಳಿಂದಲೇ ಸದ್ದು ಮಾಡಿದ್ದ ರೋಹಿನಿ ಸಿಂಧೂರಿ ಅವರು ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

Read More
Next Story