
ಭೂ ಅಕ್ರಮ | ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ವಿರುದ್ಧ ಲೋಕಾಯುಕ್ತ ದೂರು
ಸುಮಾರು 400 ಕೋಟಿಗೂ ಅಧಿಕ ಬೆಲೆಬಾಳುವ ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಆರೋಪ ಮಾಡಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಹುಲ್ ಗಾಂಧಿಯವರ ಆಪ್ತರಾದ ಸ್ಯಾಮ್ ಪಿತ್ರೋಡಾ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಸುಮಾರು 400 ಕೋಟಿಗೂ ಅಧಿಕ ಬೆಲೆಬಾಳುವ ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಆರೋಪ ಮಾಡಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಹುಲ್ ಗಾಂಧಿಯವರ ಆಪ್ತರಾದ ಸ್ಯಾಮ್ ಪಿತ್ರೋಡಾ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ದೇಶದ ಟೆಲಿಕಾಂ ಕ್ರಾಂತಿಯ ಪಿತಾಮಹ ಎಂದೇ ಹೇಳಲಾಗುವ ಸ್ಯಾಮ್ ಪಿತ್ರೋಡಾ ಅವರು ಔಷಧೀಯ ಸಸ್ಯ ಬೆಳೆಯಲು ಸರ್ಕಾರದಿಂದ ಗುತ್ತಿಗೆಗೆ ಪಡೆದುಕೊಂಡಿದ್ದ ಭೂಮಿಯನ್ನು ಅವಧಿ ಮುಗಿದ ಬಳಿಕವೂ ತಮ್ಮ ವಶದಲ್ಲೇ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ಯಲಹಂಕ ಸಮೀಪದ ಜಾರಕಬಂಡೆ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ 12.35 ಎಕರೆ ಜಮೀನನ್ನು ಸರ್ಕಾರ 2001ರಲ್ಲಿ ಸ್ಯಾಮ್ ಪಿತ್ರೋಡಾ ಅವರಿಗೆ ಗುತ್ತಿಗೆ ನೀಡಿತ್ತು. ಗಿಡಮೂಲಿಕೆ ಔಷಧಿ ಗಿಡ ಬೆಳೆಯುವ ಉದ್ದೇಶಕ್ಕಾಗಿ ಪಿತ್ರೋಡಾ ಅವರು 10 ವರ್ಷಗಳ ಅವಧಿಗೆ ಆ ಭೂಮಿಯನ್ನು ಗುತ್ತಿಗೆಗೆ ಪಡೆದುಕೊಂಡಿದ್ದರು. ಆ ಪ್ರಕಾರ 2011ಕ್ಕೆ ಅವರ ಗುತ್ತಿಗೆ ಅವಧಿ ಮುಗಿದಿದೆ. ಆದರೂ ಕಳೆದ ಹದಿನಾಲ್ಕು ವರ್ಷಗಳಿಂದಲೂ ಆ ಭೂಮಿ ಅಕ್ರಮವಾಗಿ ಅವರ ಸ್ವಾಧೀನದಲ್ಲೇ ಉಳಿದಿದೆ ಮತ್ತು ಅಲ್ಲಿ ಅವರು ಅಲ್ಲಿ ಔಷಧೀಯ ಗಿಡಮೂಲಿಕೆ ಬೆಳೆದು ವರ್ಷಕ್ಕೆ ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಈ ಜಮೀನಿನ ಸದ್ಯದ ಮಾರುಕಟ್ಟೆ ಮೌಲ್ಯ 400 ಕೋಟಿಗೂ ಅಧಿಕವಿದೆ ಎಂದು ಎನ್ ಆರ್ ರಮೇಶ್ ದೂರಿನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ವಿದೇಶಿ ಘಟಕದ ಮುಖ್ಯಸ್ಥರಾಗಿರುವ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರು ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಆಪ್ತ ಸಲಹೆಗಾರರಾಗಿದ್ದು, ದೇಶದ ಟೆಲಿಕಾಂ ಕ್ರಾಂತಿಯ ರೂವಾರಿ ಎಂದೇ ಜನಪ್ರಿಯರು. ಆದರೆ ಕಳೆದ ಕೆಲವು ದಶಕಗಳಿಂದ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದ ಅವರು ಸುದ್ದಿಯಲ್ಲಿದ್ದು, ಕಳೆದ ವಾರ ಕೂಡ ಚೀನಾ ದೇಶ ಭಾರತದ ಶತ್ರುವಲ್ಲ ಎಂದು ಹೇಳುವ ಹೊಸ ವಿವಾದದ ಕಿಡಿ ಹೊತ್ತಿಸಿದ್ದರು.