
Land Encroachment | ಸಚಿವ ಕೃಷ್ಣ ಬೈರೇಗೌಡ ಆಪ್ತನಿಂದ ಕಂದಾಯ ನಿರೀಕ್ಷಕರ ಮೇಲೆ ಹಲ್ಲೆ?
ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡರ ಇಲಾಖೆಯ ಅಧಿಕಾರಿ ಮೇಲೆ , ಅವರದೇ ಆಪ್ತ ಎನ್ನಲಾದ ರಾಜಕೀಯ ಮುಖಂಡನೊಬ್ಬ ಹಲ್ಲೆ ನಡೆಸಿದ್ದಾನೆ. ಘಟನೆ, ಸಚಿವರ ಕ್ಷೇತ್ರ ಬ್ಯಾಟರಾಯನ ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ.
ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡರ ಇಲಾಖೆಯ ಅಧಿಕಾರಿ ಮೇಲೆ , ಅವರದೇ ಆಪ್ತ ಎನ್ನಲಾದ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ನಿರ್ದೇಶಕನೇ ಹಲ್ಲೆ ನಡೆಸಿದ ಘಟನೆ ಶನಿವಾರ ಬ್ಯಾಟರಾಯನ ಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ಸಚಿವ ಕೃಷ್ಣ ಬೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಾಲ ಹೋಬಳಿ ಮೈಲನಹಳ್ಳಿ ಗ್ರಾಮದ ಸರ್ವ ನಂಬರ್ 94 ಗೋಮಾಳ ಒತ್ತುವರಿ ತೆರವು ಮಾಡಲು ಹೋದ ಕಂದಾಯ ಅಧಿಕಾರಿ (ರೆವೆನ್ಯೂ ಇನ್ಸೆಪೆಕ್ಟರ್) ಮೇಲೆ ಹಲ್ಲೆ ನಡೆಸಲಾಗಿದೆ. ಸಚಿವರ ಆಪ್ತ ಎನ್ನಲಾದ ಎಂ.ಜಿ. ರಾಜಕುಮಾರ್ ಮೇಲೇ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಮುಖಂಡರಾಗಿರುವ ರಾಜ್‌ಕುಮಾರ್, ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರೂ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಟರಾಯಪುರ ಬಿಜೆಪಿ ಮುಖಂಡ ತಮ್ಮೇಶಗೌಡ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, "ಸಚಿವ ಕೃಷ್ಣ ಬೈರೇಗೌಡ ಅವರ ಬೆಂಬಲ ಇದೆ ಅಂತಾ ಈ ರೀತಿ ಅಧಿಕಾರಿಗಳ ಮೇಲೆ ರಾಜ್ ಕುಮಾರ್ ಹಲ್ಲೆ ನಡೆಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲ. ಅದೂ, ಸಚಿವರ ಇಲಾಖೆಯ ಅಧಿಕಾರಿಗಳ ಮೇಲೆ ಹಾಗೂ ಅವರದೇ ವಿಧಾನಸಭಾ ಕ್ಷೇತ್ರದಲ್ಲಿ ಘಟನೆ ನಡೆದಿರುವುದು ವ್ಯವಸ್ಥೆಯ ಬಗ್ಗೆ ಹಿಡಿದ ಕೈಗನ್ನಡಿಯಾಗಿದೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಬೇಕು," ಎಂದು ಒತ್ತಾಯಿಸಿದ್ದಾರೆ.
ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.