ವಸತಿ ಶಾಲೆಗಾಗಿ ಡಿನೋಟಿಫಿಕೇಷನ್‌ ಮಾಡಿಸಿ ಜಮೀನು ಗುಳುಂ: ಸಿಎಂ ವಿರುದ್ಧ ಎಚ್‌ಡಿಕೆ ಮತ್ತೊಂದು ಆರೋಪ
x

ವಸತಿ ಶಾಲೆಗಾಗಿ ಡಿನೋಟಿಫಿಕೇಷನ್‌ ಮಾಡಿಸಿ ಜಮೀನು ಗುಳುಂ: ಸಿಎಂ ವಿರುದ್ಧ ಎಚ್‌ಡಿಕೆ ಮತ್ತೊಂದು ಆರೋಪ

ವಸತಿ ಶಾಲೆ ಉದ್ದೇಶಕ್ಕಾಗಿ ಭೂಮಿಯನ್ನು ಡಿನೋಟಿಫಿಕೇಷನ್‌ ಮಾಡಿಸಿಕೊಂಡ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಮೊದಲ ಆರೋಪಿ. ಒಟ್ಟು 18 ಆರೋಪಿಗಳಿದ್ದಾರೆ. ನ್ಯಾಯಾಲಯದಿಂದ ಸಿದ್ದರಾಮಯ್ಯ ವಿರುದ್ಧ ತೀರ್ಪು ಕೂಡ ಬಂದಿದೆ. ಅದನ್ನು ಪ್ರಶ್ನಿಸಿ ಹೈಕೋರ್ಟ್ ನಿಂದ ರಿಲೀಫ್ ಪಡೆದುಕೊಂಡರು. ಇದು 14 ಸೈಟ್ ಗಿಂತ ದೊಡ್ಡ ಹಗರಣ


ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ಡಿನೋಟಿಫಿಕೇಷನ್ ಮಾಡಿಸಿಕೊಂಡು, ಅದನ್ನು ಸಿಎಂ ಸಿದ್ದರಾಮಯ್ಯ ಗುಳುಂ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಸತಿ ಶಾಲೆ ಉದ್ದೇಶಕ್ಕಾಗಿ ಭೂಮಿಯನ್ನು ಡಿನೋಟಿಫಿಕೇಷನ್‌ ಮಾಡಿಸಿಕೊಂಡ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಮೊದಲ ಆರೋಪಿ. ಒಟ್ಟು 18 ಆರೋಪಿಗಳಿದ್ದಾರೆ. ನ್ಯಾಯಾಲಯದಿಂದ ಸಿದ್ದರಾಮಯ್ಯ ವಿರುದ್ಧ ತೀರ್ಪು ಕೂಡ ಬಂದಿದೆ. ಅದನ್ನು ಪ್ರಶ್ನಿಸಿ ಹೈಕೋರ್ಟ್ ನಿಂದ ರಿಲೀಫ್ ಪಡೆದುಕೊಂಡರು. ಇದು 14 ಸೈಟ್ ಗಿಂತ ದೊಡ್ಡ ಹಗರಣ. ಊರಿಗೆ ಬುದ್ದಿ ಹೇಳೋರು ಇಲ್ಲಿ ಏನೇನು ಮಾಡಿದ್ದಿರಿ, ಸತ್ಯ ಹೇಳಿ. ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನು ಎರಡು ಪ್ರಕರಣಗಳಿವೆ ಎಂದು ಕುಮಾರಸ್ವಾಮಿ ಟಾಂಗ್‌ ಕೊಟ್ಟರು.

ಸಚಿವ ಕೃಷ್ಣಬೈರೇಗೌಡರೇ, ನೀವು ಮೇಧಾವಿಯಲ್ಲವೇ? ಇವನ್ನೆಲ್ಲಾ ಒಮ್ಮೆ ಪರಿಶೀಲನೆ ಮಾಡಪ್ಪ. ನಾನು ಇಂತಹ ಕೆಲಸ ಮಾಡಿಲ್ಲ ಎಂದು ಕುಟುಕಿದರು. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯುವುದು ಎಂದರೆ ಇದೇ. ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮನ್ನು ಮುಗಿಸಲು ಹೊರಟವರ ಪುರಾಣ ಎಷ್ಟಿದೆ ನೋಡಿ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಪತ್ನಿ 14 ನಿವೇಶನಗಳನ್ನು ವಾಪಸ್ ಕೊಡುವ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ; ಇದು ಹೇಗಿದೆ ಎಂದರೆ, 'ಕಳ್ಳತನ ಮಾಡಿ ಆಮೇಲೆ ತಪ್ಪಾಯಿತು' ಎಂದು ಹೇಳಿದ ಹಾಗಿದೆ ಎಂದು ಲೇವಡಿ ಮಾಡಿದರು. ಸಿಎಂ ಪತ್ನಿ ನನಗೂ ಸಹೋದರಿ ಸಮಾನ. ಅವರ ಬಗ್ಗೆ ಗೌರವ ಇಟ್ಟಿಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಯಾವಾಗಲೂ ಹಿಟ್ ಅಂಡ್ ರನ್ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಹಾಗಾದರೆ ಇವರೇನು? ಯೂಟರ್ನಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಸೋಮವಾರ ರಾತ್ರಿ ಏಕಾಏಕಿ ಪತ್ರ ಬರೆದು ನಿವೇಶನಗಳು ಬೇಡ, ವಾಪಸ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಮನೆ, ಚಿನ್ನ, ಒಡೆವೆ ಯಾವುದರ ಮೇಲೆಯೂ ಮಮತೆ ಇಲ್ಲ. ನನ್ನ ಪತಿಯ ಮುಂದೆ ಅದೆಲ್ಲ ತೃಣಕ್ಕೆ ಸಮಾನ ಎಂದು ಹೇಳಿಕೊಂಡಿದ್ದಾರೆ. ನಾನು ಆ ಹೆಣ್ಣಮಗಳ ಬಗ್ಗೆ ಮಾತನಾಡಲ್ಲ, ಆದರೆ ಅದೇನೋ‌ ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿದ್ದಾರಂತೆ ಸಿದ್ದರಾಮಯ್ಯನವರು. ಆ ಹೆಣ್ಣು ಮಗಳು ತಮ್ಮ ಪತಿಯ ಗಮನಕ್ಕೆ ಇಲ್ಲದಂತೆಯೇ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರಾ? ವಿನಾಕಾರಣ ನನ್ನನ್ನು ಸುಳ್ಳುಗಾರ ಎಂದು ಹೇಳುತ್ತಾರೆ. ಆದರೆ ಇವರ ಮಾತು ಕೇಳಿಸಿಕೊಂಡರೆ ಸುಳ್ಳು ಎಲ್ಲಿ ಹುಟ್ಟಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ಸಿಎಂ ಇದೊಂದೇ ತಪ್ಪು ಮಾಡಿಲ್ಲ

ಮೂಡಾ ಹಗರಣ ಮಾತ್ರ, ಸಿಎಂ ಸಿದ್ದರಾಮಯ್ಯ ಇನ್ನೂ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ. ಮೈಸೂರಿನಲ್ಲಿ ಭೂಮಿ ಮೇಲೆ, ಚಿನ್ನದ ಮೇಲೆ ವ್ಯಾಮೋಹ ಇಲ್ಲ ಎನ್ನುತ್ತಾರೆ ಅವರ ಶ್ರೀಮತಿಯವರು. ಈ ಹಿಂದೆ ಏನೆಲ್ಲ ಮಾಡಿದ್ದಾರೆ, ವೈಟ್ನರ್ ಹಾಕಿ ಎಲ್ಲ ಮುಗಿದೊಯ್ತು ಎಂದುಕೊಂಡಿದ್ದರು, ಈಗ ಇಲ್ಲಿಗೆ ಬಂದಿದ್ದಾರೆ ಎಂದು ಅವರು ಕುಮಾರಸ್ವಾಮಿ ದೂರಿದರು.

ಸಿದ್ದರಾಮಯ್ಯ ವಿರುದ್ದ ಮತ್ತೊಂದು ಹಳೆ ಸೈಟ್ ಅಕ್ರಮದ ಬಗ್ಗೆ ಮಾಹಿತಿ ಕೊಟ್ಟ ಕೇಂದ್ರ ಸಚಿವರು; 14 ಸೈಟ್ ಕೇಸ್ ಕಥೆ ಒಂದಾದರೆ ಇದು ಅದಕ್ಕಿಂತ ಹಳೆ ಕೇಸ್. ಆ ಪ್ರಕರಣ ಕುತ್ತಿಗೆಗೆ ಬಂದಾಗ ಒಂದು ಕೋಟಿ ರೂಪಾಯಿಗೆ ಮಾರಾಟ ಮಾಡಿಕೊಂಡರು. ಚುನಾವಣಾ ಸಾಲಕ್ಕಾಗಿ ಅದನ್ನು ಮಾರಾಟ ಮಾಡಲಾಯಿತು ಎಂದು ಕಥೆ ಕಟ್ಟಿದ್ದರಲ್ಲ, ಆ ನಿವೇಶನ ಎಲ್ಲಿಂದ ಬಂದಿತ್ತು? ಸ್ವಲ್ಪ ಹೇಳುವಿರಾ? ಎಂದು ಕೇಳಿದರು.

Read More
Next Story