
ಹೆಸರಘಟ್ಟದಲ್ಲಿ ಕ್ವಾಂಟಮ್ ಸಿಟಿ, ಸೈದ್ಧಾಂತಿಕ ವಿಜ್ಞಾನ ಕೇಂದ್ರಕ್ಕೆ ಭೂಮಿ ಮಂಜೂರು
ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035 ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.
ಅತ್ಯಾಧುನಿಕ ಪ್ರಯೋಗಾಲಯ, ಸ್ಟಾರ್ಟ್‌ಅಪ್‌ಗಳಿಗೆ ಇನ್ಕ್ಯೂಬೇಷನ್ ಸೌಲಭ್ಯ ಹಾಗೂ ಕೈಗಾರಿಕಾ-ಶೈಕ್ಷಣಿಕ ಸಹಭಾಗಿತ್ವಕ್ಕೆ ಅಗತ್ಯವಾದ ಮೂಲಸೌಕರ್ಯ ಹೊಂದಿರುವ ಕ್ಯೂ-ಸಿಟಿ (ಕ್ವಾಂಟಮ್ ಸಿಟಿ) ಸ್ಥಾಪನೆಗೆ ರಾಜ್ಯ ಸರ್ಕಾರ ಹೆಸರುಘಟ್ಟದಲ್ಲಿ 6.17 ಎಕರೆ ಜಾಗ ಮಂಜೂರು ಮಾಡಿದೆ.
ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035 ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಕ್ಯೂ-ಸಿಟಿ (Q- ಸಿಟಿ (ಕ್ವಾಂಟಮ್) ನಗರಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಜಾಗ ಮಂಜೂರು ಮಾಡಲಾಗಿದೆ.
ಸೈದ್ಧಾಂತಿಕ ವಿಜ್ಞಾನ ಕೇಂದ್ರಕ್ಕೂ ಜಾಗ
ಅಂತಾರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ (ICTS–TIFR) ವಿಸ್ತರಣೆಗೂ ಹೆಸರಘಟ್ಟದಲ್ಲಿಯೇ 8 ಎಕರೆ ಭೂಮಿ ನೀಡಲಾಗಿದೆ. ICTS–TIFRಗೆ ನೀಡಲಾದ ಹೆಚ್ಚುವರಿ ಭೂಮಿ, ಸೈದ್ಧಾಂತಿಕ ವಿಜ್ಞಾನ ಕ್ಷೇತ್ರದಲ್ಲಿ ಅದರ ಶೈಕ್ಷಣಿಕ ಮತ್ತು ಸಂಶೋಧನಾ ವಿಸ್ತರಣೆಗೆ ನೆರವಾಗಲಿದೆ. ಎರಡೂ ಅಭಿವೃದ್ಧಿಗಳು ಸೇರಿ ಕರ್ನಾಟಕವನ್ನು ಉನ್ನತ ವಿಜ್ಞಾನ ಮತ್ತು ನವೀನತೆಯ ಕೇಂದ್ರವಾಗಿ ಎತ್ತಿ ಹಿಡಿಯಲಿವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಕರ್ನಾಟಕದ ದೃಷ್ಟಿಯಲ್ಲಿ ಇದು ಐತಿಹಾಸಿಕ ಘಟ್ಟ. ಹೆಸರಘಟ್ಟದ ಕ್ವಾಂಟಮ್ ಸಿಟಿ ಜಾಗತಿಕ ಪ್ರತಿಭೆ, ಹೂಡಿಕೆಗಳನ್ನು ಆಕರ್ಷಿಸಲಿದೆ. ಬೆಂಗಳೂರನ್ನು ದೇಶ ಹಾಗೂ ವಿಶ್ವದ ಕ್ವಾಂಟಮ್ ಭೂಪಟದ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಅಭಿವೃದ್ದಿಯಾಗಲು ಸಹಕಾರಿಯಾಗಲಿದೆ,” ಎಂದು ಹೇಳಿದ್ದಾರೆ.
ಕ್ವಾಂಟಮ್ ಸಿಟಿಯಲ್ಲಿ ಏನೆಲ್ಲಾ ಇರಲಿದೆ?
ಕ್ಯೂ-ಸಿಟಿಯು ವಿಶ್ವ ದರ್ಜೆಯ ಸೌಲಭ್ಯ ಹೊಂದಿರಲಿದೆ. ಶೈಕ್ಷಣಿಕ ಸಂಸ್ಥೆಗಳು, ನಾವೀನ್ಯತಾ ಕೇಂದ್ರಗಳು, ಕ್ವಾಂಟಮ್ ಹಾರ್ಡ್‌ವೇರ್‌ಗಳಿಗಾಗಿ ಉತ್ಪಾದನಾ ಕ್ಲಸ್ಟರ್‌ಗಳು, ಪ್ರೊಸೆಸರ್‌ಗಳು ಮತ್ತು ಸಹಾಯಕಗಳು ಹಾಗೂ ಕ್ವಾಂಟಮ್ ಎಚ್.ಪಿ.ಸಿ. ಡೇಟಾ ಕೇಂದ್ರಗಳ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಸ್ಟರ್‌ಗಳನ್ನು ಸಂಯೋಜಿಸಲಿದೆ.