
ಸಂರಕ್ಷಿತ ಹುಲ್ಲುಗಾವಲು ಮೀಸಲು ಪ್ರದೇಶದ ಸಮೀಪವೇ ಕ್ವಾಂಟಮ್ ಸಿಟಿ; ಹೆಸರಘಟ್ಟದಲ್ಲಿ ಮತ್ತೆ ಶುರುವಾದ ಆತಂಕ
ಕ್ವಾಂಟಮ್ ತಂತ್ರಜ್ಞಾನಕ್ಕೂ ಸೈದ್ಧಾಂತಿಕ ವಿಜ್ಞಾನ ಕೇಂದ್ರ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ಅಲ್ಲದೇ ಉನ್ನತ ವಿಜ್ಞಾನ ಮತ್ತು ನಾವಿನ್ಯತೆಯ ಕೇಂದ್ರವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಭಾರತದ ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಐಟಿ-ಬಿಟಿ, ಕೃತಕ ಬುದ್ಧಿಮತ್ತೆಯ (AI) ವೇಗದ ಓಟದೊಂದಿಗೆ ಕ್ವಾಂಟಮ್ ತಂತ್ರಜ್ಞಾನವೂ ಈಗ ಜೊತೆಯಾಗಿದೆ. ಕ್ವಾಂಟಮ್ ಕ್ಷೇತ್ರದಲ್ಲಿ ರಾಜ್ಯವನ್ನು ಜಾಗತಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ಸಲುವಾಗಿ ಕ್ವಾಂಟಮ್ ಸಂಶೋಧನೆ, ಪ್ರಯೋಗಗಳಿಗೆ ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿದೆ.
ʼದೇಶದ ಮೊದಲ ಕ್ಯಾಂಟಮ್ ಇಂಡಿಯಾ ಬೆಂಗಳೂರುʼ ಸಮಾವೇಶ ಜರುಗಿದ ಬಳಿಕ ತಂತ್ರಜ್ಞಾನದ ಬಳಕೆ, ಆವಿಷ್ಕಾರಗಳಿಗೆ ಬಲ ತುಂಬಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ತನ್ನ ಮೊದಲ ಕ್ವಾಂಟಮ್ ಸಿಟಿ ಸ್ಥಾಪನೆಗೆ ಬೆಂಗಳೂರಿನ ಸಂರಕ್ಷಿತ ಹುಲ್ಲುಗಾವಲು ಮೀಸಲು ಪ್ರದೇಶವಾದ ಹೆಸರಘಟ್ಟದಲ್ಲೇ ಭೂಮಿ ಮಂಜೂರು ಮಾಡಿರುವುದು ಪರಿಸರವಾದಿಗಳ ವಿರೋಧಕ್ಕೆ ಕಾರಣವಾಗಿದೆ.
ಯಲಹಂಕ ತಾಲೂಕಿನ ಹೆಸರಘಟ್ಟ ಸಮೀಪವೇ ಇರುವ ಶಿವಕೋಟೆ ಗ್ರಾಮದಲ್ಲಿ 6.17 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಮುಂದಿನ ಒಂದು ದಶಕದಲ್ಲಿ 20 ಬಿಲಿಯನ್ ಡಾಲರ್ ಆರ್ಥಿಕತೆ ಶಕ್ತಿಯಾಗಿ ಬೆಳೆಯುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಆದರೆ, ಬೆಂಗಳೂರಿನ ಶ್ವಾಸಕೋಶದ ತಾಣದಂತಿರುವ ಹೆಸರಘಟ್ಟದಲ್ಲಿ ಕರ್ನಾಟಕ ಕ್ವಾಂಟಮ್ ಮಿಷನ್ ಯೋಜನೆಯಡಿ ಕ್ಯೂ-ಸಿಟಿ(ಕ್ವಾಂಟಮ್ ಸಿಟಿ) ಸ್ಥಾಪನೆಗೆ ಮುಂದಾಗಿರುವುದು ಜನರಲ್ಲಿ ಆತಂಕದ ಜತೆಗೆ ಅಸಮಾಧಾನ ಮೂಡಿಸಿದೆ.
ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆಗಾಗಿ ದಶಕಗಳಿಂದ ಹೋರಾಟ ನಡೆಸಿದ ಪರಿಣಾಮ ರಾಜ್ಯ ಸರ್ಕಾರ ಗ್ರೇಟರ್ ಹೆಸರುಘಟ್ಟ ಯೋಜನೆಯಡಿ 5678 ಎಕರೆಯನ್ನು ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಿಸಿತ್ತು. ಇದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆ, ರಿಯಲ್ ಎಸ್ಟೇಟ್ ದಂಧೆ ಹಾಗೂ ಸರ್ಕಾರದ ಯೋಜನೆಗಳಿಗೆ ಕಡಿವಾಣ ಬಿದ್ದಿತು ಎಂದೇ ಸ್ಥಳೀಯರು ಭಾವಿಸಿದ್ದರು. ಆದರೆ, ಈಗ ಅದೆಲ್ಲವೂ ಸುಳ್ಳಾಗಿದೆ.
ಅಪರೂಪದ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನ
ಹೆಸರಘಟ್ಟ ಹುಲ್ಲುಗಾವಲು ಪ್ರದೇಶದ ಹೊರಗೆ ಕ್ವಾಂಟಮ್ ಸಿಟಿ ಸ್ಥಾಪನೆಗೆ ಜಾಗ ಗುರುತಿಸಿದ್ದರೂ ಭವಿಷ್ಯದಲ್ಲಿ ಯೋಜನೆಯೂ ಸಂರಕ್ಷಿತ ಮೀಸಲು ಪ್ರದೇಶಕ್ಕೆ ಮಾರಕವಾಗಲಿದೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ. ಹೆಸರಘಟ್ಟ ಹುಲ್ಲುಗಾವಲಿನಲ್ಲಿ 133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು, ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳು ಆಶ್ರಯ ಪಡೆದಿವೆ.
ಹುಲ್ಲುಗಾವಲಿನಂತೆ ಕಾಣುವ ಈ ಪ್ರದೇಶದಲ್ಲಿ ಹುಲ್ಲಿನ ಪೊದೆಯಲ್ಲೇ ಗೂಡು ಕಟ್ಟಿ, ಮೊಟ್ಟೆ ಇಟ್ಟು ಸಂಸಾರ ಮಾಡುವ ನೆಲಗುಬ್ಬಿಯಂತಹ ಪಕ್ಷಿಯ ಪ್ರಭೇದ, ಅಳಿವಿನಂಚಿನಲ್ಲಿರುವ ಲೆಸ್ಸರ್ ಫ್ಲೋರಿಕಾನ್‌ನಂತಹ ಪಕ್ಷಿಗಳೂ ಇವೆ. ದೊಡ್ಡ ಚುಕ್ಕಿ ಗಿಡುಗ (ಗ್ರೇಟರ್ ಸ್ಪಾಟೆಡ್ ಈಗಲ್), ಇವೆ. ಚಳಿಗಾಲದಲ್ಲಿ ರಷ್ಯಾ, ಮಧ್ಯ ಏಷ್ಯಾ ಭಾಗದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಕಾಡುಪಾಪ (ಪ್ಲೆಂಡರ್ ಲೋರಿಸ್), ನೀರು ನಾಯಿ (ಸ್ಪೂತ್ ಕೋಟೆಡ್ ಒಟ್ಟೆರ್) ಅಂತಹ ವನ್ಯಜೀವಿಗಳು ಕೂಡ ಕಾಣಿಸಿಕೊಂಡಿವೆ. ಹಾಗಾಗಿ ಹುಲ್ಲುಗಾವಲು ಜೀವವೈವಿದ್ಯತೆಯಿಂದ ಕೂಡಿದೆ.
ಕ್ವಾಂಟಮ್ ಸಿಟಿ ಸ್ಥಾಪನೆಗೆ ವಿರೋಧ
"ಹೆಸರಘಟ್ಟ ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಯೋಜನೆಯಡಿ ಸಂರಕ್ಷಿತ ಹುಲ್ಲುಗಾವಲು ಮೀಸಲು ಪ್ರದೇಶ ಎಂದು ಗುರುತಿಸಲಾಗಿದೆ. ಹೆಸರಘಟ್ಟ ಸಮೀಪವೇ ಈಗ ಕ್ವಾಂಟಮ್ ಸಿಟಿ ಸ್ಥಾಪಿಸುವುದರಿಂದ ಇಲ್ಲಿರುವ ಅಪರೂಪದ ಪಕ್ಷಿಗಳು, ಹುಲ್ಲುಗಾವಲು ಮತ್ತು ಜಲಮೂಲಗಳಿಗೆ ಧಕ್ಕೆಯಾಗಲಿದೆ. ಕ್ವಾಂಟಮ್ ಸಿಟಿ ಸ್ಥಾಪನೆಯು ಸದ್ಯ ಕಡಿಮೆ ಪ್ರದೇಶದಲ್ಲಿ ಅಗುತ್ತಿರಬಹುದು. ಆದರೆ, ಭವಿಷ್ಯದಲ್ಲಿ ಯೋಜನೆ ವಿಸ್ತರಿಸಿ, ಹುಲ್ಲುಗಾವಲನ್ನು ಆಪೋಶನ ಮಾಡುವ ಸಾಧ್ಯತೆಗಳು ತಳ್ಳಿ ಹಾಕುವಂತಿಲ್ಲ. ಹಂತ ಹಂತವಾಗಿ ಯೋಜನೆ ವಿಸ್ತರಿಸಿದರೆ ಇಲ್ಲಿನ ಪರಿಸರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಪರಿಸರಕ್ಕೆ ಮಾರಕವಾಗುವ ಯೋಜನೆಗಳಿಗೆ ನಮ್ಮ ವಿರೋಧವಿದೆ ಎಂದು ಪರಿಸರವಾದಿ ಚಿದಾನಂದ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ದೊಡ್ಡ ಯೋಜನೆಗಳು ಅನುಷ್ಠಾನವಾದರೆ ಕ್ರಮೇಣ ಮಾನವ ಚಟುವಟಿಕೆ ಹೆಚ್ಚಲಿದೆ. ಅದಕ್ಕೆ ತಕ್ಕಂತೆ ಮೂಲ ಸೌಕರ್ಯವನ್ನೂ ಒದಗಿಸಬೇಕಾಗುತ್ತದೆ. ನೀರಿನ ಬಳಕೆ, ವಾಯು ಮಾಲಿನ್ಯ, ಸಂಪನ್ಮೂಲಗಳ ಬಳಕೆ, ಕಾಡು ಹಾಗೂ ಹುಲ್ಲಿಗಾವಲು ಎಲ್ಲವೂ ನಾಶವಾಗಲಿದೆ ಎಂದು ಹೇಳಿದರು.
ಈ ಹಿಂದೆ ಹುಲ್ಲುಗಾವಲು ಸಂರಕ್ಷಣೆಗಾಗಿ ಆಂದೋಲನ ನಡೆಸಲಾಗಿತ್ತು. ರಿಯಲ್ ಎಸ್ಟೇಟ್ ಮಾಫಿಯಾದ ಬೆದರಿಕೆಗಳ ನಡುವೆಯೂ ಪಟ್ಟು ಬಿಡದೇ ಹೋರಾಟ ನಡೆಸಿದ್ದರಿಂದ ರಾಜ್ಯ ಸರ್ಕಾರವು ಗ್ರೇಟರ್ ಹೆಸರಘಟ್ಟ ಯೋಜನೆಯಡಿ ಸಂರಕ್ಷಿತ ಹುಲ್ಲುಗಾವಲು ಮೀಸಲು ಪ್ರದೇಶವಾಗಿ ಘೋಷಣೆ ಮಾಡಿತು. ಆದರೆ, ಸರ್ಕಾರ ಈ ನಿರ್ಧಾರ ಪ್ರಕಟಿಸಿ ಕೆಲ ತಿಂಗಳುಗಳು ಕಳೆದಿರುವಾಗಲೇ ಹೊಸ ಯೋಜನೆ ಘೋಷಿಸಿರುವುದೇ ಹುಲ್ಲುಗಾವಲಿಗೆ ಧಕ್ಕೆಯಾಗುವ ಭೀತಿ ಸೃಷ್ಟಿಸಿದೆ ಎಂದು ಆರೋಪಿಸಿದರು.
ಕ್ವಾಂಟಮ್ ಸಿಟಿ ವಿಶೇಷತೆಗಳೇನು?
ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಆರಂಭವಾಗಲಿರುವ ಕ್ವಾಂಟಮ್ ಸಿಟಿಗಾಗಿ ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯ, ಸ್ಟಾರ್ಟ್ಅಪ್‌ಗಳಿಗೆ ಇನ್ಕ್ಯೂಬೇಷನ್ ಸೌಲಭ್ಯ, ಕ್ವಾಂಟಮ್ ಹಾರ್ಡ್‌ವೇರ್, ಪ್ರೊಸೆಸರ್‌ಗಳು, ಕ್ವಾಂಟಮ್ ಎಚ್‌ಪಿಸಿ ಡೇಟಾ ಕೇಂದ್ರಗಳ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಸ್ಟರ್‌ಗಳು ತಲೆ ಎತ್ತಲಿವೆ.
ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಮೂಲಸೌಕರ್ಯ ಉತ್ಪಾದನಾ ಕ್ಲಸ್ಟರ್‌ಗಳು ಇರಲಿವೆ. ಕೈಗಾರಿಕೆ- ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವಾದ ಮೂಲಸೌಕರ್ಯ ಲಭ್ಯವಿರಲಿದೆ. ಕ್ವಾಂಟಮ್ ಭೌತಶಾಸ್ತ್ರ, ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಮೆಕ್ಯಾನಿಕ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಯೋಗಗಳು ನಡೆಯಲಿವೆ. ಕೃತಕ ಬುದ್ದಿಮತ್ತೆಯ ಅವತರಣಿಕೆ ಎಂದೇ ಪರಿಗಣಿಸಿರುವ ಕ್ವಾಂಟಮ್ ತಂತ್ರಜ್ಞಾನವನ್ನು ಎಲ್ಲ ವಲಯಗಳಲ್ಲಿ ಬಳಸಲು ನಿರ್ಧರಿಸಲಾಗಿದೆ.
ಕ್ಯಾಂಟಮ್ ತಂತ್ರಜ್ಞಾನ ಎಂದರೇನು?
ಕ್ವಾಂಟಮ್ ತಂತ್ರಜ್ಞಾನ ಎಂಬುದು ನಾವೀನ್ಯತೆ, ಸಂಶೋಧನೆ ಮತ್ತು ವಾಣಿಜ್ಯೀಕರಣ ಹೆಚ್ಚಿಸಲು ವಿನ್ಯಾಸಗೊಳಿಸಿರುವ ಸಂಯೋಜಿತ ವ್ಯವಸ್ಥೆ. ಕ್ವಾಂಟಮ್ ಸಿಟಿಯು ಶೈಕ್ಷಣಿಕ ಸಂಸ್ಥೆ, ಸ್ಟಾರ್ಟ್ಅಪ್ ಮತ್ತು ಸಂಶೋಧನಾ ಸೌಲಭ್ಯವನ್ನು ಒಟ್ಟುಗೂಡಿಸಿದ ವಾತಾವರಣ ಕಲ್ಪಿಸಲಿದೆ. ಕ್ವಾಂಟಮ್ ಕಂಪ್ಯೂಟಿಂಗ್, ಸಂವಹನ ಮತ್ತು ಸೆನ್ಸಿಂಗ್‌ನಂತಹ ಸುಧಾರಿತ ಕ್ವಾಂಟಮ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಿದೆ.
ಐಸಿಟಿಎಸ್-ಟಿಐಎಫ್ಆರ್‌ಗೂ ಜಾಗ
ಅಂತಾರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ (ICTS–TIFR) ವಿಸ್ತರಣೆಗೆ 8 ಎಕರೆ ಭೂಮಿಯನ್ನು ಹೆಸರಘಟ್ಟದಲ್ಲಿ ನೀಡಲಾಗಿದೆ. ಈ ಜಾಗದಲ್ಲಿ ಸೈದ್ಧಾಂತಿಕ ವಿಜ್ಞಾನ ಕ್ಷೇತ್ರವು ಶೈಕ್ಷಣಿಕ ಮತ್ತು ಸಂಶೋಧನಾ ವಿಸ್ತರಣೆಗೆ ನೆರವಾಗಲಿದೆ.
ಕ್ವಾಂಟಮ್ ತಂತ್ರಜ್ಞಾನಕ್ಕೂ ಸೈದ್ಧಾಂತಿಕ ವಿಜ್ಞಾನ ಕೇಂದ್ರ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ಅಲ್ಲದೇ ಉನ್ನತ ವಿಜ್ಞಾನ ಮತ್ತು ನಾವಿನ್ಯತೆಯ ಕೇಂದ್ರವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕ್ವಾಂಟಮ್ ಸಿಟಿ ಜಾಗತಿಕ ಪ್ರತಿಭೆ, ಹೂಡಿಕೆಗಳನ್ನೂ ಆಕರ್ಷಿಸಲಿದೆ. ಬೆಂಗಳೂರನ್ನು ಭಾರತ ಹಾಗೂ ವಿಶ್ವದ ಕ್ವಾಂಟಮ್ ಭೂಪಟದ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸಲಿದೆ. 2035ರ ವೇಳೆಗೆ 20 ಬಿಲಿಯನ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆ ನಿರ್ಮಿಸುವ ಗುರಿ ಒಳಗೊಂಡಿದೆ ಎನ್ನುತ್ತಾರೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು.
ಸವಾಲುಗಳು ಏನು?
ಹೆಸರಘಟ್ಟ ಸೂಕ್ಷ್ಮ ಪರಿಸರ ವ್ಯವಸ್ಥೆಯಲ್ಲಿ ಕ್ವಾಂಟಮ್ ಸಿಟಿ ಸ್ಥಾಪನೆ ವಿರೋಧಿಸಿ ಪರಿಸರ ಹೋರಾಟಗಾರರು ಹೈಕೋರ್ಟ್ ಮತ್ತು ಹಸಿರು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.
ಹುಲ್ಲುಗಾವಲು ಹಾಗೂ ಸೂಕ್ಷ್ಮ ಪರಿಸರ ವ್ಯವಸ್ಥೆಯ ಸುತ್ತಲೂ ಯಾವುದೇ ಯೋಜನೆಗಳು ಜಾರಿಗೊಳಿಸದಂತೆ ಸ್ಥಳೀಯರು, ರೈತರು ಹಾಗೂ ಪರಿಸರವಾದಿಗಳು ಒತ್ತಡ ಹಾಕುತ್ತಿದ್ದು, ವಿರೋಧ ಪಕ್ಷಗಳು ಕೂಡ ಹೋರಾಟದ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇದೆ.
ಹೆಸರಘಟ್ಟದ ಕ್ವಾಂಟಮ್ ಸಿಟಿ ಸ್ಥಾಪಿಸುವುದು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ. ಆದರೆ, ಇದೇ ಸಮಯದಲ್ಲಿ ಪರಿಸರ ಮತ್ತು ಸುತ್ತಲಿನ ಗ್ರಾಮಗಳ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಯತ್ತಲೂ ಗಮನ ಹರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವಿಶ್ವದಲ್ಲಿ ಕ್ವಾಂಟಮ್ ಪ್ರಗತಿ ನೋಟ
ವಿಶ್ವದಲ್ಲಿ ಅಮೆರಿಕ, ಚೀನಾ, ಯುರೋಪಿಯನ್ ಒಕ್ಕೂಟ ರಾಷ್ಟ್ರಗಳಾದ ಜರ್ಮನಿ, ಫ್ರಾನ್ಸ್, ನೆದರ್‌ಲೆಂಡ್, ಫಿನ್‌ಲೆಂಡ್ ಕ್ವಾಂಟಮ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ.
ಕ್ವಾಂಟಮ್ ತಂತ್ರಜ್ಞಾನವನ್ನು ಕೆನಡಾ, ಜಪಾನ್, ಇಂಗ್ಲೆಂಡ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ದೇಶಗಳು ರಾಷ್ಟ್ರೀಯ ಕಾರ್ಯತಂತ್ರದ ಭಾಗವಾಗಿ ಬಳಸುತ್ತಿವೆ. ಸಂವಹನ ಹಾಗೂ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಕ್ವಾಂಟಮ್ ತಂತ್ರಜ್ಞಾನ ಬಳಕೆ ಅತಿ ಹೆಚ್ಚಿದೆ. ಇಂಡೋ-ಫೆಸಿಪಿಕ್ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳಲ್ಲಿ ಕ್ವಾಂಟಮ್ ತಂತ್ರಜ್ಞಾನವೂ ಒಂದು. ಹೂಡಿಕೆದಾರರು, ಉದ್ಯಮಗಳು ಹಾಗೂ ಸಾರ್ವಜನಿಕ ಸಂಸ್ಥೆಗಳನ್ನು ಪಾಲುದಾರರನ್ನಾಗಿ ಮಾಡಲು ಭಾರತ, ಜಪಾನ್, ಆಸ್ಟ್ರೇಲಿಯಾ ಹಾಗೂ ಅಮೆರಿಕ ಜಂಟಿಯಾಗಿ ಕ್ವಾಡ್ ಹೂಡಿಕೆದಾರರ ವೇದಿಕೆ (QUIN) ರಚಿಸಿಕೊಂಡಿವೆ.
ಹೆಸರಘಟ್ಟ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆ
ಯಲಹಂಕ ತಾಲೂಕಿನ ಹೆಸರಘಟ್ಟದಲ್ಲಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶವಾಗಿ ರಾಜ್ಯ ಸರ್ಕಾರ ಕಳೆದ ಜ.30 ರಂದು ಘೋಷಣೆ ಮಾಡಿತ್ತು.
ಹೆಸರಘಟ್ಟ ಹುಲ್ಲುಗಾವಲಿನ 356 ಎಕರೆ, ಬೈರಾಪುರ ಕೆರೆಯ 383 ಎಕರೆ, ಬ್ಯಾತ ಕೆರೆಯ 165 ಎಕರೆ, ಹೆಸರಘಟ್ಟ ಕೆರೆಯ 1356 ಎಕರೆ ಮತ್ತು ಪಶು ಸಂಗೋಪನಾ ಇಲಾಖೆ ಸ್ವಾಧೀನದಲ್ಲಿರುವ 2,750 ಎಕರೆ ಸೇರಿ ಒಟ್ಟು 5,010 ಎಕರೆ ಪ್ರದೇಶವನ್ನು ವನ್ಯಜೀವಿ (ಸಂರಕ್ಷಣಾ) ಕಾಯಿದೆ- 1972ರ ಸೆಕ್ಷನ್ 36 'ಎ' ಪ್ರಕಾರ '' ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ'ವಾಗಿ ಘೋಷಿಸಿ, ಆದೇಶ ಹೊರಡಿಸಿತ್ತು.