
ಲಾಲ್‍ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ: ತೇಜಸ್ವಿ ಅವರ ‘ವಿಸ್ಮಯ’ ಲೋಕ ಅನಾವರಣ
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಜ. 14 ರಿಂದ 26 ರವರೆಗೆ 219ನೇ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ 'ವಿಸ್ಮಯ' ಲೋಕ ಅನಾವರಣಗೊಳ್ಳಲಿದೆ.
ಗಣರಾಜ್ಯೋತ್ಸವದ ಸಂಭ್ರಮಕ್ಕೆ ಈ ಬಾರಿ ಲಾಲ್‍ಬಾಗ್ ಸಜ್ಜಾಗಿದ್ದು, ಜನವರಿ 14 ರಿಂದ 26 ರವರೆಗೆ 219ನೇ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಪ್ರದರ್ಶನವು ಕನ್ನಡದ ಪ್ರಸಿದ್ಧ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಮತ್ತು ಪರಿಸರ ಕಾಳಜಿಯ ‘ವಿಸ್ಮಯ’ ಲೋಕಕ್ಕೆ ಮೀಸಲಾಗಿದೆ.
ಜ. 14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಜಿನ ಮನೆಯಲ್ಲಿ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ರಾಮಲಿಂಗಾರೆಡ್ಡಿ ಹಾಗೂ ಶಾಸಕ ಉದಯ್ ಬಿ. ಗರುಡಾಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಜ. 17ರಂದು ತೇಜಸ್ವಿಯವರ ಪುತ್ರಿಯರಾದ ಕೆ.ಪಿ. ಸುಸ್ಮಿತಾ ಮತ್ತು ಕೆ.ಪಿ. ಈಶಾನ್ಯೆ ಅವರು ವಿವಿಧ ಕಲಾತ್ಮಕ ಹೂವಿನ ಜೋಡಣೆಗಳ ವಿಭಾಗಕ್ಕೆ ಚಾಲನೆ ನೀಡಲಿದ್ದಾರೆ.
ಫಲಪುಷ್ಪ ಪ್ರದರ್ಶನ ನಡೆಯುವ ಗಾಜಿನ ಮನೆಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಹಾರುವ ಓತಿ ಮತ್ತು ಆನೆಯ ಬೃಹತ್ ಪ್ರತಿಕೃತಿಗಳು ಇರಲಿವೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಬೆಟ್ಟ, ಜಲಪಾತ ಪರಿಸರದ ಮಾದರಿ ಇರಲಿದೆ. ಅದರ ತಪ್ಪಲಲ್ಲಿ ತೇಜಸ್ವಿಯ ಅವರ ನಿರುತ್ತರ ಮನೆಯ ಪುಷ್ಪಮಾದರಿ ಮತ್ತು ತೇಜಸ್ವಿ - ರಾಜೇಶ್ವರಿಯವರ ಪ್ರತಿಮೆಗಳು ಅನಾವರಣಗೊಳ್ಳಲಿವೆ. ಅಲ್ಲದೆ, ತೇಜಸ್ವಿ ಅವರು ಬಳಸುತ್ತಿದ್ದ ಸ್ಕೂಟರ್, ಕರ್ವಾಲೋ ಕಾದಂಬರಿಯ ಪಾತ್ರವಾಗಿರುವ ಕಿವಿ ನಾಯಿ, ಕರಿಯಪ್ಪ, ಮಂದಣ್ಣ, ಹಾರುವ ಓತಿ, ಮಿಡತೆ, ಜೇನು ಹುಳ, ಜೀರುಂಡೆ ಸೇರಿ ಮೊದಲಾದ ಪ್ರಾಣಿಪಕ್ಷಿ, ಕೀಟ ಮತ್ತು ಪುಷ್ಪ ಮಾದರಿಗಳನ್ನು ಪ್ರದರ್ಶನ ಮಾಡಲಾಗುವುದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆರ್.ಗಿರೀಶ್ ಹೇಳಿದರು.
ಗಾಜಿನ ಮನೆಯ ನಾಲ್ಕು ಭಾಗಗಳಲ್ಲಿ ತೇಜಸ್ವಿಯವರ ಬದುಕು ಬರಹ, ಕುವೆಂಪು, ಶಿವರಾಮಕಾರಂತ, ರಾಮ ಮನೋಹರ ಲೋಹಿಯಾ, ತೇಜಸ್ವಿ-ರಾಜೇಶ್ವರಿ ಅವರು ಪುತ್ಥಳಿಗಳು ಆಕರ್ಷಕವಾಗಿ ಕಾಣಲಿವೆ. ಕನ್ನಡ ಸಾಹಿತ್ಯದ ಬಹು ಮಹತ್ವದ ಕೃತಿಗಳಲ್ಲಿ ಒಂದಾಗಿರುವ ಕರ್ವಾಲೋ ಕಾದಂಬರಿಯ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕಾದಂಬರಿಯ ಸನ್ನಿವೇಶ, ಎತ್ತಿನಭುಜ ಶಿಖರ ಮಾದರಿಯ ಹಿನ್ನೆಲೆಯಲ್ಲಿ ನಡೆಯುವಂತೆ ಹೂವು, ಗಿಡ ಮತ್ತು ಚಿತ್ರಗಳನ್ನು ರೂಪಿಸಿ ಪ್ರದರ್ಶನ ಮಾಡಲಾಗುವುದು. ತೇಜಸ್ವಿಯವರ ಪ್ರತಿಮುಖ ಪ್ರತಿಭೆಯನ್ನು ವ್ಯಂಗ್ಯ ಚಿತ್ರಗಳ ಮಾದರಿಯಿರಲಿದ್ದು, ಸುತ್ತಲೂ ಅವರ ಆಯ್ದ ಪುಸ್ತಕಗಳ ಮಾದರಿಗಳು, ಪಾತ್ರ ಸನ್ನಿವೇಶಗಳ ವ್ಯಂಗ್ಯಚಿತ್ರಗಳಿರಲಿವೆ ಎಂದು ತಿಳಿಸಿದರು.
ಗಾಜಿನ ಮನೆಯ ಪ್ರವೇಶ ದ್ವಾರದಲ್ಲಿ ಹಾರುವ ಓತಿ ಮತ್ತು ಆನೆಯ ಬೃಹತ್ ಹೂವಿನ ಪ್ರತಿಕೃತಿಗಳು ಪ್ರೇಕ್ಷಕರನ್ನು ಸ್ವಾಗತಿಸಲಿವೆ. ದಾರದ ಕಲೆ ಮತ್ತು ಸಿರಿಧಾನ್ಯಗಳನ್ನು ಬಳಸಿ ತೇಜಸ್ವಿಯವರ ಮುಖಭಾವವನ್ನು ಅರಳಿಸಲಾಗಿದೆ. ಜೊತೆಗೆ ಕಾಡಿನೊಳಗಿನ ತೇಜಸ್ವಿಯವರ 3ಡಿ ಕಲಾಕೃತಿ ವಿಶೇಷ ಆಕರ್ಷಣೆಯಾಗಿದೆ. ಇದೇ ಮೊದಲ ಬಾರಿಗೆ ಎರಡು ಫ್ಲವರ್ ಟ್ಯಾಬ್ಲೋಗಳು ಲಾಲ್‍ಬಾಗ್ ಸುತ್ತಮುತ್ತ ಸಂಚರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಿವೆ ಎಂದು ಹೇಳಿದರು.
ಮಂತ್ರಮಾಂಗಲ್ಯದ ಪರಿಕಲ್ಪನೆ
ಕುವೆಂಪು ರೂಪಿಸಿರುವ ಮಂತ್ರಮಾಗಲ್ಯ ಮಾದರಿಯಲ್ಲಿ ಮೊಟ್ಟ ಮೊದಲಿಗೆ ಮದುವೆಯಾಗಿ ಆ ಭಾಗದಲ್ಲಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದವರು ತೇಜಸ್ವಿ- ರಾಜೇಶ್ವರಿ. ಅವರ ಸರಳ ಮದುವೆಯ ಸನ್ನಿವೇಶ ವರ್ಟಿಕಲ್ ಗಾರ್ಡನ್ನೊಂದಿಗೆ ನಿರ್ಮಾಣವಾಗಲಿದೆ. ಈ ಮದುವೆ ನೆರವೇರಿಸುತ್ತಿರುವ ಕುವೆಂಪು ಅವರ ಪ್ರತಿಮೆಗಳು ಸಹ ಇಲ್ಲಿ ಗಮನ ಸೆಳೆಯಲಿವೆ. ಜೊತೆಗೆ, ಮಂತ್ರ ಮಾಂಗಲ್ಯದ ವಿವರ, ಮಹತ್ವ ಮತ್ತು ವಿವರವುಳ್ಳ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಗಾಜಿನ ಮನೆಯ ಪರಿಧಿಗೆ ಹೊಂದಿಕೊಂಡಂತೆ ದಾರದ ಕಲೆಯಿಂದ ಮತ್ತು ಸಿರಿಧಾನ್ಯಗಳಿಂದ ಮೂಡಿ ಬರುವ ತೇಜಸ್ವಿಯವರ ಮುಖಭಾವ ಇರಲಿದೆ. ದಟ್ಟ ಕಾನನದ ನಡುವೆ ಹಸಿರು ರಾಶಿ, ಪ್ರಾಣಿ - ಪಕ್ಷಿಗಳ - ಕೀಟಗಳ ನಡುವೆ ನಿಸರ್ಗದ ಅನ್ವೇಷಣೆಗಳಿಂದ ತೇಜಸ್ವಿಯವರ ಆಕರ್ಷಕ ಪರಿಕಲ್ಪನೆ ಮೂಡಿ ಬರಲಿದೆ. ಅಲ್ಲದೆ, ಗಾಜಿನ ಮನೆ ಹೊರಭಾಗದಲ್ಲಿ ಆರು ಕಡೆಗಳಲ್ಲಿ ಎಲ್ಇಡಿ ಪರದೆಗಳ ಮೇಲೆ ತೇಜಸ್ವಿ ಅವರು ಜೀವನ ಮತ್ತು ಬರಹಕ್ಕೆ ಎಐ ಆಧಾರಿತ ವಿಡಿಯೋ ತುಣುಕುಗಳು ಪ್ರದರ್ಶನ ಇರಲಿದೆ. ತೇಜಸ್ವಿ ಸಾಹಿತ್ಯದಲ್ಲಿ ಕಾಣಸಿಗುವ ಪ್ರಾಣಿ, ಪಕ್ಷಿ ಮತ್ತು ಕೀಟಗಳ ಕಲಾಕೃತಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದಾರೆ ಎಂದು ವಿವರಿಸಿದರು.
ತೇಜಸ್ವಿ ನಾಟಕೋತ್ಸವ
ಜ.16 ರಿಂದ 26 ರವರೆಗೆ ಪ್ರತಿದಿನ ಸಂಜೆ ತೇಜಸ್ವಿಯವರ ಪ್ರಮುಖ ಕೃತಿಗಳಾದ ‘ಕರ್ವಾಲೋ’, ‘ಕೃಷ್ಣೇಗೌಡನ ಆನೆ’, ‘ಜುಗಾರಿ ಕ್ರಾಸ್’ ಸೇರಿದಂತೆ ವಿವಿಧ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕರ ಕಚೇರಿ ಮುಂಭಾಗದ ಹುಲ್ಲುಹಾಸಿನ ಮೇಲೆ ತೇಜಸ್ವಿ ವೇದಿಕೆ ನಿರ್ಮಾಣವಾಗಲಿದ್ದು, ಪ್ರದರ್ಶನದುದ್ದಕ್ಕೂ ದಿನಕ್ಕೊಂದು ಕಾರ್ಯಕ್ರಮ ನಡೆಯಲಿದೆ. ತೇಜಸ್ವಿ ನಾಟಕಗಳ ಪ್ರದರ್ಶನ, ಕುಟುಂಬ ಮತ್ತು ಒಡನಾಡಿಗಳೊಂದಿಗೆ ಸಂವಾದ ಕಾರ್ಯಕ್ರಮಗಳು, ಉಪನ್ಯಾಸಗಳು ನಡೆಯಲಿವೆ. ಖ್ಯಾತ ಕಲಾವಿದರ ಕೈಚಳಕದಿಂದ ಮೂಡಿಬಂದಿರುವ ಆಕರ್ಷಕ ಚಿತ್ರಗಳನ್ನೊಳಗೊಂಡ ತೇಜಸ್ವಿಯವರ ಆಯ್ದ 7-8 ಸೆಲ್ಪಿ ಪಾಯಿಂಟ್ಗಳು ಹಾಗೂ ತೇಜಸ್ವಿಯವರ ಅಪರೂಪದ ಆಯ್ದ ಚಿತ್ರಗಳ ಪ್ರದರ್ಶನವನ್ನು ನೈಸರ್ಗಿಕವಾದ ಫೋಟೋ ಫ್ರೇಮ್ಗಳ ನಡುವೆ ಪ್ರದರ್ಶಿಸಲಾಗುವುದು. ಪ್ರದರ್ಶನದ ಭಾಗವಾಗಿ ಬಿಳಿಗಿರಿರಂಗನಬೆಟ್ಟ ಪ್ರದೇಶದ ಕಾಡಿನಲ್ಲಿರುವ ಸೋಲಿಗೆ ಬುಡಕಟ್ಟು ಜನರ ಜೀವನ-ಬದುಕಿನ ನೈಜ ಚಿತ್ರಣವು ಪ್ರದರ್ಶನದ ಸಮಯದಲ್ಲಿ ಮೂಡಿ ಬರಲಿವೆ ಎಂದು ಮಾಹಿತಿ ನೀಡಿದರು.
ಟಿಕೆಟ್ ದರ
ವಯಸ್ಕರಿಗೆ ಸಾಮಾನ್ಯ ದಿನದಲ್ಲಿ 80 ರೂ., ರಜೆ ದಿನ 100 ರೂ. ನಿಗದಿ ಮಾಡಲಾಗಿದೆ. ಮಕ್ಕಳಿಗೆ 30 ರೂ. ಶುಲ್ಕ ನಿಗದಿ ಮಾಡಲಾಗಿದೆ. 6 ವರ್ಷದೊಳಗಿನ ಮಕ್ಕಳಿಗೆ ಮತ್ತು ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿಗಳಿಗೆ (10ನೇ ತರಗತಿವರೆಗೆ) ಉಚಿತ ಪ್ರವೇಶವಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಅಧಿಕೃತ ಜಾಲತಾಣದ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶವಿದೆ. 15 ಕಡೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆಂಬುಲೆನ್ಸ್ ಮತ್ತು ತುರ್ತು ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ.
ಶಾಂತಿನಗರ ಬಹುಮಹಡಿ ಪಾರ್ಕಿಂಗ್, ಜೆ.ಸಿ ರಸ್ತೆಯ ಬಿಬಿಎಂಪಿ ಪಾರ್ಕಿಂಗ್, ಹಾಪ್‌ಕಾಮ್ಸ್ ಆವರಣ ಹಾಗೂ ದ್ವಿಚಕ್ರ ವಾಹನಗಳಿಗಾಗಿ ಅಲ್ ಅಮೀನ್ ಕಾಲೇಜ್ ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ತೇಜಸ್ವಿಯವರ ಪರಿಸರ ಕಾಳಜಿ ಮತ್ತು ವೈಜ್ಞಾನಿಕ ಮನೋಭಾವವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಈ ಬಾರಿಯ ಫಲಪುಷ್ಪ ಪ್ರದರ್ಶನದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

