CT Ravi vs Hebbalkar | ಸಿ.ಟಿ.ರವಿ ವಿರುದ್ಧ ಕಾನೂನು ಸಮರ: ಶಿಕ್ಷೆಯಾಗುವವರೆಗೆ ಸುಮ್ಮನಿರುವುದಿಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌
x
ಸಿಟಿ ರವಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

CT Ravi vs Hebbalkar | ಸಿ.ಟಿ.ರವಿ ವಿರುದ್ಧ ಕಾನೂನು ಸಮರ: ಶಿಕ್ಷೆಯಾಗುವವರೆಗೆ ಸುಮ್ಮನಿರುವುದಿಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಲಕ್ಮೀ ಹೆಬ್ಬಾಳ್ಕರ್‌ ಎರಡು ದಿನದ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡುವಾಗ ಸಿಟಿ ರವಿ ಮಾತನಾಡಿರುವ ವಿಡಿಯೋ ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಇದೀಗ ಎರಡು ವಿಡಿಯೋಗಳನ್ನು ಅವರು ರಿಲೀಸ್ ಮಾಡಿದ್ದಾರೆ.


Click the Play button to hear this message in audio format

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಉಂಟು ಉಂಟುಮಾಡಿದೆ. ಸಿಟಿ ರವಿ ಅವರಿಗೆ ಸರಿಯಾದ ಶಿಕ್ಷೆಯಾಗುವವರೆಗೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪಟ್ಟು ಹಿಡಿದಿದ್ದು, ಈ ಬಗೆ ಪ್ರಧಾನಿ, ರಾಷ್ಟ್ರಪತಿಯವರಿಗೆ ದೂರು ನೀಡುವುದಾಗಿ ಘೋಷಿಸಿದ್ದಾರೆ.

2 ವಿಡಿಯೋ ರಿಲೀಸ್ ಮಾಡಿದ ಸಚಿವೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ರವಿ ತಾವು ಹಾಗೇ ಮಾತನಾಡಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಲಕ್ಮೀ ಹೆಬ್ಬಾಳ್ಕರ್‌ ಎರಡು ದಿನದ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡುವಾಗ ಸಿಟಿ ರವಿ ಮಾತನಾಡಿರುವ ವಿಡಿಯೋ ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಇದೀಗ ಎರಡು ವಿಡಿಯೋಗಳನ್ನು ಅವರು ರಿಲೀಸ್ ಮಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಅವರನ್ನು ನೀವು ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನಾನು ನಿಮ್ಮ ಬಳಿ ಮೂವರು ಮುಗ್ದ ಜನರನ್ನು ಅಪಘಾತ ಮಾಡಿ ಹತ್ಯೆ ಮಾಡಿದ್ದೀರಲ್ಲವೇ, ನಿಮ್ಮನ್ನು ಕೊಲೆಗಾರ ಎನ್ನಲೇ ಎಂದಿದ್ದಕ್ಕೆ ತಾನೆ ನೀವು ನನಗೆ ಆ ಪದವನ್ನು ಬಳಸಿದ್ದು? ನೆನಪಿಲ್ಲವಾ? ಈಗೇನು ನಾಟಕ ಮಾಡುತ್ತಿದ್ದೀರಾ… ತಲೆಗೆ ಅಷ್ಟೊಂದು ದೊಡ್ಡ ಪಟ್ಟಿ ಕಟ್ಟಿಕೊಂಡು ನಾಟಕ ಮಾಡುತ್ತಿದ್ದೀರಾ? ನಿಮ್ಮನ್ನು ಮಹಿಳೆಯರು ಎಂದಿಗೂ ಕ್ಷಮಿಸಲ್ಲ ಎಂದು ಕಿಡಿಕಾರಿದ್ದಾರೆ.

ಸಭಾಪತಿಗೆ ಮತ್ತೊಮ್ಮೆ ದೂರು

ಈ ವಿಷಯದ ಬಗ್ಗೆ ನಾನು ಮತ್ತೆ ಸಭಾಪತಿಗೆ ದೂರು ನೀಡುತ್ತೇನೆ. ಸಿ ಟಿ ರವಿ ವಿರುದ್ಧ ಹೋರಾಟ ಮಾಡುತ್ತೇನೆ. ನನ್ನ ಬಳಿ ಇರುವ ದಾಖಲೆಯನ್ನು ಬಿಡುಗಡೆ ಮಾಡಿದ್ದೇನೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ ಎಸ್ ಎಲ್ ವರದಿ ಬೇಗ ಬಹಿರಂಗವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಧಾನಿ, ರಾಷ್ಟ್ರಪತಿಗೆ ಸಿಟಿ ರವಿ ವಿರುದ್ಧ ದೂರು

ಸಿಟಿ ರವಿ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೇಳುತ್ತೇನೆ. ಅವಕಾಶ ಸಿಕ್ಕರೆ ಮೋದಿಯವರನ್ನು ಭೇಟಿಯಾಗಿ, ನನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಕೇಳುತ್ತೇನೆ. ಅಲ್ಲದೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪತ್ರ ಬರೆದು ಅವರ ಗಮನಕ್ಕೂ ಪ್ರಕರಣವನ್ನು ತರುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಹೆಣ್ಣಿನ ಆತ್ಮಗೌರವಕ್ಕೆ ಧಕ್ಕೆಯಾಗಿದೆ

ನನಗೆ ಅನ್ಯಾಯವಾಗಿದೆ. ಎಲ್ಲದಕ್ಕೂ ಹೆಚ್ಚಾಗಿ ನಾನು ಮಹಿಳೆ, ಸಿಟಿ ರವಿ ಮಾತಿನಿಂದ ಚನ್ನಮ್ಮನ ನಾಡಿನ ಮಹಿಳೆ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ರಾಜಕಾರಣದಲ್ಲಿ ಮಹಿಳೆಯರನ್ನು ಹಿಂದಕ್ಕೆ ಸರಿಸುವ ಆತ್ಮಸ್ಥೈರ್ಯ ಕುಗ್ಗಿಸೋ ಪ್ರಯತ್ನ ಇದು.. ಇದರಿಂದ ಹಿಂದೆ ಸರಿತೀವಿ, ಮನೆಯಲ್ಲಿ ಕೂರುತ್ತೀವಿ ಅನ್ನೋದು ಭ್ರಮೆ. ಅದನ್ನು ಬಿಟ್ಟುಬಿಡಿ ಎಂದು ಅವರು ತಿರುಗೇಟು ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯಿಲ್ಲ

ಈ ಘಟನೆ ನನಗೆ ಸಾಕಷ್ಟು ಆಘಾತವನ್ನುಂಟು ಮಾಡಿತ್ತು. ಎರಡು ದಿನ ನಾನು ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. 26 ವರ್ಷ ಸಂಘರ್ಷದಿಂದ ಮೇಲೆ ಬಂದಿದ್ಧೇನೆ. ನಾನು ರೆಡ್‌ ಕಾರ್ಪೆಟ್‌ ಮೇಲೆ ನಡೆದು ಬಂದಿಲ್ಲ. ನಾನು ನಿಂದನೆಗೆ ಒಳಗಾದವಳು. ಅವರು ನಿಂದಿಸಿದವರು. ಆದರೆ, ಈಗ ಅವರೇ ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ .ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಹಿಳೆಯನ್ನು ನಿಂದಿಸಿದವರಿಗೆ ಬೆಂಬಲ

ಬಿಜೆಪಿ ನಾಯಕರನ್ನು ನೋಡಿದರೆ ನನಗೆ ನಾಚಿಕೆ ಆಗುತ್ತೆ. ಮಹಿಳೆಯನ್ನು ನಿಂದಿಸಿದ ವ್ಯಕ್ತಿಗೆ ಬೆಂಬಲ ನೀಡುತ್ತಿದ್ದಾರೆ. ಸಿ.ಟಿ.ರವಿಗೆ ಅವರ ತಾಯಿ, ಹೆಂಡತಿಯಾದ್ರೂ ಸ್ವಲ್ಪ ಬುದ್ಧಿ ಹೇಳಬೇಕು. ಆತ್ಮಸಾಕ್ಷಿ ಅಂತ ಇದ್ದರೆ ತಪ್ಪಿನ ಅರಿವು ಮಾಡಿಕೊಳ್ಳಲಿ. ಒಂದು ಮಹಿಳೆ, ಜೊತೆಗೆ ಸಚಿವೆಗೆ ಅನ್ಯಾಯವಾಗಿದೆ. ಜನ ಛೀಮಾರಿ ಹಾಕ್ತಾರೆ ಅಂತ ಸರ್ಕಾರವನ್ನು ದೂರುತ್ತಿದ್ದಾರೆ. ಮೂಲ ವಿಚಾರವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡ್ತಿದ್ದಾರೆ? ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಗೋಮುಖ ವ್ಯಾಘ್ರಗಳು ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಕಿಡಿಕಾರಿದ್ದಾರೆ.

ಮಹಿಳಾ ಕುಲವನ್ನು ಅವಮಾನಿಸಿದ ರವಿ ವಿರುದ್ಧ ಹೋರಾಡುತ್ತೇನೆ. ಸಿ.ಟಿ ರವಿಗೆ ಶಿಕ್ಷೆ ಆಗುವರೆಗೆ ನಾನು ಸುಮ್ಮನೆ ಕೂರುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಶಪಥ ಮಾಡಿದ್ದಾರೆ.

Read More
Next Story