
NLSIU Study| ರಾಜ್ಯದಲ್ಲಿ ಮೂರನೇ ಎರಡರಷ್ಟು ಠಾಣೆಗಳಲ್ಲಿ ಒಬ್ಬ ಮಹಿಳಾ ಅಧಿಕಾರಿಯೂ ಇಲ್ಲ!
ಮೇಲಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ ಉದಾಹರಣೆಗಳೂ ಇವೆ. ಅನೇಕ ಪ್ರಕರಣದಲ್ಲಿ ಮಹಿಳಾ ಪೊಲೀಸರನ್ನು ಲೈಂಗಿಕ ದೌರ್ಜನ್ಯ ಪ್ರಕರಣಗಳಂತಹ ಪ್ರಮುಖ ತನಿಖೆಗಳಿಂದ ದೂರವಿಡಲಾಗುತ್ತದೆ ಎಂದು ವರದಿ ಅಭಿಪ್ರಾಯಪಟ್ಟಿದೆ
ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಬೆಳೆಯುತ್ತಿರುವ ಕಾಲಮಾನದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಮಾತ್ರ ಇದಕ್ಕೆ ವ್ಯತಿರಿಕ್ತ. ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯ ಕೊರತೆ ತೀವ್ರ ಸವಾಲಾಗಿ ಪರಿಣಮಿಸಿದ್ದು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಮಹಿಳಾ ಪೊಲೀಸ್ ಪಡೆಯ ಪ್ರಮಾಣ ಕಡಿಮೆಯಿದ್ದು, ದೇಶದಲ್ಲಿ ರಾಜ್ಯವು 17ನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು- National Law School of India University) ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. 'ಕರ್ನಾಟಕ ರಾಜ್ಯ ಪೊಲೀಸರಲ್ಲಿ ಮಹಿಳೆಯರು: ಅನುಭವಗಳು, ಸವಾಲುಗಳು ಮತ್ತು ಅವಕಾಶಗಳ ಮೌಲ್ಯಮಾಪನ ವರದಿʼಯಲ್ಲಿ ರಾಜ್ಯದಲ್ಲಿ ಮಹಿಳೆ ಪೊಲೀಸರ ಸ್ಥಿತಿಗತಿ ಕುರಿತು ಉಲ್ಲೇಖವಾಗಿದೆ. ರಾಜ್ಯದ ಒಟ್ಟು ಪೊಲೀಸ್ ಸಿಬ್ಬಂದಿಯಲ್ಲಿ ಮಹಿಳೆಯರ ಪಾಲು ಕೇವಲ ಶೇ.8.91 ರಷ್ಟು ಮಾತ್ರ ಇದೆ ಎಂದು ತಿಳಿಸಲಾಗಿದೆ.
ದೇಶದಲ್ಲಿ ಅತಿ ಹೆಚ್ಚು ಮಹಿಳಾ ಪೊಲೀಸರು ಹೊಂದಿರುವ ರಾಜ್ಯ ಬಿಹಾರ. ಬಿಹಾರ್ ರಾಜ್ಯದಲ್ಲಿ ಶೇ. 23.66 ಮಹಿಳಾ ಪೊಲೀಸರು ಇದ್ದಾರೆ. ನಂತರ ಸ್ಥಾನದಲ್ಲಿ ಆಂಧ್ರಪ್ರದೇಶ , ತಮಿಳುನಾಡು ರಾಜ್ಯಗಳಿವೆ. ಆಂಧ್ರಪ್ರದೇಶದಲ್ಲಿ ಶೇ.21.5, ತಮಿಳುನಾಡಿನಲ್ಲಿ ಶೇ.20.7 ರಷ್ಟು ಇದೆ. ಇದಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಶೇ 8.91 ರಷ್ಟು ಮಹಿಳಾ ಪೊಲೀಸರು ಇದ್ದಾರೆ. ರಾಷ್ಟ್ರೀಯ ಅನುಪಾತದ ಪ್ರಕಾರ ರಾಜ್ಯದಲ್ಲಿ ಶೇ.12.73 ರಷ್ಟು ಮಹಿಳಾ ಪೊಲೀಸರ ಸಂಖ್ಯೆ ಕಡಿಮೆ ಇದೆ. ಅಲ್ಲದೇ ರಾಜ್ಯದ ಸುಮಾರು ಮೂರನೇ ಎರಡರಷ್ಟು ಪೊಲೀಸ್ ಠಾಣೆಗಳಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ), ಸಬ್-ಇನ್‌ಸ್ಪೆಕ್ಟರ್ (ಎಸ್‌ಐ) ಅಥವಾ ಪೊಲೀಸ್ ಇನ್‌ಸ್ಪೆಕ್ಟರ್ (ಪಿಐ)ನಂತಹ ಪ್ರಮುಖ ತನಿಖಾ ಹುದ್ದೆಗಳಲ್ಲಿ ಒಬ್ಬ ಮಹಿಳಾ ಅಧಿಕಾರಿಯೂ ಇಲ್ಲ ಎಂದು ವರದಿಯು ಬೆಳಕು ಚೆಲ್ಲಿದೆ.
ರಾಜ್ಯದ ಎಂಟು ಜಿಲ್ಲೆಗಳ 202 ಪೊಲೀಸ್ ಠಾಣೆಗಳನ್ನು ರಾಷ್ಟ್ರೀಯ ಕಾನೂನು ಶಾಲೆ ಸಮೀಕ್ಷೆ ನಡೆಸಿತು. ಈ ವೇಳೆ ಕೇವಲ ಮೂರು ಠಾಣೆಗಳಲ್ಲಿ (ಮೈಸೂರಿನಲ್ಲಿ ಎರಡು ಮತ್ತು ದಾವಣಗೆರೆಯಲ್ಲಿ ಒಂದು) ಮಾತ್ರ ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಇರುವುದು ಕಂಡುಬಂದಿದೆ. 130 ಠಾಣೆಗಳಲ್ಲಿ ಒಬ್ಬರೂ ಮಹಿಳಾ ಎಸ್‌ಐ ಇರಲಿಲ್ಲ ಮತ್ತು ಕೇವಲ 9 ಠಾಣೆಗಳಲ್ಲಿ ಒಬ್ಬರು ಮಹಿಳಾ ಎಎಸ್‌ಐ ಇದ್ದರು. 2007ರಲ್ಲಿ ಮಹಿಳೆಯರ ಸೇರ್ಪಡೆ ಶೇ. 5.44ರಷ್ಟಿದ್ದು, ಕಳೆದ ವರ್ಷದ ಹೊತ್ತಿಗೆ ಇದು ಕೇವಲ ಶೇ. 8.91ಕ್ಕೆ ಏರಿಕೆಯಾಗಿದೆ.
ಮೀಸಲಾತಿ ಹೆಚ್ಚಳ ಮಾಡಿದರೆ ಮಹಿಳೆಯರ ಸಂಖ್ಯೆ ಹೆಚ್ಚಳ
ಮಹಿಳೆಯರು ರಾಜ್ಯದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ವಿಶೇಷವಾಗಿ ಪೇದೆ, ಸಬ್ ಇನ್ಸ್‌ಪೆಕ್ಟರ್, ಮತ್ತು ಇನ್ಸ್‌ಪೆಕ್ಟರ್ ಹುದ್ದೆಗಳಲ್ಲಿ ಇವರ ಪಾಲು ಕಳಪೆಮಟ್ಟದಲ್ಲಿದೆ. ತನಿಖಾ ಅಧಿಕಾರಿಗಳ ಹುದ್ದೆಗಳಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ. 5.97 ಮಾತ್ರವಿದ್ದು, ಮಹತ್ವದ ನಿರ್ಧಾರಾತ್ಮಕ ಹುದ್ದೆಗಳಲ್ಲಿ ಮಹಿಳೆಯರ ಪ್ರವೇಶ ಬಹಳ ಕಡಿಮೆ ಇದೆ ಎಂದು ತಿಳಿಸಿದೆ. 2017ರಲ್ಲಿ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಸಿಎಜಿ) ಈ ಕೊರತೆಯನ್ನು ಎತ್ತಿ ತೋರಿಸಿದ ನಂತರ, ಸರ್ಕಾರವು 2020ರಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಶೇ. 25ಕ್ಕೆ ಹೆಚ್ಚಿಸಿತ್ತು. ಬಹಳಷ್ಟು ಪ್ರಕರಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಲೈಂಗಿಕ ದೌರ್ಜನ್ಯ ಪ್ರಕರಣಗಳಂತಹ ಪ್ರಮುಖ ತನಿಖೆಗಳಿಂದ ದೂರವಿಡಲಾಗುತ್ತದೆ. ಬದಲಿಗೆ, ಅವರನ್ನು ಸಂತ್ರಸ್ತರ ಜೊತೆಗಿರಲು ಅಥವಾ ಹೇಳಿಕೆಗಳ ಸಮಯದಲ್ಲಿ ಹಾಜರಿರಲು ಮಾತ್ರ ಬಳಸಲಾಗುತ್ತದೆ. ಮಹಿಳೆಯರ ನೇಮಕಾತಿ ಪ್ರಮಾಣವನ್ನು ಶೇ.33ಕ್ಕೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದೆ.
ಮಹಿಳಾ ಪೊಲೀಸರು ಎದುರಿಸುವ ಲೈಂಗಿಕ ದೌರ್ಜನ್ಯ
ರಾತ್ರಿ ಕರ್ತವ್ಯದ ಸಮಯದಲ್ಲಿ ಮಹಿಳಾ ಸಿಬ್ಬಂದಿಯ ಸುರಕ್ಷತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಲಿಂಗ ಸಮಾನತೆ ಸಾಧಿಸುವುದು ಕೇವಲ ಸಾಂವಿಧಾನಿಕ ಅಗತ್ಯ ಮಾತ್ರವಲ್ಲ, ಅದು ಕಾರ್ಯಾಚರಣೆಯ ಅನಿವಾರ್ಯತೆಯಾಗಿದೆ. ಮಹಿಳಾ ಸಿಬ್ಬಂದಿ ಸ್ವಚ್ಛ, ಪ್ರತ್ಯೇಕವಾದ ಶೌಚಾಲಯಗಳು ಮತ್ತು ವಿಶ್ರಾಂತಿ ಕೊಠಡಿಗಳ ಕೊರತೆ ಸೇರಿದಂತೆ ಕಳಪೆ ಸೌಲಭ್ಯಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಶಿಸ್ತಿನ "ಮೆಮೊ"ಗಳು ಸಹ ಬಳಕೆಯಾಗುತ್ತವೆ. ಇದನ್ನು ಹೆಚ್ಚಾಗಿ ಬೆದರಿಕೆಯ ಸಾಧನವಾಗಿ ಬಳಸಿಕೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ನಂತಹ ಹುದ್ದೆ ಮತ್ತು ಎಎಸ್‌ಐನಂತಹ ಹುದ್ದೆಗಳಲ್ಲಿ ಹಿರಿಯ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವ ಉದಾಹರಣೆಗಳಿವೆ ಎಂದು ಹೇಳಲಾಗಿದೆ.
ಮಹಿಳಾ ಸಿಬ್ಬಂದಿಗೆ ಸೂಕ್ತ ಮೂಲಸೌಕರ್ಯಗಳಿಲ್ಲ. ಶೌಚಾಲಯಗಳ ಕೊರತೆ ಕಾರಣ ಅನೇಕ ಮಹಿಳಾ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ನೀರು ಕುಡಿಯುವುದನ್ನೇ ಕಡಿಮೆ ಮಾಡುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪೊಲೀಸ್ ಇಲಾಖೆಯೊಳಗೆ ಅನುಚಿತ ಮಾತು ಮತ್ತು ವರ್ತನೆ ಸಾಮಾನ್ಯವಾಗಿದೆ. ಹಿರಿಯ ಅಧಿಕಾರಿಗಳ ಭಯದಿಂದ ಮಹಿಳೆಯರು ಇದರ ಬಗ್ಗೆ ಮಾತನಾಡುವುದಿಲ್ಲ ಎಂದು ವರದಿ ಹೇಳಿದೆ.
ಶಸ್ತ್ರಾಸ್ತ್ರ ವಿಭಾಗದಲ್ಲಿಯೂ ಕಡಿಮೆ
ರಾಜ್ಯದ 9,081 ಮಹಿಳಾ ಸಿಬ್ಬಂದಿಯಲ್ಲಿ, 8,937 ಮಂದಿ ನಾಗರಿಕ ಪೊಲೀಸ್ ವಿಭಾಗದಲ್ಲಿದ್ದು, ಇದು ಆ ವಿಭಾಗದ ಶೇ. 12.69 ರಷ್ಟಿದೆ. ಆದರೆ, ಶಸ್ತ್ರಾಸ್ತ್ರ ದಳಗಳಲ್ಲಿ ಅವರ ಪಾಲು ಕೇವಲ ಶೇ. 1.58 ರಷ್ಟಿದೆ. ಕರ್ನಾಟಕದ ಜಿಲ್ಲಾ ಸಶಸ್ತ್ರ ಮೀಸಲಿನಲ್ಲಿ ಒಬ್ಬ ಮಹಿಳಾ ಸಿಬ್ಬಂದಿಯೂ ಇಲ್ಲ. ಆದರೆ, ತಮಿಳುನಾಡು, ಕೇರಳದಲ್ಲಿ ಮಹಿಳಾ ಸಿಬ್ಬಂದಿ ಕರ್ನಾಟಕಕ್ಕಿಂತ ಹೆಚ್ಚಿದೆ ಎಂದು ಹೇಳಲಾಗಿದೆ.
ವರದಿಯಲ್ಲಿನ ಶಿಫಾರಸುಗಳು
* ಪೊಲೀಸ್ ಪಡೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಪ್ರಮಾಣವನ್ನು ಶೇ.33 ಕ್ಕೆ ಹೆಚ್ಚಿಸಬೇಕು
* ಲಿಂಗ ಸಮಾನತೆಯನ್ನು ಶಾಸನಬದ್ಧ ಅವಶ್ಯಕತೆಯನ್ನಾಗಿ ಮಾಡಲು ರಾಜ್ಯ ಪೊಲೀಸ್ ಕಾಯ್ದೆಯನ್ನು ಪರಿಶೀಲಿಸಬೇಕಿದೆ.
* ಜಾಗೃತಿ ಅಭಿಯಾನದೊಂದಿಗೆ ನೇಮಕಾತಿ ಕ್ರಿಯಾ ಯೋಜನೆಯನ್ನು ರೂಪಿಸಬೇಕು
* ಗಸ್ತು ಮತ್ತು ಸಂಚಾರದಂತಹ ಮುಂಚೂಣಿಯ ಪಾತ್ರಗಳಲ್ಲಿ ಹೆಚ್ಚಿನ ಮಹಿಳೆಯರನ್ನು ನೇಮಿಸಬೇಕು
* ಪ್ರತ್ಯೇಕ ಶೌಚಾಲಯಗಳು ಮತ್ತು ಬ್ಯಾರಕ್‌ಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸುಧಾರಿಸಬೇಕು
* ಮಹಿಳಾ ಸಿಬ್ಬಂದಿಯ ಕುಟುಂಬಗಳೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸಿ ಅವರ ಕೆಲಸಕ್ಕೆ ವಿಶ್ವಾಸ ಮತ್ತು ಬೆಂಬಲವನ್ನು ಬೆಳೆಸಿಕೊಳ್ಳಬೇಕು
ಅಭಿಪ್ರಾಯಗಳು:
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು, ಮಹಿಳೆ ಪೊಲೀಸ್ ಸಿಬ್ಬಂದಿ ಕಚೇರಿಯಲ್ಲಿಯೇ ಕೆಲಸ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. ಹೊರಗೆ ಫೀಲ್ಡ್‌ನಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಮದುವೆಯಾಗಿ ಮಕ್ಕಳು ಆದ ಬಳಿಕವಂತೂ ಹೆಚ್ಚಾಗಿ ಆರೋಗ್ಯದಲ್ಲಿ ಬದಲಾವಣೆಯಾಗುವುದರಿಂದ ಮಹಿಳಾ ಸಿಬ್ಬಂದಿಯು ಸಹ ಕಚೇರಿಯಲ್ಲಿ ಕೆಲಸ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. ಇದಲ್ಲದೇ, ಮಹಿಳೆಯರ ನೇಮಕಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಇತ್ತೀಚೆಗಿನ ದಿನದಲ್ಲಿ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ನೇಮಕಾತಿ ಪ್ರಕ್ರಿಯೆ ನಡೆಯದಿರುವ ಕಾರಣ ಮಹಿಳೆಯರ ಕೊರತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.
ಸಮೀಕ್ಷೆ ನಡೆಸಿದ ಸಂಶೋಧಕಿ ದೇವಯಾನಿ ಶ್ರೀವಾಸ್ತವ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, "ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರೂ ಹೆಚ್ಚಾಗಿ ತನಿಖೆಯಂತಹ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು. ತನಿಖಾ ಮಟ್ಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಮತ್ತು ಮಹಿಳೆಯರು ಸಹ ದಿಟ್ಟ ಹೆಜ್ಜೆ ಇಡಬೇಕಾದ ಅಗತ್ಯತೆ ಇದೆ. ಮಹಿಳೆಯರ ನೇಮಕಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕಿದೆ. ಮಹಿಳೆಯರಿಗೆ ಪೊಲೀಸ್ ಇಲಾಖೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಸುಧಾರಣೆಗಳನ್ನು ತರಬೇಕು," ಎಂದು ಹೇಳಿದರು.

