ಬಾಣಂತಿಯರ ಸಾವು ಪ್ರಕರಣ | ಐವಿ ದ್ರಾವಣದಲ್ಲಿ ʼಎಂಡೋ ಟಾಕ್ಸಿನ್ʼ ಅಂಶ ಪತ್ತೆ
ಸಿಂಧನೂರು ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಬಳಸಿದ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಸ್ಯಾಂಪಲ್‌ಗಳನ್ನು ಬೆಂಗಳೂರು ಹಾಗೂ ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವೇ ಕಾರಣ ಎಂಬುದು ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿದೆ.
ಸಿಂಧನೂರು ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಬಳಸಿದ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಸ್ಯಾಂಪಲ್‌ಗಳನ್ನು ಬೆಂಗಳೂರು ಹಾಗೂ ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿ ʼಎಂಡೋ ಟಾಕ್ಸಿನ್ʼ ಅಂಶ ಪತ್ತೆಯಾಗಿದೆ. ಇದು ಬಳಕೆಗೆ ಯೋಗ್ಯವಲ್ಲ ಎಂದು ಪ್ರಯೋಗಾಲಯಗಳು ವರದಿ ನೀಡಿವೆ.
ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾಡಳಿತವು ಮೂರು ಲ್ಯಾಬ್‌ಗಳಿಗೆ ತಲಾ 6 ಬಾಟಲ್ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಿತ್ತು.
ಈ ಪೈಕಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರಯೋಗಾಲಯ ಹಾಗೂ ಹೈದರಾಬಾದ್ ಪ್ರಯೋಗಾಲಯದ ವರದಿ ಕೈ ಸೇರಿದೆ. ಡ್ರಗ್ ಕಂಟ್ರೋಲ್ ಪ್ರಯೋಗಾಲಯದ ವರದಿ ಮಾತ್ರ ಬಾಕಿ ಇದೆ.
ಬೆಂಗಳೂರು ವೈದ್ಯಕೀಯ ಕಾಲೇಜು ನೀಡಿರುವ ವರದಿಯಲ್ಲಿ 6 ಸ್ಯಾಂಪಲ್‌ಗಳ ಪೈಕಿ 4 ಸ್ಯಾಂಪಲ್‌ಗಳು ಉಪಯೋಗಕ್ಕೆ ಯೋಗ್ಯವಲ್ಲ, ಎರಡು ಮಾತ್ರ ಬಳಕೆಗೆ ಯೋಗ್ಯ ಎಂದು ಹೇಳಿದೆ.
ಹೈದರಾಬಾದ್‌ನ ವಿಂಪ್ಟಾ ಲ್ಯಾಬ್ ವರದಿಯಲ್ಲಿ 6 ಸ್ಯಾಂಪಲ್ ಪೈಕಿ, ನಾಲ್ಕು ಉಪಯೋಗಕ್ಕೆ ಯೋಗ್ಯವಿದ್ದು, ಎರಡು ಯೋಗ್ಯವಲ್ಲ ಎಂದು ವರದಿ ತಿಳಿಸಿದೆ. ಆದರೆ, ಬಳಕೆಗೆ ಯೋಗ್ಯವಲ್ಲದ ಸ್ಯಾಂಪಲ್‌ಗಳಲ್ಲಿ ಎಂಡೋ ಟಾಕ್ಸಿನ್ ಅಂಶ ಇರುವುದನ್ನು ಪತ್ತೆ ಮಾಡಿವೆ.
ಏನಿದು ಎಂಡೋ ಟಾಕ್ಸಿನ್ ಅಂಶ?
ಎಂಡೋಟಾಕ್ಸಿನ್ ದೇಹದಲ್ಲಿ ಸೋಂಕು ಉಂಟು ಮಾಡುವ ಅಂಶ. ಋಣಾತ್ಮಕ ಬ್ಯಾಕ್ಟೀರಿಯಾದ ಹೊರ ಪೊರೆಯಲ್ಲಿ ಇದು ಕಂಡುಬರುವ ವಿಷಕಾರಿ ವಸ್ತು. ವೈದ್ಯಕೀಯ ಪರಿಭಾಷೆಯಲ್ಲಿ ಎಂಡೋಟಾಕ್ಸಿನ್‌ಗಳನ್ನು ಲಿಪೊಪೊಲಿಸ್ಯಾಕರೈಡ್‌ಗಳು (LPS) ಎಂದೂ ಕರೆಯಲಾಗುತ್ತದೆ. ಎಂಡೋ ಟಾಕ್ಸಿನ್‌ಗಳು ಧೂಳು, ಪ್ರಾಣೀ ತ್ಯಾಜ್ಯ, ಇತರೆ ಸಾಮಗ್ರಿಗಳಲ್ಲಿ ಕಂಡು ಬರುತ್ತವೆ. ಎಂಡೋಟಾಕ್ಸಿನ್‌ಗಳು ರಕ್ತನಾಳಗಳಿಗೆ ಪ್ರವೇಶಿಸಿದಾಗ ಸೆಪ್ಟಿಕ್ ಸೇರಿದಂತೆ ಹಲವಾರು ಜೈವಿಕ ಪ್ರಕ್ರಿಯೆಗಳು ಉಂಟಾಗುತ್ತವೆ. ಜ್ವರ, ವಿಪರೀತ ಹೃದಯ ಬಡಿತ, ರಕ್ತದೊತ್ತಡ ಹಾಗೂ ರಕ್ತ ಪರಿಚಲನೆ ತಗ್ಗಿಸುತ್ತವೆ. ಐವಿ ದ್ರಾವಣದಲ್ಲಿ ಎಂಡೋ ಟಾಕ್ಸಿನ್ ಅಂಶ ಕಂಡುಬಂದಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು ಹಾಗೂ ಹೈದರಾಬಾದ್ ಪ್ರಯೋಗಾಲಯಗಳು ನೀಡಿದ ವರದಿಯನ್ನು ಜಿಲ್ಲಾಡಳಿತ ಸರ್ಕಾರದ ಗಮನಕ್ಕೆ ತಂದಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಹೇಳಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ 10 ಮಂದಿ ಬಾಣಂತಿಯರು ಮೃತಪಟ್ಟಿದ್ದರು. ಸಿಂಧನೂರು ತಾಲೂಕು ಆಸ್ಪತ್ರೆ ಒಂದರಲ್ಲೇ ನಾಲ್ವರು ಬಾಣಂತಿಯರು ಮೃತಪಟ್ಟಿದ್ದರು. ಹೆರಿಗೆಗಾಗಿ ಸಿಂಧನೂರು ತಾಲೂಕು ಆಸ್ಪತ್ರೆಗೆ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ನಾಲ್ವರು ಬಾಣಂತಿಯರಾದ ಮೌಸಂಬಿ ಮಂಡಲ್, ಚನ್ನಮ್ಮ, ಚಂದ್ರಕಲಾ, ರೇಣುಕಮ್ಮ ಸಿಸೇರಿಯನ್ ಬಳಿಕ ಮೃತಪಟ್ಟಿದ್ದರು. ಈ ಬಾಣಂತಿಯರಿಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗಿದ್ದ ಐವಿ ದ್ರಾವಣವನ್ನೇ ನೀಡಲಾಗಿತ್ತು.
ತನಿಖೆ ಚುರುಕುಗೊಳಿಸಿದ ಆರೋಗ್ಯ ಇಲಾಖೆ
ಬಳ್ಳಾರಿ, ರಾಯಚೂರು, ಬೆಳಗಾವಿ ಮತ್ತು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆ ಚುರುಕುಗೊಳಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮೃತಪಟ್ಟಿರುವ ಬಾಣಂತಿಯರ ಕುರಿತು ಸಮಗ್ರ ತನಿಖೆ ಆರಂಭಿಸಿದೆ. ಬಾಣಂತಿಯರ ಸಾವಿಗೆ ಐವಿ ದ್ರಾವಣ ಕಾರಣವೇ, ಶಸ್ತ್ರಚಿಕಿತ್ಸೆ ಲೋಪವೇ ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು. ಐವಿ ರಿಂಗರ್ ಲ್ಯಾಕ್ಟೇಕ್ ದ್ರಾವಣ ಬಳಸದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗೆ ದ್ರಾವಣ ಬಳಸಲಾಗಿತ್ತು. ಈ ದ್ರಾವಣದಲ್ಲಿ ಫಂಗಸ್ ಹಾಗೂ ಬ್ಯಾಕ್ಟೀರಿಯಾ ಅಂಶ ಇರುವುದು ಪ್ರಯೋಗಾಲಯದ ಪರೀಕ್ಷೆಯಿಂದ ತಿಳಿದುಬಂದಿತ್ತು.
ಬಾಣಂತಿಯರ ಸಾವಿಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆಯೇ ಹೊಣೆ ಎಂದು ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಮಧ್ಯೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಐವಿ ದ್ರಾವಣ ಪೂರೈಸಿದ ಪಶ್ಚಿಮ ಬಂಗಾ ಫಾರ್ಮಾಸೂಟಿಕಲ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ರಾಜ್ಯ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಅಮಾನತು ಮಾಡಿತ್ತು.